Bhagavad Gita:ಕ್ಷಮೆಯನ್ನು ಅಭ್ಯಾಸಿಕೊಳ್ಳಿ, ಸಹನೆ ಇರಿಲಿ, ಇತರರ ಸಣ್ಣಪುಟ್ಟ ತಪ್ಪುಗಳನ್ನು ಕ್ಷಮಿಸಿ; ಗೀತೆಯ ಸಾರಾಂಶ ಹೀಗಿದೆ
May 24, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಕ್ಷಮೆಯನ್ನು ಅಭ್ಯಾಸ ಮಾಡಿಕೊಳ್ಳಿ, ಸಹನೆಯಿಂದ ಇರಿ, ಇತರರ ಸಣ್ಣಪುಟ್ಟ ತಪ್ಪುಗಳನ್ನು ಕ್ಷಮಿಸಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 4 ಮತ್ತು 5ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ 10 - ವಿಭೂತಿ ಯೋಗ - ಶ್ಲೋಕ 4-5
ಬುದ್ಧಿರ್ಜ್ಞಾನಮಸಮ್ಮೋಹಃ ಕ್ಷಮಾ ಸತ್ಯಂ ದಮಃ ಶಮಃ|
ಸುಖಂ ದುಃಖಂ ಭವೋಭಾವೋ ಭಯಂ ಚಾಭಯಮೇ ಚ||4||
ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋಯಶಃ|
ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್‌ವಿಧಾಃ ||5||
ಅನುವಾದ: ಬುದ್ಧಿ, ಜ್ಞಾನ, ಸಂದೇಹ ಮತ್ತು ಭ್ರಾಂತಿಗಳಿಂದ ಬಿಡುಗಡೆ, ಕ್ಷಮೆ, ಸತ್ಯ, ಇಂದ್ರಿಯನಿಗ್ರಹ, ಮನೋನಿಗ್ರಹ, ಸುಖದುಃಖಗಳು, ಹುಟ್ಟು, ಸಾವು, ಭಯ, ನಿರ್ಭಯ, ಅಹಿಂಸೆ, ಸಮಚಿತ್ತತೆ, ತುಷ್ಟಿ, ತಪಸ್ಸು, ದಾನ, ಕೀರ್ತಿ ಮತ್ತು ಅಪಕೀರ್ತಿ - ಜೀವಿಗಳ ಈ ಎಲ್ಲ ಗುಣಗಳನ್ನೂ ಸೃಷ್ಟಿಸಿದವನು ನಾನೊಬ್ಬನೇ.
ತಾಜಾ ಫೋಟೊಗಳು
ಭಾವಾರ್ಥ: ಜೀವಿಗಳ ಗುಣಗಳು ಒಳ್ಳೆಯವಾಗಿರಲಿ ಕೆಟ್ಟವಾಗಿರಲಿ, ಎಲ್ಲವನ್ನೂ ಸೃಷ್ಟಿಸಿದವನು ಕೃಷ್ಣನೇ. ಅವುಗಳನ್ನು ಇಲ್ಲಿ ವರ್ಣಿಸಿದೆ. ಬುದ್ಧಿ ಎಂದರೆ ವಿಷಯಗಳನ್ನು ಸರಿಯಾದ ದೃಷ್ಟಿಯಿಂದ ವಿಶ್ಲೇಷಣೆ ಮಾಡುವ ಶಕ್ತಿ. ಜ್ಞಾನ ಎಂದರೆ ಚೇತನ ಯಾವುದು, ಜಡವಸ್ತು ಯಾವುದು ಎನ್ನುವುದಕ್ಕೆ ಸಂಬಂಧಿಸಿದ್ದು. ವಿಶ್ವವಿದ್ಯಾನಿಲಯದ ವಿದ್ಯಾಭ್ಯಾಸದಿಂದ ಪಡೆದುಕೊಂಡ ಸಾಮಾನ್ಯ ಜ್ಞಾನವು ಜಡವಸ್ತುವಿಗೆ ಸಂಬಂಧಿಸಿದ್ದು. ಅದನ್ನು ಜ್ಞಾನ ಎಂದು ಇಲ್ಲಿ ಒಪ್ಪುವುದಿಲ್ಲ. ಜ್ಞಾನ ಎಂದರೆ ಚೇತನ ಮತ್ತು ಜಡವಸ್ತುಗಳ ನಡುವಣ ವ್ಯತ್ಯಾಸದ ತಿಳುವಳಿಕೆ. ಆಧುನಿಕ ವಿದ್ಯಾಭ್ಯಾಸದಲ್ಲಿ ಚೇತನಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ಇಲ್ಲ. ಭೌತಿಕ ಮೂಲಾಂಶಗಳು ಮತ್ತು ದೈಹಿಕ ಅಗತ್ಯಗಳು - ಇವುಗಳಿಗಷ್ಟೇ ಗಮನ ಕೊಡಲಾಗುತ್ತಿದೆ. ಆದುದರಿಂದ ಶಾಲಾ ಕಾಲೇಜುಗಳ ಶಿಕ್ಷಣ ಅಸಂಪೂರ್ಣ (Bhagavad Gita Updesh in Kannada).
ಅಸಮ್ಮೋಹ ಅಥವಾ ಸಂದೇಹ ಭ್ರಾಂತಿಗಳಿಂದ ಬಿಡುಗಡೆಯನ್ನು, ಮನುಷ್ಯನು ಅನಿಶ್ಚಿತ ಮನಸ್ಥಿಯಲ್ಲಿ ಇಲ್ಲದಿರುವಾಗ ಮತ್ತು ದಿವ್ಯತತ್ವಜ್ಞಾನವನ್ನು ಅರಿತಾಗ ಸಾಧಿಸಬಹುದು. ಆತನು ನಿಧಾನವಾಗಿ ಆದರೆ ಖಂಡಿತವಾಗಿ ದಿಗ್ಬ್ರಮೆಯಿಂದ ಮುಕ್ತನಾಗುತ್ತಾನೆ. ಏನನ್ನೂ ಕಣ್ಣುಮುಚ್ಚಿಕೊಂಡು ಸ್ವೀಕರಿಸಬಾರದು. ಎಲ್ಲವನ್ನೂ ಎಚ್ಚರಿಕೆಯಿಂದ ಸ್ವೀಕರಿಸಬೇಕು. ಕ್ಷಮೆಯನ್ನು ಅಭ್ಯಾಸ ಮಾಡಬೇಕು. ಸಹನೆಯಿಂದ ಇರಬೇಕು. ಇತರರ ಸಣ್ಣಪುಟ್ಟ ತಪ್ಪುಗಳನ್ನು ಕ್ಷಮಿಸಬೇಕು. ಸತ್ಯ ಎಂದರೆ ವಾಸ್ತವಾಂಶಗಳನ್ನು ಇತರರ ಪ್ರಯೋಜನಕ್ಕಾಗಿ ಇದ್ದದ್ದನ್ನು ಇದ್ದಂತೆ ನಿರೂಪಿಸಬೇಕು. ವಾಸ್ತವಾಂಶಗಳನ್ನು ತಪ್ಪಾಗಿ ನಿರೂಪಿಸಬಾರದು.
ಸಾಮಾಜಿಕ ಸಂಪ್ರದಾಯಗಳಂತೆ, ಇತರರಿಗೆ ರುಚಿಸುವಾಗ ಮಾತ್ರ ಸತ್ಯವನ್ನು ಹೇಳಿಬೇಕು ಎನ್ನುತ್ತಾರೆ. ಆದರೆ ಇದು ಸತ್ಯನಿಷ್ಠೆಯಲ್ಲ. ಇತರರು ವಾಸ್ತವಾಂಶಗಳೇನು ಎಂದು ತಿಳಿಯಲು ಸಾಧ್ಯವಾಗುವಂತೆ ನೇರವಾಗಿ ಹೇಳಬೇಕು. ಮನುಷ್ಯನೊಬ್ಬನು ಕಳ್ಳನಾದರೆ, ಆತ ಕಳ್ಳನೆಂದು ಜನರಿಗೆ ಎಚ್ಚರಿಕೆ ಕೊಟ್ಟರೆ ಅದು ಸತ್ಯ. ಕೆಲವೊಮ್ಮೆ ಸತ್ಯವು ಅಪ್ರಿಯವಾಗಬಹುದು. ಆದರೆ ಅದನ್ನು ಹೇಳದೆ ಸುಮ್ಮನಿರಬಾರದು. ಸತ್ಯನಿಷ್ಠೆ ಎಂದರೆ ವಾಸ್ತವಾಂಶಗಳನ್ನು ಇತರರ ಪ್ರಯೋಜನಕ್ಕಾಗಿ ಹೇಳಲೇಬೇಕು. ಇದು ಸತ್ಯದ ವಿವರಣೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)