ಭಗವದ್ಗೀತೆ: ಕಾಮ ಮನುಷ್ಯನ ಜ್ಞಾನವನ್ನು ಆವರಿಸಿ ಆತನ ದಿಕ್ಕನ್ನೇ ತಪ್ಪಿಸುತ್ತೆ; ಗೀತೆಯ ಅರ್ಥ ತಿಳಿಯಿರಿ
Dec 24, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಕಾಮ ಮನುಷ್ಯನ ಜ್ಞಾನವನ್ನು ಆವರಿಸಿ ಆತನ ದಿಕ್ಕನ್ನೇ ತಪ್ಪಿಸುತ್ತೆ ಎಂಬುದರ ಅರ್ಥ ತಿಳಿಯಿರಿ.
ಇನ್ದ್ರಿಯಾಣಿ ಮನೋ ಬುದ್ಧಿ ರಸ್ಯಾಧಿಷ್ಠಾನಮುಚ್ಯತೇ |
ಏತೈರ್ವಿಮೋಹಯತ್ಯೇಷ ಜ್ಞಾನಮಾವೃತ್ಯ ದೇಹಿನಮ್ ||40||
ಈ ಕಾಮಕ್ಕೆ ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಆವಾಸಸ್ಥಾನಗಳು. ಅವುಗಳ ಮೂಲಕ ಕಾಮವು ಜೀವಿಯ ಜ್ಞಾನವನ್ನು ಆವರಿಸಿ ಅವನನ್ನು ದಿಕ್ಕುಗೇಡಿಸುತ್ತದೆ.
ತಾಜಾ ಫೋಟೊಗಳು
ಬದ್ಧತ್ಮನ ದೇಹದಲ್ಲಿ ಶತ್ರುವು ಆಯಕಟ್ಟಿನ ಸ್ಥಾನಗಳನ್ನು ವಶಮಾಡಿಕೊಂಡಿದ್ದಾನೆ. ಶತ್ರುವನ್ನು ಸೋಲಿಸಲು ಬಯಸುವವನಿಗೆ ಶತ್ರು ಎಲ್ಲಿದ್ದಾನೆ ಎಂದು ತಿಳಿಯಬೇಕು. ಆದುದರಿಂದ ಕೃಷ್ಣನು ಆ ಸ್ಥಳಗಳನ್ನು ಸುಳಿವನ್ನು ಕೊಡುತ್ತಿದ್ದಾನೆ. ಇಂದ್ರಿಯಗಳ ಎಲ್ಲ ಚಟುವಟಿಕೆಗಳ ಕೇಂದ್ರ ಮನಸ್ಸು. ಆದುದರಿಂದ ಇಂದ್ರಿಯ ವಸ್ತುಗಳ ವಿಷಯವನ್ನು ಕೇಳಿದಾಗ ಸಾಮಾನ್ಯವಾಗಿ ಮನಸ್ಸು ಎಲ್ಲ ಇಂದ್ರಿಯ ಭೋಗಗಳ ಯೋಜನೆಗಳ ಆಗರವಾಗುತ್ತದೆ. ಇದರ ಪರಿಣಾಮವಾಗಿ, ಮನಸ್ಸೂ ಇಂದ್ರಿಯಗಳೂ ಕಾಯದ ಭಂಡಾರಗಳಾಗುತ್ತವೆ. ಅನಂತರ, ಬುದ್ಧಿಯ ವಿಭಾಗವು ಇಂತಹ ಕಾಮಪ್ರವೃತ್ತಿಗಳ ರಾಜಧಾನಿಯಾಗುತ್ತದೆ.
ಬುದ್ಧಿಯು ಆತ್ಮದ ನೆರೆಮನೆಯ ನಿವಾಸಿ. ಕಾಮಪೂರಿತ ಬುದ್ಧಿಯು ಆತ್ಮವು ಅಹಂಕಾರವನ್ನು ಪಡೆಯುವಂತೆ ಮತ್ತು ಜಡವಸ್ತುವಿನೊಂದಿಗೆ, ಆ ಮೂಲಕ ಮನಸ್ಸು ಮತ್ತು ಇಂದ್ರಿಯಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳುವಂತೆ, ಪ್ರಭಾವವನ್ನು ಬೀರುತ್ತದೆ. ಆತ್ಮವು ಹೀಗೆ ಐಹಿಕ ಇಂದ್ರಿಯಗಳ ಭೋಗದ ವ್ಯಸನಕ್ಕೆ ತುತ್ತಾಗುತ್ತದೆ. ಇದೇ ನಿಜವಾದ ಸುಖ ಎಂದು ಭ್ರಮಿಸುತ್ತದೆ. ಆತ್ಮವು ಹೀಗೆ ತಪ್ಪಾಗಿ ಗುರುತಿಸಿಕೊಳ್ಳುವುದನ್ನು ಶ್ರೀಮದ್ಭಾಗವತದಲ್ಲಿ (10.84.13)ಬಹು ಸೊಗಸಾಗಿ ವರ್ಣಿಸಿದೆ.
ಯಸ್ಯಾತ್ಮ ಬುದ್ಧಿಃ ಕುಣಪೇ ತ್ರಿಧಾತುಕೇ
ಸ್ವಧೀಃ ಕಲತ್ರಾದಿಷು ಭೌಮ ಇಜ್ಯಧೀಃ |
ಜನೇಷ್ಟಭಿಜ್ಞೇಷು ಸ ಏವ ಗೋಖರಃ ||
ಯಾವ ಮನುಷ್ಯನು ತ್ರಿಧಾತುಗಳಿಂದ ಆದ ಈ ದೇಹವನ್ನು ತನ್ನ ಆತ್ಮದೊಂದಿಗೆ ಒಂದಾಗಿ ಗುರುತಿಸುವನೋ, ದೇಹದ ಉತ್ಪಾದನೆಗಳನ್ನು ತನ್ನ ಬಂಧುಗಳೆಂದು ಪರಿಗಣಿಸುವನೋ, ತಾನು ಹುಟ್ಟಿದ ಭೂಮಿಯು ಪೂಜಾರ್ಹವೆಂದು ಭಾವಿಸುವನೋ ಮತ್ತು ಆಧ್ಯಾತ್ಮಿಕ ತಿಳಿವಳಿಕೆ ಉಳ್ಳವರನ್ನು ಭೇಟಿಮಾಡುವುದಕ್ಕಿಂತ ಹೆಚ್ಚಾಗಿ ಸ್ನಾನ ಮಾಡುವುದಕ್ಕಾಗಿ ಯಾತ್ರಾಸ್ಥಳಕ್ಕೆ ಹೋಗುವನೋ ಅವನನ್ನೂ ಒಂದು ಕತ್ತೆಯಂತೆ ಅಥವಾ ಹಸುವಿನಂತೆ ಪರಿಗಣಿಸಬೇಕು.
ತಸ್ಮಾತ್ತ್ವಮಿನ್ದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ |
ಪಾಪ್ಮಾನಂ ಪ್ರಜಹಿ ಹ್ಯೇನಂ ಜ್ಞಾನವಿಜ್ಞಾನನಾಶನಮ್ ||41||
ಆದುದರಿಂದ, ಭರತವಂಶಜರಲ್ಲಿ ಶ್ರೇಷ್ಠನಾದ ಅರ್ಜುನನೇ, ಪ್ರಾರಂಭದಲ್ಲಿಯೇ ಇಂದ್ರಿಯಗಳನ್ನು ನಿಯಂತ್ರಿಸಿ ಪಾಪದ ಮಹಾಸಂಕೇತವಾದ ಕಾಮಕ್ಕೆ ಕಡಿವಾಣ ಹಾಕು. ಜ್ಞಾನ ಮತ್ತು ಆತ್ಮ ಸಾಕ್ಷಾತ್ಕಾರಗಳನ್ನು ನಾಶಮಾಡುವ ಈ ಕಾಮವನ್ನು ಧ್ವಂಸಮಾಡು.
ಕಾಮವು ಆತ್ಮಸಾಕ್ಷಾತ್ಕಾರದ ಮತ್ತು ಆತ್ಮದ ನಿಶ್ಚಿತ ಜ್ಞಾನದ ಹಂಬಲವನ್ನು ನಾಶಮಾಡುತ್ತದೆ. ಇದು ಮನುಷ್ಯನ ಅತ್ಯಂತ ಪಾಪಿಯಾದ ಶತ್ರು. ಇದನ್ನು ನಿಯಂತ್ರಿಸಲು ಪ್ರಾರಂಭದಿಂದಲೂ ಇಂದ್ರಿಯಗಳನ್ನು ಹತೋಟಿಯಲ್ಲಿಡಬೇಕೆಂದು ಭಗವಂತನು ಅರ್ಜುನನಿಗೆ ಬೋಧಿಸಿದನು. ಜ್ಞಾನ ಎಂದರೆ ಆತ್ಮೇತರವಾದದ್ದರಿಂದ ಭಿನ್ನವಾದ ಆತ್ಮದ ಜ್ಞಾನ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇದು ಆತ್ಮವು ದೇಹವಲ್ಲ ಎನ್ನುವ ಅರಿವು. ವಿಜ್ಞಾನ ಎನ್ನುವುದು ಆತ್ಮದ ಸ್ವರೂಪ ಮತ್ತು ಪರಮಾತ್ಮನೊಡನೆ ಅದರ ಸಂಬಂಧ ಇವುಗಳ ನಿಶ್ಚಿತ ಜ್ಞಾನ. ಇದನ್ನು ಶ್ರೀಮದ್ಭಾಗವತದಲ್ಲಿ (2.9.31) ಹೀಗೆ ವಿವರಿಸಿದೆ.
ಜ್ಞಾನಂ ಪರಮಗುಹ್ಯಂ ಮೇ ಯದ್ ವಿಜ್ಞಾನ ಸಮನ್ವಿತಮ್ |
ಸರಹಸ್ಯಂ ತದನ್ಗಂ ಚ ಗೃಹಾಣ ಗದಿತಂ ಮಯಾ ||
ಆತ್ಮ ಮತ್ತು ಪರಮಾತ್ಮನ ಜ್ಞಾನವು ಬಹುಗೋಪ್ಯವಾದದ್ದು ಮತ್ತು ನಿಗೂಢವಾದದ್ದು. ಆದರೆ ಭಗವಂತನೇ ಅವುಗಳ ವಿವಿಧ ಅಂಶಗಳನ್ನು ವಿವಿರಿಸಿದರೆ ಇಂತಹ ಜ್ಞಾನವನ್ನೂ ನಿರ್ದಿಷ್ಟ ಸಾಕ್ಷಾತ್ಕಾರವನ್ನೂ ಅರ್ಥಮಾಡಿಕೊಳ್ಳಬಹುದು. ಭಗವದ್ಗೀತೆಯು ನಮಗೆ ಆತ್ಮನ ಈ ಸಾಮಾನ್ಯ ಮತ್ತು ನಿರ್ದಿಷ್ಟ ಜ್ಞಾನವನ್ನು ಕೊಡುತ್ತದೆ. ಜೀವಿನಗಳು ಭಗವಂತನ ವಿಭಿನ್ನಾಂಶಗಳು. ಆದುದರಿಂದ ಅವರ ಅಸ್ತಿತ್ವದ ಉದ್ದೇಶವೇ ಭಗವಂತನ ಸೇವೆ. ಈ ಪ್ರಜ್ಞೆಗೆ ಕೃಷ್ಣಪ್ರಜ್ಞೆ ಎಂದು ಹೆಸರು. ಆದುದರಿಂದ ಬದುಕಿನ ಪ್ರಾರಂಭದಲ್ಲಿಯೇ ಮನುಷ್ಯನು ಈ ಕೃಷ್ಣಪ್ರಜ್ಞೆಯನ್ನು ಕಲಿಯಬೇಕು. ಇದರಿಂದ ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಂಡು ಅದಕ್ಕೆ ಅನುಗುಣವಾಗಿ ನಡೆದುಕೊಳ್ಳವುದು ಸಾಧ್ಯವಾಗುತ್ತದೆ.
ಪ್ರತಿಯೊಂದು ಜೀವಿಗೂ ಭಗವಂತನ ಪ್ರೇಮವು ಸಹಜ. ಕಾಮವು ಈ ಪ್ರೇಮದ ವಕ್ರ ಪ್ರತಿಬಿಂಬ. ಆದರೆ ಪ್ರಾಂಭದಿಂದ ಕೃಷ್ಣಪ್ರಜ್ಞೆಯಲ್ಲಿ ಶಿಕ್ಷಣ ಪಡೆದವನಿಗೆ ಭಗವಂತನದಲ್ಲಿನ ಸಹಜವಾದ ಪ್ರೇಮವು ಕಾಮವಾಗಿ ಕೀಳಾಗಲಾರದು. ಭಗವಂತನಲ್ಲಿನ ಪ್ರೇಮವು ಕಾಮದ ಕೀಳುಸ್ಥಿತಿಗೆ ಬಂದಾಗ ಸಹಜಸ್ಥಿತಿಗೆ ಹಿಂದಿರುವುದು ಬಹುಕಷ್ಟ. ಆದರೂ ಕೃಷ್ಣಪ್ರಜ್ಞೆಯ ಶಕ್ತಿ ಎಷ್ಟೆಂದರೆ ತಡವಾಗಿ ಪ್ರಾರಂಭಿಸಿದವನು ಭಕ್ತಿಸೇವೆಯ ನಿಯಂತ್ರಕ ತತ್ವಗಳನ್ನು ಅನುಸರಿಸಿದರೆ ಭಗವಂತನ ಪ್ರೇಮಿಯಾಗಬಹುದು.
ಆದುದರಿಂದ ಬದುಕಿನ ಯಾವುದೇ ಹಂತದಿಂದಾಗಲೀ ಅಥವಾ ಅದರ ತುರ್ತನ್ನು ಅರ್ಥಮಾಡಿಕೊಂಡ ಕಾಲದಿಂದಾಗಲೀ ಮನುಷ್ಯನು ಕೃಷ್ಣಪ್ರಜ್ಞೆಯಿಂದ ಇಂದ್ರಿಯಗಳನ್ನು ನಿಯಂತ್ರಿಸಿ ಭಗವಂತನ ಪ್ರೇಮಪೂರ್ವಕ ಸೇವೆಯನ್ನು ಪ್ರಾರಂಭಿಸಬಹುದು. ಕಾಮವನ್ನು ಭಗವಂತನ ಪ್ಪರೇಮಕ್ಕೆ ಪರಿವರ್ತಿಸಬಹುದು. ಭಗವತ್ಪ್ರೇಮವೇ ಮನುಷ್ಯ ಜೀವನದ ಅತ್ಯಂತ ಪರಿಪೂರ್ಣ ಹಂತ.