ಭಗವದ್ಗೀತೆ: ಮನುಷ್ಯನ ಪಾಪ ಕರ್ಮ ಹೆಚ್ಚಿಸುವ ನಿರ್ಧಾರಗಳು ಇವೇ; ಗೀತೆಯ ಸಾರಾಂಶ ಹೀಗಿದೆ
Dec 10, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಮನುಷ್ಯನ ಪಾಪ ಕರ್ಮಗಳ ಹೆಚ್ಚಿಸುವ ನಿರ್ಧಾರಗಳು ಯಾವುವು ಅನ್ನೋದನ್ನ ತಿಳಿಯಿರಿ.
ಅನ್ನಾದ್ ಭವನ್ತಿ ಭೂತಾನಿ ಪರ್ಜನ್ಯಾದನ್ನಸಮ್ಭವಃ |
ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ ||14||
ಎಲ್ಲ ಜೀವಿಗಳು ಆಹಾರ ಧಾನ್ಯಗಳಿಂದ ಬದುಕುತ್ತವೆ. ಧಾನ್ಯಗಳನ್ನು ಮಳೆ ಉತ್ಪತ್ತಿಮಾಡುತ್ತದೆ. ಯಜ್ಞದ ಆಚರಣೆಯಿಂದ ಮಳೆಯಾಗುತ್ತದೆ. ಯಜ್ಞವು ನಿಯತ ಕರ್ಮಗಳಿಂದ ಉದ್ಭವಿಸುತ್ತದೆ.
ತಾಜಾ ಫೋಟೊಗಳು
ಭಗವದ್ಗೀತೆಯ ಮಹಾಭಾಷ್ಯಕಾರರಾದ ಶ್ರೀ ಬಲದೇವ ವಿದ್ಯಾಭೂಷಣರು ಹೀಗೆ ಬರೆಯುತ್ತಾರೆ - ಯೇ ಇಂದ್ರಾದಿ ಅಂಗತಯಾವಸ್ಥಿತಂ ಯಜ್ಞಂ ಸರ್ವೇಶ್ವರಂ ವಿಷ್ಣು ಮಭ್ಯರ್ಚ್ಯ ತಚ್ಛೇಷಮಶ್ನನ್ತಿ ತೇನ ತದ್ದೇಹಯಾತ್ರಾಂ ಸಮ್ಪಾದಯನ್ತಿ, ತೇ ಸನ್ತಃ ಸರ್ವೇಶ್ವರಸ್ಯ ಯಜ್ಞಪುರುಷಸ್ಯ ಭಕ್ತಾಃ ಸರ್ವಕಿಲ್ಬಿಷೈರನಾದಿ ಕಾಲ ವಿವೃದ್ಧೈರಾತ್ಮಾನುಭವ ಪ್ರತಿಬನ್ಧ ಕೈರ್ನಿಖಿಲೈಃ ಪಾಪೈರ್ವಿಮುಚ್ಯನ್ತೇ.
ಯಜ್ಞಪುರುಷನೆಂದು ಅಥವಾ ಎಲ್ಲ ಯಜ್ಞಗಳ ಭೋಕ್ತಾರನೆಂದು ವರ್ಣಿಸುವ ಭಗವಂತನು ಎಲ್ಲ ದೇವತೆಗಳ ಪ್ರಭು. ದೇಹದ ಅಂಗಾಂಗಗಳು ಇಡೀ ದೇಹವನ್ನು ಸೇವಿಸುವಂತೆ ದೇವತೆಗಳು ಭಗವಂತನನ್ನು ಸೇವಿಸುತ್ತಾರೆ. ಇಂದ್ರ, ಚಂದ್ರ ಮತ್ತು ವರುಣ ಮೊದಲಾದ ದೇವತೆಗಳು ಐಹಿಕ ವ್ಯವಹಾರಗಳನ್ನು ನಿರ್ವಹಿಸಲು ನೇಮಿತರಾದ ಅಧಿಕಾರಿಗಳು. ಆಹಾರ ಧಾನ್ಯಗಳನ್ನು ಉತ್ಪತ್ತಿಮಾಡಲು ಅಗತ್ಯವಾದಷ್ಟು ಗಾಳಿ, ಬೆಳಕು ಮತ್ತು ನೀರನ್ನು ಒದಿಸುವಂತೆ ಈ ದೇವತೆಗಳು ಸುಪ್ರೀತರಾಗಲು ಯಜ್ಞಗಳನ್ನು ಮಾಡಬೇಕೆಂದು ವೇದಗಳು ನಿರ್ದೇಶಿಸುತ್ತವೆ.
ಶ್ರೀಕೃಷ್ಣನನ್ನು ಅರ್ಚಿಸಿದಾಗ ಭಗವಂತನ ವಿವಿಧ ಅಂಗಾಂಗಗಳಾದ ದೇವತೆಗಳಿಗೆ ತಾನಾಗಿಯೇ ಅರ್ಚನೆಯಾಗುತ್ತದೆ. ಆದುದರಿಂದ ಈ ದೇವತೆಗಳನ್ನು ಪ್ರತ್ಯೇಕವಾಗಿ ಪೂಜೆಮಾಡುವ ಅಗತ್ಯವಿಲ್ಲ. ಈ ಕಾರಣಕ್ಕಾಗಿ ಕೃಷ್ಣಪ್ರಜ್ಞೆಯಲ್ಲಿರುವ ಭಗವದ್ಭಕ್ತರು ಆಹಾರವನ್ನು ಕೃಷ್ಣನಿಗೆ ಅರ್ಪಿಸಿ ತಾವು ತಿನ್ನುತ್ತಾರೆ. ಈ ಪ್ರಕ್ರಿಯೆಯು ದೇಹವನ್ನು ಆಧ್ಯಾತ್ಮಿಕವಾಗಿ ಪುಷ್ಟಿಗೊಳಿಸುತ್ತದೆ. ಇಂತಹ ಕರ್ಮವು ಹಿಂದಿನ ಪಾಪಕರ್ಮಫಲವನ್ನು ನಿವಾರಿಸುವುದು ಮಾತ್ರವಲ್ಲ, ದೇಹವು ಐಹಿಕ ಪ್ರಕೃತಿಯ ಎಲ್ಲ ಕಶ್ಮಲದ ಸೋಂಕಿನಿಂದ ರಕ್ಷಿತವಾಗುತ್ತದೆ.
ಯಾವ ಮಾರ್ಗ ಪಾಪ ಕರ್ಮದ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತೆ?
ಸಾಂಕ್ರಾಮಿಕ ರೋಗವು ತಲೆದೋರಿದಾಗ ಪೂತಿನಾಶಕ ಲಸಿಕೆಯು ಮನುಷ್ಯನನ್ನು ಅಂತಹ ರೋಗದ ಸೋಂಕಿನಿಂದ ಕಾಪಾಡುತ್ತದೆ. ಹಾಗೆಯೇ ವಿಷ್ಣುವಿಗೆ ನೈವೇದ್ಯ ಮಾಡಿ ಸ್ವೀಕರಿಸಿದ ಪ್ರಸಾದವು ಐಹಿಕ ಸೋಂಕಿನಿಂದ ನಮಗೆ ಸಾಕಷ್ಟು ರಕ್ಷಣೆಯನ್ನು ನೀಡುತ್ತದೆ. ಈ ರೂಢಿಯನ್ನು ಮಾಡಿಕೊಂಡವನನ್ನು ಭಗವದ್ಭಕ್ತನೆಂದು ಕರೆಯುತ್ತಾರೆ. ಆದುದರಿಂದ ಕೃಷ್ಣಪ್ರಜ್ಞೆಯಲ್ಲಿದ್ದು ಕೃಷ್ಣನ ಪ್ರಸಾದವನ್ನು ಮಾತ್ರ ಸ್ವೀಕರಿಸುವ ಮನುಷ್ಯನು ಹಿಂದಿನ ಎಲ್ಲ ಐಹಿಕ ಸೋಂಕುಗಳನ್ನು ಪ್ರತಿರೋಧಿಸಬಲ್ಲ. ಈ ಐಹಿಕ ಸೋಂಕುಗಳು ಆತ್ಮಸಾಕ್ಷಾತ್ಕಾರದ ಮಾರ್ಗದಲ್ಲಿ ಅಡ್ಡಿಗಳು. ಇದಕ್ಕೆ ಪ್ರತಿಯಾಗಿ, ಹೀಗೆ ನಡೆದುಕೊಳ್ಳದೆ ಇರುವವನು ಪಾಪಕರ್ಮದ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತ ಹೋಗುವನು.
ಇದು, ಎಲ್ಲ ಪಾಪಕರ್ಮಗಳ ಫಲಗಳನ್ನು ಅನುಭವಿಸಲು, ಮುಂದಿನ ಜನ್ಮದಲ್ಲಿ ಹಂದಿ ನಾಯಿಗಳ ಶರೀರವನ್ನು ಸಿದ್ಧಗೊಳಿಸುತ್ತದೆ. ಕಶ್ಮಲಗಳ ಸೋಂಕಿನಿಂದ ಐಹಿಕ ಜಗತ್ತು ತುಂಬಿ ಹೋಗಿದೆ. ಭಗವಂತನ ಪ್ರಸಾದವನ್ನು ಸ್ವೀಕರಿಸಿ ಈ ಎಲ್ಲ ಸೋಂಕಿನಿಂದ ರಕ್ಷಣೆ ಪಡೆದವನು ರೋಗದ ದಾಳಿಯಿಂದ ತಪ್ಪಿ ಉಳಿಯುತ್ತಾನೆ. ಹೀಗೆ ಮಾಡದವನು ಸೋಂಕಿಗೆ ಗುರಿಯಾಗುತ್ತಾನೆ.
ಆಹಾರ ಧಾನ್ಯಗಳು ಅಥವಾ ತರಕಾರಿಗಳು ವಾಸ್ತವವಾಗಿ ಆಹಾರವೇ. ಮನುಷ್ಯನು ಬಗೆಬಗೆಯ ಆಹಾರ ಧಾನ್ಯಗಳು, ತರಕಾರಿಗಳು ವಾಸ್ತವವಾಗಿ ಆಹಾರವೇ. ಮನುಷ್ಯನು ಬಗೆಬಗೆಯ ಆಹಾರ ಧಾನ್ಯಗಳು, ತರಕಾರಿಗಳು, ಹಣ್ಣುಗಳು ಮೊದಲಾದುವನ್ನೇ ತಿನ್ನುತ್ತಾರೆ. ಪ್ರಾಣಿಗಳು ಆಹಾರಧಾನ್ಯಗಳಲ್ಲಿ ಮತ್ತು ತರಕಾರಿಗಳಲ್ಲಿ ಉಳಿದ ಭಾಗ, ಹುಲ್ಲು, ಸಸ್ಯಗಳು ಮೊದಲಾದುವನ್ನು ತಿನ್ನುತ್ತವೆ.
ಮಾಂಸಾಹಾರವನ್ನು ತಿನ್ನುವ ಮನುಷ್ಯರೂ, ಪ್ರಾಣಿಗಳನ್ನು ತಿನ್ನಲು ಸಸ್ಯಗಳ ಬೆಳೆಯನ್ನು ನೆಚ್ಚಬೇಕು. ಹೀಗೆ ಅಂತಿಮವಾಗಿ ನಾವು ಹೊಲದ ಉತ್ಪನ್ನವು ಆಕಾಶದಿಂದ ಬೀಳುವ ಮಳೆಯಿಂದ ಆಗುವುದು. ಮಳೆಯನ್ನು ಇಂದ್ರ, ಸೂರ್ಯ, ಚಂದ್ರ ಮೊದಲಾದ ದೇವತೆಗಳು ನಿಯಂತ್ರಿಸುತ್ತಾರೆ. ಅವರೆಲ್ಲರೂ ಭಗವಂತನ ಸೇವಕರು. ಭಗವಂತನು ಯಜ್ಞಗಳಿಂದ ಸುಪ್ರೀತನಾಗುತ್ತಾನೆ. ಆದುದರಿಂದ, ಯಜ್ಞಗಳನ್ನು ಮಾಡಲಾರದವನಿಗೆ ಅಭಾವವೇ ಗತಿ. ಇದು ಸನಿರ್ಗದ ನಿಮಯ. ಆದುದರಿಂದ, ನಮಗೆ ಆಹಾರದ ಅಭಾವವುಂಟಾಗದಂತೆ ಕಾಪಾಡಿಕೊಳ್ಳುವುದಕ್ಕಾಗಿಯಾದರೂ ಯಜ್ಞವನ್ನು, ವಿಶೇಷವಾಗಿ ಈ ಯುಗಕ್ಕೆ ನಿಯತಮಾಡಿರುವ ಸಂಕೀರ್ತನ ಯಜ್ಞವನ್ನು ಮಾಡಬೇಕು.