2024ರ ದುರ್ಗಾಷ್ಟಮಿ, ಮಹಾನವಮಿ ಯಾವಾಗ ಆಚರಿಸಬೇಕು? ದುರ್ಗೆಯ ರೌದ್ರರೂಪ, ಮಹಿಷಾಸುರ ಸಂಹಾರ ಹೀಗಿತ್ತು
Oct 08, 2024 02:17 PM IST
ದುರ್ಗಾಷ್ಟಮಿ ಮತ್ತು ಮಹಾನವನಮಿಯನ್ನು ಯಾವಾಗ ಆಚರಿಸಲಾಗುತ್ತದೆ. ದುರ್ಗೆ ಮತ್ತು ಮಹಿಷಾಸುರನ ಕಥೆಯನ್ನು ಇಲ್ಲಿ ನೀಡಲಾಗಿದೆ.
- ನವರಾತ್ರಿ ಮುಗಿದು ವಿಜಯದಶಮಿ ಆಚರಣೆಯ ಸಿದ್ಧತೆಗಳು ನಡೆಯುತ್ತಿವೆ. ಅಷ್ಟಕ್ಕೂ ದುರ್ಗಾಷ್ಟಮಿ ಮತ್ತು ಮಹಾನವಮಿಯನ್ನು ಯಾವಾಗ ಆಚರಿಸಬೇಕು? ಹಿಂದೂ ಪುರಾಣಗಳ ಪ್ರಕಾರ, ದುರ್ಗೆ ರೌದ್ರರೂಪವನ್ನು ತಾಳಿ ಮಹಿಷಾಸುರನನ್ನು ಸಂಹಾರ ಮಾಡಿದ ರೋಚಕ ಕಥೆಯನ್ನು ಇಲ್ಲಿ ನೀಡಲಾಗಿದೆ. (ಬರಹ: ಎಚ್ ಸತೀಶ್, ಜ್ಯೋತಿಷಿ)
ನವರಾತ್ರಿ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ದುರ್ಗಾದೇವಿಯ 9 ರೂಪಗಳಿಗೆ ನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಶರನ್ನವರಾತ್ರಿಯಲ್ಲಿ ನಾಡಿನ ಬಹುತೇಕ ದೇವಾಲಯಗಳಲ್ಲೂ ದೇವತೆಗಳಿಗೆ ನಿತ್ಯ ಅಲಂಕಾರ, ದೀಪಾಲಂಕಾರ ಭಕ್ತರ ಕಣ್ಮನ ಸಳೆಯುತ್ತಿದೆ. ನವರಾತ್ರಿ ಮುಗಿದ ಮರು ದಿನವೇ ವಿಜಯದಶಮಿಯನ್ನು ಆಚರಿಸಲಾಗುತ್ತಿದೆ. ಇದರ ನಡುವೆ ದುರ್ಗಾಷ್ಟಮಿ ಮತ್ತು ಮಹಾನವಮಿಯನ್ನು ಯಾವಾಗ ಆಚರಿಸಲಾಗುತ್ತದೆ, ಇದರ ಮಹತ್ವ ಏನು ಎಂಬುದನ್ನು ಇಲ್ಲಿ ತಿಳಿಯಿರಿ.
ತಾಜಾ ಫೋಟೊಗಳು
2024ರ ದುರ್ಗಾಷ್ಟಮಿ ಮತ್ತು ಮಹಾನವಮಿ ಪೂಜೆಯನ್ನು ಅಕ್ಟೋಬರ್ 11 ರ ಶುಕ್ರವಾರ ಆಚರಿಸಬೇಕಾಗುತ್ತದೆ. ಇಂದ್ರನು ತನ್ನ ವಜ್ರಾಯುದರಿಂದ ಮತ್ತು ಇತರ ದೇವತೆಗಳ ಸಹಾಯದಿಂದ ರಾಕ್ಷಸರನ್ನು ಸಂಹರಿಸುತ್ತಾನೆ. ಇದರಿಂದ ಕೋಪಗೊಂಡ ದಿತಿ ಎಂಬ ರಾಕ್ಷಸಸ್ತ್ರೀ ಸುಪಾರ್ಶ್ವಮುನಿಯ ಆಶ್ರಮದ ಬಳಿ ಘೋರ ತಪಸ್ಸನ್ನು ಮಾಡಿ ಬ್ರಹ್ಮನಿಂದ ಸಮಸ್ತ ವೀರರನ್ನು ಎದುರಿಸಲು ಸಮರ್ಥನಾದ ಪ್ರುತ್ರನ ವರವನ್ನು ಪಡೆಯುತ್ತಾಳೆ. ಇದನ್ನು ತಿಳಿದ ಇಂದ್ರನು ದಿತಿಯನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಸಾಧ್ಯವಾಗದೆ ಹೋದಾಗ ಆಕೆಯ ಗರ್ಭವನ್ನು ಹಾಳುಮಾಡಲು ಪ್ರಯತ್ನಿಸುತ್ತಾನೆ. ಆದರೆ ತನ್ನ ಪ್ರಯತ್ನದಲ್ಲಿ ವಿಫಲನಾಗುತ್ತಾನೆ. ಇದರಿಂದ ಕೋಪಗೊಂಡ ಶುಕ್ರಾಚಾರ್ಯರು ಇಂದ್ರನಿಗೆ ಘೋರ ಶಾಪವನ್ನು ನೀಡುತ್ತಾರೆ.
ಸುಪಾರ್ಶ್ವಮುನಿಯು ನಿನಗೆ ಮಹಿಷನ ರೂಪವುಳ್ಳ ಮಗನು ಜನಿಸುತ್ತಾನೆ ಎಂದು ಹೇಳುತ್ತಾನೆ. ಈ ಘಟನೆಗಳಿಂದ ಭಯಗೊಂಡ ದಿತಿಯು ಶಿವನ ಕುರಿತು ತಪಸ್ಸು ಮಾಡಿ ತನ್ನ ಮಗನಿಗೆ ಹೆಂಗಸಿನಿಂದ ಮಾತ್ರ ಮರಣ ಬರುವಂತೆ ವರವನ್ನು ಪಡೆಯುತ್ತಾಳೆ. ಈಕೆಯ ಮಗನೇ ಮಹಿಷಾಸುರ. ಇವನಿಗೆ ಉತ್ತಮ ವಿದ್ಯಾಭ್ಯಾಸವು ಲಭಿಸುತ್ತದೆ. ಶಸ್ತ್ರಾಭ್ಯಾಸದಲ್ಲಿ ಉನ್ನತಿ ಸಾಧಿಸುತ್ತಾನೆ. ಇದೇ ವೇಳೆಯಲ್ಲಿ ಅವಂತಿಯ ಮಹಾರಾಜನು ತನ್ನ ಕುವರಿಗಾಗಿ ಸ್ವಯಂವರವನ್ನು ಏರ್ಪಡಿಸುತ್ತಾನೆ. ಮಹಿಷಾಸುರನು ಸಹ ಸ್ವಯಂವರಕ್ಕೆ ತೆರಳುತ್ತಾನೆ. ಮತ್ಸಯಂತ್ರವನ್ನು ಬೇಧಿಸುವ ಮೂಲಕ ಸ್ವಯಂವರದಲ್ಲಿ ಜಯಶೀಲನಾಗುತ್ತಾನೆ. ಆದರೆ ವಿವಾಹವಾಗಲು ಒಪ್ಪುವುದಿಲ್ಲ. ಶುಕ್ರಾಚಾರ್ಯರ ಆದೇಶದಂತೆ ಆಕೆಯನ್ನು ವಿವಾಹವಾಗುತ್ತಾನೆ.
ತನ್ನ ತಂದೆಯ ಸಾವಿನ ಸೇಡನ್ನು ತೀರಿಸಿಕೊಳ್ಳಲು ಇಂದ್ರನ ಮೇಲೆ ಯುದ್ದವನ್ನು ಸಾರುತ್ತಾನೆ. ಶುಕ್ರಾಚಾರ್ಯರ ಸಲಹೆಯಂತೆ ಬ್ರಹ್ಮನನ್ನು ಕುರಿತು ತಪಸ್ಸನ್ನು ಮಾಡಲು ನಿರ್ಧರಿಸುತ್ತಾನೆ. ಬ್ರಹ್ಮನು ಪ್ರತ್ಯಕ್ಷನಾಗಿ ವರವೊಂದನ್ನು ಬೇಡಲು ಕೇಳುತ್ತಾನೆ. ಅಮರತ್ವವನ್ನು ಕೊಡು ಎಂದು ಕೇಳಿದಾಗ ಬ್ರಹ್ಮನು ಅದನ್ನು ತಿರಸ್ಕರಿಸುತ್ತಾನೆ. ಬುದ್ದಿವಂತಿಕೆಯಿಂದ ಮಹಿಷಾಸುರನು ಪುರುಷರಾದ ಮಾನವರಿಂದಲೂ ದೇವ ದಾನವರಿಂದಲೂ ಸಾವು ಬಾರದಂತೆ ವರವನ್ನು ಪಡೆಯುತ್ತಾನೆ. ಆದರೆ ಈತನ ಪತ್ನಿಯು ಜಗದಂಬೆಯ ಪರಮ ಭಕ್ತಳಾಗಿರುತ್ತಾಳೆ. ಮಹಿಷಾಸುರನು ಋಷಿಮುನಿಗಳ ಯಜ್ಞಯಾಗಾದಿಗಳನ್ನು ಹಾಳುಗೆಡವಲು ಆರಂಭಿಸುತ್ತಾನೆ.
ಸ್ವತ: ಇಂದ್ರನನ್ನೇ ಸೋಲಿಸಿ ಇಂದ್ರನ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳುತ್ತಾನೆ. ಇಂದ್ರನ ಪತ್ನಿಯಾದ ಶಚಿದೇವಿಯನ್ನು ಅಪಹರಿಸಿ ತರುತ್ತಾನೆ. ಇದನ್ನು ಕಂಡು ಭಯಗೊಂಡ ಮಹಿಷಾಸುರನ ಪತ್ನಿಯು ಶುಕ್ರಾಚಾರ್ಯರನ್ನು ಪರಿಹಾರಕ್ಕಾಗಿ ಪ್ರಾರ್ಥಿಸುತ್ತಾಳೆ. ಆಗ ಅವಳಿಗೆ ಒಂದು ವಾರ ಎಡಬಿಡದೆ ಮೌನ ಮಂಗಳಗೌರಿ ವ್ರತವನ್ನು ಆಚರಿಸುವಂತೆ ತಿಳಿಸುತ್ತಾರೆ. ಗೌರಿಯು ಸಹ ದುರ್ಗಾಮಾತೆಯ ಒಂದು ರೂಪ. ನಾರದರ ಸಲಹೆಯಂತೆ ಇಂದ್ರನು ಕೈಲಾಸಕ್ಕೆ ತೆರಳುತ್ತಾನೆ. ಶಿವಪಾರ್ವತಿಯರನ್ನು ಕುರಿತು ಲೋಕಕಲ್ಯಾಣಕ್ಕಾಗಿ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾನೆ. ಪಾರ್ವತಿಗೆ ತ್ರಿಮೂರ್ತಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಮಹಿಷನ ಸಂಹಾರ ಮಾಡುವಂತೆ ಬೇಡಿಕೊಳ್ಳುತ್ತಾರೆ. ಆದರೆ ಮಹಿಷನ ತಪಸ್ಸಿಗೆ ಮೆಚ್ಚಿ ಪಾರ್ವತಿಯು ದುರ್ಗಾವತಾರದಲ್ಲಿ ಪ್ರತ್ಯಕ್ಷಳಾಗುತ್ತಾಳೆ. ಆಕೆಯ ಭಕ್ತಿಯನ್ನು ಮೆಚ್ಚಿ ಪತಿಭಿಕ್ಷೆಯನ್ನು ನೀಡುತ್ತಾಳೆ.
ದುರ್ಗೆಯು ಶಕ್ತಿದೇವತೆ. ಪರಬ್ರಹ್ಮರೂಪಿಣಿಯಾದ ಆದಿಪರಾಶಕ್ತಿ ಸತ್ಯ ಧರ್ಮ ಉಳಿಸುವ ಸಲುವಾಗಿ ಮಹಿಷನನ್ನು ವಧಿಸಲು ಅನುವಾಗುತ್ತಾಳೆ. ಆದಿ ಮತ್ತು ಅಂತ್ಯವೆರಡು ಆದ ದುರ್ಗೆಯನ್ನು ಎದುರಿಸಲು ಮಹಿಷನು ವಿಫಲವಾಗುತ್ತಾನೆ. ಮಹಾವಿಷ್ಣು ಮಹಾಲಕ್ಷ್ಮೀಯನ್ನು, ಬ್ರಹ್ಮನು ತನ್ನ ಮಗಳಾದ ಸರಸ್ವತಿಯನ್ನು ವಿವಾಹವಾಗುತ್ತಾನೆ. ಇದರಿಂದಾಗಿ ಜೀವನದ ಪ್ರತಿಯೊಂದು ಹಾದಿಯಲ್ಲಿಯೂ ದುರ್ಗಾಪೂಜೆಯು ಪ್ರಾಮುಖ್ಯ ಪಡೆಯುತ್ತದೆ.
ರೌದ್ರರೂದಲ್ಲಿ ದುರ್ಗೆಯು ಮಹಿಷಾಸುರ ಸಂಹಾರದ ಅಂತಿಮ ಕ್ಷಣ
ರೌದ್ರರೂಪದಲ್ಲಿ ದುರ್ಗೆಯು ಮಹಿಷಾಸುರನ ಮುಂದೆ ಪ್ರತ್ಯಕ್ಷಳಾಗುತ್ತಾಳೆ. ದುರ್ಗೆಯನ್ನು ಕಂಡರೂ ಅವನಿಗೆ ಭಯವಾಗುವುದಿಲ್ಲ. ಬದಲಾಗಿ ದೇವತೆಗಳನ್ನು ಅವಹೇಳನ ಮಾಡುತ್ತಾ ನನ್ನನ್ನು ಕೊಲ್ಲಲು ನಿಮ್ಮಿಂದಾಗದೆ ಸ್ತ್ರೀಯನ್ನು ಕಳುಹಿಸಿದಿರಿ ಎಂದು ಟೀಕಿಸುತ್ತಾನೆ. ಇದರಿಂದ ಕ್ರೋದಗೊಂದ ದುರ್ಗೆಯು ತನ್ನ ತ್ರಿಶೂಲವನ್ನು ಕೈಯಲ್ಲಿ ಹಿಡಿದಾಗ, ದುರ್ಗೆಯ ಪರಮ ಭಕ್ತೆಯಾದ ಮಹಿಷಾಸುರನ ಮಡದಿಯು ತನ್ನ ಮಾಂಗಲ್ಯವನ್ನು ಉಳಿಸುವಂತೆ ಬೇಡುತ್ತಾಳೆ. ಆಗ ದುರ್ಗೆಯು ತನ್ನ ಭಕ್ತೆಯನ್ನು ಅಂತರ್ದಾನವಾಗುವಂತೆ ಮಾಡಿ ಕೊನೆಗೆ ಮಹಿಷಾಸುರನನ್ನು ಸಂಹರಿಸುತ್ತಾಳೆ. ಎಂದಿನಂತೆ ಮೂರು ಲೋಕಗಳಲ್ಲಿಯೂ ಶಾಂತಿ ನೆಮ್ಮದಿಯು ನೆಲೆಸುತ್ತದೆ. ಆದ್ದರಿಂದ ದುರ್ಗಾಷ್ಟಮಿಯ ದಿನದಂದು ದುರ್ಗಾ ಮಾತೆಗೆ ಪೂಜೆ ಮಾಡಿದಲ್ಲಿ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಯು ಮರೆಯಾಗುತ್ತದೆ.