ಭಗವದ್ಗೀತೆ: ಯಾರನ್ನ ದೇವರ ನಂಬಿಕೆ ಉಳ್ಳವರು ಎಂದು ಕರೆಯುತ್ತಾರೆ; ಗೀತೆಯ ಅರ್ಥ ಹೀಗಿದೆ
Jan 14, 2024 05:50 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಯಾರನ್ನ ದೇವರ ನಂಬಿಕೆ ಉಳ್ಳವರು ಎಂದು ಕರೆಯುತ್ತಾರೆ ಎಂಬುದರ ಅರ್ಥ ಹೀಗಿದೆ.
ದೈವಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ |
ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪಜುಹ್ವತಿ ||25||
ಕೆಲವರು ಯೋಗಿಗಳು ಬೇರೆಬೇರೆ ಯಜ್ಞಾರ್ಪಣೆಗಳಿಂದ ದೇವತೆಗಳನ್ನು ಪರಿಪೂರ್ಣವಾಗಿ ಆರಾಧಿಸುತ್ತಾರೆ. ಇನ್ನು ಕೆಲವರು ಪರಬ್ರಹ್ಮನ ಅಗ್ನಿಯಲ್ಲಿ ಯಜ್ಞಮಾಡುತ್ತಾರೆ.
ತಾಜಾ ಫೋಟೊಗಳು
ಮೇಲೆ ಹೇಳಿದಂತೆ ಕೃಷ್ಣಪ್ರಜ್ಞೆಯಲ್ಲಿ ಕರ್ತವ್ಯಮಗ್ನನಾದವನನ್ನು ಪರಿಪೂರ್ಣಯೋಗಿ ಎಂದು ಕರೆಯುತ್ತಾರೆ. ಆದರೆ ದೇವತೆಗಳನ್ನು ಪೂಜಿಸುತ್ತಾ ಇಂತಹುದೇ ಯಜ್ಞಗಳನ್ನು ಮಾಡುವ ಇತರರಿದ್ದಾರೆ. ಪರಬ್ರಹ್ಮನಿಗೆ ಎಂದರೆ ಭಗವಂತನ ನಿರಾಕಾರ ಲಕ್ಷಣಕ್ಕೆ ಯಜ್ಞವನ್ನರ್ಪಿಸುವವೂ ಇದ್ದಾರೆ. ಆದುದರಿಂದ ಬೇರೆಬೇರೆ ವರ್ಗಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ಬೆಗಗಳ ಯಜ್ಞಗಳಿವೆ. ವಿವಿಧ ರೀತಿಗಳ ಕರ್ತೃಗಳು ಅರ್ಪಿಸುವ ಯಜ್ಞದ ಬೇರೆ ಬೇರೆ ಬಗೆಗಳು ಮೇಲ್ನೋಟಕ್ಕೆ ಮಾತ್ರ ಭಿನ್ನತೆಯನ್ನು ತೋರುತ್ತವೆ. ವಾಸ್ತವವಾಗಿ ಯಜ್ಞವೆಂದರೆ ಪರಮ ಪ್ರಭುವಾದ ವಿಷ್ಣುವನ್ನು ತೃಪ್ತಿಪಡಿಸುವುದು. ಆತನಿಗೆ ಯಜ್ಞ ಎಂದೂ ಹೆಸರು.
ಬೇರೆ ಬೇರೆ ರೀತಿಗಳ ಯಜ್ಞಗಳನ್ನು ಎರಡು ಮುಖ್ಯ ವಿಭಾಗಗಳನ್ನಾಗಿ ಮಾಡಬಹುದು. ಪ್ರಾಪಂಚಿಕ ಸ್ವತ್ತಿನ ಯಜ್ಞ ಮತ್ತು ದಿವ್ಯಜ್ಞಾನದ ಅನ್ವೇಷಣೆಯ ಯಜ್ಞ. ಕೃಷ್ಣಪ್ರಜ್ಞೆಯಲ್ಲಿರುವವರು ಎಲ್ಲ ಪ್ರಾಪಂಚಿಕ ಸ್ವತ್ತನ್ನು ಭಗವಂತನ ತೃಪ್ತಿಗಾಗಿ ಅರ್ಪಣ ಮಾಡುತ್ತಾರೆ. ಸ್ವಲ್ಪಕಾಲದ ಪ್ರಾಪಂಚಿಕ ಸುಖವನ್ನು ಬಯಸುವವರು ಇಂದ್ರ, ಸೂರ್ಯದೇವ ಮೊದಲಾದ ದೇವತೆಗಳನ್ನು ತೃಪ್ತಿಪಡಿಸಲು ತಮ್ಮ ಪ್ರಾಪಂಚಿಕ ಸ್ವತ್ತನ್ನು ಅರ್ಪಣ ಮಾಡುತ್ತಾರೆ. ನಿರಾಕಾರವಾದಿಗಳಾದ ಇತರರು ನಿರಾಕಾರ ಬ್ರಹ್ಮನ ಅಸ್ತಿತ್ವದಲ್ಲಿ ಒಂದಾಗಿ ತಮ್ಮ ವ್ಯಕ್ತಿತ್ವವನ್ನು ಅರ್ಪಿಸುತ್ತಾರೆ. ದೇವತೆಗಳು ಅಧಿಕಾರಯುತ ಜೀವಿಗಳು. ವಿಶ್ವಕ್ಕೆ ಶಾಖವನ್ನ ಒದಗಿಸುವುದು, ನೀರನ್ನು ಕೊಡುವುದು, ಬೆಳಕನ್ನು ನೀಡುವುದು ಮೊದಲಾದ ಭೌತಿಕ ಕಾರ್ಯಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಭಗವಂತನು ಅವರನ್ನು ನೇಮಿಸಿದ್ದಾರೆ.
ಐಹಿಕ ಲಾಭಗಳಲ್ಲಿ ಆಸಕ್ತಿ ಇರುವವರು ವೈದಿಕ ವಿಧಿಗಳಿಗೆ ಅನುಗುಣವಾಗಿ ಹಲವಾರು ಯಜ್ಞಗಳನ್ನು ಮಾಡಿ ದೇವತೆಗಳನ್ನು ಪೂಜಿಸುತ್ತಾರೆ. ಅವರನ್ನು ಬಹ್ವೀಶ್ವರವಾದಿಗಳು ಅಥವಾ ಹಲವು ದೇವರುಗಳಲ್ಲಿ ನಂಬಿಕೆ ಉಳ್ಳವರು ಎಂದು ಕರೆಯುತ್ತಾರೆ. ಇನ್ನು ಕೆಲವರು ಪರಮಸತ್ಯದ ನಿರಾಕಾರ ಲಕ್ಷಣವನ್ನು ಪೂಜಿಸುತ್ತಾರೆ ಮತ್ತು ದೇವತೆಗಳ ರೂಪಗಳನ್ನು ಅಶಾಶ್ವತವೆಂದು ಭಾವಿಸುತ್ತಾರೆ. ಇಂತಹವರು ತಮ್ಮ ವ್ಯಕ್ತಿತ್ತವವನ್ನು ಬ್ರಹ್ಮಾಗ್ನಿಯಲ್ಲಿ ಅರ್ಪಣ ಮಾಡುತ್ತಾರೆ. ಈ ರೀತಿಯಲ್ಲಿ ಪರಬ್ರಹ್ಮದ ಅಸ್ತಿತ್ವದಲ್ಲಿ ಒಂದಾಗಿ ಅವರು ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಅಂತ್ಯಗೊಳಿಸುತ್ತಾರೆ. ಇಂತಹ ನಿರಾಕಾರವಾದಿಗಳು ಪರಬ್ರಹ್ಮದ ದಿವ್ಯ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ತಮ್ಮ ಕಾಲವನ್ನು ತಾತ್ತ್ವಿಕ ಚಿಂತನೆಯಲ್ಲಿ ಕಳೆಯುತ್ತಾರೆ. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ, ಫಲಾಪೇಕ್ಷೆಯಿಂದ ಕರ್ಮಮಾಡುವವರು ಐಹಿಕ ಭೋಗಕ್ಕಾಗಿ ತಮ್ಮ ಪ್ರಾಪಂಚಿಕ ಸ್ವತ್ತನ್ನು ಅರ್ಪಣ ಮಾಡುತ್ತಾರೆ.
ನಿರಾಕಾರವಾದಿಯು ಪರಮೋನ್ನತವಾದದ್ದರ ಅಸ್ತತ್ವದಲ್ಲಿ ಲೀನವಾಗಲು ತನ್ನ ಪ್ರಾಪಂಚಿಕ ಉಪಾಧಿಗಳನ್ನು ಅರ್ಪಣ ಮಾಡುತ್ತಾನೆ. ನಿರಾಕಾರವಾದಿಗೆ ಪರಬ್ರಹ್ಮವೇ ಯಜ್ಞದ ಅಗ್ನಿಕುಂಡ ಮತ್ತು ಆತ್ಮವೇ ಬ್ರಹ್ಮಾಗ್ನಿಗೆ ನೀಡುವ ಅರ್ಪಣ. ಆದರೆ ಅರ್ಜುನನಂತಹ ಕೃಷ್ಣಪ್ರಜ್ಞೆ ಇರುವವನು ಕೃಷ್ಣನ ತೃಪ್ತಿಗಾಗಿ ಎಲ್ಲವನ್ನೂ ಅರ್ಪಿಸುತ್ತಾನೆ. ಹೀಗೆ ಅವನು ಶ್ರೇಷ್ಠ ಯೋಗಿ. ಆದರೆ ಅವನು ತನ್ನ ವೈಯಕ್ತಿಕ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ.