Bhagavad Gita: ಭಗವಂತನಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಯ ಇಷ್ಟಾರ್ಥಗಳು ಹೀಗೆ ನೆರವೇರುತ್ತವೆ; ಗೀತೆಯ ಅರ್ಥ ತಿಳಿಯಿರಿ
Mar 31, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಭಗವಂತನಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಯ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯದ ಕೊನೆಯ ಹಾಗೂ 30ನೇ ಶ್ಲೋಕದಲ್ಲಿ ಓದಿ.
7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 30
ಸಾಧಿಭೂತಾಧಿವೈವಂ ಮಾಂ ಸಾಧಿಯಜ್ಞಂ ಚ ಯೇ ವಿದುಃ |
ಪ್ರಯಾಣಕಾಲೇಪಿ ಚ ಮಾಂ ತೇ ವಿದುರ್ಯುಕ್ತಚೇತಸಃ ||30||
ಅನುವಾದ: ನನ್ನ ಸಂಪೂರ್ಣ ಪ್ರಜ್ಞೆ ಇರುವವರು, ಪರಮ ಪ್ರಭುವಾದ ನಾನೇ ಎಲ್ಲ ಐಹಿಕ ಅಭಿವ್ಯಕ್ತಿಯ, ದೇವತೆಗಳ, ಯಜ್ಞ ರೀತಿಗಳ, ನಿಯಂತ್ರಕ ತತ್ವ ಎಂದು ಬಲ್ಲವರು, ದೇವೋತ್ತಮ ಪರಮ ಪುರುಷನಾದ ನನ್ನನ್ನು ಮರಣಕಾಲದಲ್ಲಿಯೂ ಅರ್ಥಮಾಡಿಕೊಳ್ಳಬಲ್ಲರು ಮತ್ತು ಅರಿಯಬಲ್ಲರು.
ತಾಜಾ ಫೋಟೊಗಳು
ಭಾವಾರ್ಥ: ಕೃಷ್ಣಪ್ರಜ್ಞೆಯಲ್ಲಿ ಕರ್ಮವನ್ನು ಮಾಡುವವರು ದೇವೋತ್ತಮ ಪರಮ ಪುರುಷನ ಸಂಪೂರ್ಣ ಅರಿವಿನ ಮಾರ್ಗವನ್ನು ಯಾವಾಗಲೂ ಬಿಡುವುದಿಲ್ಲ. ಕೃಷ್ಣಪ್ರಜ್ಞೆಯ ದಿವ್ಯ ಸಹಯೋಗದಲ್ಲಿರುವ ಮನುಷ್ಯನು, ಪರಮ ಪ್ರಭುವು ಹೇಗೆ ಐಹಿಕ ಅಭಿವ್ಯಕ್ತಿಯನ್ನು ಮತ್ತು ದೇವತೆಗಳನ್ನು ಆಳುವ ತತ್ವ ಎನ್ನುವುದನ್ನು ತಿಳಿಯಬಲ್ಲ. ಇಂತಹ ದಿವ್ಯ ಸಹಯೋಗದಿಂದ ಮನುಷ್ಯನು ಕ್ರಮೇಣ ದೇವೋತ್ತಮ ಪರಮ ಪುರುಷನ ವಿಷಯವನ್ನು ಮನಗಾಣುತ್ತಾನೆ. ಮರಣಕಾಲದಲ್ಲಿ ಕೃಷ್ಣಪ್ರಜ್ಞೆ ಇರುವ ಇಂತಹ ಮನುಷ್ಯನು ಕೃಷ್ಣನನ್ನು ಮರೆಯಲು ಸಾಧ್ಯವೇ ಇಲ್ಲ. ಸಹಜವಾಗಿ ಆತನು ಪರಮ ಪ್ರಭುವಿನ ಲೋಕವಾದ ಗೋಲೋಕ ವೃಂದಾವನಕ್ಕೆ ಏರಿಸಲ್ಪಡುತ್ತಾನೆ.
ಮನುಷ್ಯನು ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯನ್ನು ಪಡೆಯಲು ಹೇಗೆ ಸಾಧ್ಯ ಎನ್ನುವುದನ್ನು ಈ ಏಳನೆಯ ಅಧ್ಯಾಯವು ವಿಶೇಷವಾಗಿ ವಿವರಿಸುತ್ತದೆ. ಕೃಷ್ಣಪ್ರಜ್ಞೆಯ ಪ್ರಾರಂಭವೆಂದರೆ ಕೃಷ್ಣಪ್ರಜ್ಞೆ ಇರುವವರ ಸಹವಾಸ. ಇಂತಹ ಸಹವಾಸವು ಅಧ್ಯಾತ್ಮಿಕವಾದದ್ದು ಮತ್ತು ಮನುಷ್ಯನಿಗೆ ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ಕಾಲದಲ್ಲಿ ಮನುಷ್ಯನಿಗೆ ಜೀವಿಯ ಸಹಜ ಸ್ವರೂಪವೂ ಮತ್ತು ಜೀವಿಯು ಕೃಷ್ಣನನ್ನು ಹೇಗೆ ಮರೆತು ಬಿಡುತ್ತಾನೆ ಮತ್ತು ಐಹಿಕ ಚಟುವಟಿಕೆಗಳಲ್ಲಿ ತನ್ಮಯವಾಗಿಬಿಡುತ್ತಾನೆ ಎನ್ನುವುದೂ ನಿಜವಾಗಿ ಅರ್ಥವಾಗುತ್ತದೆ.
ಸತ್ಸಹವಾಸದಲ್ಲಿ ಕ್ರಮೇಣ ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಂಡ ಜೀವಿಯು, ಕೃಷ್ಣನನ್ನು ಮರೆತದ್ದರಿಂದ ತಾನು ಭೌತಿಕ ಪ್ರಕೃತಿಯ ನಿಯಮಗಳಿಂದ ಬಂಧಿತನಾದೆ ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತಾನೆ. ಈ ಮನುಷ್ಯರೂಪದ ಜನ್ಮವು ಕೃಷ್ಣಪ್ರಜ್ಞೆಯನ್ನು ಮತ್ತೆ ಪಡೆಯಲು ಲಭಿಸಿದ ಒಂದು ಅವಕಾಶ. ಪರಮ ಪ್ರಭುವಿನ ಅವ್ಯಾಜ ಕರುಣೆಯನ್ನು ಪಡೆದುಕೊಳ್ಳಲು ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಜೀವಿಯು ಅರ್ಥಮಾಡಿಕೊಳ್ಳಬಲ್ಲ.
ಕಷ್ಟದಲ್ಲಿರುವ ಮನುಷ್ಯ, ಕುತೂಹಲಿಯಾದ ಮನುಷ್ಯ, ಪ್ರಾಪಂಚಿಕ ಅಗತ್ಯಗಳನ್ನು ಹೊಂದಿಲ್ಲದ ಮನುಷ್ಯ, ಬ್ರಹ್ಮನ್ ಜ್ಞಾನ, ಪರಮಾತ್ಮನ ಜ್ಞಾನ, ಹುಟ್ಟು, ಸಾವು, ರೋಗಗಳಿಂದ ಬಿಡುಗಡೆ ಮತ್ತು ಪರಮ ಪ್ರಭುವಿನ ಪೂಜೆ ಈ ಎಲ್ಲ ವಿಷಯಗಳನ್ನು ಈ ಅಧ್ಯಾಯದಲ್ಲಿ ಚರ್ಚೆಮಾಡಿದೆ. ಆದರೂ ಕೃಷ್ಣಪ್ರಜ್ಞೆಯಲ್ಲಿ ವಾಸ್ತವವಾಗಿ ಮೇಲೇರಿದವನಿಗೆ ಈ ಭಿನ್ನಭಿನ್ನ ಪ್ರಕ್ರಿಯೆಗಳಲ್ಲಿ ಆಸಕ್ತಿ ಇರುವುದಿಲ್ಲ. ಆತನು ನೇರವಾಗಿ ಕೃಷ್ಣಪ್ರಜ್ಞೆಯ ಕರ್ಮಗಳಲ್ಲಿ ತೊಡಗುತ್ತಾನೆ. ಹೀಗೆಮಾಡಿ ಶ್ರೀಕೃಷ್ಣನ ನಿತ್ಯಸೇವಕನೆನ್ನುವ ತನ್ನ ಸಹಜ ಸ್ವರೂಪವನ್ನು ವಾಸ್ತವವಾಗಿ ಪಡೆಯುತ್ತಾನೆ. ಇಂತಹ ಸ್ಥಿತಿಯಲ್ಲಿ ಆತನು ಪರಿಶುದ್ಧ ಭಕ್ತಿಸೇವೆಯಲ್ಲಿ ಪರಮ ಪ್ರಭುವಿನ ಶ್ರವಣ ಮತ್ತು ಕೀರ್ತನೆಯಲ್ಲಿ ಆನಂದ ಪಡುತ್ತಾನೆ. ಹೀಗೆ ಮಾಡುವುದರಿಂದ ತನ್ನ ಎಲ್ಲ ಇಷ್ಟಾರ್ಥಗಳು ಕೈಗೊಡುತ್ತವೆ ಎಂದು ಆತನಿಗೆ ದೃಢ ವಿಶ್ವಾಸ. ಈ ದೃಢಶ್ರದ್ಧೆಗೆ ದೃಢವ್ರತ ಎಂದು ಹೆಸರು. ಇದು ಭಕ್ತಿಯೋಗದ ಪ್ರಾರಂಭ. ಇದೇ ಎಲ್ಲ ಶಾಸ್ತ್ರಗಳ ತೀರ್ಮಾನ. ಭಗವದ್ಗೀತೆಯ ಈ ಏಳನೆಯ ಅಧ್ಯಾಯವು ಈ ದೃಢ ನಂಬಿಕೆಯ ಸಾರ. ಇಲ್ಲಿಗೆ ಶ್ರೀಮದ್ಭಗವದ್ಗೀತೆಯ ಪರಾತ್ಪರ ಜ್ಞಾನ ಎಂಬ ಏಳನೆಯ ಅಧ್ಯಾಯದ ಭಕ್ತಿವೇದಾಂತ ಭಾವಾರ್ಥವು ಮುಗಿಯಿತು.