Bhagavad Gita: ಈ ಕಾರಣದಿಂದ ಶ್ರೀಕೃಷ್ಣ ತೇಜಸ್ಸು, ಸಿರಿಗಳಿಂದ ಕೂಡಿದ ವಿಶ್ವರೂಪವನ್ನು ತೋರಿಸಿದ; ಗೀತೆಯ ಸಾರಾಂಶ ಹೀಗಿದೆ
Jul 09, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಈ ಕಾರಣದಿಂದ ಶ್ರೀಕೃಷ್ಣ ತೇಜಸ್ಸು, ಸಿರಿಗಳಿಂದ ಕೂಡಿದ ವಿಶ್ವರೂಪವನ್ನು ತೋರಿಸಿದ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 47ನೇ ಶ್ಲೋಕದಲ್ಲಿ ಓದಿ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 47
ಮಯಾ ಪ್ರಸನ್ನೇನ ತವಾರ್ಜುನೇದಮ್
ರೂಪಂ ಪರಂ ದರ್ಶಿತಮಾತ್ಮಯೋಗಾತ್ |
ತೇಜೋಮಯಂ ವಿಶ್ವಮನನ್ತಮಾದ್ಯಮ್
ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಮ್ ||47||
ಅನುವಾದ: ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು - ಪ್ರಿಯ ಅರ್ಜುನ, ನಾನು ಪ್ರಸನ್ನನಾಗಿ ನನ್ನ ಅಂತರಂಗಶಕ್ತಿಯಿಂದ ಈ ಐಹಿಕ ಜಗತ್ತಿನಲ್ಲಿ ಈ ಪರಮ ವಿಶ್ವರೂಪವನ್ನು ನಿನಗೆ ತೋರಿಸಿದ್ದೇನೆ. ಅನಂತವೂ, ತೇಜೋಮಯವೂ ಆದ ಈ ಆದಿ ರೂಪವನ್ನು ನಿನಗೆ ಮೊದಲು ಯಾರೂ ನೋಡಿಲ್ಲ.
ತಾಜಾ ಫೋಟೊಗಳು
ಭಾವಾರ್ಥ: ಅರ್ಜುನನು ಪರಮ ಪ್ರಭುವಿನ ವಿಶ್ವರೂಪವನ್ನು ಕಾಣಲು ಬಯಸಿದನು. ಆದುದರಿಂದ ತನ್ನ ಭಕ್ತನಾದ ಅರ್ಜುನನಲ್ಲಿ ಇದ್ದ ದಯೆಯಿಂದ ಶ್ರೀಕೃಷ್ಣನು ತೇಜಸ್ಸು ಮತ್ತು ಸಿರಿಗಳಿಂದ ಕೂಡಿ ವಿಶ್ವರೂಪವನ್ನು ತೋರಿಸಿದನು. ಈ ರೂಪವು ಸೂರ್ಯನಂತೆ ಕಣ್ಣನ್ನು ಕೋರೈಸುತ್ತಿತ್ತು ಮತ್ತು ಅದರ ಹಲವು ಮುಖಗಳು ವೇಗವಾಗಿ ಬದಲಾಗುತ್ತಿದ್ದವು. ತನ್ನ ಗಳೆಯ ಅರ್ಜುನನ ತೃಪ್ತಿಗಾಗಿ ಪ್ರಭುವು ಈ ರೂಪವನ್ನು ತೋರಿಸಿದನು. ತನ್ನ ಅಂತರಂಗಶಕ್ತಿಯಿಂದ ಕೃಷ್ಣನು ಈ ರೂಪವನ್ನು ತೋರಿಸಿದನು (Bhagavad Gita Updesh in Kannada).
ಈ ಶಕ್ತಿಯನ್ನು ಮನುಷ್ಯನ ಊಹೆಯು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅರ್ಜುನನಿಗೆ ಮೊದಲು ಈ ವಿಶ್ವರೂಪವನ್ನು ಯಾರೂ ಕಂಡಿರಲಿಲ್ಲ. ಆದರೆ ಈ ರೂಪವನ್ನು ಅರ್ಜುನನಿಗೆ ತೋರಿಸಿದುದರಿಂದ ಸ್ವರ್ಗಲೋಕಗಳಲ್ಲಿಯೂ ಹೊರಗಿನ ಆಕಾಶದ ಲೋಕಗಳಲ್ಲಿಯೂ ಇದ್ದ ಭಕ್ತರು ಅದನ್ನು ನೋಡಲು ಸಾಧ್ಯವಾಯಿತು. ಅವರು ಆ ರೂಪವನ್ನು ಮೊದಲು ನೋಡಿರಲಿಲ್ಲ. ಅರ್ಜುನನಿಂದಾಗಿ ಅವರು ನೋಡಲು ಸಾಧ್ಯವಾಯಿತು. ಎಂದರೆ, ಕೃಷ್ಣನು ಕೃಪೆಯಿಟ್ಟು ಅರ್ಜುನನಿಗೆ ತೋರಿಸಿದ ವಿಶ್ವರೂಪವನ್ನು ಭಗವಂತನ ಗುರು ಶಿಷ್ಯ ಪರಂಪರೆಗೆ ಸೇರಿದವರೆಲ್ಲ ನೋಡಬಲ್ಲವರಾದರು.
ಕೃಷ್ಣನು ಶಾಂತಿ ಸಂಧಾನಕ್ಕಾಗಿ ದುರ್ಯೋಧನನ ಬಳಿ ಹೋದಾಗ ಈ ರೂಪವನ್ನು ದುರ್ಯೋಧನನಿಗೆ ತೋರಿಸಿದ ಎಂದು ಒಬ್ಬರು ವ್ಯಾಖ್ಯಾನ ಮಾಡಿದ್ದಾರೆ. ದುರದೃಷ್ಟದಿಂದ ದುರ್ಯೋಧನನು ಆ ಶಾಂತಿ ಸಂಧಾನಕ್ಕೆ ಒಪ್ಪಲಿಲ್ಲ. ಆಗ ಕೃಷ್ಣನು ತನ್ನ ವಿಶ್ವರೂಪಗಳಲ್ಲಿ ಕೆಲವನ್ನು ಪ್ರಕಟಮಾಡಿದ್ದನು. ಆದರೆ ಆ ರೂಪಗಳು ಅರ್ಜುನಿಗೆ ತೋರಿಸಿದ ರೂಪಕ್ಕಿಂತ ಬೇರೆಯಾದವು. ಈ ರೂಪವನ್ನು ಹಿಂದೆ ಬೇರೆ ಯಾರೂ ನೋಡಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)