Bhagavad Gita: ಫಲಾಪೇಕ್ಷೆಯಿರುವ ಕರ್ಮಗಳು, ಊಹಾತ್ಮಕ ಚಿಂತನೆಯಿಂದ ಆಕರ್ಷಿತರಾಗುವವರೂ ಭಗವಂತನಿಗೆ ವಿರೋಧಿಗಳೇ; ಗೀತೆಯ ಅರ್ಥ ತಿಳಿಯಿರಿ
Jul 23, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita: ಫಲಾಪೇಕ್ಷೆಯಿರುವ ಕರ್ಮಗಳು, ಊಹಾತ್ಮಕ ಚಿಂತನೆಯಿಂದ ಆಕರ್ಷಿತರಾಗುವವರೂ ಭಗವಂತನಿಗೆ ವಿರೋಧಿಗಳೇ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 55ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ಓದಿ.
ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸನ್ಗವರ್ಜಿತಃ |
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಣ್ಡವ ||55||
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 55 ಮುಂದುರಿದ ಭಾಗದಲ್ಲಿ ಸಂಗ ವರ್ಜಿತಃ ಎನ್ನುವ ಮಾತು ಅರ್ಥವತ್ತಾದದ್ದು. ಕೃಷ್ಣನ ವಿರೋಧಿಗಳಿಂದ ಮನುಷ್ಯನು ದೂರನಾಗಬೇಕು. ನಾಸ್ತಿಕರು ಮಾತ್ರವೇ ಕೃಷ್ಣನ ವಿರೋಧಿಗಳಲ್ಲ. ಫಲಾಪೇಕ್ಷೆಯಿರುವ ಕರ್ಮಗಳು ಮತ್ತು ಊಹಾತ್ಮಕ ಚಿಂತನೆಯಿಂದ ಆಕರ್ಷಿತರಾಗುವವರೂ ವಿರೋಧಿಗಳೇ. ಆದುದರಿಂದ ಭಕ್ತಿಸೇವೆಯ ಪರಿಶುದ್ಧ ರೂಪವನ್ನು ಭಕ್ತಿರಸಾಮೃತ ಸಿಂಧುವಿನಲ್ಲಿ (1.1.11) ಹೀಗೆ ವರ್ಣಿಸಿದೆ -
ತಾಜಾ ಫೋಟೊಗಳು
ಅನ್ಯಾಭಿಲಾಷಿತಾ ಶೂನ್ಯಂ ಜ್ಞಾನ ಕರ್ಮಾರ್ದಿ ಅನಾವೃತಮ್ |
ಆನುಕೂಲ್ಯೇನ ಕೃಷ್ಣಾನುಶೀಲನಂ ಭಕ್ತಿರುತ್ತಮಾ ||
ಇದನ್ನೂ ಓದಿ: ಯಾರ ಮನಸ್ಸು ಸ್ಥಿರ, ಸಮಭಾವದಲ್ಲಿ ಇರುತ್ತದೆಯೋ ಅವರು ಎಲ್ಲವನ್ನೂ ಗೆಲ್ಲುತ್ತಾರೆ; ಭಗವದ್ಗೀತೆಯ ಅರ್ಥ ಹೀಗಿದೆ
ಪರಿಶುದ್ಧವಾದ ಭಕ್ತಿಸೇವೆಯನ್ನು ಸಲ್ಲಿಸುವ ಯಾರಾದರೂ ಬಯಸಿದರೆ ಆತನು ಎಲ್ಲ ಬಗೆಯ ಐಹಿಕ ಕಲ್ಮಷ ಸಂಪರ್ಕದಿಂದ ಮುಕ್ತನಾಗಿರಬೇಕು ಎಂದು ಶ್ರೀರೂಪ ಗೋಸ್ವಾಮಿಯವರು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ. ಅಂತಹ ಮನುಷ್ಯನು ಫಲಾಪೇಕ್ಷಿತ ಕರ್ಮಗಳಿಗೆ ಮತ್ತು ಊಹಾತ್ಮಕ ಚಿಂತನೆಗೆ ಅಂಟಿಕೊಂಡವರ ಸಹವಾಸದಿಂದ ಬಿಡುಗಡೆ ಹೊಂದಬೇಕು. ಅಪೇಕ್ಷಣೀಯವಲ್ಲದ ಇಂತಹ ಸಹವಾಸದಿಂದ ಮತ್ತು ಐಹಿಕ ಬಯಕೆಗಳ ಕಲ್ಮಷದಿಂದ ಬಿಡುಗಡೆಯಾಗಿ ಮನುಷ್ಯನು ಕೃಷ್ಣಜ್ಞಾನವನ್ನು ಅನುಕೂಲವಾಗಿ ಬಳಸಿಕೊಂಡಾಗ ಅದು ಶುದ್ಧ ಭಕ್ತಿಸೇವೆ.
ಆನುಕೂಲ್ಯಸ್ಯ ಸಂಕಲ್ಪಃ ಪ್ರಾತಿಕೂಲ್ಯಸ್ಯ ವರ್ಜನಮ್. (ಹರಿಭಕ್ತಿ ವಿಲಾಸ 11.676) ಕೃಷ್ಣನನ್ನು ಕುರಿತು ಯೋಚನೆಮಾಡಬೇಕು ಮತ್ತು ಕೃಷ್ಣನಿಗೆ ಅನುಕೂಲವಾಗಿ ಕೆಲಸಮಾಡಬೇಕು. ಕೃಷ್ಣನಿಗೆ ವಿರೋಧವಾಗಿ ಅಲ್ಲ. ಕಂಸನು ಕೃಷ್ಣನ ಒಬ್ಬ ಶತ್ರು. ಕೃಷ್ಣನ ಜನನದಿಂದ ಪ್ರಾರಂಭಿಸಿ ಅವನನ್ನು ಕೊಲ್ಲಲು ಕಂಸನು ಅನೇಕ ಯೋಜನೆಗಳನ್ನು ಮಾಡಿದನು. ಅವನು ಯಾವಾಗಲೂ ವಿಫಲನಾದದ್ದರಿಂದ ಸದಾ ಕೃಷ್ಣನನ್ನೇ ಕುರಿತು ಯೋಚನೆ ಮಾಡುತ್ತಿದ್ದನು. ಹೀಗೆ ಕೆಲಸ ಮಾಡುವಾಗ, ತಿನ್ನುವಾಗ ಮತ್ತು ಮಲಗಿದಾಗ ಅವನಿಗೆ ಎಲ್ಲ ರೀತಿಗಳಲ್ಲಿ ಸದಾ ಕೃಷ್ಣಪ್ರಜ್ಞೆ ಇರುತ್ತಿತ್ತು. ಆದರೆ ಆ ಕೃಷ್ಣಪ್ರಜ್ಞೆಯು ಅನುಕೂಲಕರವಾಗಿ ಇರಲಿಲ್ಲ.
ಆದುದರಿಂದ ಅವನು ಕೃಷ್ಣನನ್ನು ಕುರಿತು ದಿನದಲ್ಲಿ ಇಪ್ಪತ್ನಾಲ್ಕು ಗಂಟೆಗಳೂ ಯೋಚಿಸುತ್ತಿದ್ದರೂ ಅವನನ್ನು ರಾಕ್ಷಸನೆಂದೇ ಪರಿಗಣಿಸಲಾಯಿತು ಮತ್ತು ಕಡೆಗೆ ಕೃಷ್ಣನು ಅವನನ್ನು ಕೊಂದನು. ನಿಜ, ಕೃಷ್ಣನು ಯಾರನ್ನು ಕೊಂದರೂ ಅವರಿಗೆ ಕೂಡಲೇ ಮುಕ್ತಿಯು ದೊರೆಯುತ್ತದೆ. ಆದರೆ ಪರಿಶುದ್ಧ ಭಕ್ತನ ಗುರಿ ಇದಲ್ಲ. ಪರಿಶುದ್ಧ ಭಕ್ತನಿಗೆ ಮೋಕ್ಷವು ಸಹ ಬೇಕಿಲ್ಲ. ಅತ್ಯುನ್ನತ ಲೋಕವಾದ ಗೋಲೋಕ ವೃಂದಾವನಕ್ಕೆ ವರ್ಗವಾಗುವುದು ಸಹ ಅವನಿಗೆ ಬೇಕಿಲ್ಲ. ಅವನ ಒಂದೇ ಗುರಿ ತಾನು ಎಲ್ಲಿದ್ದರೂ ಕೃಷ್ಣನನ್ನು ಸೇವಿಸುವುದು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)