Bhagavad Gita: ವಿದ್ಯಾರ್ಥಿಗಳು ಬ್ರಹ್ಮಚರ್ಯ ಪಾಲಿಸದಿದ್ದರೆ ಅಧ್ಯಾತ್ಮಿಕ ಜೀವನದಲ್ಲಿ ಪ್ರಗತಿ ಸಾಧ್ಯವೇ ಇಲ್ಲ; ಗೀತೆಯ ಸಾರಾಂಶ ಹೀಗಿದೆ
Apr 07, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ವಿದ್ಯಾರ್ಥಿಗಳು ಬ್ರಹ್ಮಚರ್ಯ ಪಾಲಿಸದಿದ್ದರೆ ಅಧ್ಯಾತ್ಮಿಕ ಜೀವನದಲ್ಲಿ ಪ್ರಗತಿ ಸಾಧ್ಯವೇ ಇಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ 10 ಮತ್ತು 11ನೇ ಶ್ಲೋಕದಲ್ಲಿ ಓದಿ.
8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 10
ಪ್ರಯಾಣಕಾಲೇ ಮನಸಾಚಲೇನ
ಭಕ್ತ್ಯಾ ಯುಕ್ತೋ ಯೋಗಬಲೇನ ಚೈವ |
ಭ್ರವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್
ಸ ತಂ ಪರಂ ಪುರುಷಮುಪೈತಿ ದಿವ್ಯಮ್||10||
ಅನುವಾದ: ಮರಣಕಾಲದಲ್ಲಿ ತನ್ನ ಪ್ರಾಣವಾಯುವನ್ನು ಹುಬ್ಬುಗಳ ನಡುವೆ ನಿಲ್ಲಿಸಿ ಯೋಗಶಕ್ತಿಯಿಂದ, ನಿಶ್ಚಲಮನಸ್ಸಿನಿಂದ, ನಿಶ್ಚಲಭಕ್ತಿಯಿಂದ ಪರಮ ಪ್ರಭುವನ್ನು ಸ್ಮರಿಸುವುದರಲ್ಲಿ ತೊಡಗುವವನು ನಿಶ್ಚಯವಾಗಿಯೂ ದೇವೋತ್ತಮ ಪರಮ ಪುರುಷನನ್ನು ಹೊಂದುವನು.
ತಾಜಾ ಫೋಟೊಗಳು
ಭಾವಾರ್ಥ: ಮರಣಕಾಲದಲ್ಲಿ ಮನಸ್ಸನ್ನು ಭಕ್ತಿಪೂರ್ವಕವಾಗಿ ದೇವೋತ್ತಮ ಪರಮ ಪುರುಷನಲ್ಲಿ ನಿಲ್ಲಿಸಬೇಕೆಂದು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ಹೇಳಿದೆ. ಯೋಗಸಾಧಕರು ಜೀವಶಕ್ತಿಯನ್ನು ಹುಬ್ಬುಗಳ ಮಧ್ಯದವರೆಗೆ (ಆಜ್ಞಾ ಚಕ್ರದವರೆಗೆ) ಏರಿಸಬೇಕೆಂದು ಸೂಚಿಸಲಾಗಿದೆ. ಆರು ಚಕ್ರಗಳ ಧ್ಯಾನದಲ್ಲಿ ತೊಡಗಿಸುವ ಷಟ್‌ಚಕ್ರಯೋಗವನ್ನು ಇಲ್ಲಿ ಸೂಚಿಸಲಾಗಿದೆ. ಪರಿಶುದ್ಧ ಭಕ್ತನು ಇಂತಹ ಯೋಗವನ್ನು ಅಭ್ಯಾಸಮಾಡುವುದಿಲ್ಲ. ಆದರೆ ಆತನು ಸದಾ ಕೃಷ್ಣಪ್ರಜ್ಞೆಯಲ್ಲಿ ನಿರತನಾಗಿರುವುದರಿಂದ ಮರಣಕಾಲದಲ್ಲಿ ದೇವೋತ್ತಮ ಪರಮ ಪುರುಷನ ಕೃಪೆಯಿಂದ ಅವನನ್ನು ಸ್ಮರಿಸುತ್ತಾನೆ. ಇದನ್ನು ಹದಿನಾಲ್ಕನೆಯ ಶ್ಲೋಕದಲ್ಲಿ ಹೇಳಿದೆ.
ಈ ಶ್ಲೋಕದಲ್ಲಿ ಯೋಗಬಲೇನ ಎಂಬ ಶಬ್ದವನ್ನು ವಿಶಿಷ್ಟವಾಗಿ ಬಳಸಿರುವುದು ಅರ್ಥವತ್ತಾದದ್ದು. ಏಕೆಂದರೆ ಷಟ್‌ಚಕ್ರದ ಯೋಗದ ಅಥವಾ ಭಕ್ತಿಯೋಗದ ಯೋಗಾಭ್ಯಾಸವಿಲ್ಲದೆ ಮನುಷ್ಯನು ಮರಣಕಾಲದಲ್ಲಿ ಇಂತಹ ದಿವ್ಯಸ್ಥಿತಿಗೆ ಬರಲಾರನು. ಮನುಷ್ಯನು ಯಾವುದಾದರೂ ಯೋಗಪದ್ಧತಿಯನ್ನು, ಮುಖ್ಯವಾಗಿ ಭಕ್ತಿಯೋಗವನ್ನು, ಅಭ್ಯಾಸ ಮಾಡಿರಬೇಕು. ಸಾವಿನ ಸಮಯದಲ್ಲಿ ಮನಸ್ಸು ತುಂಬ ಅಶಾಂತಿಯಲ್ಲಿರುವುದರಿಂದ ಮನುಷ್ಯನು ಯೋಗದ ಮೂಲಕ ತನ್ನ ಜೀವಿದ ಕಾಲದಲ್ಲೇ ಅಧ್ಯಾತ್ಮಿಕತೆಯನ್ನು ಅಭ್ಯಾಸ ಮಾಡಬೇಕು.
8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 11
ಯದಕ್ಷರಂ ವೇದವಿದೋ ವದನ್ತಿ
ವಿಶನ್ತಿ ಯದ್ ಯತಯೋ ವೀತರಾಗಾಃ |
ಯದಿಚ್ಛನ್ತೋ ಬ್ರಹ್ಮಚರ್ಯಂ ಚರಂತಿ
ತತ್ತೇ ಪದಂ ಸನ್ಗ್ರಹೇಣ ಪ್ರವಕ್ಷ್ಯೇ ||11||
ಅನುವಾದ: ವೇದಗಳಲ್ಲಿ ಪಾರಂಗತರು, ಓಂಕಾರವನ್ನು ಜಪಿಸುವವರು ಮತ್ತು ಸನ್ಯಾಸದಲ್ಲಿ ಮಹಾಯತಿಗಳಾದವರು ಬ್ರಹ್ಮನ್‌ನನ್ನು ಸೇರುತ್ತಾರೆ. ಇಂತಹ ಪರಿಪೂರ್ಣತೆಯನ್ನು ಬಯಸಿ ಮನುಷ್ಯನು ಬ್ರಹ್ಮಚರ್ಯವನ್ನು ಆಚರಿಸುತ್ತಾನೆ. ಮೋಕ್ಷವನ್ನು ಪಡೆಯಬಹುದಾದ ಈ ಪ್ರಕ್ರಿಯೆಯನ್ನು ನಾನು ನಿನಗೆ ಈಗ ಸಂಗ್ರಹವಾಗಿ ವಿವಿರಸುವೆನು.
ಭಾವಾರ್ಥ: ಶ್ರೀಕೃಷ್ಣನು ಅರ್ಜುನನಿಗೆ ಷಟ್‌ಚಕ್ರಯೋಗವನ್ನು ಅಭ್ಯಾಸ ಮಾಡುವಂತೆ ಸಲಹೆ ಮಾಡಿದ್ದಾನೆ. ಈ ಯೋಗದಲ್ಲಿ ಸಾಧಕನು ಪ್ರಾಣವಾಯುವನ್ನು ಹುಬ್ಬುಗಳ ಮಧ್ಯೆ ನಿಲ್ಲಿಸುತ್ತಾನೆ. ಷಟ್‌ಚಕ್ರಯೋಗವನ್ನು ಅಭ್ಯಾಸ ಮಾಡುವುದು ಹೇಗೆ ಎನ್ನುವುದನ್ನು ಅರ್ಜುನನಿಗೆ ತಿಳಿಯದೆ ಇರಬಹುದು ಎಂದು ಭಾವಿಸಿ ಪ್ರಭುವು ಮುಂದಿನ ಶ್ಲೋಕಗಳಲ್ಲಿ ಈ ಪ್ರಕ್ರಿಯೆಯನ್ನು ವಿವರಿಸುತ್ತಾನೆ. ಬ್ರಹ್ಮನ್ ಅದ್ವಿತೀಯನಾದರೂ ಅವನಿಗೆ ಹಲವು ಅಭಿವ್ಯಕ್ತಿಗಳು, ಲಕ್ಷಣಗಳು ಉಂಟು ಎಂದು ಪ್ರಭುವು ಹೇಳುತ್ತಾನೆ. ವಿಶೇಷವಾಗಿ ನಿರಾಕಾರವಾದಿಗಳಿಗೆ ಅಕ್ಷರ ಅಥವಾ ಓಂಕಾರವೂ ಬ್ರಹ್ಮನ್‌ನೂ ಒಂದೇ. ಕೃಷ್ಣನು ಇಲ್ಲಿ ಸನ್ಯಾಸಿ ಯತಿಗಳು ಪ್ರವೇಶಿಸುವ ನಿರಾಕಾರ ಬ್ರಹ್ಮನನ್ನು ವಿವರಿಸುತ್ತಾನೆ.
ವೈದಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ, ಪ್ರಾರಂಭದಿಂದ ಗುರುವಿನೊಂದಿಗೆ ಸಂಪೂರ್ಣ ಬ್ರಹ್ಮಚರ್ಯದಲ್ಲಿ ವಾಸಿಸುತ್ತ ಓಂಕಾರದ ಅನುಸಂಧಾನವನ್ನು ಮಾಡಲು ಮತ್ತು ಕಟ್ಟಕಡೆಯ ನಿರಾಕಾರ ಬ್ರಹ್ಮನ್‌ನನ್ನು ತಿಳಿದುಕೊಳ್ಳಲು ಹೇಳಿಕೊಡುತ್ತಾರೆ. ಈ ರೀತಿಯಲ್ಲಿ ಅವರು ಬ್ರಹ್ಮನ್‌ನ ಎರಡು ಲಕ್ಷಣಗಳನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ. ಶಿಷ್ಯನು ಅಧ್ಯಾತ್ಮಿಕ ಬಾಳಿನಲ್ಲಿ ಮುಂದುವರಿಯಲು ಈ ಅಭ್ಯಾಸವು ಬಹಳ ಅಗತ್ಯ. ಆದರೆ ಈಗ ಇಂತಹ ಬ್ರಹ್ಮ ಚರ್ಯದ ಬದುಕು ತೀರ ಅಸಾಧ್ಯ. ಜಗತ್ತಿನ ಸಾಮಾಜಿಕ ರಚನೆಯು ಎಷ್ಟೊಂದು ಬದಲಾವಣೆ ಹೊಂದಿದ ಎಂದರೆ ವಿದ್ಯಾರ್ಥಿಜೀವನದ ಪ್ರಾರಂಭದಿಂದ ಬ್ರಹ್ಮಚರ್ಯವನ್ನು ಅಭ್ಯಾಸಮಾಡುವ ಸಾಧ್ಯತೆಯೇ ಇಲ್ಲ.
ವಿದ್ಯೆಯ ಬೇರೆ ಬೇರೆ ವಿಭಾಗಗಳಿಗೆ ಜಗತ್ತಿನಾದ್ಯಂತ ಹಲವಾರು ಸಂಸ್ಥೆಗಳಿವೆ. ಆದರೆ ವಿದ್ಯಾರ್ಥಿಗಳಿಗೆ ಬ್ರಹ್ಮಚರ್ಯವನ್ನು ಪಾಲಿಸದಿದ್ದರೆ ಅಧ್ಯಾತ್ಮಿಕ ಜೀವನದಲ್ಲಿ ಪ್ರಗತಿ ಸಾಧ್ಯವೇ ಇಲ್ಲ. ಆದುದರಿಂದ ಕಲಿಯುಗಕ್ಕೆ ಶಾಸ್ತ್ರಗಳ ನೀಡಿರುವ ಆದೇಶಗಳಿಗೆ ಅನುಗುಣವಾಗಿ ಚೈತನ್ಯ ಮಹಾಪ್ರಭುಗಳು ಪರಮೋನ್ನತನ ಸಾಕ್ಷಾತ್ಕಾರಕ್ಕೆ ಶ್ರೀಕೃಷ್ಣನ ಪಾವನ ನಾಮವನ್ನು ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ.... ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ ಎಂದು ಸಂಕೀರ್ತನ ಮಾಡುವುದನ್ನು ಬಿಟ್ಟು ಬೇರೆ ಮಾರ್ಗವೇ ಇಲ್ಲ ಎಂದು ಹೇಳುತ್ತಿದ್ದಾರೆ.