ಈ ವರ್ಷ ಅನಂತ ಚತುರ್ದಶಿ ಯಾವಾಗ? ಅನಂತ ಪದ್ಮನಾಭ ವ್ರತದ ಮಹತ್ವ, ಹಿನ್ನೆಲೆ, ವ್ರತಾಚರಣೆಯ ನಿಯಮಗಳ ಕುರಿತ ಮಾಹಿತಿ ಇಲ್ಲಿದೆ
Sep 09, 2024 05:56 PM IST
ಅನಂತ ಚತುರ್ದಶಿ
- ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಅನಂತ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಮಹಾವಿಷ್ಣುವನ್ನು ಆರಾಧಿಸುವ ಈ ದಿನಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ವರ್ಷ ಅನಂತ ಚತುರ್ದಶಿ ಯಾವಾಗ, ಅನಂತಪದ್ಮನಾಭ ವ್ರತಾಚರಣೆಯ ನಿಯಮಗಳೇನು, ಈ ದಿನ ಪೌರಾಣಿಕ ಹಿನ್ನೆಲೆಯೇನು ತಿಳಿಯಿರಿ (ಬರಹ: ಎಚ್. ಸತೀಶ್, ಜ್ಯೋತಿಷಿ)
ಪ್ರತಿ ಸಂವತ್ಸರದಲ್ಲಿಯೂ ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ದಶಿಯ ದಿನದಂದು ಅನಂತಪದ್ಮನಾಭವ್ರತ ಬರುತ್ತದೆ. ಈ ವರ್ಷ ಸೆಪ್ಟಂಬರ್ 16ರಂದು ಈ ಆಚರಣೆ ಇದೆ. ಆ ದಿನದಂದು ಬೆಳಿಗ್ಗೆ 12.59ಕ್ಕೆ ಚತುರ್ದಶಿ ಆರಂಭವಾಗುತ್ತದೆ. ಸೆಪ್ಟೆಂಬರ್ 17ರಂದು ಬೆಳಿಗ್ಗೆ 10.55ರವರೆಗೂ ಚತುರ್ದಶಿ ಇರುತ್ತದೆ. ಆದ್ದರಿಂದ ಸೆಪ್ಟೆಂಬರ್ 16ರಂದೇ ವ್ರತವನ್ನು ಆಚರಿಸಬೇಕು. ಕನಿಷ್ಠ ಪಕ್ಷ 3 ಲಗ್ನಗಳು ಅಂದರೆ 6 ಗಂಟೆಗಳು ಚತುರ್ದಶಿ ಇರಬೇಕು. 17ರಂದು ವ್ರತ ಆಚರಿಸಲು ಬಯಸುವವರು ಬೆಳಿಗ್ಗೆ 10.55ರ ಒಳಗೆ ಪೂಜೆಯನ್ನು ಪೂರ್ಣಗೊಳಿಸಬೇಕು.
ತಾಜಾ ಫೋಟೊಗಳು
ಅನಂತ ಪದ್ಮನಾಭ ವ್ರತಾಚರಣೆ
ಈ ಪೂಜೆಯನ್ನು ಬೆಳಗಿನ ವೇಳೆ ಮಾಡುವುದು ಬಹಳ ಶ್ರೇಷ್ಠ. ಸಾಧ್ಯವಾಗದೇ ಹೋದಲ್ಲಿ ಮಾತ್ರ ಮಧ್ಯಾಹ್ನ ಮಾಡಬಹುದು. ಅನಂತರ ಸೂರ್ಯಸ್ತ ಆದ ಮೇಲೆ ಸಂಜೆ ವೇಳೆ ಮತ್ತೊಮ್ಮೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಸಂಪ್ರದಾಯದಂತೆ ದಂಪತಿಗಳು ಮಾತ್ರ ಈ ಪೂಜೆಯನ್ನು ಮಾಡಬೇಕು. ಆದರೆ ಕೆಲವು ಕಡೆ ಕೇವಲ ಪುರುಷರು ಮಾತ್ರ ಪೂಜೆಯನ್ನು ಮಾಡುತ್ತಾರೆ. ಎರಡು ಕಲಶಗಳನ್ನು ಇಡುತ್ತಾರೆ. ಕೆಲವೆಡೆ ಪ್ರತಿ ದಂಪತಿಗಳಿಗೆ ಒಂದೊಂದು ಕಳಶವನ್ನು ಇಟ್ಟು ಪೂಜಿಸುತ್ತಾರೆ. ಅವರವರ ಸಂಪ್ರದಾಯ ಮತ್ತು ಆಚರಣೆಯನ್ನು ಅದು ಅವಲಂಬಿಸಿರುತ್ತದೆ.
ಕಲಶಕ್ಕೆ ಬಿಳಿ ಬಣ್ಣದ ವಸ್ತ್ರವನ್ನು ಹೊದಿಸಬೇಕು. ಏಳು ದರ್ಬೆಗಳಿಂದ ಅನಂತನನ್ನು ಅಂದರೆ ಸರ್ಪವನ್ನು ಹೆಣೆಯಬೇಕು. ವ್ರತವು ಆರಂಭವಾಗುವುದೇ ಯಮುನಾ ಪೂಜೆಯಿಂದ. ಮೊದಲು ತುಳಸಿ ಕಟ್ಟೆಯ ಬಳಿ ಯಮುನಾ ಪೂಜೆಯನ್ನು ಮಾಡಬೇಕು. ಯಮುನಾ ಪೂಜೆಯಲ್ಲಿನ ನೀರನ್ನು ಕಲಶಗಳಿಗೆ ಹಾಕಿಕೊಳ್ಳಬೇಕು. ಅನಂತರ ಅನಂತಪದ್ಮನಾಭ ಸ್ವಾಮಿಗೆ ಅವಲಕ್ಕಿಯನ್ನು ಅರ್ಪಿಸಿ ಪ್ರಸಾದವನ್ನಾಗಿ ಸ್ವೀಕರಿಸಬೇಕು. ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ನೇವೇದ್ಯ ಮಾಡಬಹುದು. ಈ ಪೂಜೆಗೆ ಚಿನ್ನದ ಪ್ರತಿಮೆ ಬಲು ಶ್ರೇಷ್ಠ. ಸಾಧ್ಯವಾಗದೆ ಹೋದಲ್ಲಿ ಬೆಳ್ಳಿ ವಿಗ್ರಹವನ್ನು ಉಪಯೋಗಿಸಬಹುದು. 14 ಗಂಟುಗಳ ದಾರವನ್ನು ಪೂಜಿಸಿ ಪುರುಷರುಬಲಗೈಯಲ್ಲಿ ಧರಿಸಬೇಕು. ಸ್ತ್ರೀಯರು ಕತ್ತಿನಲ್ಲಿ ಧರಿಸಬೇಕು. ಪುರುಷರು ಮತ್ತು ಸ್ತ್ರಿಯರಿಗೆ ಪ್ರತ್ಯೇಕವಾದ ಕೆಂಪುಬಣ್ಣದ ದಾರಗಳು ದೊರೆಯುತ್ತವೆ.
ಯಾವುದೇ ಕಾರಣಕ್ಕೂ ಹಿಂದಿನ ವರ್ಷದ ಪೂಜೆಯಲ್ಲಿ ಕಟ್ಟಿದ್ದ ದಾರವನ್ನು ಕಳೆದುಕೊಳ್ಳಬಾರದು. ಒಂದು ವೇಳೆ ದಾರವೂ ಕಳೆದು ಹೋದಲ್ಲಿ ವಾಸುದೇವ ಮಂತ್ರದ ಹೋಮವನ್ನು ಮಾಡಬೇಕು. ಅನಂತರ ಕೇಶವಾದಿ ನಾಮಗಳಿಂದ ಹೋಮವನ್ನು ಮಾಡಬೇಕು. ಇದಾದ ನಂತರ ಮತ್ತೆ ಮಾತ್ರ ಪೂಜೆ ಮಾಡುವ ಅಧಿಕಾರ ಲಭಿಸುತ್ತದೆ. ಸಂಜೆಯಲ್ಲಿ ಅನಂತಪದ್ಮನಾಭಸ್ವಾಮಿಯ ಕಥೆಯನ್ನು ಕೇಳಿದ ನಂತರ ಮಹಾಮಂಗಳಾರತಿಯನ್ನು ಮಾಡಿ ಪೂಜೆಯನ್ನು ಸಂಪೂರ್ಣಗೊಳಿಸಬೇಕು. ಮಾರನೆಯ ದಿನ ಉತ್ತರಪೂಜೆಯ ನಂತರ ಕಲಶದ ನೀರನ್ನು ಮಕ್ಕಳ ಮುಖಕ್ಕೆ ಪ್ರೋಕ್ಷಿಸಿದರೆ ಭಯದ ನಿವಾರಣೆ ಯಾಗುವುದು.
ಅನಂತ ಪದ್ಮನಾಭ ವ್ರತದ ಹಿನ್ನೆಲೆ
ಈ ಪೂಜೆಯ ಬಗ್ಗೆ ಕೃತಯುಗದ ಕಥೆ ಇದೆ. ಸುಮಂತನು ವಶಿಷ್ಠ ಗೋತ್ರದಲ್ಲಿ ಜನಿಸಿರುತ್ತಾನೆ. ಬೃಗುಮಹರ್ಷಿಗಳ ಮಗಳಾದ ದೀಕ್ಷಾದೇವಿಯನ್ನು ವಿವಾಹವಾಗುತ್ತಾನೆ. ಅವರಿಗೆ ಹೆಣ್ಣು ಮಗುವಿನ ಜನನವಾಗುತ್ತದೆ. ಆ ಮಗುವಿಗೆ ಸುಶೀಲೇ ಎಂದು ನಾಮಕರಣ ಮಾಡುತ್ತಾರೆ. ವಿಧಿಯ ಆಟದಿಂದ ಚಿಕ್ಕವಯಸ್ಸಿನಲ್ಲಿ ದೀಕ್ಷಾದೇವಿಯು ಅಸುನೀಗುತ್ತಾಳೆ. ಆಗ ಕರ್ಕಶಿ ಎಂಬ ಸ್ತ್ರೀಯ ಜೊತೆ ಎರಡನೇ ವಿವಾಹವಾಗುತ್ತಾನೆ. ಆದರೆ ಈಕೆಗೆ ಎಲ್ಲಾ ರೀತಿಯ ದುರಾಚಾರಗಳು ಇರುತ್ತವೆ.
ಇದನ್ನು ಲೆಕ್ಕಿಸದ ಮಗಳು ಸುಶೀಲೆ ತಂದೆಯ ನಿತ್ಯ ಪೂಜೆಗೆ ಸಹಕಾರ ನೀಡುತ್ತಾಳೆ. ಆಕೆಗೂ ಸಹ ದೇವರಲ್ಲಿ ಅಪಾರ ಭಕ್ತಿ ಇರುತ್ತದೆ. ದಿನ ಕಳೆದಂತೆ ಸುಮಂತನು ಕೌಂಡಿನ್ಯ ಎಂಬ ವರನಿಗೆ ಮಗಳನ್ನು ಕೊಟ್ಟು ವಿವಾಹ ಮಾಡುತ್ತಾನೆ. ಆಗ ಸುಶೀಲಯು ಪತಿಯ ಸಹಕಾರದಿಂದ ಶ್ರೀ ಅನಂತನ ಪೂಜೆಯನ್ನು ಮಾಡುತ್ತಾಳೆ. ದಿನ ಕಳೆದಂತೆ ಅವರ ಬಡತನ ತೊಲಗಿ ಪತಿಯ ಆಶ್ರಮವು ಅಷ್ಟೈಶ್ವರ್ಯಗಳಿಂದ ತುಂಬುತ್ತದೆ. ಪತಿಯು ಸುಶೀಲೆಯ ಕೈಯಲ್ಲಿದ್ದ ಅನಂತನ ದಾರವನ್ನು ನೋಡುತ್ತಾನೆ. ಯಾರನ್ನು ವಶ ಮಾಡಿಕೊಳ್ಳಲು ಇದನ್ನು ಕಟ್ಟಿಕೊಂಡಿರುವೆ ಎಂದು ಕೇಳುತ್ತಾನೆ. ಸಾಲದೆಂಬಂತೆ ಆ ದಾರವನ್ನು ತೆಗೆದುಕೊಂಡು ಬೆಂಕಿಯಲ್ಲಿ ಹಾಕಿಬಿಡುತ್ತಾನೆ. ಕೂಡಲೇ ಸುಶೀಲೆಯು ಸುಡುತ್ತಿದ್ದ ದಾರವನ್ನು ಹಾಲಿನಲ್ಲಿ ನೆನೆಸಿ ಇಡುತ್ತಾಳೆ. ಆನಂತರ ಕೌಂಡಿಲ್ಯನು ತನ್ನೆಲ್ಲ ಆಸ್ತಿಪಾಸ್ತಿಗಳನ್ನು ಕಳೆದುಕೊಳ್ಳುತ್ತಾನೆ.
ಇದರಿಂದ ಪಾಠ ಕಲಿತ ಕೌಂಡಿಲ್ಯನು ಭಗವಂತನಾದ ಅನಂತಪದ್ಮನಾಭ ಸ್ವಾಮಿಯನ್ನು ಹುಡುಕುತ್ತಾ ಹೊರಡುತ್ತಾನೆ. ದಾರಿಯಲ್ಲಿ ಕಂಡ ಪ್ರಾಣಿ ಪಕ್ಷಿಗಳು ನದಿ ನೀರನ್ನು ಸಹ ಅನಂತಪದ್ಮನಾಭ ಸ್ವಾಮಿಯ ಬಗ್ಗೆ ಕೇಳುತ್ತಾನೆ. ಆದರೆ ಯಾರಿಂದಲೂ ಮನ ಒಪ್ಪುವ ಉತ್ತರ ಬರುವುದಿಲ್ಲ. ಬಹುವಾಗಿ ನೊಂದ ಕೌಂಡಿಲ್ಯನು ಪ್ರಜ್ಞಾಹೀನನಾಗಿ ಬಿದ್ದುಬಿಡುತ್ತಾನೆ. ಈ ಸಮಯದಲ್ಲಿ ಕನಿಕರ ತೋರಿ ಸ್ವಯಂ ಅನಂತಪದ್ಮನಾಭಸ್ವಾಮಿಯೇ ಬಂದು ತನ್ನ ಅರಮನೆಗೆ ಕರೆದುಕೊಂಡು ಹೋಗುತ್ತಾನೆ. ಭಗವಾನ್ ವಿಷ್ಣುವು ತನ್ನ ವಿಶ್ವರೂಪವನ್ನು ತೋರಿಸುತ್ತಾನೆ. ಇದರಿಂದ ಕೌಂಡಿಲ್ಯನಿಗೆ ಜ್ಞಾನೋದಯವಾಗುತ್ತದೆ. ಕೌಂಡಿಲ್ಯನು ಪರಮಾತ್ಮನನ್ನು ವಿವಿಧ ರೀತಿಯಲ್ಲಿ ಸ್ತುತಿಸುತ್ತಾನೆ.
ಅವನ ಭಕ್ತಿಗೆ ಮೆಚ್ಚಿದ ಅನಂತಪದ್ಮನಾಭ ಸ್ವಾಮಿಯು ಯಾವುದಾದರು ಮೂರು ವರಗಳನ್ನು ಬೇಡುವಂತೆ ಹೇಳುತ್ತಾನೆ. ಕೊನೆಗೆ ವರಗಳ ಸಹಾಯದಿಂದ ಕಳೆದುಕೊಂಡ ಐಶ್ವರ್ಯವನ್ನು ಮರಳಿ ಪಡೆಯುತ್ತಾನೆ . ಮಾನವ ರೂಪದಲ್ಲಿ ಬಂದ ಅನಂತ ಪದ್ಮನಾಭಸ್ವಾಮಿಯು ದಾರಿಯಲ್ಲಿ ಕಾಣುವ ಮಾವಿನ ಮರವು ಮಾನವನಾಗಿದ್ದು, ತನ್ನಲ್ಲಿದ್ದ ವಿದ್ಯೆಯನ್ನು ಯಾರಿಗೂ ಕಲಿಸಿ ರುವುದಿಲ್ಲ. ಆದ್ದರಿಂದ ಯಾರಿಗೂ ಪ್ರಯೋಜನವಿಲ್ಲದ ಮಾವಿನ ಮರವಾಗಿರುತ್ತಾನೆ. ಧನಿಕನೊಬ್ಬನು ತನ್ನಲ್ಲಿರುವ ಹಣದಿಂದ ತಾನೂ ತಿನ್ನದೆ ಬೇರೆಯವರಿಗೆ ಸಹಾಯವನ್ನು ಮಾಡದೆ ಇರುತ್ತಾನೆ . ಆದ್ದರಿಂದ ಹಸುವಾಗಿ ಹುಟ್ಟಿದರೂ ಹುಲ್ಲನ್ನು ತಿನ್ನಲಾರದೆ ನಿಂತಿರುತ್ತಾನೆ. ಕೊನೆಯದಾಗಿ ಎದುರಾಗುವ ಕತ್ತೆಯು ಸಹ ಮಾನವನೇ ಆಗಿದ್ದನು ಅವನು ಪ್ರಯೋಜನಕ್ಕೆ ಬಾರದ ಜಾಗಗಳನ್ನು ದಾನ ನೀಡುವುದರಿಂದ ಕತ್ತೆಯಾಗಿ ಜನಿಸಿದನೆಂದು ಹೇಳುತ್ತಾನೆ.
ಇದೆಲ್ಲದ ಅರ್ಥವು ಒಂದೇ ಕಲಿಯುಗದಲ್ಲಿ ಮಾನವರಾಗಿ ಜನಿಸಿದ ನಾವು ನಮ್ಮ ವಿದ್ಯೆಯನ್ನು ಬೇರೆಯವರಿಗೆ ದಾರೆ ಎರೆಯಬೇಕು. ಹಾಗೆಯೇ ನಮ್ಮಲ್ಲಿರುವ ಹಣದಿಂದ ಜನಸೇವೆಯನ್ನು ಮಾಡಬೇಕು. ಇದಲ್ಲದೆ ದಾನ ಮಾಡುವುದಾದರೆ ಒಳ್ಳೆಯ ಪದಾರ್ಥಗಳನ್ನೇ ದಾನ ಮಾಡಬೇಕು. ಇದರಿಂದ ಮಾತ್ರ ಮುಕ್ತಿ ದೊರೆಯಲು ಸಾಧ್ಯ.