ಭಗವದ್ಗೀತೆ: ಸದಾಕಾಲ ಭಗವಂತನ ಧ್ಯಾನ ಮಾಡುವ ವ್ಯಕ್ತಿ ಅಜ್ಞಾನವನ್ನ ಗೆಲ್ಲುಲು ಸಾಧ್ಯ; ಗೀತೆಯಲ್ಲಿನ ಅರ್ಥ ತಿಳಿಯಿರಿ
Oct 10, 2023 06:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಸದಾಕಾಲ ಭಗವಂತನ ಧ್ಯಾನ ಮಾಡುವ ವ್ಯಕ್ತಿ ಅಜ್ಞಾನವನ್ನ ಗೆಲ್ಲುಲು ಸಾಧ್ಯ. ಅದು ಹೇಗೆ ಎಂಬುದನ್ನು ಗೀತೆಯಲ್ಲಿ ತಿಳಿಯಿರಿ.
ಕುರುಕ್ಷೇತ್ರ ರಣರಂಗದಲ್ಲಿ ಬಂದು ಸೇರಿರುವಂತಹ ಮಹಾನ್ ಸೇನಾ ಸಮೂಹವು ಯುದ್ಧ ಯಾವಾಗ ಪ್ರಾರಂಭವಾಗುತ್ತದೆ ಎನ್ನುವುದನ್ನು ನಿರೀಕ್ಷಿಸುತ್ತಿತ್ತು. ಭೀಷ್ಮಾಚಾರ್ಯರು ಮಾಡಿದಂತಹ ಶಂಖನಾದವು ಯುದ್ಧದ ಪ್ರಾರಂಭವನ್ನು ಸೂಚಿಸಿತು. ಹೃಷೀಕೇಶನಾದಂತಹ ಭಗವಾನ್ ಶ್ರೀಕೃಷ್ಣನು ಪಾಂಡವರ ಸಹಿತವಾಗಿ ಶಂಖನಾದವನ್ನು ಮಾಡಿದನು. ಪಾಂಡವರ ಸೇನೆಯಲ್ಲಿ ಶಿಸ್ತುಬದ್ಧವಾಗಿ ಶಂಖನಾದವನ್ನು ಮಾಡಲಾಯಿತು. ಶಿಸ್ತುಬದ್ಧವಾದಂತಹ ಸಣ್ಣ ಸೇನೆಯು ಅಶಿಸ್ತಿನಿಂದ ಕೂಡಿದ ಬಹುದೊಡ್ಡ ಸೇನೆಯನ್ನು ಕೂಡ ನಡುಗಿಸಬಲ್ಲದು. ಭಗವಾನ್ ಶ್ರೀಕೃಷ್ಣನ ಸಾರಥ್ಯದಲ್ಲಿ ಪಾಂಡವರು ಯುದ್ಧಕ್ಕೆ ಸನ್ನಧರಾಗಿದ್ದರು.
ತಾಜಾ ಫೋಟೊಗಳು
ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ |
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ |
ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ ||20||
ಆಗ ಕಪಿಧ್ವಜನಾದ ಅರ್ಜುನನು ಯುದ್ಧಸನ್ನದ್ಧರಾದ ಕೌರವರನ್ನು ನೋಡಿದನು. ತನ್ನ ಧನಸ್ಸನ್ನು ಎತ್ತಿ ಹಿಡಿದು ಬಾಣಗಳನ್ನು ಬಿಡಲು ಸನ್ನದ್ಧನಾಗಿ ಶ್ರೀಕೃಷ್ಣನಿಗೆ ಈ ಮಾತುಗಳನ್ನು ಹೇಳಿದನು.
ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇsಚ್ಯುತ|
ಯಾವದೇತಾನ್ ನಿರೀಕ್ಷೇಹಂ ಯೋದ್ಧುಕಾಮಾನವಸ್ಥಿತಾನ್ ।
ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ ||22||
ಹೇ ಅಚ್ಯುತ, ಯುದ್ಧಮಾಡಲು ಸನ್ನದ್ಧರಾಗಿರುವ ಇವರನ್ನು ಮತ್ತು ಈ ಘೋರ ಶಸ್ತ್ರ ಸ್ಪರ್ಧೆಯಲ್ಲಿ ನಾನು ಯಾರೊಡನೆ ಹೋರಾಡಬೇಕೋ ಅವರನ್ನು ನೋಡಲು ಸಾಧ್ಯವಾಗುವಂತೆ ಈ ಎರಡು ಸೈನ್ಯಗಳ ಮಧ್ಯೆ ನನ್ನ ರಥವನ್ನು ನಿಲ್ಲಿಸು. ಅರ್ಜುನನ ಧ್ವಜದಲ್ಲಿದ್ದ ಆಂಜನೇಯನ ಸಂಕೇತವು ವಿಜಯದ ಮತ್ತೊಂದು ಸೂಚನೆಯಾಗಿತ್ತು.
ರಾಮ ರಾವಣರ ಯುದ್ಧದಲ್ಲಿ ಆಂಜನೇಯನು ಶ್ರೀರಾಮನ ಪಕ್ಷವನ್ನು ವಹಿಸಿದ್ದನು. ಈ ಕುರುಕ್ಷೇತ್ರ ಯುದ್ಧದಲ್ಲಿ ಶ್ರೀರಾಮ ಮತ್ತು ಆಂಜನೇಯ ಇಬ್ಬರೂ ಅರ್ಜುನನ ರಥದಲ್ಲಿಇದ್ದಾರೆ. ಅರ್ಜುನನಿಗೆ ಶತ್ರುಭಯಕ್ಕೆ ಯಾವುದೇ ಕಾರಣವಿರಲಿಲ್ಲ. ಶ್ರೀಕೃಷ್ಣನು ದೇವೋತ್ತಮ ಪರಮ ಪುರುಷನೇ ಆಗಿದ್ದರೂ ಸಹ, ಇಲ್ಲಿಅವನು ಅರ್ಜುನನ ಗೆಳೆಯನಾಗಿದ್ದನು. ಶ್ರೀಕೃಷ್ಣನು ಮೂರು ಲೋಕದ ಸ್ವಾಮಿಯಾಗಿದ್ದರೂ ಸಹ ತನ್ನ ಗೆಳೆಯನಿಗಾಗಿ ಆತನ ರಥದ ಸಾರಥ್ಯವನ್ನು ನಡೆಸುತ್ತಿದ್ದ. ಆದ್ದರಿಂದಲೇ ಆತನನ್ನು ಅಚ್ಯುತ ಎಂದು ಕರೆಯಲಾಗಿದೆ.
ಭಗವಂತನು ಎಂದಿಗೂ ಚ್ಯುತಿಯನ್ನು ಹೊಂದುವುದಿಲ್ಲ. ಅರ್ಜುನನ ಸಾರಥಿಯಾಗಿದ್ದರೂ ಭಗವಂತನ ಸ್ಥಾನಕ್ಕೆ ಕುಂದುಬರುವುದಿಲ್ಲ. ಎಲ್ಲ ಸನ್ನಿವೇಶಗಳಲ್ಲೂ ಆತನು ದೇವೋತ್ತಮ ಪರಮ ಪುರುಷನಾಗಿಯೇ ಇರುತ್ತಾನೆ. ಭಗವಂತ ಮತ್ತು ಭಕ್ತರ ನಡುವಿನ ಸಂಬಂಧವು ಅತಿ ಮಧುರವಾದದ್ದು. ಭಕ್ತನು ಭಗವಂತನ ಸೇವೆಗೆ ಸದಾ ಸಿದ್ಧನಾಗಿರುತ್ತಾನೆ. ಅದೇ ರೀತಿಯಲ್ಲಿ ಭಗವಂತನು ಸಹ ತನ್ನ ಭಕ್ತನಿಗೆ ಒಂದಿಷ್ಟು ಸೇವೆ ಮಾಡಲು ಅವಕಾಶವನ್ನು ಹುಡುಕುತ್ತಿರುತ್ತಾನೆ.
ಅರ್ಜುನನ ಮಾತುಗಳನ್ನು ಕೇಳಿದಾಗ ಆತನು ಯುದ್ಧಕ್ಕೆ ಸಂಪೂರ್ಣವಾಗಿ ಸಿದ್ಧನಾಗಿದ್ದಾನೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಎದುರು ಪಕ್ಷದಲ್ಲಿರುವಂತಹ ಎಲ್ಲಾ ಶತ್ರುಗಳನ್ನು ನಾಶ ಮಾಡುವಂತಹ ಹುಮ್ಮಸ್ಸು ಆತನಲ್ಲಿ ಕಂಡುಬರುತ್ತದೆ. ಆದರೆ ಭಗವಂತನು ಅರ್ಜುನನಲ್ಲಿ ಮೋಹವನ್ನು ಉಂಟು ಮಾಡಿ ಆತನ ಮೂಲಕ ಲೋಕಕ್ಕೆ ಭಗವದ್ಗೀತೆಯನ್ನು ನೀಡುತ್ತಿದ್ದಾನೆ.
ಅರ್ಜುನನನ್ನು ಗುಡಾಕೇಶ ಎಂದು ಯಾಕೆ ಕರೆಯುತ್ತಾರೆ?
ಅರ್ಜುನನು ಶ್ರೀಕೃಷ್ಣರಲ್ಲಿ ಕೇಳುವಂತಹ ಪ್ರಶ್ನೆಗಳು ಆತನ ಸ್ವಂತ ಲಾಭಕ್ಕಾಗಿ ಅಲ್ಲ. ಅರ್ಜುನನು ಒಬ್ಬ ಸಾಮಾನ್ಯ ಮನುಷ್ಯನ ಪಾತ್ರವನ್ನು ವಹಿಸಿ ನಮ್ಮ ಮನಸ್ಸಿನಲ್ಲಿ ಇರುವಂತಹ ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ಶ್ರೀಕೃಷ್ಣನು ನೀಡುವಂತೆ ಮಾಡುತ್ತಿದ್ದಾನೆ. ಶ್ರೀಕೃಷ್ಣನ ಭಕ್ತನಾಗಿಯೂ ಸ್ನೇಹಿತನಾಗಿಯೂ ಇರುವಂತಹ ಅರ್ಜುನನು ಅಜ್ಞಾನವನ್ನೂ ನಿದ್ರೆಯನ್ನೂ ಗೆದ್ದಿದ್ದಾನೆ. ಆದ್ದರಿಂದ ಅರ್ಜುನನನ್ನು ಗುಡಾಕೇಶ ಎಂದು ಕರೆಯಲಾಗಿದೆ.
ಭಕ್ತನಾದವನು ಭಗವಂತನನ್ನು ಒಂದು ಕ್ಷಣವೂ ಮರೆಯಲು ಸಾಧ್ಯವಿಲ್ಲ. ಜಾಗ್ರತ ಅವಸ್ಥೆಯಲ್ಲಿ ಮತ್ ತುನಿದ್ರಾವಸ್ಥೆಯಲ್ಲಿ ಭಕ್ತನು ಭಗವಂತನ ನಾಮ, ರೂಪ, ಗುಣ ಮತ್ತು ಲೀಲೆಗಳನ್ನು ಚಿಂತಿಸುತ್ತಿರುತ್ತಾನೆ. ಈ ರೀತಿ ಸದಾಕಾಲ ಭಗವಂತನನ್ನೇ ಚಿಂತಿಸುತ್ತಿರುವಂತಹ ವ್ಯಕ್ತಿಯು ಅಜ್ಞಾನವನ್ನೂ ನಿದ್ರೆಯನ್ನೂ ಗೆಲ್ಲುಲು ಸಾಧ್ಯ. ಅರ್ಜುನನ ಮಾತುಗಳನ್ನು ಕೇಳಿದಂತಹ ಶ್ರೀಕೃಷ್ಣನು ಎರಡು ಸೈನ್ಯಗಳ ನಡುವೆ ರಥವನ್ನು ನಿಲ್ಲಿಸಿದ. ಪ್ರತಿಯೊಬ್ಬ ಜೀವಿಯ ಹೃದಯದಲ್ಲಿ ಪರಮಾತ್ಮನ ರೂಪದಲ್ಲಿ ವಾಸವಾಗಿರುವ ಭಗವಾನ್ ಶ್ರೀಕೃಷ್ಣನು ಅರ್ಜುನನ ಮನಸ್ಸಿನ ವ್ಯಾಪಾರಗಳನ್ನು ಅರ್ಥಮಾಡಿಕೊಳ್ಳಬಲ್ಲವನಾಗಿದ್ದನು.
ಅರ್ಜುನನು ಎರಡು ಸೈನ್ಯಗಳಲ್ಲಿಯೂ ಇದ್ದ ತನ್ನ ಚಿಕ್ಕಪ್ಪ, ದೊಡ್ಡಪ್ಪಂದಿರನ್ನು, ತಾತಂದಿರನ್ನು, ಗುರುಗಳನ್ನು, ಸೋದರ ಮಾವಂದಿರನ್ನು, ಸೋದರರನ್ನು, ಮಕ್ಕಳನ್ನು, ಮೊಮ್ಮಕ್ಕಳನ್ನು, ಸ್ನೇಹಿತರನ್ನು, ಮಾವಂದಿರನ್ನು, ಹಿತೈಷಿಗಳನ್ನು ನೋಡಿದನು. ಭೂರಿಶ್ರವರಂತಹ ತನ್ನ ತಂದೆಯ ಓರಗೆಯವರು, ಭೀಷ್ಮ ಮತ್ತು ಸೋಮದತ್ತರಂತಹ ಪಿತಾಮಹರು, ದ್ರೋಣಾಚಾರ್ಯ ಮತ್ತು ಕೃಪಾಚಾರ್ಯರಂತಹ ಗುರುಗಳು, ಶಲ್ಯ ಮತ್ತು ಶಕುನಿಗಳಂತಹ ಸೋದರ ಮಾವಂದಿರು, ದುರ್ಯೋಧನನಂತಹ ಸಹೋದರರು, ಲಕ್ಷ್ಮಣರಂತಹ ಮಕ್ಕಳು, ಅಶ್ವತ್ಥಾಮರಂತಹ ಸ್ನೇಹಿತರು, ಕೃತವರ್ಮರಂತಹ ಹಿತೈಷಿಗಳು ಮೊದಲಾಗಿ ಅನೇಕರನ್ನು ನೋಡಿದನು.
ಆಧಾರ: ಭಗವದ್ಗೀತಾ ಯಥಾರೂಪ, ಶ್ರೀ ಶ್ರೀಮದ್ ಎ.ಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತುಆಚಾರ್ಯರ
ಭಗವದ್ಗೀತಾ ಯಥಾರೂಪದ ನಿರೂಪಕರು - ಭಕ್ತಿ ಶಾಸ್ತ್ರೀ ಸುಬುದ್ಧಿ ದಾಮೋದರ ದಾಸ್, ಇಸ್ಕಾನ್ ಮಂಗಳೂರು (ಇವರು ಡಾ.ಸುಜೇಶ್ ಕುಮಾರ್. ಮೂಡಬಿದ್ರಿಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್‌ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ).