ಭಗವದ್ಗೀತೆ: ಮನುಷ್ಯನ ಎಲ್ಲ ಬೇಡಿಕೆಗಳನ್ನ ದೇವರು ಒಮ್ಮೆಗೆ ಈಡೇರಿಸದಿರುವ ಹಿಂದಿನ ಕಾರಣ ತಿಳಿಯಿರಿ
Oct 12, 2023 06:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಮನುಷ್ಯನ ಎಲ್ಲ ಬೇಡಿಕೆಗಳನ್ನ ದೇವರು ಒಮ್ಮೆಗೆ ಈಡೇರಿಸದಿರುವ ಹಿಂದಿನ ಕಾರಣವನ್ನು ಗೀತೆಯಲ್ಲಿ ಓದಿ.
ಕಿಂ ನೋ ರಾಜ್ಯೇನ ಗೋವಿನ್ದ ಕಿಂ ಭೋಗೈರ್ಜೀವಿತೇನ ವಾ|
ತಾಜಾ ಫೋಟೊಗಳು
ಯೇಷಾಮರ್ಥೇ ಕಾನ್ಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ ||32|
ತ ಇಮೇವಸ್ಥಿತಾ ಯುದ್ಧೇ ಪ್ರಾಣಾಂಸ್ತೈಕ್ತ್ವಾ ಧನಾನಿ ಚ|
ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ ||33||
ಮಾತುಲಾಃ ಶ್ವಶುರಾಃ ಪೌತ್ರಾಃ ಶ್ಯಾಲಾಃ ಸಮ್ಬನ್ದಿನಸ್ತಥಾ|
ಏತಾನ್ನ ಹನ್ತುಮಿಚ್ಛಾಮಿ ಘ್ನತೋಪಿ ಮಧುಸೂದನ ||34||
ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ |
ನಿಹತ್ಯ ಧಾರ್ತರಾಷ್ಟ್ರನ್ನಃ ಕಾ ಪ್ರೀತಿಃ ಸ್ವಾಜ್ಜನಾರ್ದನ ||35||
ಹೇ ಗೋವಿಂದ, ಯಾರಿಗೋಸ್ಕರ ನಾವು ರಾಜ್ಯವನ್ನು ಸುಖವನ್ನು ಮತ್ತು ಬದುಕನ್ನು ಸಹ ಬಯಸುತ್ತೇವೆಯೋ ಅವರೇ ನಮ್ಮ ವಿರುದ್ಧವಾಗಿ ಯುದ್ಧಕ್ಕೆ ಸನ್ನದ್ಧರಾಗಿರುವಾಗ ಅವುಗಳಿಂದ ಏನು ಪ್ರಯೋಜನ? ಹೇ ಮಧುಸೂದನ, ಆಚಾರ್ಯರು, ಪಿತರು, ಪುತ್ರರು, ಪಿತಾಮಹರು, ಸೋದರಮಾವಂದಿರು, ಮಾವಂದಿರು, ಮೊಮ್ಮಕ್ಕಳು, ಭಾವಮೈದಂದಿರು ಮತ್ತು ಇತರ ಬಂಧುಗಳು ತಮ್ಮ ರಾಜ್ಯಗಳನ್ನು ಧನವನ್ನು ತ್ಯಜಿಸಲು ಸಿದ್ಧರಾಗಿ ನನ್ನ ಮುಂದೆ ನಿಂತಿದ್ದಾರೆ.
ಅವರು ನನ್ನನ್ನು ಕೊಲ್ಲಬಹುದು, ಆದರೂ ಅವರನ್ನು ಕೊಲ್ಲಲು ನಾನೇಕೆ ಅಪೇಕ್ಷಿಸಬೇಕು? ಹೇ ಜನಾರ್ಧನ, ಈ ಭೂಮಿಯ ಮಾತಿರಲಿ, ಮೂರುಲೋಕಗಳನ್ನು ನನಗೆ ಕೊಡುವುದಾದರೂ ನಾನು ಇವರೊಡನೆ ಯುದ್ಧ ಮಾಡಲು ಸಿದ್ಧನಾಗಿಲ್ಲ. ಧೃತರಾಷ್ಟನ ಮಕ್ಕಳನ್ನು ಕೊಂದು ನಮಗೆ ಯಾವ ಸಂತೋಷ ಬಂದೀತು ಎಂದು ಅರ್ಜುನ ಅಂದುಕೊಳ್ಳುತ್ತಾನೆ.
ಶ್ರೀಕೃಷ್ಣನನ್ನು ಗೋವಿಂದ ಎಂದು ಕರೆದಿದ್ದು ಯಾಕೆ?
ಕೃಷ್ಣನು ಗೋವುಗಳ ಮತ್ತು ಇಂದ್ರಿಯಗಳ ಎಲ್ಲ ಸಂತೋಷಗಳಿಗೆ ಕಾರಣನಾದವನು. ಇದರಿಂದಲೇ ಅರ್ಜುನನು ಶ್ರೀಕೃಷ್ಣನನ್ನು ಗೋವಿಂದ ಎಂದು ಕರೆದಿದ್ದು. ಈ ಅರ್ಥವತ್ತಾದ ಪದವನ್ನು ಬಳಸಿ, ತನ್ನ ಇಂದ್ರಿಯಗಳಿಗೆ ಯಾವುದೇ ತೃಪ್ತಿಯನ್ನು ಕೊಡಬಲ್ಲದು ಎನ್ನುವುದನ್ನು ಕೃಷ್ಣನು ಅರ್ಥಮಾಡಿಕೊಳ್ಳಬೇಕು ಎಂದು ಅರ್ಜನನು ಸೂಚಿಸುತ್ತಾನೆ. ಆದರೆ ಗೋವಿಂದನು ಇರುವುದು ನಮ್ಮ ಇಂದ್ರಿಯಗಳನ್ನು ತೃಪ್ತಿಗೊಳಿಸುವುದಕ್ಕಲ್ಲ. ನಾವು ಗೋವಿಂದನ ಇಂದ್ರಿಯಗಳನ್ನು ತೃಪ್ತಿಗೊಳಿಸಲು ಪ್ರಯತ್ನಿಸಿದರೆ ನಮ್ಮ ಪ್ರಯತ್ನವಿಲ್ಲದೆಯೇ ನಮ್ಮ ಇಂದ್ರಿಯಗಳು ತೃಪ್ತಿ ಹೊಂದುತ್ತವೆ. ಪ್ರಾಪಂಚಿಕವಾಗಿ ಪ್ರತಿಯೊಬ್ಬನೂ ತನ್ನ ಇಂದ್ರಿಯಗಳನ್ನು ತೃಪ್ತಿಪಡಿಸಲು ಬಯಸುತ್ತಾನೆ ಮತ್ತು ತನ್ನ ಅಪ್ಪಣೆಯಂತೆ ದೇವರು ಈ ತೃಪ್ತಿಗಾಗಿ ಎಲ್ಲವನ್ನೂ ಒದಗಿಸಬೇಕು ಎಂದು ಬಯಸುತ್ತಾನೆ.
ಭಗವಂತನ ಕೃಪೆಯಿಂದ ಜೀವಿಯ ಎಲ್ಲ ಬಯಕೆಗಳೂ ಈಡೇರುತ್ತೆ
ದೇವರು ಜೀವಿಗಳ ಯೋಗ್ಯತೆಗಳಿಗೆ ಅನುಗುಣವಾಗಿ ಅವರ ಇಂದ್ರಿಯಗಳಿಗೆ ತೃಪ್ತಿ ಕೊಡುತ್ತಾನೆ. ಆದರೆ ಅವರು ಹಂಬಲಿಸುವಷ್ಟು ತೃಪ್ತಿಯನ್ನು ಕೊಡುವುದಿಲ್ಲ. ಆದರೆ ಯಾರೇ ಆಗಲಿ ಇದರ ವಿರುದ್ಧವಾದ ದಾರಿಯನ್ನು ಹಿಡಿದರೆ ಎಂದರೆ ತನ್ನ ಇಂದ್ರಿಯಗಳನ್ನು ತೃಪ್ತಿಯನ್ನು ಬಯಸದೆ ಗೋವಿಂದನ ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸಿದರೆ, ಆಗ ಗೋವಿಂದನ ಕೃಪೆಯಿಂದ ಜೀವಿಯ ಎಲ್ಲ ಬಯಕೆಗಳೂ ಈಡೇರುತ್ತವೆ.
ತನ್ನ ಕುಲದ ಮತ್ತು ಕುಟುಂಬದ ಸದಸ್ಯರ ವಿಷಯದಲ್ಲಿ ಅರ್ಜುನನಿಗೆ ಇರುವ ಗಾಢವಾದ ಪ್ರೀತಿಯು ಇಲ್ಲಿ ವ್ಯಕ್ತವಾಗುತ್ತದೆ. ಅವನು ಯುದ್ಧಮಾಡಲು ಸಿದ್ಧನಿಲ್ಲ. ಯಾರಿಗೇ ಆದರೂ ತನ್ನ ಸಂಪತ್ತನ್ನು ಬಂಧುಮಿತ್ರರಿಗೆ ತೋರಿಸಬೇಕೆಂಬ ಅಪೇಕ್ಷೆ ಇರುತ್ತದೆ. ತನ್ನ ಬಂಧುಮಿತ್ರೆಲ್ಲ ರಣರಂಗದಲ್ಲಿ ಸಾಯುತ್ತಾರೆ. ಆದ್ದರಿಂದ ವಿಜಯವನ್ನುು ಗಳಿಸಿದಮೇಲೆ ತನ್ನ ಸಂಪತ್ತನ್ನು ಅವರೊಂದಿಗೆ ಹಂಚಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂದು ಅರ್ಜನನ ಆತಂಕ. ಇದು ಐಹಿಕ ಬದುಕಿನ ಸಹಜವಾದ ಲೆಕ್ಕಾಚಾರ.
ಅಲೌಕಿಕ ಬದುಕಾದರೋ ಸಂಪೂರ್ಣವಾಗಿ ಭಿನ್ನವಾದದ್ದು. ಭಕ್ತನಾದವನು ಭಗವಂತನ ಅಪೇಕ್ಷೆಗಳನ್ನು ಪೂರೈಸಲು ಬಯಸುವುದರಿಂದ, ಭಗವಂತನು ಅನುಮತಿಕೊಟ್ಟರೆ ಅವನು ಭಗವಂತನ ಸೇವೆಗಾಗಿ ಎಲ್ಲ ಬಗೆಯ ಸಂಪತ್ತನ್ನೂ ಸ್ವೀಕರಿಸಬಹುದು. ಆದರೆ ಭಗವಂತನು ಅನುಮತಿ ನೀಡದಿದ್ದರೆ ಒಂದು ಕಾಸನ್ನೂ ಸ್ವೀಕರಿಸಬಾರದು. ಅರ್ಜುನನಿಗೆ ತನ್ನ ಬಂಧುಗಳನ್ನು ಕೊಲ್ಲಲು ಇಷ್ಟವಿರಲಿಲ್ಲ. ಅವರನ್ನು ಕೊಲ್ಲುವುದೇ ಅಗತ್ಯವಾದರೆ ಕೃಷ್ಣನೇ ಕೊಲ್ಲಲಿ ಎಂದು ಬಯಸಿದ. ಅವರು ರಣಭೂಮಿಗೆ ಬರುವ ಮೊದಲೇ ಕೃಷ್ಣನು ಅವರನ್ನು ಕೊಂದಿದ್ದಾನೆ. ತಾನೇನಿದ್ದರೂ ಕೃಷ್ಣನ ಸಾಧನವಾಗಬೇಕು ಅಷ್ಟೆ ಎಂಬುದು ಈ ಘಟ್ಟದಲ್ಲಿ ಅವನಿಗೆ ತಿಳಿದಿರಲಿಲ್ಲ.
ಭಗವಂತನ ಸಹಜ ಭಕ್ತನಾದ ಅರ್ಜುನನಿಗೆ ದುಷ್ಕೃತ್ಯಮಾಡಿದ ತನ್ನ ದಾಯಾದಿಗಳು ಮತ್ತು ಸೋದರರಿಗೆ ಪ್ರತೀಕಾರ ಮಾಡಲು ಇಷ್ಟವಿರಲಿಲ್ಲ. ಆದರೆ ಅವರೆಲ್ಲರೂ ಹತರಾಗಬೇಕು ಎನ್ನುವುದು ಭಗವಂತನ ಯೋಜನೆ. ಭಗವಂತನ ಭಕ್ತನು ಮಾಡುವ ಯಾವುದೇ ದುಷ್ಕರ್ಮಿಯ ವಿರುದ್ಧ ಪ್ರತೀಕಾರ ಮಾಡುವುದಿಲ್ಲ, ಆದರೆ ದುಷ್ಕರ್ಮಿಯು ಭಕ್ತನಿಗೆ ಮಾಡುವ ಯಾವುದೇ ಕೆಡುಕನ್ನು ಭಗವಂತನು ಸಹಿಸುವುದಿಲ್ಲ. ತನ್ನ ವಿರುದ್ಧವಾಗಿ ಅಪರಾಧ ಮಾಡಿದರೆ ಭಗವಂತನು ಅದನ್ನು ಕ್ಷಮಿಸಬಲ್ಲ. ಆದರೆ ತನ್ನ ಭಕ್ತರಿಗೆ ಕೆಡುಕನ್ನು ಮಾಡಿದವರನ್ನು ಕ್ಷಮಿಸುವುದಿಲ್ಲ. ಆದ್ದರಿಂದ ಅರ್ಜುನನು ದುಷ್ಕರ್ಮಿಗಳನ್ನು ಕ್ಷಮಿಸಲು ಬಯಸಿದರೂ ಭಗವಂತನು ಅವರನ್ನು ಕೊಲ್ಲಲು ಸಂಕಲ್ಪಿಸಿದ್ದ.