Bhagavad Gita: ಪರಿಪೂರ್ಣ ಸತ್ಯದ ಸಾಕ್ಷಾತ್ಕಾರಕ್ಕೆ ಬೇರೆ ಬೇರೆ ಮಾರ್ಗಗಳಿವೆ; ಗೀತೆಯ ಅರ್ಥ ತಿಳಿಯಿರಿ
Jul 25, 2024 03:50 PM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಪರಿಪೂರ್ಣ ಸತ್ಯದ ಸಾಕ್ಷಾತ್ಕಾರಕ್ಕೆ ಬೇರೆ ಬೇರೆ ಮಾರ್ಗಗಳಿವೆ ಎಂಬುರ ಅರ್ಥವನ್ನು ಭಗವದ್ಗೀತೆಯ 12 ಅಧ್ಯಾಯ ಭಕ್ತಿ ಸೇವೆಯ 1 ಶ್ಲೋಕದಲ್ಲಿ ಓದಿ.
ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 1
ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ |
ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ ||1||
ಅನುವಾದ: ಅರ್ಜುನನು ಪ್ರಶ್ನಿಸಿದನು-ಸದಾ ನಿನ್ನ ಭಕ್ತಿಸೇವೆಯಲ್ಲಿ ಉಚಿತವಾದ ರೀತಿಯಲ್ಲಿ ನಿರತರಾದವರು, ಅವ್ಯಕ್ತವಾದ ನಿರಾಕಾರ ಬ್ರಹ್ಮನನ್ನು ಪೂಜಿಸುವವರು - ಇವರಿಬ್ಬರಲ್ಲಿ ಯಾರು ಹೆಚ್ಚು ಪರಿಪೂರ್ಣರೆಂದು ಭಾವಿಸಬೇಕು?
ತಾಜಾ ಫೋಟೊಗಳು
ಭಾವಾರ್ಥ: ಕೃಷ್ಣನು ಈಗ ಸಾಕಾರ ರೂಪ, ನಿರಾಕಾರ ರೂಪ ಮತ್ತು ವಿಶ್ವರೂಪ ಈ ಮೂರನ್ನೂ ಮತ್ತು ಎಲ್ಲ ಬಗೆಗಳ ಭಕ್ತರನ್ನೂ ಯೋಗಿಗಳನ್ನೂ ವರ್ಣಿಸಿದ್ದಾನೆ. ಸಾಮಾನ್ಯವಾಗಿ ಅಧ್ಯಾತ್ಮಿಕವಾದಿಗಳನ್ನು ಎರಡು ವರ್ಗಗಳನ್ನಾಗಿ ವಿಂಗಡಿಸಬಹುದು. ಒಂದು ವರ್ಘ ನಿರಾಕಾರವಾದಿಗಳದು, ಮತ್ತೊಂದು ಸಾಕಾರವಾದಿಗಳದು. ಸಾಕಾರವಾದಿಯಾದ ಭಕ್ತನು ತನ್ನ ಎಲ್ಲ ಶಕ್ತಿಯನ್ನು ಬಳಸಿ ಪರಮ ಪ್ರಭುವಿನ ಸೇವೆಯಲ್ಲಿ ತೊಡಗುತ್ತಾನೆ. ನಿರಾಕಾರವಾದಿಯು ನೇರವಾಗಿ ಕೃಷ್ಣನ ಸೇವೆಯಲ್ಲಿ ತೊಡಗುವುದಿಲ್ಲ, ಅವ್ಯಕ್ತವಾದ ನಿರಾಕಾರ ಬ್ರಹ್ಮನ ಧ್ಯಾನದಲ್ಲಿ ನಿರತನಾಗುತ್ತಾನೆ (Bhagavad Gita Updesh in Kannada).
ಪರಿಪೂರ್ಣ ಸತ್ಯದ ಸಾಕ್ಷಾತ್ಕಾರದ ವಿವಿಧ ಪ್ರಕ್ರಿಯೆಗಳಲ್ಲಿ ಭಕ್ತಿಸೇವೆ ಅಥವಾ ಭಕ್ತಿಯೋಗವೇ ಅತ್ಯುನ್ನತವಾದದ್ದು ಎಂದು ಈ ಅಧ್ಯಾಯದಲ್ಲಿ ಕಾಣುತ್ತೇವೆ. ದೇವೋತ್ತಮ ಪರಮ ಪುರುಷನ ಸಹವಾಸ ಬೇಕೆಂಬ ಬಯಕೆ ಇದ್ದಲ್ಲಿ ಅಂತಹ ಮನುಷ್ಯನು ಭಕ್ತಿಸೇವೆಯನ್ನು ಕೈಗೊಳ್ಳಬೇಕು. ಭಕ್ತಿಸೇವೆಯಲ್ಲಿ ಪರಮ ಪ್ರಭುವನ್ನು ನೇರವಾಗಿ ಪೂಜಿಸುವವರಿಗೆ ಸಾಕಾರವಾದಿಗಳು ಎಂದು ಹೆಸರು. ನಿರಾಕಾರ ಬ್ರಹ್ಮನ್‌ನ ಧ್ಯಾನದಲ್ಲಿ ತೊಡಗುವವರಿಗೆ ನಿರಾಕಾರವಾದಿಗಳು ಎಂದು ಹೆಸರು. ಇಲ್ಲಿ ಅರ್ಜುನನು ಯಾವ ನಿಲುವು ಉತ್ತಮ ಎಂದು ಪ್ರಶ್ನಿಸುತ್ತಿದ್ದಾನೆ. ಪರಿಪೂರ್ಣ ಸತ್ಯದ ಸಾಕ್ಷಾತ್ಕಾರಕ್ಕೆ ಬೇರೆ ಬೇರೆ ಮಾರ್ಗಗಳುಂಟು. ಈ ಅಧ್ಯಾಯದಲ್ಲಿ ಕೃಷ್ಣನು ಇವುಗಳಲ್ಲಿ ಅತ್ಯುನ್ನತವಾದದ್ದು ಭಕ್ತಿಯೋಗ ಅಥವಾ ತನ್ನ ಭಕ್ತಿಸೇವೆ ಎಂದು ಸೂಚಿಸುತ್ತಾನೆ. ಅದು ಅತ್ಯಂತ ನೇರವಾದದ್ದು ಮತ್ತು ಭಗವಂತನೊಡನೆ ಸಹವಾಸವನ್ನು ಪಡೆಯಲು ಅದೇ ಅತ್ಯಂತ ಸುಲಭವಾದದ್ದು.
ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ಪರಮ ಪ್ರಭುವು ಜೀವಿಯು ಭೌತಿಕ ದೇಹವಲ್ಲ ಎಂದು ವಿವರಿಸಿದ್ದಾನೆ. ಅವನೊಂದು ಅಲೌಕಿಕ ಕಿಡಿ. ಪರಿಪೂರ್ಣ ಸತ್ಯವು ಅಲೌಕಿಕ ಸಮಗ್ರತೆ. ಏಳನೆಯ ಅಧ್ಯಾಯದಲ್ಲಿ ಜೀವಿಯು ಪರಮ ಸಮಗ್ರತೆಗೇ ಬದಲಿಸಬೇಕೆಂದು ಪ್ರಭುವು ಸೂಚಿಸಿದ. ತನ್ನ ದೇಹವನ್ನು ಬಿಡುವ ಕಾಲದಲ್ಲಿ ಯಾರು ಕೃಷ್ಣನನ್ನು ಕುರಿತು ಯೋಚಿಸುತ್ತಾರೋ ಅಂತಹವರನ್ನು ಕೂಡಲೇ ಅಧ್ಯಾತ್ಮಿಕ ಗಗನಕ್ಕೆ, ಕೃಷ್ಣನ ನಿವಾಸಕ್ಕೆ ಕಳುಹಿಸಲಾಗುವುದು ಎಂದೂ ಎಂಟನೆಯ ಅಧ್ಯಾಯದಲ್ಲಿ ಹೇಳಲಾಯಿತು.
ಆರನೆಯ ಅಧ್ಯಾಯದ ಕಡೆಯಲ್ಲಿ ಪ್ರಭುವು, ಎಲ್ಲ ಯೋಗಿಗಳಲ್ಲಿ ಯಾರು ಸದಾ ತನ್ನಲ್ಲಿಯೇ ಕೃಷ್ಣನನ್ನು ಕುರಿತು ಚಿಂತಿಸುವನೋ ಅವನು ಅತ್ಯಂತ ಪರಿಪೂರ್ಣನೆಂದು ಸ್ಪಷ್ಟವಾಗಿ ಹೇಳಿದ್ದಾನೆ. ಹೀಗೆ ಒಟ್ಟಿನಲ್ಲಿ ಪ್ರತಿಯೊಂದು ಅಧ್ಯಾಯದಲ್ಲಿಯೂ ತೀರ್ಮಾನವೆಂದರೆ, ಮನುಷ್ಯನು ಕೃಷ್ಣನ ಸಾಕಾರ ರೂಪದಲ್ಲಿ ಅನುರಕ್ತನಾಗಬೇಕು, ಅದೇ ಅತ್ಯುನ್ನತ ಅಧ್ಯಾತ್ಮಿಕ ಸಾಕ್ಷಾತ್ಕಾರ ಎಂದು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)