Bhagavad Gita: ಮನುಷ್ಯನು ಬದುಕಿನ ಪರಿಪೂರ್ಣತೆಯ ಹಂತಕ್ಕೆ ಏರುವ ಮಾರ್ಗ ಸುಲಭದ್ದಲ್ಲ; ಗೀತೆಯ ಅರ್ಥ ತಿಳಿಯಿರಿ
Apr 16, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಮನುಷ್ಯನು ಬದುಕಿನ ಪರಿಪೂರ್ಣತೆಯ ಹಂತಕ್ಕೆ ಏರುವ ಮಾರ್ಗ ಸುಲಭದ್ದಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ ಕೊನೆಯ ಹಾಗೂ 28 ಶ್ಲೋಕದಲ್ಲಿ ತಿಳಿಯಿರಿರಿ.
8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 28
ವೇದೇಷು ಯಜ್ಞೇಷು ತಪಃಷು ತಪಃಸುಚೈವ
ದಾನೇಷು ಯತ್ ಪುಣ್ಯಫಲಂ ಪ್ರದಿಷ್ಟಮ್ |
ಅತ್ಯೇತಿ ತತ್ಸರ್ವಮಿದಂ ವಿದಿತ್ವಾ
ಯೋಗೀ ಪರಂ ಸ್ಥಾನಮುಪೈತಿ ಚಾದ್ಯಮ್ ||28||
ಅನುವಾದ: ಭಕ್ತಿಪೂರ್ವಕ ಸೇವೆಯ ಮಾರ್ಗವನ್ನು ಸ್ವೀಕರಿಸುವವನು ವೇದಾಧ್ಯಯನ, ಯಜ್ಞಗಳ ಆಚರಣೆ, ದಾನ ಮಾಡುವುದು ಅಥವಾ ತಾತ್ವಿಕ ಮತ್ತು ಕಾಮ್ಯಕರ್ಮಗಳಿಂದ ಬರುವ ಫಲಗಳನ್ನು ಕಳೆದುಕೊಳ್ಳಬೇಕಾಗಿಲ್ಲ. ಭಕ್ತಿಸೇವೆ ಮಾಡಿದರೆ ಸಾಕ, ಆತನು ಇವೆಲ್ಲವನ್ನೂ ಪಡೆಯುತ್ತಾನೆ ಮತ್ತು ಕಡೆಯಲ್ಲಿ ಪರಮ ಶಾಶ್ವತ ನಿವಾಸವನ್ನು ಸೇರುತ್ತಾನೆ.
ತಾಜಾ ಫೋಟೊಗಳು
ಭಾವಾರ್ಥ: ಏಳು ಮತ್ತು ಎಂಟನೆಯ ಅಧ್ಯಾಯಗಳು ವಿಶೇಷವಾಗಿ ಕೃಷ್ಣಪ್ರಜ್ಞೆ ಮತ್ತು ಭಕ್ತಿಸೇವೆಗಳನ್ನು ಕುರಿತವು, ಈ ಶ್ಲೋಕವು ಈ ಅಧ್ಯಾಯಗಳ ಸಾರಸಂಗ್ರಹ. ಮನುಷ್ಯನು ಒಬ್ಬ ಗುರುವಿನ ಮಾರ್ಗದರ್ಶನದಲ್ಲಿ ವೇದಾಧ್ಯಯನ ಮಾಡಬೇಕು ಮತ್ತು ಗುರುವಿನ ರಕ್ಷಣೆಯಲ್ಲಿರುವಾಗ ಕಠಿಣ ವ್ರತಗಳನ್ನೂ, ತಪಸ್ಸನ್ನೂ ಆಚರಿಸಬೇಕು. ಬ್ರಹ್ಮಚಾರಿಯು ಗುರುವಿನ ಮನೆಯಲ್ಲಿ ಸೇವಕನಂತೆ ಇರಬೇಕು ಮತ್ತು ಮನೆಮನೆಗೆ ಹೋಗಿ ಭಿಕ್ಷೆ ಬೇಡಿ ಗುರುವಿಗೆ ಒಪ್ಪಿಸಬೇಕು. ಗುರುವಿನ ಅಪ್ಪಣೆಯಂತೆ ಆತನು ಆಹಾರವನ್ನು ಸೇವಿಸುತ್ತಾನೆ. ಎಂದಾದರೂ ಗುರುವು ಶಿಷ್ಯನನ್ನು ಊಟಕ್ಕೆ ಕರೆಯುವುದನ್ನು ಮರೆತರೆ ಶಿಷ್ಯನು ಉಪವಾಸ ಮಾಡುತ್ತಾನೆ. ಬ್ರಹ್ಮಚರ್ಯದ ಆಚರಣೆಗೆ ಇವು ಕೆಲವು ವೈದಿಕ ತತ್ವಗಳಾಗಿವೆ.
ಶಿಷ್ಯನು ಗುರುವಿನ ಬಳಿ ಐದರಿಂದ ಇಪ್ಪತ್ತು ವರ್ಷಗಳವರೆಗೆ ವೇದಾಭ್ಯಾಸ ಮಾಡಿದ ಅನಂತರ ಅವನು ಪರಿಪೂರ್ಣ ಸ್ವಭಾವದ ಮನುಷ್ಯನಾಗಬಹುದು. ವೇದಾಭ್ಯಾಸವು ಆರಾಮಕುರ್ಚಿಯಲ್ಲಿ ಕುಳಿತು ಊಹಾತ್ಮಕ ಚಿಂತನೆಗಳಲ್ಲಿ ತೊಡಗುವವರ ಮನರಂಜನೆಗಾಗಿ ಇಲ್ಲ. ಅದರ ಉದ್ದೇಶ ಶೀಲವನ್ನು ರೂಪಿಸುವುದು. ಈ ಶಿಕ್ಷಣದ ನಂತರ ಬ್ರಹ್ಮಚಾರಿಗೆ ಗೃಹಸ್ಥಾಶ್ರಮವನ್ನು ಪ್ರವೇಶಿಸಿ ಮದುವೆಯಾಗಲು ಅನುಮತಿ ದೊರೆಯುತ್ತದೆ. ಗೃಹಸ್ಥನಾಗಿದ್ದಾಗ ಆತನು ಇನ್ನೂ ಹೆಚ್ಚಿನ ಜ್ಞಾನವನ್ನು ಪಡೆಯಲು ಅನೇಕ ಯಜ್ಞಗಳನ್ನು ಮಾಡಬೇಕು. ದೇಶ, ಕಾಲ ಮತ್ತು ಪಾತ್ರಗಳಿಗೆ ಅನುಗುಣವಾಗಿ ಸಾತ್ವಿಕ, ರಾಜಸ, ತಾಮಸಗಳಲ್ಲಿನ ದಾನಗಳಲ್ಲಿ ವಿವೇಚನೆ ಇಟ್ಟುಕೊಂಡು, ಭಗವದ್ಗೀತೆಯಲ್ಲಿ ಹೇಳಿದಂತೆ ದಾನ ಮಾಡಬೇಕು.
ಇಷ್ಟೆಲ್ಲಾ ಮಾಡಿದ್ರೆ ಮನುಷ್ಯನು ಬದುಕಿನ ಪರಿಪೂರ್ಣತೆಯ ಹಂತಕ್ಕೆ ಏರುತ್ತಾನೆ
ಗೃಹಸ್ಥ ಜೀವನವನ್ನು ಬಿಟ್ಟು ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿದಾಗ ಕಾಡುಗಳಲ್ಲಿ ವಾಸಮಾಡುವುದು, ಮರದ ತೊಗಟೆಗಳನ್ನು ಉಡುಪಾಗಿ ಧರಿಸುವುದು, ಕ್ಷೌರಮಾಡಿಕೊಳ್ಳದಿರುವುದು ಮೊದಲಾದ ರೀತಿಯಲ್ಲಿದ್ದು ಕಠಿಣ ತಪ್ಪಸುಗಳನ್ನು ಮಾಡಬೇಕು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸಾಶ್ರಮಗಳನ್ನು ಆಚರಿಸಿ ಮನುಷ್ಯನು ಬದುಕಿನ ಪರಿಪೂರ್ಣತೆಯ ಹಂತಕ್ಕೆ ಏರುತ್ತಾನೆ. ಕೆಲವರನ್ನು ಅನಂತರ ಸ್ವರ್ಗಲೋಕಗಳಿಗೆ ಏರಿಸಲಾಗುತ್ತದೆ. ಅವರು ಇನ್ನೂ ಮುಂದುವರಿದಾಗ ನಿರಾಕಾರ ಬ್ರಹ್ಮಜ್ಯೋತಿಯಲ್ಲಿ ಅಥವಾ ವೈಕುಂಠಲೋಕಗಳಲ್ಲಿ ಇಲ್ಲವೇ ಕೃಷ್ಣಲೋಕದಲ್ಲಿ ಮುಕ್ತಿಯನ್ನು ಪಡೆಯುತ್ತಾರೆ. ವೈದಿಕ ಸಾಹಿತ್ಯದಲ್ಲಿ ರೂಪಿಸಿರುವ ಮಾರ್ಗ ಇದು.
ಕೃಷ್ಣಪ್ರಜ್ಞೆಯ ಸೊಗಸೆಂದರೆ, ಭಕ್ತಿಸೇವೆಯಲ್ಲಿ ನಿರತನಾಗುವುದರ ಮೂಲಕ ಒಂದೇ ಸಲಕ್ಕೆ ಮನುಷ್ಯನು ಬೇರೆ ಬೇರೆ ಆಶ್ರಮಗಳ ವಿವಿಧ ವಿಧಿಕರ್ಮಗಳನ್ನು ದಾಟಿಹೋಗಬಹುದು. ಇದಂ ವಿದಿತ್ವಾ ಎನ್ನುವ ಮಾತುಗಳು, ಭಗವದ್ಗೀತೆಯ ಈ ಅಧ್ಯಾಯದಲ್ಲಿಯೂ, ಏಳನೆಯ ಅಧ್ಯಾಯದಲ್ಲಿಯೂ ಶ್ರೀಕೃಷ್ಣನು ಕೊಟ್ಟಿರುವ ಆದೇಶಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಸೂಚಿಸುತ್ತದೆ. ವಿದ್ವತ್ತಿನಿಂದ ಅಥವಾ ಊಹಾತ್ಮಕ ಚಿಂತನೆಗಳಿಂದ ಇವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಾರರುದು. ಇವನ್ನು ಭಕ್ತರ ಜೊತೆಗೆ ಕೇಳಿ ಅರ್ಥ ಮಾಡಿಕೊಳ್ಳಬೇಕು. ಏಳನೆಯ ಅಧ್ಯಾಯದಿಂದ ಹನ್ನೆರಡನೆಯ ಅಧ್ಯಾಯದವರೆಗಿನ ಭಾಗದ ಭಗವದ್ಗೀತೆಯ ತಿರುಳು.
ಮೊದಲನೆಯ ಆರು ಅಧ್ಯಾಯಗಳು ಮತ್ತು ಕಡೆಯ ಆರು ಅಧ್ಯಾಯಗಳು, ಭಗವಂತನು ವಿಶೇಷವಾಗಿ ರಕ್ಷಿಸುವ ಮಧ್ಯದ ಆರು ಅಧ್ಯಾಯಗಳಿಗೆ ಕವಿಚವಿದ್ದಂತೆ. ಭಗವದ್ಗೀತೆಯನ್ನು - ಅದರಲ್ಲೂ ಮಧ್ಯದ ಆರು ಅಧ್ಯಾಯಗಳನ್ನು - ಭಕ್ತರ ಸಹವಾಸದಲ್ಲಿ ಅರ್ಥ ಮಾಡಿಕೊಳ್ಳುವ ಸುಯೋಗವು ಮನುಷ್ಯನಿಗೆ ಪ್ರಾಪ್ತವಾದರೆ ಅವನ ಬದುಕು ಎಲ್ಲ ತಪಸ್ಸು, ಯಜ್ಞಗಳು, ದಾನಗಳು, ಊಹೆಗಳು, ಮೊದಲಾದುವನ್ನೆಲ್ಲ ಮೀರಿ ಭವ್ಯವಾಗುತ್ತದೆ. ಏಕೆಂದರೆ ಈ ಚಟುವಟಿಕೆಗಳ ಎಲ್ಲ ಫಲಗಳನ್ನೂ ಕೃಷ್ಣಪ್ರಜ್ಞೆಯೊಂದರಿಂದಲೇ ಪಡೆಯಬಹುದು. ಇಲ್ಲಿಗೆ ಶ್ರೀಮದ್ಭಗವದ್ಘೀತೆಯ ಭಗವತ್ ಪ್ರಾಪ್ತಿ ಎಂಬ ಎಂಟನೆಯ ಅಧ್ಯಾಯದ ಭಕ್ತಿವೇದಾಂತ ಭಾವಾರ್ಥವು ಮುಗಿಯಿತು.