ಭಗವದ್ಗೀತೆ: ಯಜ್ಞ, ಆಚರಣೆಗಳು ಮನುಷ್ಯನನ್ನು ಎಲ್ಲಾ ಪಾಪಗಳಿಂದ ದೂರ ಇರಿಸುತ್ತವೆ; ಗೀತೆಯ ಅರ್ಥ ತಿಳಿಯಿರಿ
Dec 09, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಯಜ್ಞ, ಆಚರಣೆಗಳು ಮನುಷ್ಯನನ್ನು ಎಲ್ಲಾ ಪಾಪಗಳಿಂದ ದೂರ ಇರಿಸುತ್ತವೆ ಎಂಬುದರ ಅರ್ಥ ತಿಳಿಯಿರಿ.
ಯಜ್ಞಶಿಷ್ಟಾಶಿನಃ ಸಂತೋ ಮುಚೈನ್ತ್ಯೇ ಸರ್ವಕಿಲ್ಬಷ್ಯೈಃ |
ಭುಞ್ಜತೇ ತೇ ತ್ವಘಂ ಪಾಪಾ ಯೇ ಪಚಿನ್ತ್ಯಾತ್ಮಕಾರಣಾತ್ ||13||
ಭಗವಂತನ ಭಕ್ತರು ಎಲ್ಲ ಬಗೆಯ ಪಾಪಗಳಿಂದಲೂ ಬಿಡುಗಡೆ ಹೊಂದುತ್ತಾರೆ. ಏಕೆಂದರೆ ಅವರು ಯಜ್ಞದ ಶೇಷವನ್ನೂ ಊಟಮಾಡುತ್ತಾರೆ. ವೈಯಕ್ತಿಕ ಸಂತೋಷಕ್ಕೋಸ್ಕರ ಪಾಕ ಮಾಡಿಕೊಳ್ಳುವವರು ಖಂಡಿತವಾಗಿಯೂ ಪಾಪವನ್ನೇ ಊಟಮಾಡುತ್ತಾರೆ.
ತಾಜಾ ಫೋಟೊಗಳು
ಭಗವಂತನ ಭಕ್ತರಿಗೆ, ಎಂದರೆ ಕೃಷ್ಣಪ್ರಜ್ಞೆ ಇರುವವರಿಗೆ ಸಂತರು ಎಂದು ಹೆಸರು. ಅವರು ಯಾವಾಗಲೂ ಭಗವಂತನ ಪ್ರೇಮಿಗಳು. ಇದನ್ನು ಬ್ರಹ್ಮ ಸಂಹಿತೆಯಲ್ಲಿ (5.38) ವರ್ಣಿಸಿದೆ - ಪ್ರೇಮಾಂಜನಚ್ಛುರಿತಭಕ್ತಿವಿಲೋಚನೇನ ಸನ್ತಃ ಸದೈವ ಹೃದಯೇಷು ವಿಲೋಕಯನ್ತಿ.
ಸದಾ ದೇವೋತ್ತಮ ಪರಮ ಪುರುಷ, ಗೋವಿಂದ (ಎಲ್ಲ ಸಂತಸವನ್ನು ಅನುಗ್ರಹಿಸುವವನು), ಅಥವಾ ಮುಕಂದ (ಮುಕ್ತಿಯನ್ನು ಕೊಡುವವನು), ಅಥವಾ ಕೃಷ್ಣ (ಸರ್ವಾಕಷಕ)ನೊಂದಿಗೆ ಪ್ರೇಮಭಾವದಲ್ಲಿರುವ ಸಂತರು ಪುರುಷೋತ್ತಮನಿಗೆ ಸಮರ್ಪಣೆ ಮಾಡದೆ ಏನನ್ನೂ ಸ್ವೀಕರಿಸಿಲಾರರು. ಆದುದರಿಂದ ಇಂತಹ ಭಕ್ತರು ಶ್ರವಣ, ಕೀರ್ತನ, ಸ್ಮರಣ, ಅರ್ಚನ ಮೊದಲಾದ ವಿವಿಧ ರೀತಿಗಳ ಭಕ್ತಿಸೇವೆಗಳ ಯಜ್ಞಗಳನ್ನು ಸದಾ ಆಚರಿಸುತ್ತಿರುತ್ತಾರೆ.
ಈ ಬಗೆಯ ಯಜ್ಞಗಳ ಆಚರಣೆಗಳು ಐಹಿಕ ಜಗತ್ತಿನಲ್ಲಿ ಪಾಪಮಯ ಸಹವಾಸದ ಎಲ್ಲ ಕಲ್ಮಷಗಳಿಂದ ಅವರನ್ನು ದೂರದಲ್ಲಿ ಇರಿಸುತ್ತವೆ. ತಮಗಾಗಿಯೇ ಅಥವಾ ಇಂದ್ರಿಯತೃಪ್ತಿಗಾಗಿಯೇ ಆಹಾರವನ್ನು ಮಾಡಿಕೊಳ್ಳುವವರು ಕಳ್ಳರು ಮಾತ್ರವಲ್ಲ, ಅವರು ಎಲ್ಲ ರೀತಿಗಳ ಪಾಪಗಳನ್ನು ತಿನ್ನುವವರು.
ಕಳ್ಳನೂ ಪಾಪಿಯೂ ಆದ ಮನುಷ್ಯನು ಸುಖವಾಗಿರುವುದೇ ಹೇಗೆ ಸಾಧ್ಯ? ಇದು ಅಸಾಧ್ಯ. ಆದುದರಿಂದ ಜನರು ಎಲ್ಲ ರೀತಿಗಳಲ್ಲಿ ಸುಖವಾಗಿರಬೇಕಾದರೆ ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿ ಸಂಕೀರ್ತನ ಯಜ್ಞವನ್ನು ಮಾಡುವ ಸುಲಭವಾದ ಪ್ರಕ್ರಿಯೆಯನ್ನು ಅವರಿಗೆ ಹೇಳಿಕೊಡಬೇಕು. ಇಲ್ಲವಾದರೆ ಜಗತ್ತಿನಲ್ಲಿ ಶಾಂತಿಯಾಗಲಿ ಸುಖವಾಗಲಿ ಸಾಧ್ಯವಿಲ್ಲ.