ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಮುಹೂರ್ತದ ಮಂಗಳ ಸಮಯ ಕೇವಲ 84 ಸೆಕೆಂಡ್; ಅಭಿಜಿತ್ ಮುಹೂರ್ತದ ವೈಶಿಷ್ಟ್ಯವೇನು? ಇಲ್ಲಿದೆ ವಿವರ
Jan 22, 2024 02:56 PM IST
ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಶುಭ ಮುಹೂರ್ತವಾದ ಮಧ್ಯಾಹ್ನ 12:29:03 ರಿಂದ 12:30:35 ಕ್ಕೆ ನೆರವೇರಿಸಲಾಯಿತು.
ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಇಂದು (ಜನವರಿ 22, ಸೋಮವಾರ) ಮಧ್ಯಾಹ್ನ 12:29:03ರಿಂದ 12.30:35 ರವರೆಗೆ ಅಭಿಜಿತ್ ಶುಭ ಮುಹೂರ್ತವಾದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಿದರು.
ತಾಜಾ ಫೋಟೊಗಳು
ಅಭಿಜಿತ್ ಮುಹೂರ್ತದ ಕೊನೆಯ 84 ಸೆಕೆಂಡುಗಳಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಪ್ರತಿದಿನ ಒಮ್ಮೆ ನಡೆಯುವ 48 ನಿಮಿಷಗಳ ಅಭಿಜಿತ್ ಮುಹೂರ್ತದ 84 ಸೆಕೆಂಡುಗಳು ಅತ್ಯಂತ ಪವಿತ್ರವೆಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ.
ಜನವರಿ 22ರ ಮಧ್ಯಾಹ್ನ 12.16ಕ್ಕೆ ಪ್ರಾರಂಭವಾಗಿ 12.59ಕ್ಕೆ ಅಭಿಜಿತ್ ಮುಹೂರ್ತ ಕೊನೆಗೊಂಡಿತು. ಪ್ರಾಣ ಪ್ರತಿಷ್ಠಾಪನೆಗೆ 10 ನಿಮಿಷಗಳ ಮೊದಲ, ಅಂದರೆ ಮಧ್ಯಾಹ್ನ 12.20ಕ್ಕೆ ಪ್ರಾರಂಭವಾದ ವಿಧಿ ವಿಧಾನಗಳು 1 ಗಂಟೆಗೆ ಅಧಿಕ ಸಮಯದ ವರೆಗೆ ನಡೆಯಿತು. ಅಭಿಜಿತ್ ಮುಹೂರ್ತವು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ದಿನದ 8ನೇ ಮುಹೂರ್ತವಾಗಿದೆ. ಇದು ಕೇವಲ 48 ನಿಮಿಷಗಳವರೆಗೆ ಇರುತ್ತದೆ.
ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠೆಗೆ ಜ 22 ಏಕೆ ಶ್ರೇಷ್ಠ?
ಇದೇ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಕಾರಣ
ಈ ದಿನಾಂಕ ಮತ್ತು ಮುಹೂರ್ತವನ್ನು ಹಿಂದೂ ಧರ್ಮಗ್ರಂಥಗಳ ಪ್ರಕಾರ ಆಯ್ಕೆ ಮಾಡಲಾಗಿದೆ. ಶ್ರೀರಾಮನು ಮೃಗಶಿರಾ ನಕ್ಷತ್ರ, ಅಮೃತ ಸಿದ್ಧಿ ಯೋಗ ಮತ್ತು ಸಾರ್ವಾರ್ಥ ಸಿದ್ಧಿ ಯೋಗದ ಹೊಂದಾಣಿಕೆಯ ಅಭಿಜಿತ್ ಮುಹೂರ್ತದಲ್ಲಿ ಜನಿಸಿದ್ದಾನೆ. ಇದೇ ಕಾರಣಕ್ಕೆ ಈ ಶುಭ ಸಮಯವನ್ನು ಆಯ್ಕೆ ಮಾಡಲಾಗಿತ್ತು.
ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭದ ಕಾರ್ಯಕ್ರಮಗಳು ಜನವರಿ 16ರಿಂದಲೇ ಆರಂಭವಾಗಿತ್ತು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನಗಳ ಸಾತ್ವಿಕ ಆಚರಣೆಯನ್ನು ಕೈಗೊಂಡಿದ್ದರು. ಈ ಅವಧಿಯಲ್ಲಿ ಅವರು ಬರಿ ನೆಲದ ಮೇಲೆ ಮಲಗುವುದು, ಕೇವಲ ಹಣ್ಣುಗಳು, ಎಳನೀರನ್ನು ಮಾತ್ರ ಸೇವಿಸಿದ್ದರು.