Bhagavad Gita: ಭಗವಂತನ ದಿವ್ಯ ರೂಪ ಎಲ್ಲ ಲೋಕಗಳಿಗಿಂತ ಅತ್ಯಂತ ಮೋಹಕವಾದದ್ದು; ಗೀತೆಯ ಅರ್ಥ ತಿಳಿಯಿರಿ
Apr 12, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಭಗವಂತನ ದಿವ್ಯ ರೂಪ ಎಲ್ಲ ಲೋಕಗಳಿಗಿಂತ ಅತ್ಯಂತ ಮೋಹಕವಾದದ್ದು ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ 21ನೇ ಶ್ಲೋಕದಲ್ಲಿ ತಿಳಿಯಿರಿ.
8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 21
ಅವ್ಯಕ್ತೋಕ್ಷರ ಇತ್ಯುಕ್ತಸ್ತಮಾಹುಃ ಪರಮಾಂ ಗತಿಮ್ |
ಯಂ ಪ್ರಾಪ್ಯ ನ ನಿವರ್ತನ್ತೇ ತದ್ಧಾನು ಪರಮಂ ಮಮ ||21||
ಅನುವಾದ: ಯಾವುದನ್ನು ವೇದಾಂತಿಗಳು ಅವ್ಯಕ್ತ ಮತ್ತು ಅಕ್ಷರ (ಚ್ಯುತಿ ರಹಿತ) ಎಂದು ವರ್ಣಿಸುತ್ತಾರೋ, ಯಾವುದನ್ನು ಪರಮಗತಿ ಎಂದು ತಿಳಿಯುತ್ತಾರೋ, ಯಾವ ಸ್ಥಾನವನ್ನು ಒಮ್ಮೆ ಸೇರಿದರೆ ಮನುಷ್ಯನು ಎಂದೂ ಹಿಂದಿರುಗುವುದಿಲ್ಲವೋ ಅದು ನನ್ನ ಪರಮ ನಿವಾಸ.
ತಾಜಾ ಫೋಟೊಗಳು
ಭಾವಾರ್ಥ: ಬ್ರಹ್ಮಸಂಹಿತೆಯಲ್ಲಿ ದೇವೋತ್ತಮ ಪರಮ ಪುರುಷನಾದ ಕೃಷ್ಣನ ಪರಮ ನಿವಾಸವನ್ನು ಚಿಂತಾಮಣಿಧಾಮ ಎಂದು ವರ್ಣಿಸಿದೆ. ಹೀಗೆಂದರೆ ಎಲ್ಲ ಇಷ್ಟಾರ್ಥಗಳೂ ಕೈಗೂಡುವ ಸ್ಥಳ ಎಂದು ಅರ್ಥ. ಗೋಲೋಕ ವೃಂದಾವನ ಎಂಬ ಹೆಸರಿನ ಶ್ರೀಕೃಷ್ಣನ ಲೋಕವು ಚಿಂತಾಮಣಿಯಿಂದ ನಿರ್ಮಿಸಿದ ಅರಮನೆಗಳಿಂದ ತುಂಬಿಹೋಗಿದೆ. ಕಲ್ಪವೃಕ್ಷಗಳೆಂಬ ಮರಗಳು ಬಯಸಿದ ಭಕ್ಷ್ಯವನ್ನು ನೀಡುತ್ತವೆ. ಸುರಭಿ ಹಸುಗಳು ಅಪರಿಮಿತವಾಗಿ ಹಾಲವನ್ನು ಕೊಡುತ್ತವೆ. ಈ ನಿವಾಸದಲ್ಲಿ ಲಕ್ಷಾಂತರ ಮಂದಿ ಲಕ್ಷ್ಮಿಯರು ಭಗವಂತನನ್ನು ಸೇವಿಸುತ್ತಾರೆ. ಅವನಿಗೆ ಗೋವಿಂದನೆಂದು ಹೆಸರು. ಅವನೇ ಆದಿಪ್ರಭು. ಎಲ್ಲ ಕಾರಣಗಳ ಕಾರಣನು.
ಪ್ರಭುವು ತನ್ನ ಕೊಳಲನ್ನು (ವೇಣುಂ ಕ್ವಣನ್ತಮ್) ನುಡಿಸುವ ಅಭ್ಯಾಸ ಉಂಟು. ಅವನ ದಿವ್ಯ ರೂಪವು ಎಲ್ಲ ಲೋಕಗಳಲ್ಲಿ ಅತ್ಯಂತ ಮೋಹಕವಾದದ್ದು - ಅವನ ಕಣ್ಣುಗಳು ತಾವರೆಯ ದಳಗಳಂತಿವೆ. ಅವನ ದೇಹದ ಬಣ್ಣವು ಮೇಘಗಳ ವರ್ಣದಂತಿದೆ. ಸಹಸ್ರಾರು ಮನ್ಮಥರ ರೂಪವನ್ನು ಮೀರಿಸುವ ಸೌಂದರ್ಯ ಅವನದು. ಆತನು ಕೇಸರಿ ಬಣ್ಣದ ಉಡುಪವನ್ನೂ ಕೊರಳಿನಲ್ಲಿ ಹಾರವನ್ನೂ ಕೂದಲಲ್ಲಿ ನವಿಲುಗರಿಯನ್ನೂ ಧರಿಸಿರುತ್ತಾನೆ. ಗೋಲೋಕ ವೃಂದಾವನವು ಅಧ್ಯಾತ್ಮಿಕ ಜಗತ್ತಿನಲ್ಲಿ ಪರಮೋಚ್ಛ ಲೋಕ. ಭಗವದ್ಗೀತೆಯಲ್ಲಿ (Bhagavad Gita Updesh in Kannada) ಕೃಷ್ಣನ ತನ್ನ ಲೋಕದ ಒಂದು ಸೂಚನೆಯನ್ನಷ್ಟೇ ನೀಡಿದ್ದಾನೆ.
ಅಧ್ಯಾತ್ಮಿಕ ಗಗನದಲ್ಲಿರುವ ಪರಮ ಗೋಲೋಕ ವೃಂದಾವನದ ಯಥಾಪ್ರತಿ
ಬ್ರಹ್ಮಸಂಹಿತೆಯಲ್ಲಿ ವಿವರವಾದ ವರ್ಣನೆ ಇದೆ. ವೈದಿಕ ಸಾಹಿತ್ಯವು (ಕಠ ಉಪನಿಷತ್ತು 1.3.11), ದೇವೋತ್ತಮನ ನಿವಾಸವನ್ನು ಮೀರಿಸಿದ್ದು ಯಾವುದೂ ಇಲ್ಲ, ಆ ನಿವಾಸವು (ಮನುಷ್ಯನ ಆತ್ಮದ) ಅಂತಿಮ ಗುರಿ (ಪುರುಷಾನ್ ನ ಪರಂ ಕಿಞ್ಚಿತ್ ಸಾ ಕಾಷ್ಠಾ ಪರಮಾ ಗತಿಃ) ಎಂದು ಹೇಳುತ್ತದೆ. ಅದನ್ನು ಸೇರಿದವನು ಮತ್ತೆ ಐಹಿಕ ಜಗತ್ತಿಗೆ ಹಿಂದಿರುಗುವುದಿಲ್ಲ. ಕೃಷ್ಣನ ಮತ್ತು ಕೃಷ್ಣನ ಪರಮ ನಿವಾಸದ ಗುಣ ಒಂದೇ, ಆದುದರಿಂದ ಅವು ಬೇರೆಬೇರೆಯಲ್ಲ. ಭೂಮಿಯಲ್ಲಿ, ದೆಹಲಿಯಿಂದ ಆಗ್ನೇಯಕ್ಕೆ ತೊಂಬತ್ತು ಮೈಲಿ ದೂರದಲ್ಲಿರುವ ವೃಂದಾವನವು ಅಧ್ಯಾತ್ಮಿಕ ಗಗನದಲ್ಲಿರುವ ಪರಮ ಗೋಲೋಕ ವೃಂದಾವನದ ಯಥಾಪ್ರತಿ. ಕೃಷ್ಣನು ಭೂಮಿಗಿಳಿದು ಬಂದಾಗ ಭಾರತದ ಮಥುರಾ ಜಿಲ್ಲೆಯಲ್ಲಿರುವ ಸುಮಾರು 84 ಚದರ ಮೈಲಿಗಳ ವೃಂದಾವನ ಎನ್ನುವ ಪ್ರದೇಶದಲ್ಲಿ ತನ್ನ ಲೀಲೆಗಳನ್ನು ಮೆರೆದನು.