Bhagavad Gita: ಭಗವಂತನ ಮಹಿಮೆಗೆ ಮಿತಿಯಿಲ್ಲ, ಅಸಂಖ್ಯಾತ ಬಾಹುಗಳಿವೆ; ಗೀತೆಯ ಸಾರಾಂಶ ಹೀಗಿದೆ
Jun 26, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಭಗವಂತನ ಮಹಿಮೆಗೆ ಮಿತಿಯಿಲ್ಲ, ಅಸಂಖ್ಯಾತ ಬಾಹುಗಳಿವೆ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 16 ರಿಂದ 19ರ ವರೆಗಿನ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 16
ಅನೇಕಬಾಹೂದರವಕ್ತ್ರನೇತ್ರಂ
ಪಶ್ಯಾಮಿ ತ್ವಾಂ ಸರ್ವತೋನನನ್ತರೂಪಮ್ |
ನಾಂತಂ ನ ಮಧ್ಯಂ ನ ಪುನಸ್ತವಾದಿಮ್
ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ ||16||
ಅನುವಾದ: ವಿಶ್ವೇಶ್ವರನೆ, ವಿಶ್ವರೂಪನೆ, ನಿನ್ನ ದೇಹದಲ್ಲಿ ನಾನು ಎಲ್ಲೆಲ್ಲೂ ಅಮಿತವಾಗಿ ವಿಸ್ತಾರಗೊಂಡ ಅನೇಕಾನೇಕ ತೋಳುಗಳನ್ನೂ, ಉದರಗಳನ್ನೂ, ಬಾಯಿಗಳನ್ನೂ ಮತ್ತು ಕಣ್ಣುಗಳನ್ನೂ ಕಾಣುತ್ತಿದ್ದೇನೆ. ನಿನ್ನಲ್ಲಿ ಆದಿಯನ್ನಾಗಲಿ, ಮಧ್ಯವನ್ನಾಗಲಿ ಮತ್ತು ಅಂತ್ಯವನ್ನಾಗಲಿ ಕಾಣಲಾರೆನು.
ತಾಜಾ ಫೋಟೊಗಳು
ಭಾವಾರ್ಥ: ಕೃಷ್ಣನು ದೇವೋತ್ತಮ ಪರಮ ಪುರುಷ ಮತ್ತು ಅಮಿತನಾದವನು. ಆದುದರಿಂದ ಅವನ ಮೂಲಕ ಎಲ್ಲವನ್ನೂ ಕಾಣಲು ಸಾಧ್ಯವಾಯಿತು (Bhagavad Gita Updesh in Kannada).
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 17
ಕಿರೀಟಿನಂ ಗದಿನಂ ಚಕ್ರಿಣಂ ಚ
ತೇಜೋರಾಶಿಂ ಸರ್ವತೋ ದೀಪ್ತಿಮನ್ತಮ್|
ಪಶ್ಯಾಮಿ ತ್ವಾಂ ದುರ್ನಿರೀಕ್ಷ್ಯಂ ಸಮನ್ತಾದ್
ದೀಪ್ತಾನಲಾರ್ಕದ್ಯುತಿಮಪ್ರಮೇಯಮ್ ||17||
ಅನುವಾದ: ನಿನ್ನ ರೂಪವನ್ನು ನೋಡುವುದು ಕಷ್ಟ. ಏಕೆಂದರೆ ನಿನ್ನ ರೂಪದ ಪ್ರಭೆಯು ಪ್ರಜ್ವಲಿಸುವ ಉರಿಯುವಂತೆ ಅಥವಾ ಅಳತೆಗೆ ಸಿಕ್ಕದ ಸೂರ್ಯಪ್ರಭೆಯಂತೆ ಸುತ್ತಲೂ ಹರಡಿದೆ. ಆದರೂ ನಾನು ಈ ಪ್ರಕಾಶಮಾನವಾದ ರೂಪವು ವಿವಿಧ ಕಿರೀಟಗಳಿಂದ, ಗದೆಗಳಿಂದ ಮತ್ತು ಚಕ್ರಗಳಿಂದ ಅಲಂಕೃತವಾಗಿರುವುದನ್ನು ಎಲ್ಲೆಲ್ಲೂ ಕಾಣುತ್ತಿದ್ದೇನೆ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 18
ತ್ವಮಕ್ಷರಂ ಪರಮಂ ವೇದಿತವ್ಯಂ
ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ |
ತ್ವಮವ್ಯಯಃ ಶಾಶ್ವಧರ್ಮಗೋಪ್ತಾ
ಸನಾತನಸ್ತ್ವಂ ಪುರುಷೋ ಮತೋ ಮೇ ||18||
ಅನುವಾದ: ನೀನು ಪರಮವಾದ ಆದಿಲಕ್ಷ್ಯವು. ನೀನು ಎಲ್ಲ ವಿಶ್ವದ ಕಟ್ಟಕಡೆಯ ವಿಶ್ರಾಂತಿ ತಾಣ. ನಿನಗೆ ಕ್ಷಯವೇ ಇಲ್ಲ ಮತ್ತು ನೀನು ಅತ್ಯಂತ ಪ್ರಾಚೀನನು. ನೀನು ಸನಾತನ ಧರ್ಮದ ಪಾಲಕನು. ದೇವೋತ್ತಮ ಪುರುಷನು. ಇದು ನನ್ನ ಅಭಿಪ್ರಾಯ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 19
ಅನಾದಿಮಧ್ಯಾಂತಮನನ್ತವೀರ್ಯಮ್
ಅನಂತಬಾಹುಂ ಶಶಿಸೂರ್ಯನೇತ್ರಮ್ |
ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಮ್
ಸ್ವತೇಜಸಾ ವಿಶ್ವಮಿದಂ ತಪನ್ತಮ್ ||19||
ಅನುವಾದ: ನಿನಗೆ ಆದಿ, ಮಧ್ಯ ಮತ್ತು ಅಂತ್ಯಗಳಿಲ್ಲ. ನಿನ್ನ ಮಹಿಮೆಗೆ ಮಿತಿಯಿಲ್ಲ. ನಿನಗೆ ಅಸಂಖ್ಯಾತ ಬಾಹುಗಳಿವೆ. ಸೂರ್ಯ ಚಂದ್ರರು ನಿನ್ನ ಕಣ್ಣುಗಳು. ಪ್ರಜ್ವಲಿಸುವ ಉರಿಯು ನನ್ನ ಬಾಯಿಯಿಂದ ಹೊರಬರುತ್ತಿರುವುದನ್ನೂ ನಿನ್ನ ಪ್ರಕಾಶವು ಇಡೀ ವಿಶ್ವವನ್ನು ಸುಡುತ್ತಿರುವುದನ್ನು ಕಾಣುತ್ತಿದ್ದೇನೆ.
ಭಾವಾರ್ಥ: ದೇವೋತ್ತಮ ಪರಮ ಪುರುಷನ ಆರು ಐಶ್ವರ್ಯಗಳಿಗೆ ಮಿತಿಯೇ ಇಲ್ಲ. ಇಲ್ಲಿ ಮತ್ತು ಹಲವು ಇತರ ಸ್ಥಳಗಳಲ್ಲಿ ಪುನರಾವೃತ್ತಿಯಿದೆ. ಆದರೆ ಧರ್ಮಗ್ರಂಥಗಳ ಪ್ರಕಾರ ಕೃಷ್ಣನ ಮಹಿಮೆಗಳ ಪುನರಾವೃತ್ತಿಯು ಸಾಹಿತ್ಯವಾಗಿ ದೌರ್ಬಲ್ಯವಲ್ಲ. ದಿಗ್ಭ್ರಮೆ ಅಥವಾ ಬೆರಗು ಅಥವಾ ಮಹತ್ತರವಾದ ಹರ್ಷೋನ್ಮಾದದ ಕಾಲದಲ್ಲಿ ಹೇಳಿಕೆಗಳು ಪುನರಾವೃತ್ತಿಯಾಗುತ್ತವೆ ಎಂದು ಹೇಳಲಾಗಿದೆ. ಇದು ದೋಷವಲ್ಲ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)