Bhagavad Gita: ದುಃಖಗಳೇ ತುಂಬಿರುವ ಈ ಜಗತ್ತು ಎಲ್ಲರಿಗೂ ಅಶಾಶ್ವತ, ಶಾಶ್ವತವಾದ ಜಗತ್ತು ಇನ್ನೊಂದಿದೆ; ಗೀತೆಯ ಸಾರಾಂಶ ಹೀಗಿದೆ
May 18, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita: ದುಃಖಗಳೇ ತುಂಬಿರುವ ಈ ಜಗತ್ತು ಎಲ್ಲರಿಗೂ ಅಶಾಶ್ವತ, ಶಾಶ್ವತವಾದ ಜಗತ್ತು ಬೇರೊಂದಿದೆ ಎಂಬುದರ ಅರ್ಥವನ್ನು ಭಗವದ್ಗೀತೆಯ 32 ಮತ್ತು 33ನೇ ಅಧ್ಯಾಯದಲ್ಲಿ ತಿಳಿಯಿರಿ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 32
ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇಪಿ ಸ್ಯುಃಪಾಪಯೋನಯಃ |
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇಪಿ ಯಾನ್ತಿ ಪರಾಂ ಗತಿಮ್ ||32||
ಅನುವಾದ: ಪಾರ್ಥ, ನನ್ನಲ್ಲಿ ಆಶ್ರಯ ಪಡೆಯುವವರು ಕೀಳುಜನ್ಮದವರಾದರೂ-ಸ್ತ್ರೀಯರು, ವೈಶ್ಯರು ಮತ್ತು ಶೂದ್ರರು-ಪರಮಗತಿಯನ್ನು ಪಡೆಯಬಲ್ಲರು.
ತಾಜಾ ಫೋಟೊಗಳು
ಭಾವಾರ್ಥ: ಭಕ್ತಿಸೇವೆಯಲ್ಲಿ ಕೆಳಗಿನ ಮತ್ತು ಮೇಲಿನ ವರ್ಗಗಳ ಜನರಲ್ಲಿ ಯಾವ ವ್ಯತ್ಯಾಸವೂ ಇಲ್ಲ ಎಂದು ಪರಮ ಪ್ರಭುವು ಇಲ್ಲಿ ಸ್ಪಷ್ಟವಾಗಿ ಸಾರುತ್ತಾನೆ. ಜೀವನದ ಪ್ರಾಪಂಚಿಕ ಪರಿಕಲ್ಪನೆಯಲ್ಲಿ ಇಂತಹ ಭೇದಗಳುಂಟು. ಆದರೆ ಪ್ರಭುವಿನ ಭಕ್ತಿಸೇವೆಯಲ್ಲಿ ನಿರತನಾದವನಿಗೆ ಇಂತಹ ಭೇದಗಳಲಿಲ್ಲ. ಪ್ರತಿಯೊಬ್ಬನೂ ಪರಮಗತಿಗೆ ಅರ್ಹನೇ. ಶ್ರೀಮದ್ಭಾಗವತದಲ್ಲಿ (2.4.18). ಚಂಡಾಲರಂತಹ (ನಾಯಿಗಳನ್ನು ತಿನ್ನುವವರು) ಅತ್ಯಂತ ಕೀಳಾದವರೂ ಒಬ್ಬ ಪರಿಶುದ್ಧಭಕ್ತನ ಸಹವಾಸದಿಂದ ಪರಿಶುದ್ಧರಾಗಬಲ್ಲರು ಎಂದು ಹೇಳಿದೆ (Bhagavad Gita Updesh In Kannada).
ಭಕ್ತಿಸೇವೆ ಮತ್ತು ಪರಿಶುದ್ಧ ಭಕ್ತನೊಬ್ಬನ ಮಾರ್ಗದರ್ಶನ ಎಷ್ಟು ಶಕ್ತವಾದವು ಎಂದರೆ ಕೆಳಗಿನ ಮತ್ತು ಮೇಲಿನ ವರ್ಗಗಳ ಜನರಲ್ಲಿ ಭೇದ ಭಾವವಿಲ್ಲ. ಯಾರು ಬೇಕಾದರೂ ಇದನ್ನು ಅನುಸರಿಸಬಹುದು. ಪರಿಶುದ್ಧ ಭಕ್ತನ ಆಶ್ರಯವನ್ನು ಪಡೆಯುವ ಅತ್ಯಂತ ಸರಳನಾದ ಮನುಷ್ಯನು ಯೋಗ್ಯವಾದ ಮಾರ್ಗದರ್ಶನದಿಂದ ಪರಿಶುದ್ಧನಾಗಬಲ್ಲ.
ಐಹಿಕ ಪ್ರಕೃತಿಯ ಗುಣಗಳಿಗೆ ಅನುಗುಣವಾಗಿ ಮನುಷ್ಯನನ್ನು ಸಾತ್ವಿಕ ಸ್ವಭಾವದವರರು (ಬ್ರಾಹ್ಮಣರು), ರಾಜಸ ಸ್ವಭಾವದವರು (ಕ್ಷತ್ರಿಯರು ಅಥವಾ ಆಡಳಿತಗಾರರು), ರಾಜಸ ಮತ್ತು ತಾಮಸ ಗುಣಗಳು ಬೆರೆತವರು (ವೈಶ್ಯರು ಅಥವಾ ವ್ಯಾಪಾರಿಗಳು) ಮತ್ತು ತಾಮಸ ಗುಣದವರು (ಶೂದ್ರರು ಅಥವಾ ಕಾರ್ಮಿಕರು) ಎಂದು ವರ್ಗೀಕರಿಸಲಾಗಿದೆ. ಇವರಿಗಿಂತ ಕೆಳಗಿನವರನ್ನು ಚಂಡಾಲರಂತೆ ಕರೆಯುತ್ತಾರೆ. ಅವರು ಪಾಪಿ ಸಂಸಾರಗಳಲ್ಲಿ ಹುಟ್ಟುತ್ತಾರೆ. ಸಾಮಾನ್ಯವಾಗಿ ಪಾಪಿಸಂಸಾರಗಳಲ್ಲಿ ಹುಟ್ಟಿದವರ ಸಹವಾಸವನ್ನು ಮೇಲಿನ ವರ್ಗಗಳವರು ಒಪ್ಪುವುದಿಲ್ಲ.
ಆದರೆ ಭಕ್ತಿಸೇವೆಯ ಪ್ರಕ್ರಿಯೆಯ ಶಕ್ತಿ ಎಷ್ಟೆಂದರೆ ಪರಮ ಪ್ರಭುವಿನ ಪರಿಶುದ್ಧ ಭಕ್ತನು ಕೆಳಗಿನ ವರ್ಗಗಳ ಎಲ್ಲರೂ ಜೀವನದ ಅತ್ಯುನ್ನತ ಪರಿಪೂರ್ಣತೆಯನ್ನು ಪಡೆಯುವಂತೆ ಮಾಡಬಲ್ಲ. ಮನುಷ್ಯನು ಕೃಷ್ಣನ ಆಶ್ರಯವನ್ನು ಪಡೆದಾಗ ಮಾತ್ರ ಇದು ಸಾಧ್ಯ. ವ್ಯಪಾಶ್ರಿತ್ಯ ಎನ್ನುವ ಶಬ್ದವು ಇಲ್ಲಿ ಸೂಚಿಸುವಂತೆ ಮನುಷ್ಯನು ಸಂಪೂರ್ಣವಾಗಿ ಕೃಷ್ಣನ ಆಶ್ರಯವನ್ನು ಪಡೆಯಬೇಕು. ಆಗ ಅವನು ಮಹಾಜ್ಞಾನಿಗಳಿಗಿಂತಲೂ ಯೋಗಿಗಳಿಗಿಂತಲೂ ಶ್ರೇಷ್ಠನಾಗುತ್ತಾನೆ.
9ನೇ ಅಧ್ಯಾಯ ರಹಸ್ಯತಮ ಜ್ಞಾನ- ಶ್ಲೋಕ-33
ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ |
ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವ ಮಾಮ್ ||33||
ಅನುವಾದ: ಧರ್ಮಾತ್ಮರಾದ ಬ್ರಾಹ್ಮಣರು, ಭಕ್ತರು ಮತ್ತು ರಾಜರ್ಷಿಗಳ ವಿಷಯದಲ್ಲಿ ಇದು ಇನ್ನಷ್ಟು ನಿಜ. ಆದುದರಿಂದ ಈ ಆಶಾಶ್ವತವಾದ ಮತ್ತು ದುಃಖದ ಲೋಕಕ್ಕೆ ಬಂದಿರುವ ನೀನು ನನ್ನ ಪ್ರೇಮಪೂರ್ವಕ ಸೇವೆಯಲ್ಲಿ ನಿರತನಾಗು.
ಭಾವಾರ್ಥ: ಈ ಐಹಿಕ ಜಗತ್ತಿನಲ್ಲಿ ಜನರ ಬೇರೆ ಬೇರೆ ವರ್ಗಗಳುಂಟು. ಏನೇ ಆಗಲಿ, ಈ ಜಗತ್ತು ಯಾರಿಗೂ ಸುಖದ ತಾಣವಲ್ಲ. ಅನಿತ್ಯಮ್ ಅಸುಖಮ್ ಲೋಕಮ್ - ಈ ಲೋಕವು ಅಶಾಶ್ವತವಾಗಿದ್ದು ದುಃಖಗಳಿಂದ ತುಂಬಿಹೋಗಿದೆ. ಇದು ಯಾವುದೇ ವಿವೇಕಯುಕ್ತನಾದ ಯೋಗ್ಯ ಮನುಷ್ಯನು ವಾಸಮಾಡುವಂತಹ ಸ್ಥಳವಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ದೇವೋತ್ತಮ ಪರಮ ಪುರುಷನು ಈ ಪ್ರಪಂಚವು ಅಶಾಶ್ವತ ಮತ್ತು ಇದು ದುಃಖಗಳಿಂದ ತುಂಬಿಹೋಗಿದೆ ಎಂದು ಹೇಳುತ್ತಾನೆ. ಕೆಲವರು ತತ್ವಶಾಸ್ತ್ರಜ್ಞರು ಅದರಲ್ಲಿಯೂ ಮಾಯಾವಾದಿ ತತ್ವಶಾಸ್ತ್ರಜ್ಞರು ಈ ಜಗತ್ತು ಮಿಥ್ಯೆ ಎಂದು ಹೇಳುತ್ತಾರೆ. ಆದರೆ ಭಗವದ್ಗೀತೆಯಿಂದ ನಾವು ಈ ಜಗತ್ತು ಮಿಥ್ಯೆಯಲ್ಲ, ಆದರೆ ಅಶ್ವಾಶ್ವತ ಎಂದು ತಿಳಿದುಕೊಳ್ಳಬಹುದು. ಅಶಾಶ್ವತತೆಗೂ ಮಿಥ್ಯೆಗೂ ವ್ಯಾತ್ಯಾಸವುಂಟು. ಈ ಜಗತ್ತು ಅಶಾಶ್ವತ. ಆದರೆ ಇನ್ನೊಂದು ಜಗತ್ತಿದೆ. ಅದು ಶಾಶ್ವತ. ಈ ಜಗತ್ತು ದುಃಖಮಯ. ಆದರೆ ಇನ್ನೂಂದು ಜಗತ್ತು ಶಾಶ್ವತ ಮತ್ತು ಆನಂದಮಯ.
ಅರ್ಜುನನು ಒಂದು ಸಾಧುಸ್ವಭಾವದ ರಾಜಕುಂಬದಲ್ಲಿ ಹುಟ್ಟಿದವನು. ಅವನಿಗೂ ಪರಮ ಪ್ರಭುವು, ನನ್ನ ಭಕ್ತಿಸೇವೆಯನ್ನು ಆರಿಸಿಕೊ ಮತ್ತು ಶೀಘ್ರವಾಗಿ ಭಗವದ್ಧಾಮಕ್ಕೆ ಬಂದುಬಿಡು ಎಂದು ಹೇಳುತ್ತಾನೆ. ದುಃಖಗಳೇ ತುಂಬಿದ ಈ ಅಶಾಶ್ವತ ಜಗತ್ತಿನಲ್ಲಿ ಯಾರೂ ನಿಲ್ಲಬಾರದು. ಪ್ರತಿಯೊಬ್ಬನೂ ದೇವೋತ್ತಮ ಪರಮ ಪುರುಷನ ಹೃದಯಕ್ಕೆ ತನ್ನನ್ನು ಕೂಡಿಸಿಕೊಳ್ಳಬೇಕು. ಆಗ ಆತನು ಶಾಶ್ವತವಾಗಿ ಸುಖಿಯಾಗಿರಬಹುದು. ಎಲ್ಲ ವರ್ಗಗಳ ಮನುಷ್ಯರ ಎಲ್ಲ ಸಮಸ್ಯೆಗಳನ್ನು ನಿವಾರಿಸಬಲ್ಲ ಒಂದೇ ಒಂದು ಪ್ರಕ್ರಿಯೆ ಎಂದರೆ ಪರಮ ಪ್ರಭುವಿನ ಭಕ್ತಿಸೇವೆ. ಆದುದರಿಂದ ಪ್ರತಿಯೊಬ್ಬನೂ ಕೃಷ್ಣಪ್ರಜ್ಞೆಯನ್ನು ಆರಿಸಿಕೊಂಡು ತನ್ನ ಬದುಕನ್ನು ಪರಿಪೂರ್ಣ ಮಾಡಿಕೊಳ್ಳಬೇಕು.