ಭಗವದ್ಗೀತೆ: ಅಜ್ಞಾನದಿಂದ ಜಗತ್ತು ಹೆಜ್ಜೆ ಹೆಜ್ಜೆಗೂ ಅಪಾಯವಿರುವ ದುಃಖದ ಸ್ಥಳ ಅನ್ನೋದು ಮನುಷ್ಯನಿಗೆ ತಿಳಿದಿಲ್ಲ; ಗೀತೆಯಲ್ಲಿನ ಅರ್ಥ ಹೀಗಿದೆ
Nov 13, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.
ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತದುಷ್ಕೃತೇ |
ತಸ್ಮಾದ್ ಯೋಗಾಯ ಯುಜ್ವಸ್ವ ಯೋಗಃ ಕರ್ಮಸು ಕೌಶಲಮ್ ||50||
ಭಕ್ತಿ ಸೇವೆಯಲ್ಲಿ ನಿರತನಾದವನು ಈ ಜನ್ಮದಲ್ಲಿಯೇ ಸುಕೃತ ದುಷ್ಕೃತಗಳನ್ನು ದೂರ ಮಾಡುತ್ತಾನೆ. ಆದುದರಿಂದ ಯೋಗವನ್ನು ಪಡೆಯಲು ಶ್ರಮಿಸು. ಅದೇ ಕರ್ಮಕೌಶಲ.
ತಾಜಾ ಫೋಟೊಗಳು
ಅನಂತ ಕಾಲದಿಂದ ಪ್ರತಿಯೊಬ್ಬ ಜೀವಿಯೂ ಸುಕೃತ-ದುಷ್ಕೃತಗಳ ಹಲವು ಪರಿಣಾಮಗಳನ್ನು ರಾಶಿಮಾಡಿಕೊಂಡಿದ್ದಾನೆ. ಆದುದರಿಂದ ಅವನಿಗೆ ಸದಾ ತನ್ನ ಸಹಜ ಸ್ವರೂಪದ ಅರಿವೇ ಇರುವುದಿಲ್ಲ. ಭಗವದ್ಗೀತೆಯ ಉಪದೇಶದಿಂದ ಮನುಷ್ಯನ ಅಜ್ಞಾನವನ್ನು ಹೋಗಲಾಡಿಸಬಹುದು.
ಎಲ್ಲ ರೀತಿಗಳಲ್ಲಿ ಶ್ರೀಕೃಷ್ಣನಿಗೆ ಶರಣಾಗತನಾಗಿ, ಜನ್ಮಜನ್ಮಾಂತರಗಳಲ್ಲಿ ಕ್ರಿಯೆ-ಪ್ರತಿಯೆಗಳ ಬಂಧನದ ಯಾತನೆಯಿಂದ ಮುಕ್ತಿ ಸಾಧಿಸುವುದನ್ನು ಭಗವದ್ಗೀತೆಯು ಭೋದಿಸುತ್ತದೆ. ಫಲ ನೀಡುವ ಕರ್ಮದಿಂದ ಪರಿಶುದ್ಧಗೊಳಿಸುವ ಕೃಷ್ಣಪ್ರಜ್ಞೆಯಲ್ಲಿ ಕಾರ್ಯನಿರತನಾಗಬೇಕೆಂದು ಅರ್ಜುನನಿಗೆ ಉಪದೇಶಿಸಲಾಗುತ್ತದೆ.
ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣಃ |
ಜನ್ಮಬದ್ಧವಿನಿರ್ಮುಕ್ತಾಃ ಪದಂ ಗುಚ್ಛನ್ತ್ಯನಾಮಯಮ್ ||51||
ಹೀಗೆ ಭಕ್ತಿಯಲ್ಲಿ ನಿರತರಾಗಿ ಮಹರ್ಷಿಗಳು ಅಥವಾ ಭಕ್ತರು ಐಹಿಕ ಜಗತ್ತಿನಲ್ಲಿ ಕರ್ಮಫಲದಿಂದ ಮುಕ್ತರಾಗುತ್ತಾರೆ. ಹೀಗೆ ಅವರು ಹುಟ್ಟು ಸಾವುಗಳ ಚಕ್ರದಿಂದ ಬಿಡುಗಡೆ ಹೊಂದುತ್ತಾರೆ ಮತ್ತು (ಭಗವದ್ಧಾಮಕ್ಕೆ ಮರಳಿ) ಎಲ್ಲ ದುಃಖಗಳನ್ನೂ ಮೀರಿದ ಸ್ಥಿತಿಯನ್ನು ಪಡೆಯುತ್ತಾರೆ. ಮುಕ್ತರಾದ ಜೀವಿಗಳು ಐಹಿಕ ದುಃಖಗಳಿಲ್ಲದ ಸ್ಥಳಕ್ಕೆ ಸೇರಿದವರು. ಭಾಗವತವು (10.14.58) ಹೀಗೆ ಹೇಳುತ್ತದೆ.
ಸಮಾಶ್ರಿತಾ ಯೇ ಪದಪಲ್ಲವಪ್ಲವಂ
ಮಹತ್ಪದಂ ಪುಣ್ಯಯಶೋ ಮುರಾರೇಃ |
ಭವಾಮ್ಭುದಿರ್ ವತ್ಸಪದಂ ಪರಂ ಪದಂ
ಪದಂ ಪದಂ ಯದ್ವಿಪದಾಂ ನ ತೇಷಾಮ್ ||
ಭಗವಂತನು ಸಮಸ್ತ ವಿಶ್ವಕ್ಕೆ ಆಶ್ರಯನು ಮತ್ತು ಮುಕುಂದ ಅಥವಾ ಮುಕ್ತಿದಾತ ಎಂದು ಪ್ರಸಿದ್ಧನಾಗಿದ್ದಾನೆ. ಇಂತಹ ಭಗವಂತನ ಕಮಲಚರಣಗಳ ದೋಣಿಯನ್ನು ಸ್ವೀಕರಿಸಿದವನಿಗೆ ಭವಸಾಗರವು ಗೋವಿನ ಕರುವಿನ ಹೆಜ್ಜೆಗುರುತಿನಲ್ಲಿ ನಿಂತಿರುವ ನೀರಿನಂತೆ. ಅವನ ಗುರಿಯು ಹೆಜ್ಜೆಹೆಜ್ಜೆಗೂ ಅಪಾಯವಿರುವ ಸ್ಥಳವಲ್ಲ. ಅವನ ಗುರಿ ಪರಂ ಪದಮ್ ಅಥವಾ ಐಹಿಕ ಸಂಕಟಗಳಿಲ್ಲದ ಸ್ಥಳವಾದ ವೈಕುಂಠ.
ಅಜ್ಞಾನದಿಂದಾಗಿ ಈ ಐಹಿಕ ಜಗತ್ತು ಹೆಜ್ಜೆಹೆಜ್ಜೆಗೂ ಅಪಾಯವಿರುವ ದುಃಖದ ಸ್ಥಳ ಎಂದು ಮನುಷ್ಯನಿಗೆ ತಿಳಿಯುವುದಿಲ್ಲ. ಅಜ್ಞಾನದಿಂದಾಗಿ ಮಂದಮತಿಗಳು ಫಲಾಕಾಂಕ್ಷೆಯಿರುವ ಕರ್ಮಗಳ ಮೂಲಕ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆ. ಫಲವನ್ನು ಕೊಡುವ ಕ್ರಿಯೆಗಳಿಂದ ತಮಗೆ ಸುಖ ಬರುತ್ತದೆ ಎಂದುಕೊಳ್ಳುತ್ತಾರೆ. ವಿಶ್ವದಲ್ಲಿ ಎಲ್ಲಿಯೂ ಯಾವ ರೀತಿಯ ಜಡದೇಹವೂ ದುಃಖವಿಲ್ಲದ ಬದುಕನ್ನು ಕೊಡಲಾರದು ಎಂದು ಅವರಿಗೆ ತಿಳಿಯದು. ಹುಟ್ಟು, ಸಾವು, ಮುಪ್ಪು ಮತ್ತು ರೋಗಗಳು ಬದುಕಿನ ದುಃಖಗಳು.
ಇವು ಐಹಿಕ ಜಗತ್ತಿನಲ್ಲಿ ಎಲ್ಲೆಲ್ಲಿಯೂ ಇರುತ್ತವೆ. ಆದರೆ ಭಗವಂತನ ನಿರಂತರ ಸೇವಕನಾಗಿರುವುದೇ ಸಹಜ ಸ್ವರೂಪ ಎಂದು ತಿಳಿದವನು ಮತ್ತು ಇದರಿಂದ ದೇವೋತ್ತಮ ಪರಮ ಪುರುಷನ ಸ್ಥಾನವನ್ನು ತಿಳಿದವನು, ಭಗವಂತನ ದಿವ್ಯಪ್ರೇಮದ ಸೇವೆಯಲ್ಲಿ ನಿರತನಾಗುತ್ತಾನೆ. ಇದರ ಪರಿಣಾಮವಾಗಿ ಅವನು ವೈಕುಂಠ ಲೋಕಗಳನ್ನು ಪ್ರವೇಶಿಸಲು ಅರ್ಹನಾಗುತ್ತಾನೆ. ಅಲ್ಲಿ ಐಹಿಕ ದುಃಖಗಳ ಬದುಕೂ ಇಲ್ಲ. ಕಾಲ ಮತ್ತು ಸಾವುಗಳ ಪ್ರಭಾವವೂ ಇಲ್ಲ. ತನ್ನ ಸಹಜ ಸ್ವರೂಪವನ್ನು ತಿಳಿದುಕೊಳ್ಳುವುದೆಂದರೆ ಭಗವಂತನ ಭವ್ಯವಾದ ಸ್ಥಾನವನ್ನು ತಿಳಿದುಕೊಳ್ಳುವುದು ಎಂದೇ ಅರ್ಥ.
ಜೀವಿಯ ಸ್ಥಾನವೂ ಭಗವಂತನ ಸ್ಥಾನವೂ ಒಂದೇ ಮಟ್ಟದಲ್ಲಿದೆ ಎಂಬುದಾಗಿ ಯಾರಾದರೂ ತಪ್ಪಾಗಿ ಯೋಜಿಸಿದರೆ ಆತ ಕತ್ತಲೆಯಲ್ಲಿದ್ದಾನೆ. ಆದುದರಿಂದ ಭಗವಂತನ ಭಕ್ತಿ ಸೇವೆಯಲ್ಲಿ ನಿರತನಾಗಲು ಅವನಿಗೆ ಸಾಧ್ಯವಿಲ್ಲ ಎಂದು ಭಾವಿಸಬೇಕು. ಆತನೇ ಪ್ರಭುವಾಗಿ ಬಿಡುತ್ತಾನೆ. ಹೀಗೆ ಹುಟ್ಟುಸಾವುಗಳ ಪುನರಾವರ್ತನೆಗೆ ದಾರಿಮಾಡುತ್ತಾನೆ. ಆದರೆ ಸೇವೆ ಮಾಡುವುದೇ ತನ್ನ ಸ್ಥಾನ ಎಂದು ಅರಿತವನು ತನ್ನನ್ನು ಭಗವಂತನ ಸೇವೆಗೆ ಮುಡಿಪು ಮಾಡಿಕೊಳ್ಳುತ್ತಾನೆ ಮತ್ತು ಕೂಡಲೇ ವೈಕುಂಠಲೋಕಕ್ಕೆ ಹೋಗಲು ಅರ್ಹನಾಗುತ್ತಾನೆ. ಭಗವಂತನಿಗಾಗಿ ಸೇವೆ ಸಲ್ಲಿಸುವುದಕ್ಕೆ ಕರ್ಮಯೋಗ ಅಥವಾ ಬುದ್ಧಿಯೋಗ ಎಂದು ಹೆಸರು. ಇದನ್ನೇ ಸರಳವಾದ ಮಾತುಗಳಲ್ಲಿ ಹೇಳುವುದಾದರೆ ಇದು ಭಕ್ತಿಪೂರ್ವಕವಾದ ಭಗವಂತನ ಸೇವೆ.