ಭಗವದ್ಗೀತೆ: ಮನುಷ್ಯ ಮಾಡುವ ಕೆಲಸದಿಂದ ಅಭಿವೃದ್ಧಿಯಾಗಲು ಈ ಮಾರ್ಗದರ್ಶನ ಬೇಕು; ಗೀತೆಯ ಅರ್ಥ ತಿಳಿಯಿರಿ
Dec 11, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಮನುಷ್ಯ ಮಾಡುವ ಕೆಲಸದಿಂದ ಅಭಿವೃದ್ಧಿಯಾಗಲು ಈ ಮಾರ್ಗದರ್ಶನ ಬೇಕೆಂಬುದರ ಅರ್ಥ ತಿಳಿಯಿರಿ.
ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಮ್ |
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್ ||15||
ವೇದಗಳಲ್ಲಿ, ನಿಯಂತ್ರಿತವಾದ ಕರ್ಮಗಳನ್ನು ವಿಧಿಸಿದೆ. ವೇದಗಳು ದೇವೋತ್ತಮ ಪರಮ ಪುರುಷನಿಂದ ನೇರವಾಗಿ ವ್ಯಕ್ತವಾಗಿದೆ. ಆದುದರಿಂದ ಸರ್ವಾಂತರ್ಯಾಮಿ ಪರಬ್ರಹ್ಮನು ನಿತ್ಯವಾಗಿ ಯಜ್ಞಕರ್ಮಗಳಲ್ಲಿ ಪ್ರತಿಷ್ಠಿತನಾಗಿರುತ್ತಾನೆ.
ತಾಜಾ ಫೋಟೊಗಳು
ಈ ಶ್ಲೋಕದಲ್ಲಿ ಯಜ್ಞಾರ್ಥಕರ್ಮವನ್ನು ಎಂದರೆ ಕೃಷ್ಣನೊಬ್ಬನ ಸುಪ್ರೀತಿಗಾಗಿಯೇ ಕರ್ಮಾಡುವ ಅಗತ್ಯವನ್ನು ಇನ್ನೂ ಸ್ಪಷ್ಟವಾಗಿ ಹೇಳಿದೆ. ಯಜ್ಞಪುರುಷನಾದ ವಿಷ್ಣುವನ್ನು ಪ್ರಸನ್ನಗೊಳಿಸಲು ನಾವು ಕರ್ಮವನ್ನು ಮಾಡಬೇಕಾದರೆ ಬ್ರಹ್ಮನಲ್ಲಿ ಅಥವಾ ಅಲೌಕಿಕ ವೇದಗಳಲ್ಲಿ ಕರ್ಮದ ದಿಕ್ಕನ್ನು ಕಂಡುಕೊಳ್ಳಬೇಕು. ಆದುದರಿಂದ ವೇಗದಗಳು ಕರ್ಮದ ದಿಗ್ದರ್ಶನದ ಸಂಹಿತೆಗಳು. ವೇದಗಳ ದಿಗ್ದರ್ಶನವಿಲ್ಲದೆ ಏನನ್ನು ಮಾಡಿದರೂ ಅದಕ್ಕೆ ವಿಕರ್ಮ ಅಥವಾ ಅನಧಿಕೃತ ಅಥವಾ ಪಾಪಕರವಾದ ಕರ್ಮ ಎಂದು ಹೆಸರು. ಆದುದರಿಂದ ಕರ್ಮಫಲದಿಂದ ಉದ್ಧಾರವಾಗಲು ನಾವು ಯಾವಾಗಲೂ ವೇದಗಳ ಮಾರ್ಗದರ್ಶನವನ್ನು ಪಡೆಯಬೇಕು.
ಸಾಮಾನ್ಯ ಜೀವನದಲ್ಲಿ ಹೇಗೆ ರಾಜ್ಯವು ಮಾರ್ಗದರ್ಶನ ಮಾಡಿದಂತೆ ಮನುಷ್ಯನು ಕೆಲಸ ಮಾಡಬೇಕಾಗುತ್ತದೆಯೋ ಹಾಗೆಯೇ ಭಗವಂತನ ಪರಮ ಸಾಮ್ರಾಜ್ಯದ ಮಾರ್ಗದರ್ಶನದಲ್ಲಿ ಕೆಲಸಮಾಡಬೇಕಾಗುತ್ತದೆ. ವೇದಗಳಲ್ಲಿ ಇಂತಹ ಮಾರ್ಗದರ್ಶನಗಳು ದೇವೋತ್ತಮ ಪರಮ ಪುರುಷನ ಉಸಿರಿನಿಂದ ನೇರವಾಗಿ ಅಭಿವ್ಯಕ್ತಿ ಪಡೆಯುತ್ತವೆ. ಅಸ್ಯ ಮಹತೋ ಭೂತಸ್ಯ ನಿಶ್ವಸಿತಮೇತದ್ ಯದ್ ಋಗ್ವೇದೋ ಯಜುರ್ ವೇದಃ ಸಾಮವೇದೋಥರ್ವಾಂಗಿರಸಃ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಈ ನಾಲ್ಕು ವೇದಗಳು ದೇವೋತ್ತಮ ಪರಮ ಪುರುಷನ ಉಸಿರಿನಿಂದ ಮೂಡಿಬಂದಿವೆ. (ಬೃಹದಾರಣ್ಯಕ ಉಪನಿಷತ್ತು 4.5.11).
ಸರ್ವಶಕ್ತನಾದ ಭಗವಂತನು ವಾಯುವನ್ನು ಉಸಿರಾಡಿ ಮಾತನಾಡಬಲ್ಲ. ಬ್ರಹ್ಮಸಂಹಿತೆಯಲ್ಲಿ ದೃಢಪಡಿಸಿರುವಂತೆ ಭಗವಂತನು ತನ್ನ ಪ್ರತಿಯೊಂದು ಇಂದ್ರಿಯದ ಮೂಲಕ ಇತರ ಎಲ್ಲ ಇಂದ್ರಿಯಗಳ ಕೆಲಸ ಮಾಡಬಲ್ಲ. ಎಂದರೆ ಭಗವಂತನು ತನ್ನ ಉಸಿರಿನಿಂದ ಮಾತನಾಡಬಲ್ಲ ಮತ್ತು ಆತನು ಕಣ್ನೋಟದಿಂದ ಗರ್ಭಾಧಾನ ಮಾಡಬಲ್ಲ. ಆತನು ಐಹಿಕ ನಿಸರ್ಗದ ಗರ್ಭದಲ್ಲಿ ಎಲ್ಲ ಬದ್ಧಾತ್ಮರು ಮತ್ತೆ ಭಗವದ್ಘಾಮಕ್ಕೆ ಹೇಗೆ ಮರಳಬಹುದು ಎನ್ನುವುದಕ್ಕೆ ಮಾರ್ಗದರ್ಶನವನ್ನು ವೇದಗಳ ಜ್ಞಾನದಲ್ಲಿ ನೀಡಿದ.
ಐಹಿಕ ನಿಸರ್ಗದಲ್ಲಿನ ಎಲ್ಲ ಆತ್ಮಗಳು ಐಹಿಕ ಸುಖಾನುಭವಕ್ಕೆ ಹಾತೊರೆಯುತ್ತಿರುತ್ತಾರೆ ಎನ್ನುವುದನ್ನು ನಾವು ಸದಾ ನೆನಪಿಡಬೇಕು. ಮನುಷ್ಯನು ತನ್ನ ಅಡ್ಡಮಾರ್ಗದ ಆಸೆಗಳನ್ನು ತೃಪ್ತಿಪಡಿಸಿಕೊಂಡು, ಸುಖಾನುಭವ ಎನ್ನಿಸಿಕೊಳ್ಳವ ಅನುಭವವನ್ನು ಮುಗಿಸಿಕೊಂಡು ಭಗವದ್ಧಾಮಕ್ಕೆ ಹಿಂದಿರುವುದು ವೇದದ ನಿರ್ದೇಶನಗಳಿಂದ ಸಾಧ್ಯವಾಗುತ್ತದೆ. ಬದ್ಧಾತ್ಮಗಳಿಗೆ ಮುಕ್ತಿಯನ್ನು ಸಾಧಿಸಲು ಇದು ಒಂದು ಅವಕಾಶ. ಆದುದರಿಂದ ಬದ್ಧಾತ್ಮಗಳು ಕೃಷ್ಣಪ್ರಜ್ಞೆಯ ಮೂಲಕ ಯಜ್ಞದ ಪ್ರಕ್ರಿಯೆಯನ್ನು ಅನುಸರಿಸಲು ಪ್ರಯತ್ನಿಸಬೇಕು. ವೇದಗಳ ಆಜ್ಞೆಗಳನ್ನು ಅನುಸರಿಸದೆ ಇರುವವರು ಸಹ ಕೃಷ್ಣಪ್ರಜ್ಞೆಯ ತತ್ವಗಳನ್ನು ಸ್ವೀಕರಿಸಬಹುದು. ಇದು ವೈದಿಕ ಯಜ್ಞಗಳ ಅಥವಾ ವೈದಿಕ ಕರ್ಮಗಳ ಆಚರಣೆಗೆ ಬದಲಾಗಿ ಸ್ಥಾನವನ್ನು ಪಡೆಯುತ್ತದೆ.
ನೈವ ತಸ್ಯ ಕೃತೇನೋರ್ಥೋ ನಾಕೃತೇನೇಹ ಕಶ್ಚನ |
ನ ಚಾಸ್ಯ ಸರ್ವಭೂತೇಷು ಕಶ್ಚಿದರ್ಥವ್ಯಪಾಶ್ರಯಃ ||18||
ಆತ್ಮಸಾಕ್ಷಾತ್ತಾರವನ್ನು ಸಾಧಿಸಿದವನಿಗೆ ನಿಯಮಿತ ಕರ್ಮಗಳ ಅನುಷ್ಠಾನದಲ್ಲಿ ಯಾವ ಉದ್ದೇಶವೂ ಇರುವುದಿಲ್ಲ. ಅಂತಹ ಕರ್ಮವನ್ನು ಮಾಡದೇ ಇರಲು ಅವನಿಗೆ ಯಾವುದೇ ಕಾರಣವಿರುವುದಿಲ್ಲ. ಆತನು ಬೇರೊಬ್ಬ ಜೀವಿಯನ್ನು ಅವಲಂಬಿಸಲು ಕಾರಣವೂ ಇರುವುದಿಲ್ಲ.
ಆತ್ಮಸಾಕ್ಷಾತ್ಕಾರವಾದ ಮನುಷ್ಯನು ಕೃಷ್ಣಪ್ರಜ್ಞೆಯಲ್ಲಿನ ಚಟುವಟಿಕೆಗಳನ್ನು ಬಿಟ್ಟು ಬೇರೆ ಯಾವ ನಿಯಮಿತ ಕರ್ತವ್ಯವನ್ನು ಮಾಡುವ ಅಗತ್ಯವೂ ಇಲ್ಲ. ಮುಂದಿನ ಶ್ಲೋಕಗಳಲ್ಲಿ ವಿವರಿಸುವಂತೆ ಕೃಷ್ಣಪ್ರಜ್ಞೆ ಎಂದರೆ ಜಡತ್ವವಲ್ಲ. ಕೃಷ್ಣಪ್ರಜ್ಞೆ ಇರುವ ಮನುಷ್ಯನು ಬೇರೆ ಯಾವದೇ ವ್ಯಕ್ತಿಯ, ಯಾವುದೇ ಮನುಷ್ಯನ ಅಥವಾ ದೇವತೆಯ ಆಶ್ರಯವನ್ನು ಪಡೆಯುವುದಿಲ್ಲ. ಕೃಷ್ಣಪ್ರಜ್ಞೆಯಲ್ಲಿ ಆತನು ಏನು ಮಾಡುತ್ತಾನೆಯೋ ಅಷ್ಟರಿಂದಲೇ ಅವನ ಕರ್ತವ್ಯ ಪಾಲನೆಯಾಗುತ್ತದೆ.