ಭಗವದ್ಗೀತೆ: ಆಧ್ಯಾತ್ಮಿಕ ಸಾಕ್ಷಾತ್ಕಾರದ ದಾರಿಯಲ್ಲಿ ಮುನ್ನಡೆಯುವ ವಿಧಾನ ಯಾವುದು? ಗೀತೆಯ ಅರ್ಥ ತಿಳಿಯಿರಿ
Dec 14, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಆಧ್ಯಾತ್ಮಿಕ ಸಾಕ್ಷಾತ್ಕಾರದ ದಾರಿಯಲ್ಲಿ ಮುನ್ನಡೆಯುವ ವಿಧಾನ ಯಾವುದೆಂಬುದನ್ನು ತಿಳಿಯಿರಿ.
ಯದ್ ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ |
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತನೇ ||21||
ಶ್ರೇಷ್ಠನಾದವನು ಹೇಗೆ ನಡೆದರೆ ಹಾಗೆ ಸಾಮಾನ್ಯ ಜನರು ಅನುಸರಿಸುತ್ತಾರೆ. ಮೇಲ್ಪಂಕ್ತಿಯಾದ ತನ್ನ ಕಾರ್ಯಗಳಿಂದ ಆತನು ಯಾವುದನ್ನು ಪ್ರಮಾಣವನ್ನಾಗಿ ಮಾಡುತ್ತಾನೋ ಅದನ್ನೇ ಲೋಕವು ಅನುಸರಿಸುತ್ತದೆ.
ತಾಜಾ ಫೋಟೊಗಳು
ಸ್ವಂತ ಆಚರಣೆಯಿಂದ ಜನರಿಗೆ ಶಿಕ್ಷಣ ಕೊಡುವ ನಾಯಕನು ಯಾವಾಗಲೂ ಜನರಿಗೆ ಬೇಕು. ತಾನೇ ಧೂಮಪಾನ ಮಾಡುವ ನಾಯಕನು ಜನರಿಗೆ ಧೂಮಪಾನವನ್ನು ಬಿಡುವುದನ್ನು ಕಲಿಸಲಾರ. ಚೈತನ್ಯ ಮಹಾಪ್ರಭುಗಳು ಹೇಳಿರುವಂತೆ, ಉಪಾಧ್ಯಾಯನು ಇತರರಿಗೆ ಹೇಳಿಕೊಡುವ ಮುನ್ನ ತಾನು ಯೋಗ್ಯ ರೀತಿಯಲ್ಲಿ ನಡೆದುಕೊಳ್ಳಬೇಕು. ಆ ರೀತಿಯಲ್ಲಿ ಬೋಧಿಸುವ ಉಪಾಧ್ಯಾಯನನ್ನು ಆಚಾರ್ಯ ಅಥವಾ ಆದರ್ಶ ಉಪಾಧ್ಯಾಯನೆಂದು ಕರೆಯಲಾಗುತ್ತದೆ. ಆದುದರಿಂದ, ಸಾಮಾನ್ಯ ಮನುಷ್ಯನಿಗೆ ಬುದ್ಧಿ ಹೇಳಿಕೊಡಲು ಗುರುವು ಶಾಸ್ತ್ರಗಳ ತತ್ವಗಳನ್ನು ಆಚರಿಸಬೇಕು.
ಅಪೌರುಷೇಯ ಶಾಸ್ತ್ರಗಳ ತತ್ವಗಳ ವಿರುದ್ಧ ಗುರುವು ನಿಮಯಗಳನ್ನು ಸೃಷ್ಟಿ ಮಾಡಲಾರ. ಮನುಸಂಹಿತೆಗಳಂತಹ ಅಪೌರುಷೇಯ ಗಿಶಾಸ್ತ್ರಗಳನ್ನು ಮಾನವಕುಲವು ಅನುಸರಿಸಬೇಕಾದ ಪ್ರಮಾಣಗ್ರಂಥಗಳೆಂದು ಪರಿಗಣಿಸಲಾಗಿದೆ. ಆದುದರಿಂದ ನಾಯಕನ ಬೋಧನೆಗಳಿಗೆ ಇಂತಹ ಪ್ರಮಾಣ ಶಾಸ್ತ್ರಗಳು ಆಧಾರವಾಗಬೇಕು. ತನ್ನನ್ನು ಉತ್ತಮಗೊಳಿಸಲು ಬಯಸುವವನು, ಶ್ರೇಷ್ಠ ಗುರುಗಳು ಅನುಷ್ಠಾನಕ್ಕೆ ತಂದಿರುವಂತೆ ಪ್ರಮಾಣ ನಿಯಮಗಳನ್ನು ಅನುಸರಿಸಬೇಕು. ಶ್ರೀಮದ್ಭಾಗವತವೂ ಸಹ ನಾವು ಶ್ರೇಷ್ಠಭಕ್ತರ ಹೆಜ್ಜೆಯಲ್ಲೇ ನಡೆಯಬೇಕು.
ಆಧ್ಯಾತ್ಮಿಕ ಸಾಕ್ಷಾತ್ಕಾರದ ದಾರಿಯಲ್ಲಿ ಮುನ್ನಡೆಯಲು ವಿಧಾನ ಅದೇ ಎಂದು ಹೇಳುತ್ತದೆ. ಅರಸ ಅಥವಾ ರಾಜ್ಯದ ಆಡಳಿತದ ಮುಖ್ಯಸ್ಥ, ತಂದೆ, ಶಾಲೆಯ ಉಪಾಧ್ಯಾಯ ಇವರೆಲ್ಲರನ್ನೂ ಮುಗ್ಧ ಜನಸಾಮಾನ್ಯರ ಸಹಜ ನಾಯಕರೆಂದು ಪರಿಗಣಿಸಲಾಗುತ್ತದೆ. ಇಂತಹ ಎಲ್ಲ ಸಹಜ ನಾಯಕರಿಗೂ ತಮ್ಮ ಆಶ್ರಿತರ ವಿಷಯದಲ್ಲಿ ದೊಡ್ಡ ಹೊಣೆಯಿರುತ್ತದೆ. ಆದುದರಿಂದ ಅವರಿಗೆ ನೈತಿಕ ಮತ್ತು ಆಧ್ಯಾತ್ಮಿಕ ಸಂಹಿತೆಗಳ ಪ್ರಮಾಣಗ್ರಂಥಗಳ ಪರಿಚಯವು ಚೆನ್ನಾಗಿರಬೇಕು.
ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಞ್ಚನ |
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ ||22||
ಪಾರ್ಥನೇ, ಮೂರು ಲೋಕಗಳಲ್ಲಿಯೂ ನನಗೆ ನಿಯತವಾದ ಯಾವುದೇ ಕಾರ್ವಿಲ್ಲ. ನಾನು ಬಯಸುವ ವಸ್ತು ಯಾವುದೂ ಇಲ್ಲ. ನಾನು ಪಡೆಯಬೇಕಾದದ್ದು ಏನೂ ಇಲ್ಲ. ಆದರೂ ನಾನು ನಿಯಮತಿ ಕರ್ತವ್ಯಗಳಲ್ಲಿ ನಿರತನಾಗಿದ್ದೇನೆ.
ವೈದಿಕ ಸಾಹಿತ್ಯದಲ್ಲಿ ದೇವೋತ್ತಮ ಪರಮ ಪುರುಷನನ್ನು ಹೀಗೆ ವರ್ಣಿಸಿದೆ.
ತಮೀಶ್ವರಾಣಾಂ ಪರಮಂ ಮಹೇಶ್ವರಂ
ತಂ ದೇವತಾನಾಂ ಪರಮಂ ಚ ದೈವತಮ್ |
ಪತಿಂ ಪತೀನಾಂ ಪರಮಂ ಪರಸ್ತಾದ್ ‘
ವಿದಾಮ ದೇವಂ ಭುವನೇಶಮ್ ಈಢ್ಯಮ್ ||
ನ ತಸ್ಯ ಕಾರ್ಯಂ ಕರಣಂ ಚ ವಿದ್ಯತೇ
ನ ತತ್ಸಮಶ್ಚಾಭ್ಯಧಿಕಶ್ಚ ದೃಶ್ಯತೇ |
ಪರಾಸ್ಯ ಶಕ್ತಿರ್ವಿವಿಧೈವ ಶ್ರೂಯತೇ
ಸ್ವಾಭಾವಿಕೀ ಜ್ಞಾನ ಬಲಕ್ರಿಯಾ ಚ ||
"ಪರಮ ಪ್ರಭುವು ಎಲ್ಲ ನಿಯಂತ್ರಕನು. ನಾನಾ ಗ್ರಹಾಧಿಪತಿಗಳಲ್ಲಿ ಗರಿಷ್ಠನು. ಎಲ್ಲರೂ ಅವನಿಗೆ ವಿಧೇಯರು. ಎಲ್ಲ ಜೀವಿಗಳಿಗೂ ವಿಶಿಷ್ಟ ಶಕ್ತಿಯನ್ನು ವಿಹಸುವವನು ಪರಮೇಶ್ವರನೇ. ಅವರು ಸ್ವತಃ ಪರಾತ್ಪರರಲ್ಲ. ಅವನು ಎಲ್ಲ ದೇವತೆಗಳಿಗೂ ಪೂಜಾರ್ಹನು ಮತ್ತು ಎಲ್ಲ ನಿರ್ದೇಶಕರ ಪರಮ ನಿರ್ದೇಶಕನು. ಆದುದರಿಂದ ಅವನು ಎಲ್ಲ ಬಗೆಯ ಲೌಕಿಕ ನಾಯಕರನ್ನು ಮೀರಿದವನು. ಎಲ್ಲರಿಗೂ ಪೂಜಾರ್ಹನು. ಅವನಿಗಿಂತ ಶ್ರೇಷ್ಠರಿಲ್ಲ. ಅವನೇ ಎಲ್ಲ ಕಾರಣಗಳ ಪರಮಕಾರಣನು."
"ಅವನಿಗೆ ಸಾಮಾನ್ಯ ಜೀವಿಯಂತೆ ಶರೀರವಿಲ್ಲ. ಅವನ ಶರೀರಕ್ಕೂ ಆತ್ಮಕ್ಕೂ ವ್ಯತ್ಯಾಸವಿಲ್ಲ. ಅವನು ಪರಮೋನ್ನತನು. ಅವನ ಎಲ್ಲ ಇಂದ್ರಿಯಗಳೂ ದಿವ್ಯವಾದವು. ಅವನ ಯಾವುದೇ ಇಂದ್ರಿಯವು ಬೇರಾವುದೇ ಇಂದ್ರಿಯದ ಕೆಲಸ ಮಾಡಬಲ್ಲದು. ಆದುದರಿಂದ ಅವನಿಗಿಂತ ಶ್ರೇಷ್ಠರಿಲ್ಲ. ಅವನ ಸಮಾನರಿಲ್ಲ. ಅವನ ಶಕ್ತಿಗಳು ವಿಧವಿಧವಾದವು. ಆದುದರಿಂದ ಅವನ ಕ್ರಿಯೆಗಳು ತಂತಾನೇ ಸಹಜವಾದ ಕ್ರಮದಲ್ಲಿ ನಡೆಯುತ್ತವೆ". (ಶ್ವೇತಾಶ್ವತರ ಉಪನಿಷತ್ತು 6.7-8).
ದೇವೋತ್ತಮ ಪರಮ ಪುರುಷನಲ್ಲಿ ಪ್ರತಿಯೊಂದೂ ಪೂರ್ಣ ಸಮೃದ್ಧಿಯಲ್ಲಿದ್ದು ಪೂರ್ಣಸತ್ಯದಲ್ಲಿ ಇರುವುದರಿಂದ ದೇವೋತ್ತಮ ಪರಮ ಪರುಷನು ಮಾಡಬೇಕಾದ ಕರ್ತವ್ಯ ಯಾವುದೂ ಇಲ್ಲ. ಕರ್ಮಫಲಗಳನ್ನು ಸ್ವೀಕರಿಸಬೇಕಾದವನಿಗೆ ಯಾವುದಾದರೂ ನಿಯತ ಕರ್ತವ್ಯವಿರುತ್ತದೆ. ಆದರೆ ಮೂರು ಲೋಕಗಳಲ್ಲಿಯೂ ಸಾಧಿಸಬೇಕಾದದ್ದು ಏನೂ ಇಲ್ಲದಿರುವವನಿಗೆ ಕರ್ತವ್ಯವಿಲ್ಲ. ಆದರೂ ಶ್ರೀಕೃಷ್ಣನು ಕ್ಷತ್ರಿಯರ ನಾಯಕನಾಗಿ ಕುರುಕ್ಷೇತ್ರದಲ್ಲಿ ಕ್ರಿಯೆಯಲ್ಲಿ ನಿರತನಾಗಿದ್ದಾನೆ. ಏಕೆಂದರೆ ಸಂಕಟದಲ್ಲಿರುವವರಿಗೆ ರಕ್ಷಣೆಯನ್ನು ಕೊಡುವುದು ಕ್ಷತ್ರಿಯರ ಕರ್ತವ್ಯ. ಅಪೌರುಷೇಯ ಶಾಸ್ತ್ರಗಳ ಎಲ್ಲ ನಿಯಮಗಳನ್ನು ಮೀರಿದವನಾದರೂ ಅಪೌರುಷೇಯ ಶಾಸ್ತ್ರಗಳನ್ನು ಉಲ್ಲಂಘಿಸುವಂತಹ ಯಾವ ಕಾರ್ಯವನ್ನೂ ಕೃಷ್ಣನು ಮಾಡುವುದಿಲ್ಲ.