ಭಗವದ್ಗೀತೆ: ಭಗವಂತನ ಕೃಪೆಯಿಂದ ಎಲ್ಲಾ ಜೀವಿಗಳು ಸುಖವಾಗಿರಲು ಸಾಧ್ಯ; ಗೀತೆಯ ಅರ್ಥ ತಿಳಿಯಿರಿ
Dec 19, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಭಗವಂತನ ಕೃಪೆಯಿಂದ ಎಲ್ಲಾ ಜೀವಿಗಳು ಸುಖವಾಗಿರಲು ಸಾಧ್ಯ ಎಂಬುದರ ಗೀತೆಯ ಅರ್ಥ ತಿಳಿಯಿರಿ.
ಮಯಿ ಸರ್ವಾಣಿ ಕರ್ಮಾಣಿ ಸನ್ನ್ಯಸ್ಯಾಧ್ಯಾತ್ಮಚೇತಸಾ |
ನಿರಾಶೀರ್ನಿರ್ಮಮೋ ಭೂತ್ವಾ ಯುಧಸ್ವ ವಿಗತಜ್ವರಃ ||30||
ಆದುದರಿಂದ ಅರ್ಜನ, ನಿನ್ನ ಎಲ್ಲ ಕರ್ಮಗಳನ್ನು ನನಗೆ ಅರ್ಪಿಸಿ, ನನ್ನನ್ನು ಸಂಪೂರ್ಣವಾಗಿ ಅರಿತುಕೊಂಡು, ಫಲಾಪೇಕ್ಷೆಯಿಲ್ಲದೆ, ಒಡೆತನದ ಭಾವವಿಲ್ಲದೆ, ಯುದ್ಧಮಾಡು.
ತಾಜಾ ಫೋಟೊಗಳು
ಈ ಶ್ಲೋಕವು ಭಗವದ್ಗೀತೆಯ ಉದ್ದೇಶವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಸೈನ್ಯದಲ್ಲಿನ ಶಿಸ್ತಿನಿಂದ ಕರ್ತವ್ಯಗಳನ್ನು ನಿರ್ವಹಿಸಲು ಮನುಷ್ಯನು ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯನ್ನು ಪಡೆಯಬೇಕೆಂದು ಭಗವಂತನು ಬೋಧಿಸುತ್ತಾನೆ. ಇಂತಹ ಅಪ್ಪಣೆಯಿಂದ ಕಷ್ಟಗಳು ತಲೆದೋರಬಹುದು. ಆದರೂ ಕೃಷ್ಣನನ್ನು ನೆಚ್ಚಿ ಕರ್ತವ್ಯಗಳನ್ನು ಮಾಡಬೇಕು. ಏಕೆಂದರೆ ಜೀವಿಯ ಸಹಜ ಸ್ವರೂಪವೇ ಅದು. ಭಗವಂತನ ಸಹಕಾರವಿಲ್ಲದೆ ಜೀವಿಯು ಸುಖವಾಗಿ ಇರುವುದು ಸಾಧ್ಯವಿಲ್ಲ.
ಏಕೆಂದರೆ ಜೀವಿಯ ನಿತ್ಯ ಸಹಜ ಸ್ವರೂಪವು ಭಗವಂತನ ಅಪೇಕ್ಷೆಗಳಿಗೆ ವಿಧೇಯವಾಗಿ ನಡೆದುಕೊಳ್ಳುವುದು. ಆದುದರಿಂದ ಭಗವಂತನು ತನ್ನ ಸೇನಾಧಿಪತಿಯೆಂದು ಭಾವಿಸಿ ಯುದ್ಧಮಾಡಬೇಕೆಂದು ಕೃಷ್ಣನು ಅರ್ಜುನನಿಗೆ ಅಪ್ಪಣೆ ಮಾಡಿದನು. ಭಗವಂತನ ಸುಪ್ರೀತಿಗಾಗಿ ಎಲ್ಲವನ್ನೂ ತ್ಯಾಗಮಾಡಬೇಕು. ಜೊತೆಗೆ ಒಡೆತವನ್ನು ಅಪೇಕ್ಷಿಸದೆ ನಿಯತ ಕರ್ತವ್ಯಗಳನ್ನು ಮಾಡಬೇಕು. ಅರ್ಜುನನು ಭಗವಂತನ ಆಜ್ಞೆಯನ್ನು ಪರಿಶೀಲಿಸುವ ಅಗತ್ಯವಿರಲಿಲ್ಲ. ಏನಿದ್ದರೂ ಅವನು ಆ ಆಜ್ಞೆಯನ್ನು ಪರಿಪಾಲಿಸಬೇಕಾಗಿತ್ತು. ಅಷ್ಟೇ.
ಭಗವಂತನು ಎಲ್ಲ ಆತ್ಮಗಳ ಆತ್ಮ. ವೈಯಕ್ತಿಕ ಅಂಶಗಳ ಪರಿಗಣನೆಯಿಲ್ಲದೆ ಪರಮಾತ್ಮನೊಬ್ಬನನ್ನೇ ಸಂಪೂರ್ಣವಾಗಿ ಅವಲಂಬಿಸುವವನನ್ನು, ಎಂದರೆ ಸಂಪೂರ್ಣವಾಗಿ ಕೃಷ್ಣಪ್ರಜ್ಞೆ ಇರುವವನನ್ನು ಅಧ್ಯಾತ್ಮಚೇತಸ ಎಂದು ಕರೆಯುತ್ತಾರೆ. ನಿರಾಶೀಃ ಎಂದರೆ ಮನುಷ್ಯನು ತನ್ನ ಪ್ರಭುವಿನ ಆಜ್ಞೆಯನ್ನು ನಡೆಸಬೇಕು. ಆದರೆ ಫಲವನ್ನು ನಿರೀಕ್ಷಿಸಬಾರದು ಎಂದರ್ಥ. ಹಣಕಾಸಿನ ಗುಮಾಸ್ತೆಯು ತನ್ನ ಯಜಮಾನನಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಎಣಿಸಬಹುದು. ಆದರೆ ಒಂದು ಬಿಡಿಕಾಸನ್ನೂ ತನ್ನದೆಂದುಕೊಳ್ಳುವುದಿಲ್ಲ.
ಹಾಗೆಯೇ ಪ್ರಪಂಚದಲ್ಲಿ ಯಾವುದೂ ಯಾವ ಒಬ್ಬ ವ್ಯಕ್ತಿಗೂ ಸೇರಿದ್ದಲ್ಲ, ಎಲ್ಲವೂ ಭಗವಂತನಿಗೆ ಸೇರಿದುದು ಎಂದು ತಿಳಿದುಕೊಳ್ಳಬೇಕು. ಮಯಿ ಎನ್ನುವ ಶಬ್ದದ ನಿಜವಾದ ಅರ್ಥ ಇದೇ. ಇಂತಹ ಕೃಷ್ಣಪ್ರಜ್ಞೆಯಲ್ಲಿ ಕಾರ್ಯಮಾಡುವವನು ಖಂಡಿತವಾಗಿಯೂ ಯಾವುದೇ ವಸ್ತುವು ತನಗೆ ಸೇರಿದುದು ಎಂದು ಭಾವಿಸುವುದಿಲ್ಲ. ಈ ಪ್ರಜ್ಞೆಗೆ ನಿರ್ಮಮ (ಯಾವುದೂ ನನ್ನದಲ್ಲ) ಎಂದು ಹೆಸರು. ದೇಹ ಸಂಬಂಧಿಗಳು ಎನ್ನಿಸಿಕೊಳ್ಳುವವರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇಂತಹ ಕಠಿಣ ಅಪ್ಪಣೆಯನ್ನು ಪರಿಪಾಲಿಸಲು ಮನಸ್ಸಿಲ್ಲವಾದರೆ ಇಂತಹ ಹಿಂಜರಿತವನ್ನು ಕಿತ್ತು ಹಾಕಬೇಕು.
ಈ ರೀತಿಯಲ್ಲಿ ಮನುಷ್ಯನು ವಿಗತಜ್ವರನಾಗಬಹುದು, ಎಂದರೆ ಜ್ವರ ಬಂದಂತಹ ಮನಃಸ್ಥಿತಿ ಅಥವಾ ಜಡತ್ವವನ್ನು ಕಳೆದುಕೊಳ್ಳಬಹುದು. ತನ್ನ ಗುಣ ಮತ್ತು ಸ್ಥಾನಗಳಿಗೆ ಅನುಗುಣವಾಗಿ ಪ್ರತಿಯೊಬ್ಬನೂ ಮಾಡಬೇಕಾದ ನಿರ್ದಿಷ್ಟ ಬಗೆಯ ಕೆಲಸವಿದೆ. ಮೇಲೆ ಹೇಳಿದ ರೀತಿಯಲ್ಲಿ ಇಂತಹ ಕರ್ತವ್ಯಗಳನ್ನೆಲ್ಲ ಕೃಷ್ಣಪ್ರಜ್ಞೆಯಲ್ಲಿ ನಿರ್ವಹಿಸಬೇಕು. ಇದು ಮುಕ್ತಿಮಾರ್ಗಕ್ಕೆ ಕರೆದೊಯ್ಯುತ್ತದೆ.
ಯೇ ತ್ವೇತದಭ್ಯಸೂಯನ್ತೋ ನಾನುತಿಷ್ಯನ್ತಿ ಮೇ ಮತಮ್ |
ಸರ್ವಜ್ಞಾನವಿಮೂಢಾಂಸ್ತಾನ್ ವಿದ್ಧಿ ನಷ್ಟಾನಚೇತಸಃ ||32||
ಯಾರು ಅಸೂಯೆಯಿಂದ ಈ ಬೋಧನೆಗಳನ್ನು ಅಲಕ್ಷಿಸುವರೋ ಮತ್ತು ಅವನ್ನು ಅಸುಸರಿಸುವುದಿಲ್ಲವೋ ಅವರು ಯಾವ ತಿಳಿವಳಿಕೆಯಲ್ಲೂ ಇಲ್ಲದವರು, ವಿಮೂಢರು ಎಂದು ಭಾವಿಸಬೇಕು. ಪರಿಪೂರ್ಣತೆಗಾಗಿ ಅವರು ಪಡುವ ಶ್ರಮವೆಲ್ಲ ನಾಶವಾಗುವವು.
ಕೃಷ್ಣಪ್ರಜ್ಞೆ ಇಲ್ಲದಿರುವುದರ ದೋಷವನ್ನು ಇಲ್ಲಿ ಸ್ಪಷ್ಟವಾಗಿ ಹೇಳಿದೆ. ಅತ್ಯುನ್ನತ ಕಾರ್ಯಕಾರಿ ಅಧಿಕಾರಿಯ ಆಜ್ಞೆಗೆ ಅವಿಧೇಯರಾದರೆ ಹೇಗೆ ಶಿಕ್ಷೆಯುಂಟೋ ಹಾಗೆಯೇ ದೇವೋತ್ತಮ ಪರಮ ಪುರುಷನ ಆಜ್ಞೆಗೆ ಅವಿಧೇಯರಾದರೂ ನಿಶ್ಚಯವಾಗಿಯೂ ಶಿಕ್ಷೆಯುಂಟು. ಅವಿಧೇಯನಾದವನು ಎಷ್ಟೇ ದೊಡ್ಡವನಾದರೂ ಅವನು ಶೂನ್ಯ ಹೃದಯದವನಾಗಿ, ಆತ್ಮವನ್ನೂ ಪರಬ್ರಹ್ಮವನ್ನೂ ಪರಮಾತ್ಮನನ್ನೂ ದೇವೋತ್ತಮ ಪುರುಷನನ್ನೂ ಅರಿಯದವನು. ಆದುದರಿಂದ ಆತನಿಗೆ ಬದುಕಿನ ಪರಿಪೂರ್ಣತೆಯ ಭರವಸೆಯೇ ಇಲ್ಲ.