ಭಾದ್ರಪದ ಮಾಸ ಆರಂಭ; ಗಣೇಶ ಚತುರ್ಥಿಯಿಂದ ಈದ್ ಮಿಲಾದ್ವರೆಗೆ, ಈ ತಿಂಗಳಲ್ಲಿ ಬರುವ ಪ್ರಮುಖ ಹಬ್ಬ, ಆಚರಣೆಗಳ ಮಾಹಿತಿ ಇಲ್ಲಿದೆ
Sep 03, 2024 12:21 PM IST
ಭಾದ್ರಪದ ಮಾಸದಲ್ಲಿ ಬರುವ ಹಬ್ಬ, ಆಚರಣೆಗಳು
- ಹಿಂದೂ ಧರ್ಮದಲ್ಲಿ ಪ್ರತಿ ಮಾಸಗಳಿಗೂ ಬಹಳ ಪ್ರಾಮುಖ್ಯವಿದೆ. ಈ ಮಾಸಗಳಲ್ಲಿ ಭಾದ್ರಪದ ಮಾಸವೂ ಒಂದು. ಶ್ರಾವಣ ಮುಗಿದು ಇಂದಿನಿಂದ (ಸೆಪ್ಟೆಂಬರ್ 3) ಭಾದ್ರಪದ ಮಾಸ ಆರಂಭವಾಗಿದ್ದು ಈ ತಿಂಗಳಲ್ಲಿ ಬರುವ ಪ್ರಮುಖ ಹಬ್ಬಗಳು, ಆಚರಣೆಗಳ ಪಟ್ಟಿ ಇಲ್ಲಿದೆ.
ಹಿಂದೂ ಕ್ಯಾಲೆಂಡರ್ನಲ್ಲಿ ಭಾದ್ರಪದ ಮಾಸ ಎಂದರೆ ಆರನೇ ತಿಂಗಳು. ಶ್ರಾವಣ ಮಾಸದ ನಂತರ ಬರುವುದು ಭಾದ್ರಪದ ಮಾಸ. ಈ ತಿಂಗಳು ಹಲವು ಕಾರಣಗಳಿಂದ ಪ್ರಾಮುಖ್ಯ ಪಡೆದಿದೆ. ಭಾದ್ರಪದ ಮಾಸದಲ್ಲಿ ಹಲವು ವಿಶೇಷ ಆಚರಣೆಗಳು, ಹಬ್ಬಗಳು ಬರುತ್ತವೆ. ಮುಸ್ಲಿಂರ ಪವಿತ್ರ ಆಚರಣೆಗಳಲ್ಲಿ ಒಂದಾದ ಈದ್ ಮಿಲಾದ್ ಕೂಡ ಈ ತಿಂಗಳಲ್ಲೇ ಬರುತ್ತದೆ. ಗಣೇಶ ಚತುರ್ಥಿ, ಅನಂತ ಚತುದರ್ಶಿ, ಪಿತೃಪಕ್ಷ ಆರಂಭವಾಗುವುದು ಈ ಮಾಸದಲ್ಲೇ.
ತಾಜಾ ಫೋಟೊಗಳು
2024ರಲ್ಲಿ ಸೆಪ್ಟಂಬರ್ 3 ರಿಂದ ಭಾದ್ರಪದ ಮಾಸ ಆರಂಭವಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಈ ಮಾಸದಲ್ಲಿ ಸೂರ್ಯನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಹಾಗಾದರೆ ಭಾದ್ರಪದ ಮಾಸದಲ್ಲಿ ಬರುವ ಪ್ರಮುಖ ಆಚರಣೆಗಳ ಬಗ್ಗೆ ತಿಳಿಯೋಣ.
ಭಾದ್ರಪದ ಮಾಸದ ಪ್ರಮುಖ ಹಬ್ಬ, ಆಚರಣೆಗಳು
ಗಣೇಶ ಚತುರ್ಥಿ, ಸೆಪ್ಟೆಂಬರ್ 7: ಈ ವರ್ಷ ಭಾದ್ರಪದ ಮಾಸದಲ್ಲಿ ಬರುವ ಮೊದಲ ಪ್ರಮುಖ ಹಬ್ಬ ಗಣೇಶ ಚತುರ್ಥಿ. ಸೆಪ್ಟೆಂಬರ್ 7 ರಂದು ಗಣೇಶನ ಹಬ್ಬವಿದ್ದು, ಅದಕ್ಕೂ ಮುನ್ನ ದಿನ ಅಂದರೆ ಸೆಪ್ಟೆಂಬರ್ 6 ರಂದು ಗೌರಿ ಹಬ್ಬವಿದೆ. ಗಣೇಶ ಚತುರ್ಥಿ ಭಾರತದಲ್ಲಿ ನಡೆಯುವ ಪ್ರಮುಖ ಹಬ್ಬಗಳಲ್ಲಿ ಒಂದು. ಇದು ಸುಮಾರು 10 ದಿನಗಳ ಕಾಲ ನಡೆಯುವ ಆಚರಣೆ.
ಪರಿವರ್ತಿನಿ ಏಕಾದಶಿ, 14 ಸೆಪ್ಟೆಂಬರ್: ಹಿಂದೂಗಳಲ್ಲಿ ಪ್ರತಿ ತಿಂಗಳು ಬರುವ ಏಕಾದಶಿಗೆ ವಿಶೇಷ ಪ್ರಾಮುಖ್ಯವಿದೆ. ಏಕಾದಶಿಯು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದಿನ ಉಪವಾಸ, ವೃತ ಮಾಡುವ ಮೂಲಕ ಆಚರಿಸಲಾಗುತ್ತದೆ.
ಈದ್ಮಿಲಾದ್, ಸೆಪ್ಟೆಂಬರ್ 16: ಭಾದ್ರಪದ ಮಾಸದಲ್ಲಿ ಹಿಂದೂಗಳ ಹಬ್ಬ ಮಾತ್ರವಲ್ಲ, ಮುಸ್ಲಿಂರ ಪವಿತ್ರ ಆಚರಣೆಯಾದ ಈದ್ ಮಿಲಾದ್ ಕೂಡ ಬರುತ್ತದೆ. ಸೆಪ್ಟೆಂಬರ್ 16 ರಂದು ಈದ್ ಮಿಲಾದ್ ಇದೆ. ಪ್ರವಾದಿ ಮುಹಮ್ಮದ್ (ಸ) ರವರ ನೆನಪಿಗಾಗಿ ಈದ್-ಎ-ಮಿಲಾದ್-ಉನ್-ನಬಿ ಆಚರಿಸಲಾಗುತ್ತದೆ.
ಅನಂತ ಚತುರ್ದಶಿ, ಸೆಪ್ಟೆಂಬರ್ 17: ಗಣೇಶ ಚತುರ್ಥಿಯ ಕೊನೆಯ ದಿನ, ಅಂದರೆ 10 ದಿನಗಳ ಆಚರಣೆಯ ಗಣೇಶ ಹಬ್ಬದ ಅಂತ್ಯವನ್ನು ಸೂಚಿಸುವ ದಿನವಿದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿಯನ್ನು ಅನಂತ ಚತುರ್ದಶಿ ಎಂದು ಹೇಳಲಾಗುತ್ತದೆ. ಆ ದಿನ ಅನಂತ ಪದ್ಮನಾಭ ವ್ರತವನ್ನು ಆಚರಿಸಲಾಗುತ್ತದೆ .
ಪಿತೃಪಕ್ಷ, ಸೆಪ್ಟೆಂಬರ್ 17: ಸತ್ತವರಿಗೆ ಪಿಂಡದಾನ ಮಾಡುವ ಪದ್ಧತಿ ಹಿಂದೂಗಳಲ್ಲಿ ವಿಶೇಷ. ಪಿತೃಪಕ್ಷವನ್ನು ವಿಶೇಷವಾಗಿ ಪಿಂಡದಾನಕ್ಕೆ ಸಮರ್ಪಿಸಲಾಗಿದೆ. ಈ ವರ್ಷ ಸೆಪ್ಟೆಂಬರ್ 17 ರಿಂದ ಪಿತೃಪಕ್ಷ ಆರಂಭವಾಗುತ್ತದೆ.
ಭಾದ್ರಪದ ಹುಣ್ಣಿಮೆ ಸೆಪ್ಟೆಂಬರ್ 18: ಭಾದ್ರಪದ ಮಾಸದಲ್ಲಿ ಬರುವ ಹುಣ್ಣಿಮೆಗೆ ವಿಶೇಷ ಪ್ರಾಧಾನ್ಯವಿದೆ.ಈ ದಿನ ಕೆಲವರು ಉಪವಾಸ ಮಾಡುತ್ತಾರೆ. ಆ ಮೂಲಕ ದೇವರನ್ನು ಭಜಿಸುತ್ತಾರೆ.
ಇದಲ್ಲದೇ ಭಾದ್ರಪದ ಮಾಸದಲ್ಲಿ ಬಲರಾಮ ಜಯಂತಿ, ಧನ್ವಂತರಿ ಜಯಂತಿ, ವರಾಹ ಜಯಂತಿ, ರಿಷಿ ಪಂಚಮಿ, ವಾಮನ ಜಯಂತಿಯಂತಹ ವಿಶೇಷ ದಿನಗಳೂ ಇವೆ.