Bhagavad Gita: ಅಧ್ಯಾತ್ಮಿಕ ಅಸ್ತಿತ್ವ ಅರ್ಥಮಾಡಿಕೊಳ್ಳಲು ಭಗವಂತನೊಂದಿಗೆ ಸಂಬಂಧ ಹೊಂದಿರಬೇಕು; ಗೀತೆಯ ಅರ್ಥ ತಿಳಿಯಿರಿ
Jul 21, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita: ಅಧ್ಯಾತ್ಮಿಕ ಅಸ್ತಿತ್ವವನ್ನು ಅರ್ಥಮಾಡಿಕೊಳ್ಳಲು ಭಗವಂತನೊಂದಿಗೆ ಸಂಬಂಧ ಹೊಂದಿರಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 55 ನೇ ಶ್ಲೋಕದಲ್ಲಿ ಓದಿ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 55
ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸನ್ಗವರ್ಜಿತಃ |
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಣ್ಡವ ||55||
ಅನುವಾದ: ಪ್ರಿಯ ಅರ್ಜುನ, ಕಾಮ್ಯಕರ್ಮದ ಮತ್ತು ಊಹಾತ್ಮಕ ಚಿಂತನೆಗಳ ಕಶ್ಮಲದಿಂದ ಮುಕ್ತರಾಗಿ ಯಾರು ನನ್ನ ಪರಿಶುದ್ಧ ಭಕ್ತಿಸೇವೆಯಲ್ಲಿ ತೊಡಗಿರುವನೋ, ಯಾರು ನನಗಾಗಿ ಕರ್ಮಗಳನ್ನು ಮಾಡುವನೋ, ನನನ್ನು ತನ್ನ ಬದುಕಿನ ಪರಮ ಗುರಿಯನ್ನಾಗಿ ಮಾಡಿಕೊಳ್ಳುವನೋ ಮತ್ತು ಎಲ್ಲ ಜೀವಿಗಳ ಮಿತ್ರನೋ ಅವನು ನಿಶ್ಚಯವಾಗಿಯೂ ನನ್ನಲ್ಲಿಗೆ ಬರುವನು.
ತಾಜಾ ಫೋಟೊಗಳು
ಭಾವಾರ್ಥ: ದೇವೋತ್ತಮ ಪುರುಷರಲ್ಲಿ ಪರಮೋಚ್ಚ ಭಗವಂತನು ಅಧ್ಯಾತ್ಮಿಕ ಗಗನದ ಕೃಷ್ಣಲೋಕದಲ್ಲಿರುತ್ತಾನೆ. ಯಾರಾದರೂ ಅವನ ಬಳಿ ಸಾರಲು ಬಯಸಿದರೆ ಮತ್ತು ಪರಮ ಪುರುಷನಾದ ಕೃಷ್ಣನೊಂದಿಗೆ ಆತ್ಮೀಯ ಸಂಬಂಧವನ್ನು ಸ್ಥಾಪಿಸಲು ಬಯಸಿದರೆ, ಭಗವಂತನೇ ಇಲ್ಲಿ ಹೇಳಿರುವಂತೆ ಈ ಸೂತ್ರವನ್ನು ಅನುಸರಿಸಬೇಕು. ಆದುದರಿಂದ ಈ ಶ್ಲೋಕವನ್ನು ಭಗವದ್ಗೀತೆಯ ಸಾರವೆಂದು ಪರಿಗಣಿಸುತ್ತಾರೆ. ಬದ್ಧಜೀವಿಗಳು ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಲು ಐಹಿಕ ಜಗತ್ತಿನಲ್ಲಿ ಮುಳುಗಿರುತ್ತಾರೆ. ಅವರಿಗೆ ನಿಜವಾದ ಅಧ್ಯಾತ್ಮಿಕ ಬದುಕು ತಿಳಿಯದು. ಇವರಿಗಾಗಿಯೇ ಇರುವ ಗ್ರಂಥ ಭಗವದ್ಗೀತೆ.
ಮನುಷ್ಯನು ತನ್ನ ಅಧ್ಯಾತ್ಮಿಕ ಅಸ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು, ಪರಮ ಅಧ್ಯಾತ್ಮಿಕ ಪುರುಷನೊಂದಿಗೆ ತನ್ನ ನಿತ್ಯ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎನ್ನುವದನ್ನು, ಭಗವದ್ಧಾಮಕ್ಕೆ ಹೋಗುವುದು ಹೇಗೆ ಎನ್ನುವುದನ್ನು ತೋರಿಸಿಕೊಡುವುದು ಭಗವದ್ಗೀತೆಯ ಉದ್ದೇಶ. ಮನುಷ್ಯನು ತನ್ನ ಅಧ್ಯಾತ್ಮಿಕ ಚಟುವಟಿಕೆಯಾದ ಭಕ್ತಿಸೇವೆಯಲ್ಲಿ ಯಶಸ್ಸನ್ನು ಪಡೆಯಲು ಅವಶ್ಯವಾದ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ವಿವರಿಸುವ ಶ್ಲೋಕ ಇದು.
ಕರ್ಮದ ಮಟ್ಟಿಗೆ ಹೇಳುವುದಾದರೆ ಮನುಷ್ಯ ತನ್ನ ಶಕ್ತಿಯನ್ನು ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯ ಚಟುವಟಿಕೆಗಳಿಗೆ ವರ್ಗಾಯಿಸಬೇಕು. ಭಕ್ತಿರಸಾಮೃತ ಸಿಂಧುವಿನಲ್ಲಿ (2.255) ಹೇಳಿರುವಂತೆ -
ಅನಾಸಕ್ತಸ್ಯ ವಿಷಯಾನ್ ಯಥಾರ್ಹಮ್ ಉಪಯುಞ್ಜತಃ |
ನಿರ್ಬಂಧಃ ಕೃಷ್ಣ ಸಮ್ಬನ್ಧೇ ಯುಕ್ತಂ ವೈರಾಗ್ಯಮ್ ಉಚ್ಯತೇ ||
ಕೃಷ್ಣನ ಸಂಬಂಧವಿಲ್ಲದ ಯಾವುದೇ ಕೆಲಸವನ್ನು ಯಾರೂ ಮಾಡಬಾರದು. ಇದಕ್ಕೆ ಕೃಷ್ಣಕರ್ಮ ಎಂದು ಹೆಸರು. ಮನುಷ್ಯನು ಹಲವು ಕರ್ಮಗಳಲ್ಲಿ ತೊಡಗಿರಬಹುದು. ಆದರೆ ತನ್ನ ಕೆಲಸದ ಫಲದಲ್ಲಿ ಆಸಕ್ತಿಯಿರಬಾರದು. ಫಲವನ್ನು ಅವನಿಗೇ ಬಿಡಬೇಕು. ಉದಾಹರಣೆಗೆ ಮನುಷ್ಯನು ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿರಬಹುದು. ಆದರೆ ಅದನ್ನು ಕೃಷ್ಣಪ್ರಜ್ಞೆಗೆ ಪರಿವರ್ತಿಸಲು ಕೃಷ್ಣನಿಗಾಗಿ ವ್ಯಾಪಾರ ವ್ಯವಹಾರಗಳನ್ನು ಮಾಡಬೇಕು. ಕೃಷ್ಣನು ಈ ವ್ಯವಹಾರದ ಒಡೆಯನಾದರೆ ವ್ಯವಹಾರದ ಲಾಭವನ್ನು ಕೃಷ್ಣನು ಸವಿಯಬೇಕು.
ವ್ಯವಹಾರದಲ್ಲಿ ತೊಡಗಿರುವವನಿಗೆ ಸಾವಿರ ಸಾವಿರಗಟ್ಟಲೆ ರೂಪಾಯಿಗಳಿದ್ದರೆ ಮತ್ತು ಅದೆಲ್ಲವನ್ನು ಕೃಷ್ಣಿಗೆ ಅರ್ಪಿಸಬೇಕಾದರೆ ಆತನು ಹಾಗೆ ಮಾಡಬಹುದು. ಇದು ಕೃಷ್ಣನಿಗಾಗಿ ಕೆಲಸ ಮಾಡುವುದು. ತನ್ನ ಇಂದ್ರಿಯ ತೃಪ್ತಿಗಾಗಿ ಒಂದು ದೊಡ್ಡ ಕಟ್ಟಡವನ್ನು ಕಟ್ಟುವುದಕ್ಕೆ ಬದಲು, ಆತನು ಕೃಷ್ಣನಿಗಾಗಿ ಸೊಗಸಾಗಿ ದೇವಸ್ಥಾನವನ್ನು ಕಟ್ಟಿ ಭಕ್ತಿಸೇವೆಯ ಪ್ರಮಾಣ ಗ್ರಂಥಗಳಲ್ಲಿ ಹೇಳಿರುವಂತೆ, ಕೃಷ್ಣನ ವಿಗ್ರಹವನ್ನು ಸ್ಥಾಪಿಸಿ, ಕೃಷ್ಣನ ಸೇವೆಗೆ ವ್ಯವಸ್ಥೆಮಾಡಬಹುದು. ಇದೆಲ್ಲ ಕೃಷ್ಣಕರ್ಮ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)