ಭಗವದ್ಗೀತೆ: ಯಜ್ಞಗಳನ್ನು ನಡೆಸುವುದರಿಂದ ಹಲವು ಉಪಪ್ರಯೋಜನಗಳಿವೆ; ಗೀತೆಯ ಅರ್ಥ ತಿಳಿಯಿರಿ
Dec 07, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಯಜ್ಞಗಳನ್ನು ನಡೆಸುವುದರಿಂದ ಹಲವು ಉಪಪ್ರಯೋಜನಗಳಿವೆಯೆಂಬ ಗೀತೆಯ ಅರ್ಥ ಹೀಗಿದೆ.
ದೇವಾನ್ ಭಾವಯತಾನೇನ ತೇ ದೇವಾ ಭಾವಯನ್ತು ವಃ |
ಪರಸ್ಪರಂ ಭಾವಯನ್ತಃ ಶ್ರೇಯಃ ಪರಮವಾಪ್ಸ್ಯಥ ||11||
ಈ ಯಜ್ಞಗಳಿಂದ ಸಂತುಷ್ಟರಾದ ದೇವತೆಗಳೂ ನಿಮ್ಮನ್ನು ಸಂತೋಷಪಡಿಸುತ್ತಾರೆ. ಹೀಗೆ ಮನುಷ್ಯನ ಮತ್ತು ದೇವತೆಗಳ ಪರಸ್ಪರ ಸಹಕಾರದಿಂದ ಎಲ್ಲರಿಗೂ ಸಮೃದ್ಧಿಯುಂಟಾಗುತ್ತದೆ.
ತಾಜಾ ಫೋಟೊಗಳು
ದೇವತೆಗಳು ಐಹಿಕ ವ್ಯವಹಾರಗಳ ಆಡಳಿತವನ್ನು ನಿರ್ವಹಿಸಲು ಅಧಿಕಾರವನ್ನು ಪಡೆದವರು. ಪ್ರತಿಯೊಬ್ಬ ಜೀವಿಯ ದೇಹ ಮತ್ತು ಆತ್ಮಗಳ ಪೋಷಣೆಗಾಗಿ ವಾಯು, ಬೆಳಕು, ನೀರು ಮತ್ತಿತರ ಎಲ್ಲ ವರಗಳನ್ನೂ ಒದಗಿಸುವ ಹೊಣೆಯನ್ನು ದೇವತೆಗಳಿಗೆ ವಹಿಸಿದೆ. ಅವರು ದೇವೋತ್ತಮ ಪರಮ ಪುರುಷನ ಶರೀರದ ವಿವಿಧ ಭಾಗಗಳಲ್ಲಿ ಅಸಂಖ್ಯ ಸಹಾಯಕರಾಗಿದ್ದಾರೆ. ಅವರ ಸಂತೋಷ ಮತ್ತು ಅಸಂತೋಷಗಳು ಮನುಷ್ಯನು ಯಜ್ಞಗಳನ್ನು ನಡೆಸುವುದನ್ನೆ ಅವಲಂಬಿಸಿವೆ.
ಕೆಲವು ಯಜ್ಞಗಳ ಉದ್ದೇಶ ನಿರ್ದಿಷ್ಟ ದೇವತೆಗಳನ್ನು ಪ್ರಸನ್ನಗೊಳಿಸುವುದು. ಆದರೆ ಎಲ್ಲ ಯಜ್ಞಗಳಲ್ಲಿ ಮುಖ್ಯ ಭೋಕ್ತಾರ ಎಂದು ಶ್ರೀವಿಷ್ಣುವನ್ನು ಪೂಜಿಸಲಾಗುತ್ತದೆ. ಭಗವದ್ಗೀತೆಯಲ್ಲಿ, ಎಲ್ಲ ಬಗೆಗಳ ಯಜ್ಞಗಳ ಮುಖ್ಯ ಭೋಕ್ತಾರನು ಶ್ರೀಕೃಷ್ಣ ಎಂದು ಹೇಳಿದೆ. ಭೋಕ್ತಾರಂ ಯಜ್ಞ ತಪಸಾಮ್. ಆದುದರಿಂದ, ಯಜ್ಞಪತಿಯ ಕಟ್ಟಕಡೆಯ ಸಂತೃಪ್ತಿಯೇ ಎಲ್ಲ ಯಜ್ಞಗಳ ಮುಖ್ಯ ಗುರಿ. ಈ ಯಜ್ಞಗಳನ್ನು ಪರಿಪೂರ್ಣ ರೀತಿಯಲ್ಲಿ ನಡೆಸಿದಾಗ, ಸಹಜವಾಗಿ ಬೇರೆ ಬೇರೆ ವಿಭಾಗಗಳನ್ನು ವಹಿಸಿಕೊಂಡಿರುವ ದೇವತೆಗಳು ಸಂತುಷ್ಟರಾಗುತ್ತಾರೆ ಮತ್ತು ನೈಸರ್ಗಿಕ ಉತ್ಪನ್ನಗಳನ್ನು ಒದಿಗಸುವುದರಲ್ಲಿ ಅಭಾವಕ್ಕೆಡೆ ಇರುವುದಿಲ್ಲ.
ಯಜ್ಞಗಳನ್ನು ನಡೆಸುವುದರಿಂದ ಹಲವು ಉಪಪ್ರಯೋಜನಗಳುಂಟು. ಅದು ಕಡೆಗೆ ಭವಬಂಧನದಿಂದ ಮುಕ್ತಿಗೆ ಕರೆದೊಯ್ಯುತ್ತದೆ. ಯಜ್ಞಗಳನ್ನು ನಡೆಸುವುದರಿಂದ ಎಲ್ಲ ಕರ್ಮಗಳೂ ಪರಿಶುದ್ಧವಾಗುತ್ತವೆ. ವೇದಗಳಲ್ಲಿ ಹೇಳಿರುವಂತೆ, ಆಹಾರಶುದ್ಧೌ ಸತ್ತ್ವಶುದ್ಧಿಃ ಸತ್ತ್ವಶುದ್ಧೌ ಧ್ರುವಾ ಸ್ಮೃತಿಃ ಸ್ಮತಿಲಂಭೇ ಸರ್ವಗ್ರಂಧೀನಾಂ ವಿಪ್ರಮೋಕ್ಷಃ. ಯಜ್ಞಾಚರಣೆಯಿಂದ ಮನುಷ್ಯನ ಆಹಾರವು ಪವಿತ್ರವಾಗುತ್ತದೆ. ಪವಿತ್ರವಾದ ಆಹಾರವನ್ನು ಸೇವಿಸಿದ ಮನುಷ್ಯನ ಬದುಕೇ ಪವಿತ್ರವಾಗುತ್ತದೆ. ಬದುಕು ಪವಿತ್ರವಾದಾಗ ಸ್ಮೃತಿಯು ಪವಿತ್ರವಾಗುತ್ತದೆ. ಸ್ಮೃತಿಯು ಪವಿತ್ರವಾದಾಗ ಮನುಷ್ಯನು ಮೋಕ್ಷಮಾರ್ಗವನ್ನು ಕುರಿತು ಚಿಂತಿಸಬಹುದು. ಇವೆಲ್ಲವೂ ಸೇರಿ ಕೃಷ್ಣಪ್ರಜ್ಞೆಗೆ ಒಯ್ಯುತ್ತವೆ. ಇಂದಿನ ಸಮಾಜಕ್ಕೆ ಅತ್ಯಗತ್ಯವಾದದ್ದು ಕೃಷ್ಣಪ್ರಜ್ಞೆ.