Rama Navami: ಅಣ್ಣ ಶ್ರೀರಾಮನಿಗಾಗಿ 14 ವರ್ಷಗಳ ಕಾಲ ಊಟ, ನಿದ್ದೆ ಇಲ್ಲದೆ ಕಳೆದ ಲಕ್ಷ್ಮಣ; ಕಾರಣ ಕೇಳಿದ್ರೆ ಅಚ್ಚರಿಯಾಗುತ್ತೆ
Apr 16, 2024 09:23 PM IST
ಅಣ್ಣ ಶ್ರೀರಾಮನಿಗಾಗಿ 14 ವರ್ಷಗಳ ಕಾಲ ಊಟ, ನಿದ್ದೆ ಇಲ್ಲದೆ ಕಳೆದ ಲಕ್ಷ್ಮಣ
- ರಾಮಾಯಣದಲ್ಲಿ ಶ್ರೀರಾಮನಷ್ಟೇ ಮಹತ್ವ ಸೀತಾಮಾತೆ ಹಾಗೂ ಲಕ್ಷ್ಮಣನಿಗೂ ಇದೆ. ಕೆಲವು ರಾಮಾಯಣಗಳಲ್ಲಿ ಲಕ್ಷ್ಮಣನೇ ರಾಮಾಯಣದ ನಾಯಕ ಎಂಬ ಉಲ್ಲೇಖವಿದೆ. ಸಹೋದರ ಪ್ರೇಮಕ್ಕೆ ಅನ್ವರ್ಥ ನಾಮದಂತಿರುವ ಲಕ್ಷ್ಮಣ ಅಣ್ಣನಿಗಾಗಿ 14 ವರ್ಷವನ್ನು ಊಟ, ನಿದ್ದೆಯಿಲ್ಲದೇ ಕಳೆಯುತ್ತಾನೆ. ಅಲ್ಲದೇ ಆತನ ಹೆಂಡತಿ ಊರ್ಮಿಳೆಯೂ ಊಟ ಇಲ್ಲದೇ ನಿದ್ದೆಯಲ್ಲೇ ಕಳೆಯುತ್ತಾಳೆ. ಅದಕ್ಕೆ ಕಾರಣವಿದು.
ರಾಮಾಯಣ ಎಷ್ಟೇ ಓದಿದರೂ ಮತ್ತೆ ಮತ್ತೆ ಓದಬೇಕೆನ್ನಿಸುವ ಮಹಾನ್ ಕಾವ್ಯ. ಇದರಲ್ಲಿ ಬರುವ ಎಲ್ಲಾ ಕಥೆಗಳು ಆಸಕ್ತಿದಾಯಕವಾಗಿದೆ. ರಾಮಾಯಣ ಎಂದರೆ ಶ್ರೀರಾಮನ ಜನನ, ಸೀತಾರಾಮರ ವಿವಾಹ, ರಾವಣನ ವಧೆ ಮತ್ತು ಪಟ್ಟಾಭಿಷೇಕ ಹೀಗೆ ಹಲವು ಪಾತ್ರಗಳು, ಘಟನೆಗಳು ಕಣ್ಮುಂದೆ ಬರುತ್ತವೆ. ರಾಮಾಯಣದಲ್ಲಿ ಇನ್ನೊಂದು ಮಹತ್ವದ ಪಾತ್ರವಿದೆ. ಅದ್ಯಾರು ಅಂತೀರಾ, ಅವಳೇ ಊರ್ಮಿಳಾ ದೇವಿ, ಲಕ್ಷ್ಮಣನ ಪತ್ನಿ. ಗಂಡನ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಹದಿನಾಲ್ಕು ವರ್ಷಗಳ ನಿದ್ದೆಯಲ್ಲೇ ಕಳೆಯುತ್ತಾಳೆ ಎಂದು ರಾಮಾಯಣದ ಕಥೆಯೊಂದು ಹೇಳುತ್ತದೆ. ಹಾಗೆ ಮಾಡುವುದರ ಹಿಂದೆ ಒಂದು ಮಹತ್ತರ ಉದ್ದೇಶವೂ ಇತ್ತು.
ತಾಜಾ ಫೋಟೊಗಳು
ಇಡೀ ಅಯೋಧ್ಯೆಯು ಶ್ರೀರಾಮನ ಪಟ್ಟಾಭಿಷೇಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಿದ್ಧವಾಗಿತ್ತು. ಎಲ್ಲವೂ, ಎಲ್ಲರೂ ಸಂತೋಷವಾಗಿರುವ ಸಮಯದಲ್ಲಿ ರಾಜ ದಶರಥನ ಪತ್ನಿ ಕೈಕೇಯಿಯ ಸ್ವಾರ್ಥದಿಂದ ಸಂಪೂರ್ಣ ತಲೆ ಕೆಳಗಾಗುತ್ತದೆ. ಆಕೆ ದಶರಥ ಮಹಾರಾಜನ ಬಳಿ ತನಗೆ ಹಿಂದೊಮ್ಮೆ ನೀಡಿದ್ದ ಮಾತನ್ನು ಈಗ ನೆರವೇರಿಸುವಂತೆ ಕೇಳುತ್ತಾಳೆ. ಅಂದರೆ ಇಂದು ಶ್ರೀರಾಮನ ಬದಲು ತನ್ನ ಮಗನಿಗೆ ಪಟ್ಟಾಭಿಷೇಕ ಮಾಡಿ, ರಾಮನನ್ನು 14 ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಬೇಕು ಎಂದು ಕೇಳಿಕೊಳ್ಳುತ್ತಾಳೆ.
ಅಣ್ಣನನ್ನು ಹಿಂಬಾಲಿಸಿದ ಲಕ್ಷ್ಮಣ
ಶ್ರೀರಾಮನು ವನವಾಸಕ್ಕೆ ಹೊರಟಾಗ ಸೀತಾಮಾತೆಯು ಅವನೊಂದಿಗೆ ಜೊತೆ ಹೊರಡುತ್ತಾಳೆ. ಯಾರೂ ಎಷ್ಟೇ ಹೇಳಿದರೂ ಕೇಳದೆ ಲಕ್ಷ್ಮಣ ಕೂಡ ಅಣ್ಣ ಅತ್ತಿಗೆಯ ಜೊತೆಗೆ ಕಾಡಿಗೆ ಹೊರಡುತ್ತಾನೆ.
ಶ್ರೀರಾಮನ ಮೇಲಿನ ಅಪಾರ ಪ್ರೀತಿ ಮತ್ತು ಭಕ್ತಿಯಿಂದಾಗಿ ಲಕ್ಷ್ಮಣನು ಯಾವಾಗಲೂ ಅಣ್ಣನನ್ನು ಅನುಸರಿಸುತ್ತಿದ್ದನು. ಆದ್ದರಿಂದಲೇ ಅಣ್ಣ-ತಮ್ಮಂದಿರು ರಾಮಲಕ್ಷ್ಮಣರಂತೆ ಇರಬೇಕು ಎಂದು ಹೇಳಲಾಗುತ್ತದೆ.
ಅಣ್ಣ-ಅತ್ತಿಗೆಯ ಜೊತೆಗೆ ಕಾಡಿಗೆ ಹೋಗುವ ಲಕ್ಷ್ಮಣ ಅವರಿಗೆ ಸದಾ ಬೆಂಗಾಲಾಗಿ ಇರುತ್ತಾನೆ. ಅದಕ್ಕಾಗಿ ಕಾಡಿಗೆ ಹೋಗುವಾಗ ತನ್ನೊಂದಿಗೆ ಬರುತ್ತೇನೆ ಎಂದು ಹಠ ಹಿಡಿದ ಹೆಂಡತಿ ಊರ್ಮಿಳೆಯನ್ನು ಜೊತೆಗೆ ಕರೆ ತರುವುದಿಲ್ಲ. ಕಾರಣ ಕೇಳಿದರೆ ಕಾಡಿನಲ್ಲಿ ಅಣ್ಣ ಸೇವೆ ಮಾಡಲು ಭಂಗ ಆಗುತ್ತದೆ ಎಂದು ಹೆಂಡತಿಯನ್ನು ಸಮಾಧಾನ ಮಾಡಿ ಅಯೋಧ್ಯೆಯಲ್ಲೇ ಬಿಟ್ಟು ಹೋಗಿರುತ್ತಾನೆ.
ಆದರೆ ಊರ್ಮಿಳೆ ಕೂಡ ಲಕ್ಷ್ಮಣನಷ್ಟೇ ಮಹಾನ್ ವ್ಯಕ್ತಿತ್ವದವಳು. ಅವಳು ಗಂಡ ಹೇಳಿದ್ದನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಳು. ಗಂಡನಿಗಾಗಿ ಯಾರೂ ಮಾಡಿರದ ಮಹತ್‌ಕಾರ್ಯ ಮಾಡಿದ್ದಳು ಊರ್ಮಿಳಾದೇವಿ. ಅದೇನೆಂದರೆ ಆಕೆ 14 ವರ್ಷಗಳ ಕಾಲ ಏನನ್ನೂ ತಿನ್ನದೇ ಮಲಗಿದ್ದಳು. ಆಕೆ ಅಷ್ಟೂ ವರ್ಷಗಳ ಕಾಲ ಮಲಗಿಯೇ ಇರುವುದಕ್ಕೆ ಒಂದು ಕಾರಣವಿತ್ತು.
ಲಕ್ಷ್ಮಣನ ನಿದ್ದೆ ಹಂಚಿಕೊಂಡ ಊರ್ಮಿಳಾ
ವನವಾಸದಲ್ಲಿ ಒಂದು ದಿನ ಸೀತಾರಾಮರು ಕುಟೀರದಲ್ಲಿದ್ದಾಗ ಲಕ್ಷ್ಮಣ ಅವರನ್ನು ಹೊರಗಿನಿಂದ ಕಾವಲು ಕಾಯುತ್ತಿದ್ದ. ಸ್ವಲ್ಪ ಸಮಯದ ನಂತರ ನಿದ್ರಾದೇವಿಯು ಲಕ್ಷ್ಮಣನ ಬಳಿಗೆ ಬರುತ್ತಾಳೆ. ಲಕ್ಷ್ಮಣನಿಗೆ ನಿದ್ದೆ ಮಾಡಿದರೆ ಕರ್ತವ್ಯ ಲೋಪವಾಗುತ್ತದೆಂದು ನಿದ್ದೆ ಮಾಡಲು ಇಷ್ಟವಿರುವುದಿಲ್ಲ. ಆಗ ಲಕ್ಷ್ಮಣ ನಿದ್ರಾದೇವಿಯ ಬಳಿ ನಾನು ನನ್ನ ಅಣ್ಣ-ಅತ್ತಿಗೆಯನ್ನು ಕಾಪಾಡುವ ಸಲುವಾಗಿಯೇ ಅವರೊಂದಿಗೆ ಕಾಡಿಗೆ ಬಂದಿದ್ದೇನೆ. ನನಗೆ ನಿದ್ದೆ ಬಂದರೆ ಅವರನ್ನು ಕಾಪಾಡಲು ಸಾಧ್ಯವಾಗುವುದಿಲ್ಲ, ಹಾಗಾಗಿ ನನಗೆ 14 ವರ್ಷಗಳ ಕಾಲ ನಿದ್ದೆ ಬಾರದಂತೆ ಮಾಡು ಎಂದು ನಿದ್ರಾದೇವಿಯ ಬಳಿ ಕೇಳಿಕೊಳ್ಳುತ್ತಾನೆ.
ಆಗ ನಿದ್ರಾದೇವಿ ಲಕ್ಷ್ಮಣನ ಬಳಿ ಪ್ರಕೃತಿಯ ಧರ್ಮಕ್ಕೆ ಚ್ಯುತಿ ಬಾರದಂತೆ ಯಾರಿಗಾದರೂ ನಿದ್ರೆಯನ್ನು ನೀಡಬೇಕೆಂದು ಹೇಳುತ್ತಾಳೆ. ತಕ್ಷಣವೇ ಲಕ್ಷ್ಮಣನು ತನ್ನ ಪತ್ನಿ ಊರ್ಮಿಳಾ ದೇವಿಗೆ ತನ್ನ ನಿದ್ರೆಯನ್ನು ನೀಡುವಂತೆ ಹೇಳುತ್ತಾನೆ. ಹೀಗಾಗಿ ಊರ್ಮಿಳಾ ದೇವಿ ತನ್ನ ಪತಿಯ ಜವಾಬ್ದಾರಿಯನ್ನು ಹೊತ್ತು 14 ವರ್ಷಗಳ ಕಾಲ ಆಹಾರ ಸೇವಿಸದೆ ನಿದ್ದೆಯಲ್ಲೇ ಜೀವನ ಕಳೆದರು.
ಈ 14 ವರ್ಷಗಳ ಕಾಲ ಲಕ್ಷ್ಮಣನು ನಿದ್ರೆ ಮತ್ತು ಆಹಾರವನ್ನು ತಪ್ಪಿಸಿದನು. ಲಕ್ಷ್ಮಣ 14 ವರ್ಷಗಳಿಂದ ನಿದ್ದೆ-ಊಟ ಮಾಡದೇ ಇರುವುದರ ಹಿಂದೆ ಇನ್ನೊಂದು ಕಾರಣವಿದೆ ಎನ್ನಲಾಗಿದೆ. ರಾವಣಾಸುರನ ಮಗ ಮೇಘನಾಥನಿಗೆ 14 ವರ್ಷಗಳಿಂದ ನಿದ್ದೆಯಿಲ್ಲದವನ ಕೈಯಲ್ಲಿ ಸಾಯುವ ವರ ದೊರೆಯುತ್ತದೆ. ಊರ್ಮಿಳಾದೇವಿ ಲಕ್ಷ್ಮಣನ ನಿದ್ದೆಯನ್ನು ಹಂಚಿಕೊಂಡಾಗ ಮೇಘನಾಥನನ್ನು ಕೊಲ್ಲುವ ಅವಕಾಶ ಲಕ್ಷ್ಮಣನಿಗೆ ಸಿಕ್ಕಿತು. ಊರ್ಮಿಳಾ ದೇವಿಯು ಕಾಡಿಗೆ ಬರದಿದ್ದರೂ ಪತಿಯಾಗಿ ತನ್ನ ಜವಾಬ್ದಾರಿಯನ್ನು ಪೂರೈಸಿದಳು ಮತ್ತು ಸೀತಾರಾಮರನ್ನು ಬೆಂಬಲಿಸುವ ಮೂಲಕ ಉತ್ತಮ ಹೆಂಡತಿಯಾಗಿ ತನ್ನ ಧರ್ಮವನ್ನು ಪೂರೈಸಿದಳು. ಹೀಗೆ ರಾಮಾಯಾಣದಲ್ಲಿ ರಾಮ ಸೀತೆರಷ್ಟೇ ಲಕ್ಷ್ಮಣ ಹಾಗೂ ಊರ್ಮಿಳರು ಕೂಡ ಮಹತ್ವರು. ಆದರೆ ಇವರ ಕಥೆಗಳು ಎಷ್ಟು ಜನಜನಿತವಾಗಿಲ್ಲ ಎಂಬುದು ಅಷ್ಟೇ ಸತ್ಯ.
ಶ್ರೀರಾಮ ನವಮಿಯನ್ನು ಭಗವಾನ್ ರಾಮನ ಜನ್ಮದಿನವೆಂದು ಮಾತ್ರವಲ್ಲದೆ ಪಟ್ಟಾಭಿಷೇಕ ದಿನವೆಂದು ಪರಿಗಣಿಸಲಾಗಿದೆ. ಈ ನವಮಿಯ ದಿನವೇ ಸೀತಾರಾಮರ ವಿವಾಹವೂ ನಡೆಯಿತು ಎಂದು ಪುರಾಣಗಳು ಹೇಳುತ್ತವೆ.