ಭಗವದ್ಗೀತೆ: ಅಧಿಕಾರವಿಲ್ಲದೆ ಯಾರನ್ನೂ ಶಿಕ್ಷಿಸುವಂತಿಲ್ಲ; ಗೀತೆಯಲ್ಲಿನ ಸಾರಾಂಶವನ್ನು ತಿಳಿಯಿರಿ
Oct 25, 2023 05:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಅಧಿಕಾರವಿಲ್ಲದೆ ಯಾರನ್ನೂ ಶಿಕ್ಷಿಸುವಂತಿಲ್ಲ ಎಂಬ ಗೀತೆಯಲ್ಲಿ ಅರ್ಥವನ್ನು ತಿಳಿಯೋಣ.
ಅನ್ತವನ್ತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ||
ಅನಾಶಿನೋಪ್ರಮೇಯಸ್ಯ ತಸ್ಮಾದ್ ಯುಧ್ಯಸ್ವ ಭಾರತ||18||
ಅವಿನಾಶಿಯೂ ಅಳತೆಗೆ ಸಿಕ್ಕದಿರುವುದೂ ನಿತ್ಯವೂ ಆದ ಆತ್ಮನ ಐಹಿಕ ದೇಹವು ನಾಶವಾಗಲೇಬೇಕು. ಆದುದರಿಂದ ಭರತವಂಶಜನೇ (ಅರ್ಜುನನೇ), ಯುದ್ಧ ಮಾಡು.
ತಾಜಾ ಫೋಟೊಗಳು
ಐಹಿಕ ದೇಹದ ನಾಶವು ಸ್ವಭಾವಸಿದ್ಧವಾದದ್ದು. ಅದ ಕೂಡಲೇ ನಾಶವಾಗಬಹುದು. ಒಂದು ನೂರು ವರ್ಷಗಳ ಅನಂತರ ನಶಿಸಬಹುದು. ಯಾವಾಗ ನಾಶವಾಗುತ್ತದೆ ಎನ್ನುವುದಷ್ಟೇ ಪ್ರಶ್ನೆ. ಅದನ್ನು ಅನಿಶ್ಚಿತ ಕಾಲದವರೆಗೆ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಆತ್ಮನು ಎಷ್ಟು ಸೂಕ್ಷ್ಮ ಎಂದರೆ ಶತ್ರುವು ಅದನ್ನು ಕೊಲ್ಲುವುದಿರಲಿ, ಅವನಿಗೆ ಅದು ಕಾಣುವುದೂ ಇಲ್ಲ.
ಹಿಂದಿನ ಶ್ಲೋಕದಲ್ಲಿ ಹೇಳಿದಂತೆ, ಅದು ಎಷ್ಟು ಸೂಕ್ಷ್ಮ ಎಂದರೆ ಅದರ ಗಾತ್ರವನ್ನು ಅಳೆಯುವುದು ಹೇಗೆ ಎಂದೇ ಯಾರಿಗೂ ಹೊಳೆಯುವುದಿಲ್ಲ. ಜೀವಿಯು ಇರುವ ಸ್ವರೂಪದ ಕಾರಣದಿಂದ ಅದನ್ನು ಕೊಲ್ಲುವುದು ಸಾಧ್ಯವೇ ಇಲ್ಲ. ಐಹಿಕ ದೇಹವನ್ನು ಬಹುಕಾಲ ಉಳಿಸುವಂತಿಲ್ಲ. ಶಾಶ್ವತವಾಗಿ ರಕ್ಷಿಸವುದೂ ಸಾಧ್ಯವಿಲ್ಲ. ಆದುದರಿಂದ ಎರಡು ದೃಷ್ಟಿಗಳಿಂದಲೂ ಶೋಕಕ್ಕೆ ಕಾರಣವೇ ಇಲ್ಲ. ಸಂಪೂರ್ಣ ಆತ್ಮದ ಸೂಕ್ಷ್ಮಾಂಶವು ಅದರ ಕರ್ಮಕ್ಕೆ ಅನುಗುಣವಾಗಿ ಈ ಐಹಿಕ ಶರೀರವನ್ನು ಪಡೆಯುತ್ತದೆ. ಆದುದರಿಂದ ಧಾರ್ಮಿಕ ಸೂತ್ರಗಳ ಅನುಷ್ಠಾನದ ಪ್ರಯೋಜನವನ್ನು ಪಡೆದುಕೊಳ್ಳಬೇಕು.
ವೇದಾಂತ ಸೂತ್ರಗಳಲ್ಲಿ ಜೀವಿಗೆ ಬೆಳಕನ್ನು ಗುಣವನ್ನಾಗಿ ಆರೋಪಿಸಿದೆ. ಏಕೆಂದರೆ ಅದು ಪರಮ ಜ್ಯೋತಿಯ ವಿಭಿನ್ನಾಂಶ. ಸೂರ್ಯಪ್ರಕಾಶವು ಇಡೀ ವಿಶ್ವವನ್ನು ಪಾಲಿಸುವಂತೆ ಆತ್ಮದ ಪ್ರಕಾಶವು ಈ ಐಹಿಕ ಶರೀರವನ್ನು ಪಾಲಿಸುತ್ತದೆ. ಆತ್ಮವು ಐಹಿಕ ದೇಹವನ್ನು ತ್ಯಜಿಸುತ್ತಲೇ ದೇಹವು ಕೊಳೆಯಲು ಆರಂಭಿಸುತ್ತದೆ. ಆದುದರಿಂದ ಈ ದೇಹವನ್ನು ಪಾಲಿಸುವುದು ಆತ್ಮವೇ. ದೇಹವಷ್ಟೇ ಅಮುಖ್ಯವಾದದ್ದು. ಧಾರ್ಮಿಕ ಗುರಿಯನ್ನು ಐಹಿಕ ಮತ್ತು ಶಾರೀರಕ ಕಾರಣಗಳಿಗಾಗಿ ಬಲಿಕೊಡದೆ ಯುದ್ಧ ಮಾಡಬೇಕೆನ್ನುವುದು ಅರ್ಜುನನಿಗೆ ದೊರೆತ ಉಪದೇಶ.
ಯ ಏನಂ ವೇತ್ತಿ ಹನ್ತಾರಂ ಯಶ್ಚೈನಂ ಮನ್ಯತೇ ಹತಮ್|
ಉಭೌ ತೌ ನ ವಿಜಾನೀತೋ ನಾಯಂ ಹನ್ತಿ ನ ಹನ್ಯತೇ ||19||
ಜೀವಿಯು ಕೊಲ್ಲುತ್ತಾನೆ ಎಂದು ಭಾವಿಸುವವನಿಗೂ ಅದು ಕೊಲ್ಲಲ್ಪಟ್ಟಿತು ಎಂದು ಭಾವಿಸುವವನಿಗೂ ತಿಳಿವಳಿಕೆ ಇಲ್ಲ. ಏಕೆಂದರೆ ಆತ್ಮನು ಕೊಲ್ಲುವುದೂ ಇಲ್ಲ ಕೊಲ್ಲಲ್ಪಡುವುದೂ ಇಲ್ಲ.
ದೇಹಸ್ಥ ಜೀವಿಗೆ ಮಾರಕ ಆಯುಧಗಳಿಂದ ಗಾಯವಾದಾಗ ದೇಹದೊಳಗಿನ ಜೀವಿಯು ಸಾಯುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು. ಮುಂದೆ ಹೇಳುವ ಶ್ಲೋಕಗಳಿಂದ ಸ್ಪಷ್ಟವಾಗುವಂತೆ ಆತ್ಮವು ಎಷ್ಟು ಸೂಕ್ಷ್ಮವೆಂದರೆ ಯಾವ ಐಹಿಕ ಆಯುಧವೂ ಅದನ್ನು ಕೊಲ್ಲಲಾರದು. ಜೀವಿಯನ್ನು ಕೊಲ್ಲುವುದು ಸಾಧ್ಯತೇ ಇಲ್ಲ. ಅದರ ಆಧ್ಯಾತ್ಮಿಕ ಸ್ವರೂಪವೇ ಇದಕ್ಕೆ ಕಾರಣ. ಸಾಯುವುದು, ಅಥವಾ ಸತ್ತಿತೆಂದು ಜನ ಭಾವಿಸುವುದು ದೇಹ ಮಾತ್ರ. ಹೀಗೆಂದ ಮಾತ್ರಕ್ಕೆ ದೇಹವನ್ನು ಕೊಲ್ಲುವುದಕ್ಕೆ ಬೆಂಬಲವುಂಟು ಎಂದು ಅರ್ಥವಲ್ಲ.
ವೇದದ ಆದೇಶವೆಂದರೆ, ಮಾ ಹಿಂಸ್ಯಾತ್ ಸರ್ವಾ ಭೂತಾನಿ-ಯಾರಿಗೂ ಹಿಂಸೆ ಮಾಡಬೇಡ. ಜೀವಿಯುವು ಸಾಯುವುದಿಲ್ಲ ಎನ್ನುವ ಅರಿವು ಪ್ರಾಣಿವಧೆಗೆ ಪ್ರೋತ್ಸಾಹ ನೀಡುವುದಿಲ್ಲ. ಅಧಿಕಾರವಿಲ್ಲದೆ ಯಾರನ್ನೇ ಕೊಲ್ಲುವುದು ಹೇಸಿಗೆಯ ಕೃತ್ಯ. ಇದಕ್ಕೆ ರಾಜ್ಯದ ಕಾನೂನಿನಿಂದಲೂ ಭಗವಂತನ ನಿಯಮದಿಂದಲೂ ಶಿಕ್ಷೆಯಾಗತಕ್ಕದ್ದು. ಆದರೆ ಅರ್ಜುನನಿಗೆ ವಧೆಯಲ್ಲಿ ತೊಡಗು ಎನ್ನುತ್ತಿರುವುದು ಧಾರ್ಮಿಕ ಕರ್ತವ್ಯವೆಂಬ ಮಾತ್ರದಿಂದಲೇ ಹೊರತು ಮನಃಸ್ವೇಚ್ಛಯಿಂದಲ್ಲ.