Bhagavad Gita: ಮನುಷ್ಯ ಮನಸ್ಸನ್ನು ಭಗವಂತನಲ್ಲಿ ಕೇಂದ್ರೀಕರಿಸಿದರೆ ಪರಮ ಸತ್ಯ ಅರಿತುಕೊಳ್ಳಬಲ್ಲ; ಗೀತೆಯ ಅರ್ಥ ತಿಳಿಯಿರಿ
Mar 11, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಮನುಷ್ಯ ಮನಸ್ಸನ್ನು ಭಗವಂತನಲ್ಲಿ ಕೇಂದ್ರೀಕರಿಸಿದರೆ ಪರಮ ಸತ್ಯ ಅರಿತುಕೊಳ್ಳಬಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆ 7ನೇ ಅಧ್ಯಾಯದ 1ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ - 7 ಪರಾತ್ಪರ ಜ್ಞಾನ: ಶ್ಲೋಕ - 1
ಶ್ರೀಭಗವಾನುವಾಚ
ಮಾಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಞ್ಜನ್ಮದಾಶ್ರಯಃ
ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಫೃಣು ||1||
ಅನುವಾದ: ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು - ಪಾರ್ಥ, ನನ್ನಲ್ಲಿ ಆಸಕ್ತನಾದ ಮನಸ್ಸಿನಿಂದ ನನ್ನನ್ನೊಳಗೊಂಡ ಸಂಪೂರ್ಣ ಪ್ರಜ್ಞೆಯಲ್ಲಿ ಯೋಗಾಭ್ಯಾಸವನ್ನು ಮಾಡುವುದರಿಂದ, ನೀನು ನನ್ನನ್ನು ಸಂಪೂರ್ಣವಾಗಿಯೂ, ಸಂಶಯವಿಲ್ಲದಂತೆಯೂ ತಿಳಿದುಕೊಳ್ಳಬಹುದು. ಅದು ಹೇಗೆ ಅನ್ನುವುದನ್ನು ಕೇಳು.
ತಾಜಾ ಫೋಟೊಗಳು
ಭಾವಾರ್ಥ: ಭಗವದ್ಗೀತೆಯ ಏಳನೆಯ ಅಧ್ಯಾಯದಲ್ಲಿ ಕೃಷ್ಣಪ್ರಜ್ಞೆಯ ಸ್ವರೂಪವನ್ನು ಸಂಪೂರ್ಣವಾಗಿ ವಿವರಿಸಿದೆ. ಕೃಷ್ಣನು ಎಲ್ಲ ಭಾಗ್ಯಗಳಲ್ಲಿ ಪೂರ್ಣನಾದವನು. ಇಂತಹ ಭಾಗ್ಯಗಳನ್ನು ಅವನು ಹೇಗೆ ಪ್ರಕಟಿಸುತ್ತಾನೆ ಎನ್ನುವುದನ್ನು ಇಲ್ಲಿ ವರ್ಣಿಸಿದೆ. ಅಲ್ಲದೆ ಕೃಷ್ಣನಲ್ಲಿ ಆಸಕ್ತರಾಗುವ ನಾಲ್ಕು ಬಗೆಯ ಭಾಗ್ಯಶಾಲಿಗಳನ್ನೂ, ಕೃಷ್ಣನಲ್ಲಿ ಯಾವಾಗಲೂ ಆಸಕ್ತಿಯನ್ನು ತಳೆಯದ ನಾಲ್ಕು ಬಗೆಯ ನಿರ್ಭಾಗ್ಯರನ್ನೂ ಈ ಅಧ್ಯಾಯದಲ್ಲಿ ವರ್ಣಿಸಿದೆ.
ಭಗವದ್ಗೀತೆಯ (Bhagavad Gita Updesh in Kannada) ಮೊದಲ ಆರು ಅಧ್ಯಾಯಗಳಲ್ಲಿ ಜೀವಿಯನ್ನು ಬೇರೆ ಬೇರೆ ಬಗೆಯ ಯೋಗಗಳಿಂದ ಆತ್ಮಸಾಕ್ಷಾತ್ಕಾರಕ್ಕೆ ಏರಬಲ್ಲ ಭೌತಿಕವಲ್ಲದ ಆತ್ಮವೆಂದು ವರ್ಣಿಸಿದೆ. ಮನಸ್ಸನ್ನು ಸ್ಥಿರವಾಗಿ ಕೃಷ್ಣನಲ್ಲಿ ನಿಲ್ಲಿಸುವುದು, ಎಂದರೆ ಕೃಷ್ಣಪ್ರಜ್ಞೆಯು ಎಲ್ಲ ಯೋಗದಲ್ಲಿ ಅತ್ಯುನ್ನತ ಸ್ವರೂಪದ್ದು ಎಂದು ಆರನೆಯ ಅಧ್ಯಾಯದ ಕೊನೆಯಲ್ಲಿ ಹೇಳಿದೆ. ಮನಸ್ಸನ್ನು ಕೃಷ್ಣನಲ್ಲಿ ಕೇಂದ್ರೀಕರಿಸಿದರೆ ಮನುಷ್ಯನು ಪರಮ ಸತ್ಯವನ್ನು ಅರಿತುಕೊಳ್ಳಬಲ್ಲ, ಇಲ್ಲವಾದರೆ ಅರಿತುಕೊಳ್ಳಲಾರ ಎಂದು ಹೇಳಿದೆ. ನಿರಾಕಾರ ಬ್ರಹ್ಮಜ್ಯೋತಿಯ ಅಥವಾ ಅಂತರ್ಯಾಮಿ ಪರಮಾತ್ಮನ ಸಾಕ್ಷಾತ್ಕಾರವು ಪರಮ ಸತ್ಯದ ಪರಿಪೂರ್ಣ ಅರಿವಲ್ಲ, ಅದು ಭಾಗಶಃವಾದದ್ದು.
ಸಂಪೂರ್ಣವಾದ ಮತ್ತು ವೈಜ್ಞಾನಿಕವಾದ ಜ್ಞಾನವೇ ಕೃಷ್ಣ. ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನಿಗೆ ಎಲ್ಲವೂ ತಂತಾನೇ ಪ್ರಕಟವಾಗುತ್ತದೆ. ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿ, ಯಾವ ಸಂಶಯವೂ ಇಲ್ಲದೆ ಕೃಷ್ಣನೇ ಅಂತಿಮ ಜ್ಞಾನ ಎಂದು ಮನುಷ್ಯನಿಗೆ ಗೊತ್ತಾಗುತ್ತದೆ. ಯೋಗದ ಬೇರೆ ಬೇರೆ ಬಗೆಗಳು ಕೃಷ್ಣಪ್ರಜ್ಞೆಯ ಮಾರ್ಗದಲ್ಲಿ ಮೆಟ್ಟುಗಲ್ಲುಗಳು ಮಾತ್ರ. ನೇರವಾಗಿ ಕೃಷ್ಣಪ್ರಜ್ಞೆಯಲ್ಲಿ ನಿರತನಾಗುವವನಿಗೆ ಬ್ರಹ್ಮಜ್ಯೋತಿಯ ಮತ್ತು ಪರಮಾತ್ಮನ ಸಂಪೂರ್ಣ ಅರಿವು ಪ್ರಯತ್ನವಿಲ್ಲದೆಯೇ ಆಗುತ್ತದೆ. ಕೃಷ್ಣಪ್ರಜ್ಞೆಯ ಯೋಗಾಭ್ಯಾಸದಿಂದ ಮನುಷ್ಯನು ಎಲ್ಲವನ್ನೂ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ಪರಮ ಸತ್ಯ, ಜೀವಿಗಳು, ಭೌತಿಕ ಪ್ರಕೃತಿ ಮತ್ತು ಸಾಧನ ಸಾಮಗ್ರಿಗಳೊಡನೆ ಅವುಗಳ ಅಭಿವ್ಯಕ್ತಿ ಎಲ್ಲವನ್ನೂ ತಿಳಿದುಕೊಳ್ಳಬಹುದು.
ಆದ್ದರಿಂದ ಆರನೆಯ ಅಧ್ಯಾಯದ ಕಡೆಯ ಶ್ಲೋಕದಲ್ಲಿ ನಿರ್ದೇಶಿಸಿದಂತೆ ಯೋಗಾಭ್ಯಾಸವನ್ನು ಪ್ರಾರಂಭಿಸಬೇಕು. ಒಂಬತ್ತು ಬೇರೆ ಬೇರೆ ರೂಪಗಳ ನಿಗದಿತ ಭಕ್ತಿಸೇವೆಯಿಂದ ಪರಮ ಪ್ರಭುವಾದ ಕೃಷ್ಣನಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದು ಸಾಧ್ಯವಾಗುತ್ತದೆ. ಈ ಒಂಬತ್ತು ರೂಪಗಳಲ್ಲಿ ಮೊದಲನೆಯದು ಮತ್ತು ಅತ್ಯಂತ ಮುಖ್ಯವಾದದ್ದು ಶ್ರವಣಮ್. ಆದುದರಿಂದ ಭಗವಂತನು ಅರ್ಜನನಿಗೆ, ತಚ್ಛೃಣು ಎಂದರೆ, ನನ್ನಿಂದ ಕೇಳು ಎಂದು ಹೇಳುತ್ತಾನೆ. ಕೃಷ್ಣನಿಗಿಂತ ಶ್ರೇಷ್ಠನಾದ ಅಧಿಕಾರಿಯಿಲ್ಲ. ಆದುದರಿಂದ ಅವನಿಂದ ಕೇಳಿದವನು ಪರಿಪೂರ್ಣ ಕೃಷ್ಣಪ್ರಜ್ಞೆಯ ಮನುಷ್ಯನಾಗಲು ಅತ್ಯುತ್ತಮ ಅವಕಾಶವನ್ನು ಪಡೆಯುತ್ತಾನೆ. ಆದುದರಿಂದ ನೇರವಾಗಿ ಕೃಷ್ಣನಿಂದ ಅಥವಾ ಒಬ್ಬ ಪರಿಶುದ್ಧ ಕೃಷ್ಣಭಕ್ತನಿಂದ ತಿಳಿಯಬೇಕು. ಬರಿಯ ಪಾಂಡಿತ್ಯಪೂರ್ಣ ಶಿಕ್ಷಣಹೊಂದಿದ್ದು ಅಹಂಕಾರದಿಂದ ಬೀಗುವ, ಭಕ್ತನಲ್ಲದವನಿಂದ ಕಲಿಯಬಾರದು.
ಶ್ರೀಮದ್ಭಾಗವತದಲ್ಲಿ ದೇವೋತ್ತಮ ಪರಮ ಪುರುಷನೂ ಪರಮ ಸತ್ಯವೂ ಆದ ಶ್ರೀಕೃಷ್ಣನನ್ನು ಅರ್ಥಮಾಡಿಕೊಳ್ಳುವ ವಿಧಾನವನ್ನು ಪ್ರಥಮ ಸ್ಕಂಧದ ಎರಡನೆಯ ಅಧ್ಯಾಯದಲ್ಲಿ ಹೀಗೆ ವರ್ಣಿಸಿದೆ -
ಶೃಣ್ವತಾಂ ಸ್ವಕಥಾಃ ಕೃಷ್ಣಃ ಪುಣ್ಯ ಶ್ರವಣಕೀರ್ತನಃ |
ಹೃದ್ಯನ್ತಃಸ್ಥೋ ಹ್ಯಭದ್ರಾಣಿ ವಿಧುನೋತಿ ಸುಹೃತ್ ಸತಾಮ್ ||
ನಷ್ಟಪ್ರಾಯೇಷ್ಟಭದ್ರೇಷು ನಿತ್ಯಂ ಭಾಗವತಸೇವಯಾ |
ಭಗವತ್ಯುತ್ತಮಶ್ಲೋಕೇ ಭಕ್ತಿರ್ಭವತಿ ನೈಷ್ಠಿಕೀ ||
ತದಾ ರಜಸ್ತಮೋಭಾವಾಃ ಕಾಮಲೋಭಾದಯಶ್ಚ ಯೇ |
ಚೇತ ಏತೈರ್ ಅನಾವಿದ್ಧಂ ಸ್ಥಿತಂ ಸತ್ವೇ ಪ್ರಸೀದತಿ ||
ಏವಂ ಪ್ರಸನ್ನಮನಸೋ ಭಗವದ್ಭಕ್ತಿಯೋಗತಃ |
ಭಗವತ್ತತ್ತ್ವವಿಜ್ಞಾನಂ ಮುಕ್ತಸನ್ಗಸ್ಯ ಜಾಯತೇ ||
ಭಿದ್ಯತೇ ಹೃದಯಗ್ರಂಥಿಃ ಛಿದ್ಯನ್ತೇ ಸರ್ವಸಂಶಯಾಃ |
ಕ್ಷೀಯನ್ತೇ ಚಾಸ್ಯ ಕರ್ಮಾಣಿ ದೃಷ್ಟ ಏವಾತ್ಮನೀಶ್ವರೇ ||
ಕೃಷ್ಣನ ವಿಷಯವನ್ನು ವೇದ ಸಾಹಿತ್ಯದಿಂದ ಕೇಳುವುದು ಅಥವಾ ಭಗವದ್ಗೀತೆಯ ಮೂಲಕ ನೇರವಾಗಿ ಅವನಿಂದಲೇ ಕೇಳುವುದೇ ಪುಣ್ಯಕಾರ್ಯ. ತನ್ನ ವಿಷಯ ಕೇಲುವವನಿಗೆ ಎಲ್ಲರ ಹೃದಯಗಳಲ್ಲಿ ನೆಲೆಸಿರುವ ಶ್ರೀಕೃಷ್ಣನು ಪರಮ ಹಿತೈಷಿಯಾದ ಸ್ನೇಹಿತನಾಗಿ ನಡೆದುಕೊಳ್ಳುತ್ತಾನೆ. ಸದಾ ಕೃಷ್ಣನ ವಿಷಯ ಕೇಳುವುದರಲ್ಲಿ ನಿರತನಾದ ಭಕ್ತನನ್ನು ಪರಿಶುದ್ಧಗೊಳಿಸುತ್ತಾನೆ. ಈ ರೀತಿಯಲ್ಲಿ ಭಕ್ತನು ತನ್ನಲ್ಲಿ ಸುಪ್ತವಾಗಿರುವ ದಿವ್ಯಜ್ಞಾನವನ್ನು ಸಹಜ ರೀತಿಯಲ್ಲಿ ಬೆಳೆಸಿಕೊಳ್ಳುತ್ತಾನೆ. ಭಾಗವತದಿಂದಲೂ ಭಕ್ತರಿಂದಲೂ ಕೃಷ್ಣನ ವಿಷಯ ಇನ್ನಷ್ಟು ಕೇಳಿದಂತೆ ವ್ಯಕ್ತಿಯು ಭಗವಂತನ ಭಕ್ತಿಸೇವೆಯಲ್ಲಿಯೇ ನಿಶ್ಚಲಯವಾಗಿ ಉಳಿಯುತ್ತಾನೆ.
ಭಕ್ತಿಸೇವೆಯನ್ನು ಬೆಳೆಸಿಕೊಂಡಾಗ ಮನುಷ್ಯನು ರಜೋಗುಣ ಮತ್ತು ತಮೋಗುಣಗಳಿಂದ ಬಿಡುಗಡೆಹೊಂದುತ್ತಾನೆ. ಹೀಗೆ ಐಹಿಕ ಕಾಮ ಮತ್ತು ಲೋಭಗಳು ಕ್ಷಯಿಸುತ್ತವೆ. ಈ ಮಾಲಿನ್ಯಗಳು ತೊಡೆದುಹೋದಾಗ ಸಾಧಕನು ಪರಿಶುದ್ಧ ಸತ್ವಸ್ಥಿತಿಯಲ್ಲಿ ಸ್ಥಿರನಾಗುತ್ತಾನೆ, ಭಕ್ತಿಸೇವೆಯಿಂದ ಚುರುಕಾಗುತ್ತಾನೆ ಮತ್ತು ಭಗವಂತನ ವಿಜ್ಞಾನವನ್ನು ಪರಿಪೂರ್ಣವಾಗಿ ತಿಳಿದುಕೊಳ್ಳುತ್ತಾನೆ. ಹೀಗೆ ಭಕ್ತಿಯೋಗವು ಭೌತಿಕ ವ್ಯಾಮೋಹದ ಗಂಟನ್ನು ಕತ್ತರಿಸಿಹಾಕುತ್ತದೆ ಮತ್ತು ಮನುಷ್ಯನು ಕೂಡಲೇ ಅಸಂಶಯಂ ಸಮಗ್ರಮ್ ಸ್ಥಿತಿಗೆ ಅಥವಾ ಪರಮ ಸತ್ಯನಾದ ದೇವೋತ್ತಮ ಪುರುಷನನ್ನು ಅರ್ಥಮಾಡಿಕೊಳ್ಳುವ ಸ್ಥಿತಿಗೆ ಬರುವುದು ಸಾಧ್ಯವಾಗುತ್ತದೆ (ಭಾಗವತ 1.2.17-21). ಆದುದರಿಂದ ಕೃಷ್ಣನಿಂದ ಅಥವಾ ಕೃಷ್ಣಪ್ರಜ್ಞೆಯಲ್ಲಿರುವ ಅವನ ಭಕ್ತರಿಂದ ಶ್ರವಣ ಮಾಡುವುದೇ ಕೃಷ್ಣವಿಜ್ಞಾನವನ್ನು ಅರ್ಥಮಾಡಿಕೊಳ್ಳುವ ಸರಿಯಾದ ದಾರಿ.
(This copy first appeared in Hindustan Times Kannada website. To read more like this please logon to kannada.hindustantimes.com )