Bhagavad Gita: ಭಗವಂತನ ವಿಷಯವನ್ನು ತಿಳಿದಷ್ಟೂ ಮನುಷ್ಯ ಜ್ಞಾನವನ್ನು ಪಡೆಯುತ್ತಾನೆ; ಗೀತೆಯ ಸಾರಾಂಶ ಹೀಗಿದೆ
Apr 16, 2024 11:35 PM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಭಗವಂತನ ವಿಷಯವನ್ನು ತಿಳಿದಷ್ಟೂ ಮನುಷ್ಯ ಜ್ಞಾನವನ್ನು ಪಡೆಯುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9 ನೇ ಅಧ್ಯಾಯ ರಹಸ್ಯತಮ ಜ್ಞಾನದ ಶ್ಲೋಕ 1 ರಲ್ಲಿ ತಿಳಿಯಿರಿ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 1
ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ|
ಜ್ಞಾನಂ ವಿಜ್ಞಾನಸಹಿತಂ ಯಜ್ಞ್‌ಜ್ಞಾತ್ವಾ ಮೋಕ್ಷ್ಯಸೇಶುಭಾತ್||1||
ಅನುವಾದ: ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು- ಪ್ರಿಯ ಅರ್ಜುನನೆ, ನಿನಗೆ ನನ್ನ ವಿಷಯದಲ್ಲಿ ಎಂದೂ ಅಸೂಯೆ ಇಲ್ಲವಾದುದರಿಂದ ನಿನಗೆ ಈ ಗುಹ್ಯತಮ ಜ್ಞಾನವನ್ನೂ ಸಾಕ್ಷಾತ್ಕಾರವನ್ನೂ ತಿಳಿಸಿಕೊಡುತ್ತೇನೆ. ಇದನ್ನು ತಿಳಿದು ನೀನು ಐಹಿಕ ಬದುಕಿನ ಸಂಕಟಗಳಿಂದ ಪಾರಾಗುತ್ತೀಯೆ.
ತಾಜಾ ಫೋಟೊಗಳು
ಭಾವಾರ್ಥ: ಭಕ್ತನು ಪರಮ ಪ್ರಭುವಿನ ವಿಷಯನ್ನು ಕೇಳಿದಷ್ಟೂ ಜ್ಞಾನವನ್ನು ಪಡೆಯುತ್ತಾನೆ. ಶ್ರೀಮದ್ಭಾಗವತವು ಈ ಶ್ರವಣಪ್ರಕ್ರಿಯೆಯನ್ನು ಸಲಹೆ ಮಾಡುತ್ತದೆ - ದೇವೋತ್ತಮ ಪರಮ ಪುರುಷನ ಸಂದೇಶಗಳಲ್ಲಿ ಶಕ್ತಿಗಳು ತುಂಬಿರುತ್ತವೆ. ದೇವೋತ್ತಮ ಪರಮ ಪುರುಷನನ್ನು ಕುರಿತ ವಿಷಯಗಳನ್ನು ಭಕ್ತರು ತಮ್ಮತಮ್ಮಲ್ಲಿ ಚರ್ಚೆ ಮಾಡಿಕೊಂಡರೆ ಈ ಶಕ್ತಿಗಳನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ಊಹಾತ್ಮಕ ಚಿಂತನೆಯಲ್ಲಿ ತೊಡಗುವವರ ಅಥವಾ ಪ್ರೌಢ ವಿದ್ವಾಂಸರ ಸಹವಾಸದಿಂದ ಇದನ್ನು ಸಾಧಿಸುವುದು ಸಾಧ್ಯವಿಲ್ಲ. ಏಕೆಂದರೆ ಇದು ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನ.
ಭಕ್ತರು ಪರಮ ಪ್ರಭುವಿನ ಸೇವೆಯಲ್ಲಿ ಸದಾ ನಿರತರಾಗಿರುತ್ತಾರೆ. ಕೃಷ್ಣಪ್ರಜ್ಞೆಯಲ್ಲಿ ತೊಡಗಿರುವ ಯಾವುದೇ ಒಬ್ಬ ಜೀವಿಯ ಮನೋಧರ್ಮವನ್ನೂ, ಶ್ರದ್ಧೆಯನ್ನೂ ಪ್ರಭುವು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಭಕ್ತರ ಸಹವಾಸದಲ್ಲಿ ಕೃಷ್ಣವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಆತನಿಗೆ ಬುದ್ಧಿಶಕ್ತಿಯನ್ನು ಕೊಡುತ್ತಾನೆ. ಕೃಷ್ಣನನ್ನು ಕುರಿತ ಚರ್ಚೆಯು ಬಹು ಶಕ್ತಿಯುತವಾದದ್ದು. ಒಬ್ಬ ಭಾಗ್ಯಶಾಲಿಗೆ ಇಂತಹ ಸಹವಾಸವು ದೊರೆತು ಆತನು ಈ ಜ್ಞಾನವನ್ನು ಅರಗಿಸಿಕೊಳ್ಳಲು ಪ್ರಯತ್ನಿಸಿದರೆ ನಿಶ್ಚಯವಾಗಿಯೂ ಆತನು ಅಧ್ಯಾತ್ಮಿಕ ಸಾಕ್ಷಾತ್ಕಾರದತ್ತ ಮುನ್ನಡೆಯುತ್ತಾನೆ. ತನ್ನ ಭಕ್ತಿಸೇವೆಯಲ್ಲಿ ಅರ್ಜುನನು ಇನ್ನೂ ಎತ್ತರ ಎತ್ತರವಾಗಿ ಏರುವಂತೆ ಪ್ರೋತ್ಸಾಹಿಸಲು ಕೃಷ್ಣನು ಈ ಒಂಬತ್ತನೆಯ ಅಧ್ಯಾಯದಲ್ಲಿ ಈವರೆಗೆ ತಿಳಿಸಿಕೊಟ್ಟ ವಿಷಯಗಳಿಗಿಂತ ಹೆಚ್ಚು ಗೋಪ್ಯವಾದ ವಿಷಯಗಳನ್ನು ವರ್ಣಿಸುತ್ತಾನೆ.
ಭಗವದ್ಗೀತೆಯ ಮೊದಲನೆಯ ಅಧ್ಯಾಯವೇ ಗ್ರಂಥದ ಉಳಿದ ಭಾಗಕ್ಕೆ ಒಂದು ಪ್ರವೇಶ. ಎರಡನೆಯ ಮತ್ತು ಮೂರನೆಯ ಅಧ್ಯಾಯಗಳಲ್ಲಿ ಅಧ್ಯಾತ್ಮಿಕ ಜ್ಞಾನವನ್ನು ರಹಸ್ಯ ಎಂದು ವರ್ಣಿಸಲಾಗಿದೆ. ಏಳನೆಯ ಮತ್ತು ಎಂಟನೆಯ ಅಧ್ಯಾಯಗಳಲ್ಲಿ ಚರ್ಚಿಸಿರುವ ವಿಷಯಗಳು ವಿಶೇಷವಾಗಿ ಭಕ್ತಿಸೇವೆಗೆ ಸಂಬಂಧಿಸಿದವು. ಅವು ಕೃಷ್ಣಪ್ರಜ್ಞೆಯಲ್ಲಿ ಜ್ಞಾನೋದಯವನ್ನು ತರುವುದರಿಂದ ಅದನ್ನು ಇನ್ನೂ ರಹಸ್ಯ ಎಂದು ಕರೆಯಲಾಗಿದೆ. ಆದರೆ ಒಂಬತ್ತನೆಯ ಅಧ್ಯಾಯದಲ್ಲಿ ವರ್ಣಿಸಿರುವ ವಿಷಯಗಳು ಮಿಶ್ರವಿಲ್ಲದ ಪರಿಶುದ್ಧ ಭಕ್ತಿಗೆ ಸಂಬಂಧಿಸಿದವು. ಆದುದರಿಂದ ಇದನ್ನು ಗುಹ್ಯತಮ ಎಂದು ಕರೆದಿದೆ.
ಶ್ರೀಕೃಷ್ಣನಲ್ಲಿ ಇರುವ ಮನುಷ್ಯನಿಗೆ ಯಾವುದೇ ನೋವಿರುವುದಿಲ್ಲ
ಕೃಷ್ಣನು ಗುಹ್ಯತಮ ಜ್ಞಾನದಲ್ಲಿ ನೆಲೆಸಿದವನು. ಸಹಜವಾಗಿ ಆಧ್ಯಾತ್ಮಿಕ ಸ್ಥಿತಿಯಲ್ಲಿರುವವನು. ಆದುದರಿಂದ ಐಹಿಕ ಜಗತ್ತಿನಲ್ಲಿ ಇದ್ದರೂ ಆತನಿಗೆ ಯಾವುದೇ ಐಹಿಕ ನೋವುಗಳಿಲ್ಲ. ಭಕ್ತಿರಸಾಮೃತಸಿಂಧುವಿನಲ್ಲಿ, ಪರಮ ಪ್ರಭುವಿಗೆ ಪ್ರೇಮಪೂರ್ವಕ ಸೇವೆಯನ್ನು ಸಲ್ಲಿಸಲು ಬಯಸುವವನು ಐಹಿಕ ಬದುಕಿನಲ್ಲಿ ಬದ್ಧಸ್ಥಿತಿಯಲ್ಲಿ ಇದ್ದರೂ ಆತನನ್ನು ಮುಕ್ತನೆಂದೇ ಪರಿಗಣಿಸಬೇಕೆಂದು ಹೇಳಿದೆ. ಹೀಗೆಯೇ ಈ ರೀತಿಯಲ್ಲಿ ಕಾರ್ಯನಿರತನಾಗಿರುವವನ್ನೂ ಮುಕ್ತನೆಂದೇ ಪರಿಗಣಿಸಬೇಕು ಎನ್ನುವುದು ಭಗವದ್ಗೀತೆಯ ಹತ್ತೆಯ ಅಧ್ಯಾಯದಲ್ಲಿ ನೋಡುತ್ತೇವೆ.
ಮೊದಲನೆಯ ಈ ಶ್ಲೋಕಕ್ಕೆ ನಿರ್ದಿಷ್ಟ ಮಹತ್ವವುಂಟು. ಇದಂ ಜ್ಞಾನಮ್ (ಈ ಜ್ಞಾನವು) ಎನ್ನುವ ಪದಗಳು ಪರಿಶುದ್ಧ ಭಕ್ತಿಸೇವೆಯನ್ನು ಸೂಚಿಸುತ್ತವೆ. ಇದರಲ್ಲಿ ಶ್ರವಣ, ಕೀರ್ತನ, ಸ್ಮರಣ, ಸೇವೆ, ಪೂಜೆ, ವಿಧೇಯತೆ, ಸ್ನೇಹವನ್ನು ಪಾಲಿಸಿಕೊಂಡು ಬರುವುದು ಮತ್ತು ಸರ್ವಸಮರ್ಪಣ - ಈ ಒಂಬತ್ತು ಚಟುವಟಿಕೆಗಳು ಸೇರಿವೆ. ಭಕ್ತಿಸೇವೆಯ ಈ ಒಂಬತ್ತು ಅಂಶಗಳನ್ನು ಅನುಷ್ಠಾನ ಮಾಡಿದವನು ಅಧ್ಯಾತ್ಮಿಕ ಪ್ರಜ್ಞೆಗೆ, ಕೃಷ್ಣಪ್ರಜ್ಞೆಗೆ ಏರಿಸಲ್ಪಡುತ್ತಾನೆ.
ಮನುಷ್ಯನ ಹೃದಯವು ಹೀಗೆ ಐಹಿಕ ಕಶ್ಮಲದ ಸೋಂಕನ್ನು ಕಳೆದುಕೊಂಡ ಮೇಲೆ ಆತನಿಗೆ ಕೃಷ್ಣವಿಜ್ಞಾನವು ಅರ್ಥವಾಗುತ್ತದೆ. ಜೀವಿಯು ತಾನು ಜಡವಸ್ತುವಲ್ಲ ಎಂದು ಅರ್ಥಮಾಡಿಕೊಂಡ ಮಾತ್ರಕ್ಕೆ ಸಾಲದು. ಇದು ಅಧ್ಯಾತ್ಮಿಕ ಸಾಕ್ಷಾತ್ಕಾರದ ಪ್ರಾರಂಭವಿರಬಹುದು. ಆದರೆ ದೇಹದ ಚಟುವಟಿಕೆಗಳಿಗೂ, ತಾನು ದೇಹವಲ್ಲ ಎಂದು ಅರಿತವನ ಅಧ್ಯಾತ್ಮಿಕ ಚಟುವಟಿಕೆಗಳಿಗೂ ವ್ಯತ್ಯಾಸವನ್ನು ಗುರುತಿಸಬೇಕು.
ಏಳನೆಯ ಅಧ್ಯಾಯದಲ್ಲಿ ನಾವು ಆಗಲೇ ದೇವೋತ್ತಮ ಪುರುಷನ ಐಶ್ವರ್ಯ ಶಕ್ತಿ, ಅವನ ವಿವಿಧ ಶಕ್ತಿಗಳು, ಕೆಳಮಟ್ಟದ ಮತ್ತು ಉತ್ತಮ ಪ್ರಕೃತಿಗಳು, ಹಾಗೂ ಎಲ್ಲ ಐಹಿಕ ಅಭಿವ್ಯಕ್ತಿಯನ್ನು ಚರ್ಚಿಸಿದ್ದೇವೆ. ಒಂಬತ್ತನೆಯ ಅಧ್ಯಾಯದಲ್ಲಿ ಭಗವಂತನ ವೈಭವಗಳನ್ನು ಚಿತ್ರಿಸಿದೆ. ಈ ಶ್ಲೋಕದಲ್ಲಿ ಅನಸೂಯವೇ ಎನ್ನುವ ಸಂಸ್ಕೃತ ಪದವೂ ಅರ್ಥವತ್ತಾದದ್ದು. ಸಾಮಾನ್ಯವಾಗಿ ವ್ಯಾಖ್ಯಾನಕಾರರು, ಅವರು ಉತ್ತಮ ವಿದ್ವಾಂಸರಾಗಿದ್ದರೂ, ದೇವೋತ್ತಮ ಪರಮ ಪುರುಷನ ವಿಷಯದಲ್ಲಿ ಅಸೂಯೆ ಪಡುತ್ತಾರೆ.
ಅತ್ಯಂತ ಪ್ರಗಲ್ಭ ಪಂಡಿತರೂ ಭಗವದ್ಗೀತೆಯನ್ನು ಕುರಿತು ಬಹು ತಪ್ಪುತಪ್ಪಾಗಿ ಬರೆಯುತ್ತಾರೆ. ಅವರಿಗೆ ಕೃಷ್ಣನ ವಿಷಯದಲ್ಲಿ ಅಸೂಯೆ ಇರುವುದರಿಂದ ಅವರ ವ್ಯಾಖ್ಯಾನಗಳೆಲ್ಲ ನಿಷ್ಪ್ರಯೋಜಕವಾಗುತ್ತವೆ. ಪ್ರಭುವಿನ ಪ್ರಾಮಾಣಿಕ ಭಕ್ತರ ವ್ಯಾಖ್ಯಾನಗಳು ನೆಚ್ಚಲು ಅರ್ಹವಾದವು. ಅಸೂಯಾಪರನಾದವನು ಭಗವದ್ಗೀತೆಯನ್ನು ವಿವರಿಸಲಾರ. ಕೃಷ್ಣನ ಬಗ್ಗೆ ಪರಿಪೂರ್ಣಜ್ಞಾನವನ್ನು ನೀಡಲಾರ. ಕೃಷ್ಣನನ್ನು ಅರಿಯದೆಯೇ ಅವನ ಗುಣವನ್ನು ಟೀಕಿಸುವವನು ಶುದ್ಧ ಮೂರ್ಖ. ಆದುದರಿಂದ ಇಂತಹ ವ್ಯಾಖ್ಯಾನಗಳನ್ನು ದೂರ ಇಡಬೇಕು. ಕೃಷ್ಣನು ದೇವೋತ್ತಮ ಪರಮ ಪುರುಷ, ಪರಿಶುದ್ಧ ದಿವ್ಯ ಪುರುಷ ಎಂದು ಅರ್ಥಮಾಡಿಕೊಂಡವನಿಗೆ ಈ ಅಧ್ಯಾಯಗಳಿಂದ ಬಹು ಪ್ರಯೋಜನ ಉಂಟು.