Ganesh Chaturthi 2024: ಗಣೇಶ ಚತುರ್ಥಿ ಯಾವಾಗ, ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಶುಭ ಮುಹೂರ್ತ ಯಾವುದು? ಇಲ್ಲಿದೆ ವಿವರ
Aug 29, 2024 09:55 AM IST
ಗಣೇಶ ಚತುರ್ಥಿ 2024
- Ganesh Chaturthi 2024: ಭಾರತದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿಯು ಒಂದು. ಈ ಹಬ್ಬದ ಸಂದರ್ಭ ಬೀದಿ ಬೀದಿಗಳಲ್ಲೂ ಗಣಪತಿ ಮೂರ್ತಿ ಕೂಡಿಸುವುದು ವಾಡಿಕೆ. ಈ ವರ್ಷ ಗಣೇಶನ ಹಬ್ಬ ಯಾವಾಗ, ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಶುಭ ಘಳಿಗೆ ಯಾವುದು, ಇಲ್ಲಿದೆ ವಿವರ
ಭಾರತದಲ್ಲಿ ಪ್ರತಿ ವರ್ಷ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿನಾಯಕ ಚತುರ್ಥಿಯಂದು ಪ್ರತಿ ಬೀದಿಯಲ್ಲೂ ಮಂಟಪ ನಿರ್ಮಿಸಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಗಣೇಶನ ಹಬ್ಬ ಬಹಳ ವಿಶೇಷ. ಇಲ್ಲಿ ತಿಂಗಳುಗಳ ಕಾಲ ಹಬ್ಬ ನಡೆಯುತ್ತದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಗೌರಿ–ಗಣೇಶ ಹಬ್ಬಕ್ಕೆ ಬಹಳ ಪ್ರಾಶಸ್ತ್ಯವಿದೆ.
ತಾಜಾ ಫೋಟೊಗಳು
ಗಣೇಶ ಚತುರ್ಥಿಯು ಭಾದ್ರಪದ ಮಾಸದ ಚತುರ್ಥಿ ತಿಥಿಯಿಂದ ಪ್ರಾರಂಭವಾಗುತ್ತದೆ ಮತ್ತು ಅನಂತ ಚತುರ್ದಶಿ ತಿಥಿಯವರೆಗೆ ಮುಂದುವರಿಯುತ್ತದೆ. ಈ ಹಬ್ಬದ ಸಂದರ್ಭ ಹಲವು ಮನೆಗಳಲ್ಲಿ ಹಾಗೂ ಬೀದಿಗಳಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಹಾಗಾದರೆ ಈ ವರ್ಷ ಗಣೇಶ ಚತುರ್ಥಿ ಯಾವಾಗ, ಮೂರ್ತಿ ಪ್ರತಿಷ್ಠಾಪನೆಗೆ ಶುಭ ಗಳಿಗೆ ಯಾವುದು ಇಲ್ಲಿದೆ ವಿವರ.
ಗಣೇಶ ಚತುರ್ಥಿ ಯಾವಾಗ?
ಪಂಚಾಂಗದ ಪ್ರಕಾರ, ಚತುರ್ಥಿ ತಿಥಿ ಸೆಪ್ಟೆಂಬರ್ 6 ಶುಕ್ರವಾರ 12:08 ಕ್ಕೆ ಪ್ರಾರಂಭವಾಗುತ್ತದೆ. ಇದು ಶನಿವಾರ, ಸೆಪ್ಟೆಂಬರ್ 7, 2024 ರಂದು ಮಧ್ಯಾಹ್ನ 2:05 ರವರೆಗೆ ಮುಂದುವರಿಯುತ್ತದೆ. 7ನೇ ದಿನದ ಉದಯ ತಿಥಿ ಆಗಿರುವುದರಿಂದ ಇಂದು ವಿನಾಯಕ ಚೌತಿ ನಡೆಯಲಿದೆ. ಗಣೇಶ ಚತುರ್ಥಿಯ ಪವಿತ್ರ ಹಬ್ಬವನ್ನು ಉದಯಕಲಿ ಚತುರ್ಥಿಯ ದಿನಾಂಕದಂದು ಆಚರಿಸಲಾಗುತ್ತದೆ. ಹಾಗಾಗಿ ಈ ವರ್ಷ ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ ಆಚರಣೆಗೆ ಸೂಕ್ತ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಸೆಪ್ಟೆಂಬರ್ 6ರಂದು ಸಂಜೆ 6 ರಿಂದ ಸೆಪ್ಟೆಂಬರ್ 7ರ ಮಧ್ಯಾಹ್ನದವರೆಗೆ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಬಹುದು.
ಗಣೇಶ ಚತುರ್ಥಿಯ ಮಹತ್ವ
ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚತುರ್ಥಿಗೆ ವಿಶೇಷ ಮಹತ್ವವಿದೆ ಎಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಪುರಾಣಗಳ ಪ್ರಕಾರ ಇದು ಗಣೇಶನು ಜನಿಸಿದ ದಿನ. ಗಣಪತಿಯ ಹುಟ್ಟುಹಬ್ಬದ ಆಚರಿಸುವ ಜನರು ತಮ್ಮ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಪೂಜಿಸುತ್ತಾರೆ.
ಅನಂತ ಚತುರ್ದಶಿಯ ಹತ್ತನೆಯ ದಿನದಂದು ಈ ಗಣಪತಿ ಮೂರ್ತಿಗಳನ್ನು ನಿಮಜ್ಜನ ಅಥವಾ ವಿಸರ್ಜನೆ ಮಾಡಲಾಗುತ್ತದೆ. ವಿವಿಧ ಪೂಜಾ ಸಮಿತಿಗಳು ಪೂಜೆಯನ್ನು ನಡೆಸುತ್ತವೆ. ಮಂಟಪಗಳಲ್ಲಿ ಒಂಬತ್ತು ದಿನಗಳ ಕಾಲ ಹಬ್ಬದ ವಾತಾವರಣ ಇರುತ್ತದೆ. ಬೆಳಗ್ಗೆ ಮತ್ತು ಸಂಜೆ ಪೂಜೆಗಳು ನಡೆಯುತ್ತಿದ್ದು, ಅಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಭಕ್ತರು ತಮ್ಮ ಮನೆಗಳಲ್ಲಿಯೂ ಪೂಜೆಯನ್ನು ನೆರವೇರಿಸುತ್ತಾರೆ. ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ, ಮೂರು, ಐದು, ಏಳು ಅಥವಾ ಒಂಬತ್ತು ದಿನಗಳವರೆಗೆ ನಿತ್ಯ ಪೂಜೆಯನ್ನು ನಡೆಸಲಾಗುತ್ತದೆ. ಅದರ ನಂತರ ಮೂರ್ತಿ ವಿರ್ಸಜನೆ ಮಾಡಲಾಗುತ್ತದೆ.
ದೃಕ್ ಪಂಚಾಂಗದ ಪ್ರಕಾರ ಗಣೇಶ ಚತುರ್ಥಿಗೆ ಶುಭ ಮುಹೂರ್ತ
ಗಣೇಶ ಚತುರ್ಥಿ 2024 ಮಂಗಳಕರ ಸಮಯ
* ಚತುರ್ಥಿ ಪ್ರಾರಂಭ: ಸೆಪ್ಟೆಂಬರ್ 06, 2024 ಮಧ್ಯಾಹ್ನ 3:01 ಗಂಟೆ
* ಚತುರ್ಥಿ ಮುಕ್ತಾಯ: ಸೆಪ್ಟೆಂಬರ್ 07, 2024 ಸಂಜೆ 5:37 ಗಂಟೆ
* ನಿಷೇಧಿತ ಚಂದ್ರನ ವೀಕ್ಷಣೆ ಸಮಯ: ಬೆಳಿಗ್ಗೆ 9:30 ರಿಂದ ರಾತ್ರಿ 8:45
* ಅವಧಿ: 11 ಗಂಟೆ 15 ನಿಮಿಷಗಳು
* ಒಂದು ದಿನದ ಮೊದಲು ನಿಷೇಧಿತ ಚಂದ್ರನ ವೀಕ್ಷಣೆ ಸಮಯ: ಸೆಪ್ಟೆಂಬರ್ 6 ರಂದು ಮಧ್ಯಾಹ್ನ 3:01 ರಿಂದ ರಾತ್ರಿ 8:16
* ಅವಧಿ: 05 ಗಂಟೆಗಳು 15 ನಿಮಿಷಗಳು
* ಮಧ್ಯಾಹ್ನ ಗಣೇಶ ಪೂಜೆ ಮುಹೂರ್ತ: 11:03 AM ನಿಂದ 01:34 PM
* ಅವಧಿ: 2 ಗಂಟೆಗಳು 31 ನಿಮಿಷಗಳು
* ಗಣೇಶ ವಿಸರ್ಜನೆ: ಮಂಗಳವಾರ, ಸೆಪ್ಟೆಂಬರ್ 17, 2024
ಗಣಪತಿಯನ್ನು ಪ್ರಥಮ ಪೂಜಿತ ಎಂದು ಹೇಳಲಾಗುತ್ತದೆ. ನಾವು ಯಾವುದೇ ಕಾರ್ಯ ಮಾಡುವ ಮುನ್ನ ಗಣಪತಿಯನ್ನು ಪೂಜಿಸುವುದರಿಂದ ಮಾಡುವ ಕೆಲಸಗಳಿಗೆ ವಿಘ್ನ ಎದುರಾಗುವುದಿಲ್ಲ ಎಂಬ ನಂಬಿಕೆ ಇದೆ. ಆದ್ದರಿಂದಲೇ ಆತನನ್ನು ವಿಘ್ನ ನಿವಾರಕ ಎಂದು ಕರೆಯುತ್ತಾರೆ. ಯಾವುದೇ ಪೂಜೆ ಕಾರ್ಯಕ್ರಮ ಆರಂಭವಾದಾಗ ಮೊದಲು ಪೂಜೆ ಸ್ವೀಕರಿಸುವುದು ಗಣೇಶ.