ಭಗವದ್ಗೀತೆ: ಮಾನವ ಸಮಾಜದ ಎಲ್ಲ ಅಗತ್ಯಗಳನ್ನೂ ಭಗವಂತನ ಪರ ದೇವತೆಗಳು ಪೂರೈಸುತ್ತಾರೆ; ಗೀತೆಯ ಸಾರಾಂಶ ಹೀಗಿದೆ
Dec 08, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಮಾನವ ಸಮಾಜದ ಎಲ್ಲ ಅಗತ್ಯಗಳನ್ನೂ ಭಗವಂತನ ಪರ ದೇವತೆಗಳು ಪೂರೈಸುತ್ತಾರೆ ಎಂಬುದರ ಅರ್ಥ ತಿಳಿಯಿರಿ.
ಇಷ್ಟಾನ್ ಭೋಗಾನ್ ಹಿ ವೋ ದೇವಾ ದಾಸ್ಯನ್ತೇ ಯಜ್ಞಭಾವಿತಾಃ |
ತೈರ್ದತ್ತಾನಪ್ರದಾಯೈಭ್ಯೋ ಯೋ ಭುನ್ಕ್ತೇ ಸ್ತೇನ ಏವ ಸಃ ||12||
ಬದುಕಿನ ವಿವಿಧ ಅಗತ್ಯಗಳ ಪೂರೈಕೆಯ ಹೊಣೆ ಹೊತ್ತಿರುವ ದೇವತೆಗಳು ಯಜ್ಞದ ಆಚರಣೆಯಿಂದ ಸುಪ್ರೀತರಾಗಿ ನಿಮ್ಮ ಎಲ್ಲ ಅಗತ್ಯಗಳನ್ನೂ ಪೂರೈಸುವರು. ಆದರೆ ಈ ವರಗಳನ್ನು ದೇವತೆಗಳಿಗೆ ಅರ್ಪಿಸದೆ ಅನುಭವಿಸುವವನು ನಿಜವಾಗಿಯೂ ಕಳ್ಳನೇ.
ತಾಜಾ ಫೋಟೊಗಳು
ದೇವತೆಗಳು, ದೇವೋತ್ತಮ ಪರಮ ಪುರುಷನ ಪರವಾಗಿ ಕೆಲಸಮಾಡಲು ಅಧಿಕಾರ ಪಡೆದ ಅಭಿಕರ್ತರು. ಆದುದರಿಂದ ಯಜ್ಞಗಳ ಆಚರಣೆಯ ಮೂಲಕ ಅವರನ್ನು ತೃಪ್ತಿಗೊಳಿಸಬೇಕು. ವೇದಗಳಲ್ಲಿ ಬೇರೆ ಬೇರೆ ದೇವತೆಗಳ ತೃಪ್ತಿಗಾಗಿ ಮಾಡಬೇಕಾದ ಹಲವಾರು ಯಜ್ಞಗಳನ್ನು ವಿಧಿಸಿದೆ. ಆದರೆ ಎಲ್ಲ ಯಜ್ಞಗಳನ್ನೂ ಕಟ್ಟಕಡೆಗೆ ಅರ್ಪಿಸುವುದು ದೇವೋತ್ತಮ ಪರಮ ಪುರುಷನಿಗೆ. ದೇವೋತ್ತಮ ಪರಮ ಪರುಷನನ್ನು ಅರಿಯಲಾರದವರು ದೇವತೆಗಳಿಗೆ ಯಜ್ಞಗಳನ್ನು ಮಾಡಬೇಕೆಂದು ಹೇಳಿದೆ.
ಸಂಬಂಧಿಸಿದ ವ್ಯಕ್ತಿಗಳ ಐಹಿಕ ಗುಣಗಳಿಗೆ ಅನುಸಾರವಾಗಿ ವೇದಗಳಲ್ಲಿ ಬೇರೆ ಬೇರೆ ಬಗೆಗಳ ಯಜ್ಞಗಳನ್ನು ಮಾಡಬೇಕೆಂದು ಹೇಳಿದೆ. ಬೇರೆ ಬೇರೆ ದೇವತೆಗಳ ಪೂಜೆಗೂ ಇದೇ ಆಧಾರ - ಬೇರೆ ಬೇರೆ ಗುಣಗಳು. ಉದಾಹರಣೆಗೆ, ಮಾಂಸಾಹಾರಿಗಳು ಕಾಳಿದೇವತೆಯನ್ನು ಪೂಜಿಸಬೇಕೆಂದು ಹೇಳಿದೆ. ಕಾಳಿದೇವತೆಯು ಐಹಿಕ ಪ್ರಕೃತಿಯ ಭಯಂಕರ ರೂಪ. ಈ ದೇವಿಗೆ ಪ್ರಾಣಿಬಲಿಯನ್ನು ಅರ್ಪಿಸಬೇಕೆಂದು ಹೇಳಿದೆ. ಆದರೆ ಸಾತ್ವಿಕಗುಣ ಉಳ್ಳವರು ವಿಷ್ಣುವಿನ ಆಧ್ಯಾತ್ಮಿಕ ಆರಾಧನೆಯನ್ನು ಮಾಡಲು ಹೇಳಿದೆ. ಆದರೆ ಅಂತಿಮವಾಗಿ ಎಲ್ಲ ಯಜ್ಞಗಳ ಗುರಿಯೂ ಆಧ್ಯಾತ್ಮಿಕ ನೆಲೆಗೆ ಕ್ರಮೇಣ ಮೇಲೇರುವುದು. ಸಾಮಾನ್ಯ ಮನುಷ್ಯರು, ಕಡೆಯಪಕ್ಷ ಪಂಚಮಹಾಯಜ್ಞಗಳೆಂಬ ಹೆಸರಿನ ಯಜ್ಞಗಳನ್ನಾದರೂ ನಡೆಸಬೇಕು.
ಮಾನವ ಸಮಾಜದ ಎಲ್ಲ ಅಗತ್ಯಗಳನ್ನೂ ಭಗವಂತನ ಪರ ಕಾರ್ಯಪ್ರವೃತ್ತರಾದ ದೇವತೆಗಳು ಪೂರೈಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಯಾರೂ ಏನನ್ನೂ ಉತ್ಪಾದಿಸುವುದು ಸಾಧ್ಯವಿಲ್ಲ. ಉದಾಹರಣಗೆ, ಮನುಷ್ಯ ಸಮುದಾಯದ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಿ. ಸಾತ್ವಿಕ ಸ್ವಭಾದವರಿಗೆ ಆಹಾರ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಹಾಲು, ಸಕ್ಕರೆ, ಮೊದಲಾದವು. ಮಾಂಸಾಹಾರಿಗಳಿಗೆ ಮಾಂಸ ಇದರಲ್ಲಿ ಯಾವುದನ್ನೂ ಮನುಷ್ಯರು ಉತ್ಪಾದನೆ ಮಾಡಲಾರರು.
ಬದುಕಿಗೆ ಅಗತ್ಯವಾದ ಶಾಖ, ಬೆಳಕು, ನೀರು, ಗಾಳಿ ಮೊದಲಾದುವನ್ನು ತೆಗೆದುಕೊಳ್ಳಿ - ಇವುಗಳಲ್ಲಿ ಯಾವುದನ್ನೂ ಮನುಷ್ಯ ಸಮಾಜವು ಸೃಷ್ಟಿ ಮಾಡಲಾರುದು. ಭಗವಂತನಿಲ್ಲದೆ ಸೂರ್ಯನ ಬೆಳಕು, ಬೆಳದಿಂಗಳು, ಮಳೆ, ಗಾಳಿ ಯಾವುದೂ ಸಮೃದ್ಧವಾಗಿ ಇರುವುದಿಲ್ಲ. ಇವುಗಳಿಲ್ಲದೆ ಯಯಾರೂ ಬದುಕಲು ಸಾಧ್ಯವಿಲ್ಲ. ನಮ್ಮ ಬದುಕು ಭಗವಂತನ ವರಗಳನ್ನೇ ಅವಲಂಬಿಸಿದೆ ಎನ್ನುವುದು ಸ್ಪಷ್ಟ. ನಮ್ಮ ಉತ್ಪಾದನೆಯ ಉದ್ಯಮಗಳಿಗೂ ಲೋಹ, ಗಂಧಕ, ಪಾದರಸ, ಮ್ಯಾಂಗನೀಸ್ ಮೊದಲಾದ ಅನೇಕ ವಸ್ತುಗಳು ಅತ್ಯಗತ್ಯ.
ಇವೆಲ್ಲವನ್ನೂ ಭಗವಂತನ ಪ್ರತಿನಿಧಿಗಳೇ ನೀಡುತ್ತಾರೆ. ಅವುಗಳನ್ನು ಸಮಪರ್ಕವಾಗಿ ಬಳಸಿ, ಆರೋಗ್ಯಕರ ಜೀವನ ನಡೆಸುತ್ತಾ, ಆತ್ಮಸಾಕ್ಷಾತ್ಕಾರ ಪಡೆಯಬೇಕು. ಹೀಗೆ ವ್ಯಕ್ತಿಯು ಜೀವನದ ಅಂತಿಮ ಗುರಿಯತ್ತ ಸಾಗುತ್ತಾನೆ. ಅಸ್ತಿತ್ವಕ್ಕಾಗಿ ಹೋರಾಟದಿಂದ ಬಿಡುಗಡೆ ಪಡೆಯುವುದೇ ಜೀವನದ ಅಂತಿಮ ಉದ್ದೇಶವಾಗಿದೆ. ಈ ಗುರಿಯನ್ನು ಯಜ್ಞಗಳ ಆಚರಣೆಯಿಂದ ನಾವು ಮುಟ್ಟಬೇಕು. ಮನುಷ್ಯನ ಬದುಕಿನ ಗುರಿಯನ್ನು ಮರೆತು ಭಗವಂತನ ಪ್ರತಿನಿದಿಗಳು ನೀಡುವುದನ್ನು ಇಂದ್ರಿಯತೃಪ್ತಿಗಾಗಿ ಬಳಸಿಕೊಂಡರೆ ನಿಶ್ಚಯವಾಗಿ ನಾವು ಕಳ್ಳರಾಗುತ್ತೇವೆ. ಏಕೆಂದರೆ ಸೃಷ್ಟಿಯ ಗುರಿ ಇದಲ್ಲ. ಹೀಗೆ ಮಾಡಿದರೆ ಐಹಿಕ ಪ್ರಕೃತಿಯ ನಿಮಯಗಳು ನಮ್ಮನ್ನು ಶಿಕ್ಷಿಸುತ್ತವೆ. ಕಳ್ಳರ ಸಮಾಜದಲ್ಲಿ ಸುಖವು ಸಾಧ್ಯವಲ್ಲ.
ಏಕೆಂದರೆ ಅವರಿಗೆ ಬದುಕಿನಲ್ಲಿ ಗುರಿಯಿಲ್ಲ. ಪ್ರಾಪಂಚಿಕ ಮನೋಭಾವದ ಅಸಂಸ್ಕೃತ ಕಳ್ಳರಿಗೆ ಬದುಕಿನಲ್ಲಿ ಅಂತಿಮ ಗುರಿಯಿಲ್ಲ. ಅವರ ಮನಸ್ಸು ಇಂದ್ರಿಯ ತೃಪ್ತಿಯತ್ತಲೇ ಸಾಗುತ್ತದೆ. ಯಜ್ಞಗಳನ್ನು ಮಾಡುವುದು ಹೇಗೆ ಎಂದು ಅವರಿಗೆ ತಿಳಿದಿರುವುದಿಲ್ಲ. ಯಜ್ಞವನ್ನು ಅತ್ಯಂತ ಸುಲಭವಾಗಿ ಆಚರಿಸುವುದನ್ನು ಚೈತನ್ಯ ಮಹಾಪ್ರಭುಗಳು ಪ್ರಾರಂಭಿಸಿದರು. ಇದು ಸಂಕೀರ್ತನ ಯಜ್ಞ. ಕೃಷ್ಣಪ್ರಜ್ಞೆಯನ್ನು ಸ್ವೀಕರಿಸುವ ಯಾರೇ ಆಗಲಿ ಇದನ್ನು ನಡೆಸಬಹದು.