ರಾಮಾಯಣ ಕಿಷ್ಕಿಂಧಾಕಾಂಡ: ಸೀತಾ ವಿಯೋಗದ ಬೇಸರದಲ್ಲಿದ್ದ ಶ್ರೀರಾಮನಿಗೆ ವಾನರರ ಪರಿಚಯ, ಹುಡುಕಾಟಕ್ಕೆ ಸ್ನೇಹದ ಆಸರೆ -ಶ್ರೀರಾಮನವಮಿ ವಿಶೇಷ
Apr 17, 2024 09:09 AM IST
ರಾಮಾಯಣ ಭಾಗ 5- ಕಿಷ್ಕಿಂಧಾಕಾಂಡ
ರಾಮಾಯಣದಲ್ಲಿ ಕಿಷ್ಕಿಂಧಾಕಾಂಡದ ಮಹತ್ವ: ಸೀತಾಪಹರಣದ ನಂತರದ ಕಥೆಯನ್ನು ಕಿಷ್ಕಿಂಧಾಕಾಂಡ ವಿವರಿಸುತ್ತದೆ. ಶ್ರೀರಾಮನು ವಾನರರನ್ನು ಭೇಟಿಯಾಗುವ, ರಾಮ-ಹನುಮರ ಸ್ನೇಹ ಗಟ್ಟಿಯಾಗುವ ಕಥಾ ಭಾಗ ಇಲ್ಲಿದೆ. (ಬರಹ: ಎಚ್.ಸತೀಶ್, ಜ್ಯೋತಿಷಿ)
ಕಿಷ್ಕಿಂಧಾಕಾಂಡದ ಕಥೆ: ಸೀತಾಪಹರಣ ಹಾಗೂ ನಂತರದ ಬೆಳವಣಿಗೆಗಳ ಕಥೆಯನ್ನು ಕಿಷ್ಕಿಂಧಾಕಾಂಡ ವಿವರಿಸುತ್ತದೆ. ಸೀತಾ ವಿಯೋಗದಿಂದ ತಲ್ಲಣಿಸುವ ಶ್ರೀರಾಮ 'ವೈದೇಹಿ ಏನಾದಳು' ಎಂದು ಪ್ರಕೃತಿಯನ್ನು ಪ್ರಶ್ನಿಸುತ್ತಾನೆ. ಸೀತೆಯನ್ನು ಹುಡುಕುತ್ತಾ ಶ್ರೀರಾಮನು ಕಿಷ್ಕಿಂಧೆ ಎಂಬ ಪ್ರದೇಶಕ್ಕೆ ಆಗಮಿಸುತ್ತಾನೆ. ಭೌಗೋಳಿಕವಾಗಿ ಈ ಪ್ರದೇಶವನ್ನು ಕರ್ನಾಟಕದ ಹಂಪಿ ಎಂದು ಗುರುತಿಸಲಾಗಿದೆ. ರಾಮಾಯಣ ಕಾಲದಲ್ಲಿ ಇದು ವಾನರ ಸಾಮ್ರಾಜ್ಯವಾಗಿರುತ್ತದೆ. ಇಲ್ಲಿ ರಾಮನಿಗೆ ಸುಗ್ರೀವ, ಹನುಮಂತ ಮುಂತಾದ ವಾನರ ವೀರರ ಗೆಳೆತನವಾಗುತ್ತದೆ. ಶ್ರೀರಾಮ ಲಕ್ಷ್ಮಣರ ಜೊತೆಗೂಡಿ ವಾನರ ಸೈನ್ಯವು ಸೀತೆಯ ಹುಡುಕಾಟ ಶುರು ಮಾಡುತ್ತದೆ. ವಾಲಿ ವಧೆಯ ಕಥೆಯೂ ಇಲ್ಲಿಯೇ ಬರುತ್ತದೆ.
ತಾಜಾ ಫೋಟೊಗಳು
ಮಾಯಾ ಸನ್ಯಾಸಿಯ ವೇಷದಲ್ಲಿ ಬರುವ ರಾವಣ ಸೀತೆಯನ್ನು ಮೋಸದಿಂದ ಅಪಹರಿಸುತ್ತಾನೆ. ಆಗ ಸೀತೆಯು ರಾವಣನಿಗೆ ತನ್ನನ್ನು ರಾಮಚಂದ್ರನಿಗೆ ಒಪ್ಪಿಸಿ ಕ್ಷಮೆ ಬೇಡುವಂತೆ ಹೇಳುತ್ತಾಳೆ. ಇದರಿಂದ ಕೇವಲ ನಿನ್ನ ಪ್ರಾಣವಲ್ಲದೆ ನಿನ್ನ ಸಾಮ್ರಾಜ್ಯವು ಉಳಿಯುತ್ತದೆ. ಹೆಂಗಸರನ್ನು ಗೌರವದಿಂದ ನೋಡಬೇಕೆ ಹೊರತು ಈ ರೀತಿ ಹಿಂಸಿಸಬಾರದು ಎಂದು ಹೇಳುತ್ತಾಳೆ. ಈ ಮಾತುಗಳನ್ನು ಕೇಳಿದ ರಾವಣನು ಕೋಪಗೊಳ್ಳುತ್ತಾನೆ.
ಮಾಯಾ ಜಿಂಕೆಯ ಧ್ವನಿಯನ್ನು ಕೇಳಿದ ಶ್ರೀರಾಮನು ಸೀತೆ ಮತ್ತು ಲಕ್ಷ್ಮಣರಿಗೆ ಯಾವುದೇ ಹಾನಿ ಸಂಭವಿಸದಿರಲಿ ಎಂದು ದೇವರನ್ನು ನೆನೆಯುತ್ತ ಆಶ್ರಮದ ಕಡೆ ವೇಗವಾಗಿ ನಡೆಯುತ್ತಾನೆ. ಮಾರ್ಗ ಮಧ್ಯೆ ಲಕ್ಷ್ಮಣನು ಸಹ ಎದುರಾಗುತ್ತಾನೆ. ಈ ಸಂದರ್ಭದಲ್ಲಿ ಇಬ್ಬರಿಗೂ ಸೀತೆಗೆ ತೊಂದರೆಯಾಗಿರಬಹುದು ಎಂಬ ಹೆದರಿಕೆಯಾಗುತ್ತದೆ. ಆಶ್ರಮದ ಒಳಗೆ ಬಂದು ನೋಡಿದಾಗ ಇವರ ಅನುಮಾನವೂ ಸ್ಪಷ್ಟವಾಗುತ್ತದೆ. ಮಾಯವಾಗಿರುವ ಸೀತೆಗಾಗಿ ಶ್ರೀರಾಮನು ಶೋಕಿಸುತ್ತಾನೆ.
ಶ್ರೀರಾಮನ ಸನ್ನಿಧಿಯಲ್ಲಿ ಜೀವ ಬಿಟ್ಟ ವೀರ ಜಟಾಯು
ಸೀತೆಯನ್ನು ಹುಡುಕುವಾಗ ಅಣ್ಣ-ತಮ್ಮಂದಿರಿಗೆ ನೆಲದ ಮೇಲೆ ಬಿದ್ದು ಸಂಕಟ ಪಡುತ್ತಿದ್ದ ಜಟಾಯು ಪಕ್ಷಿಯು ಎದುರಾಗುತ್ತದೆ. ಜಟಾಯುವು ರಾಮ-ಲಕ್ಷ್ಮಣರನ್ನು ಕುರಿತು ಸೀತಾಮಾತೆಯು ನಿಮ್ಮ ಹೆಸರುಗಳನ್ನೇ ಒಂದೇ ಸಮನೆ ಕರೆಯುತ್ತಿದ್ದಳು. ಅವಳನ್ನು ಲಂಕೆಯ ರಾಜನಾದ ರಾವಣನು ದಕ್ಷಿಣ ದಿಕ್ಕಿಗೆ ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಹೇಳುತ್ತದೆ. ಸೀತಾಮಾತೆಯನ್ನು ಕಾಪಾಡಲು ನಾನು ರಾವಣನೊಡನೆ ಯುದ್ದ ಮಾಡಿದಾಗ ನನ್ನ ರೆಕ್ಕೆಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ತಿಳಿಸುತ್ತದೆ. ಆನಂತರ ರಾಮ-ಲಕ್ಷ್ಮಣರ ಸಮ್ಮುಖದಲ್ಲಿಯೇ ಪ್ರಾಣತ್ಯಾಗ ಮಾಡುತ್ತದೆ.
ರಾಮ-ಲಕ್ಷ್ಮಣರು ಕ್ರೌಂಚಾರಣ್ಯವನ್ನು ಪ್ರವೇಶಿಸುತ್ತಾರೆ. ಈ ಅರಣ್ಯದಲ್ಲಿ ಕಬಂಧನೆಂಬ ದೇವದೂತನೊಬ್ಬ ಶಾಪದ ಕಾರಣ ರಾಕ್ಷಸನಾಗಿ ಬದಲಾಗಿದ್ದ. ಶ್ರೀರಾಮನು ಇವನ ಶಾಪ ವಿಮೋಚನೆಗೊಳಿಸುತ್ತಾನೆ. ದೇವಪುರುಷನು ರಾಮ-ಲಕ್ಷ್ಮಣರಿಗೆ ಕಿಷ್ಕಿಂಧಗೆಹೋಗುವ ದಾರಿ ತೋರಿಸುತ್ತಾರೆ. ಈ ರಾಜ್ಯದ ರಾಜನು ವಾಲಿ. ಆದರೆ ಅವನಿಗೆ ಸುಗ್ರೀವ ಎಂಬ ಸೋದರನಿರುತ್ತಾನೆ. ಸೋದರರ ನಡುವಿನ ವೈಮನಸ್ಸು ಉಂಟಾಗಿರುತ್ತದೆ. ಸುಗ್ರೀವನು ಋಷ್ಯಮೂಕ ಪರ್ವತದಲ್ಲಿ ಇದ್ದಾನೆ. ಅವನನ್ನು ಭೇಟಿ ಮಾಡಿದರೆ ಅವನಿಂದ ನಿಮಗೆ ಸಹಾಯವಾಗುತ್ತದೆ ಎಂದು ಹೇಳುತ್ತಾನೆ.
ರಾಮನಿಗಾಗಿ ಕಾದು ನಿಂತ ಶಬರಿ
ಮಾರ್ಗಮಧ್ಯೆ ರಾಮ ಲಕ್ಷ್ಮಣರು ಮಾತಂಗಾಶ್ರಮವನ್ನು ಪ್ರವೇಶಿಸುತ್ತಾರೆ. ಮಾತಂಗ ಮುನಿಗಳ ಶಿಷ್ಯೆ ಶಬರಿಯು ಗುರುಗಳ ಆದೇಶದಂತೆ ತಪಸ್ಸು ಮಾಡುತ್ತಾ ಮೋಕ್ಷಕ್ಕಾಗಿ ಶ್ರೀರಾಮಚಂದ್ರನಿಗಾಗಿ ಕಾಯುತ್ತಿರುತ್ತಾಳೆ. ಶ್ರೀರಾಮ-ಲಕ್ಷ್ಮಣರ ಆಗಮನ ಶಬರಿಯಲ್ಲಿ ಭಕ್ತಿಯನ್ನು ಹೆಚ್ಚಿಸುತ್ತದೆ. ಶ್ರೀರಾಮನು ಶಬರಿಯು ನೀಡಿದ ಹಣ್ಣನ್ನು ಸೇವಿಸಿ ಸಂತೋಷಗೊಳ್ಳುತ್ತಾನೆ. ಆಗ ಶಬರಿಗೆ ಮೋಕ್ಷವೂ ದೊರೆಯುತ್ತದೆ.
ರಾಮ-ಲಕ್ಷ್ಮಣರು ಆನಂತರ ಋಷ್ಯಮೂಕ ಪರ್ವತವನ್ನು ಪ್ರವೇಶಿಸುತ್ತಾರೆ ಇವರನ್ನು ಕಂಡು ಭಯಗೊಂಡ ಸುಗ್ರೀವನು ಮಾತಂಗಶ್ರಮದಲ್ಲಿ ಅಡಗಿ ಕೊಳ್ಳುತ್ತಾನೆ. ಕಿಷ್ಕಿಂಧೆಯ ರಾಜನಾಗಿದ್ದ ವಾಲಿಯು ಇವನ ಅಣ್ಣ ಆದರೆ ಯಾವುದೇ ವಿಚಾರದಲ್ಲಿಯೂ ಇವರಿಬ್ಬರ ನಡುವೆ ಒಮ್ಮತ ಇರುವುದಿಲ್ಲ ಅಣ್ಣನಾದ ವಾಲಿಗೆ ಹೆದರಿದ ಸುಗ್ರೀವನು ರಾಜ್ಯವನ್ನು ತೊರೆದು ಬಂದಿರುತ್ತಾನೆ.
ಶ್ರೀರಾಮ-ಹನುಮ ಭೇಟಿ
ಹನುಮಂತನು ಚಿರಂಜೀವಿ ಅವನಿಗೆ ಸಾವಿನ ಅಂಜಿಕೆ ಇರುವುದಿಲ್ಲ. ಇವನನ್ನು ಕರೆಯುವುದೇ ವಾಯುಪುತ್ರ ಎಂಬ ಹೆಸರಿನಿಂದ. ಇದಕ್ಕೆ ಕಾರಣ ಹನುಮಂತನು ಗಾಳಿಯಷ್ಟೇ ವೇಗವಾಗಿ ಓಡಬಲ್ಲ ಶಕ್ತಿಶಾಲಿ. ಇವನು ಸುಗ್ರೀವನ ಮಂತ್ರಿಯಾಗಿರುತ್ತಾನೆ. ಸುಗ್ರೀವನ ಅಪ್ಪಣೆಯಂತೆ ಆಂಜನೇಯನು ವೇಷ ಮರೆಸಿಕೊಂಡು ರಾಮ-ಲಕ್ಷ್ಮಣರನ್ನು ಮಾತನಾಡಿಸಲು ಬರುತ್ತಾನೆ. ಹನುಮಂತನ ಧೈರ್ಯ, ಸ್ಥೈರ್ಯ, ಪಾಂಡಿತ್ಯ ಕಂಡ ರಾಮ ಲಕ್ಷ್ಮಣರು ಪುಳಕಿತರಾಗುತ್ತಾರೆ. ತಾವು ವಾಲಿಯ ಕಡೆಯವರೆಲ್ಲ ಎಂದು ರಾಮ ಲಕ್ಷ್ಮಣರು ತಿಳಿಸುತ್ತಾರೆ. ಇದರಿಂದ ಸಂತೋಷಗೊಂಡ ಆಂಜನೇಯನು ಅವರನ್ನು ಸುಗ್ರೀವನ ಬಳಿ ಕರೆದೊಯ್ಯುತ್ತಾನೆ.
ಅತ್ತಿಗೆ ಕಾಲುಂಗುರ ಗುರುತಿಸಿದ ಲಕ್ಷ್ಮಣ
ರಾಮ-ಲಕ್ಷ್ಮಣರನ್ನು ಕಂಡ ಸುಗ್ರೀವನು ವಾಲಿಯನ್ನು ಸಂಹರಿಸಲು ಸಹಾಯ ಮಾಡಬೇಕೆಂದು ಕೋರುತ್ತಾನೆ. ಮಹಾಮುನಿ ಒಬ್ಬರು ವಾಲಿಗೆ ಮಾತಂಗಾಶ್ರಮಕ್ಕೆ ಬಂದಲ್ಲಿ ಮರಣ ಸಂಭವಿಸುತ್ತದೆ ಎಂಬ ಶಾಪವನ್ನು ನೀಡಿರುತ್ತಾರೆ. ಇದರಿಂದಾಗಿ ವಾಲಿಯು ಆಶ್ರಮಕ್ಕೆ ಬರಲಾರ. ಆದ್ದರಿಂದ ಸುಗ್ರೀವನು ಮಾತಂಗಾಶ್ರಮದಲ್ಲಿ ನೆಲೆಗೊಳ್ಳುತ್ತಾನೆ. ಶ್ರೀರಾಮನು ವಾಲಿಯೊಂದಿಗೆ ಸುಗ್ರೀವನು ಯುದ್ಧ ಮಾಡಿದರೆ ಸಹಾಯ ಮಾಡುವೆ ಎಂದು ತಿಳಿಸುತ್ತಾನೆ. ಇದಕ್ಕೆ ಪ್ರತಿಯಾಗಿ ನೀನು ನನ್ನ ಪತ್ನಿಯನ್ನು ಹುಡುಕಲು ಸಹಾಯ ಮಾಡಬೇಕು ಎಂದು ತಿಳಿಸುತ್ತಾನೆ. ರಾವಣನು ಸೀತೆಯನ್ನು ಅಪಹರಿಸುವ ವೇಳೆ ಸುಗ್ರೀವನಿರುವ ಪ್ರದೇಶದ ಮೇಲೆ ಆಕಾಶಮಾರ್ಗದಲ್ಲಿ ಹೋಗಿರುತ್ತಾನೆ. ಆಗ ಸೀತೆಯು ತನ್ನ ಒಡವೆಗಳ ಗಂಟನ್ನು ನೆಲದ ಮೇಲೆ ಎಸೆಯುತ್ತಾಳೆ. ಸುಗ್ರೀವನು ಆ ಗಂಟನ್ನು ತಂದು ರಾಮ-ಲಕ್ಷ್ಮಣರಿಗೆ ತೋರಿಸುತ್ತಾನೆ. ಆಗ ಲಕ್ಷ್ಮಣ ತನ್ನ ಅತ್ತಿಗೆ ಹಾಕುತ್ತಿದ್ದ ಕಾಲುಂಗುರವನ್ನು ಗುರುತಿಸುತ್ತಾನೆ.
ವಾಲಿ ವಧೆ, ಸುಗ್ರೀವ ಪಟ್ಟಾಭಿಷೇಕ
ಅನಂತರ ಎಲ್ಲರೂ ವಾಲಿಯನ್ನು ಸಂಹಾರ ಮಾಡಲು ನಿರ್ಧರಿಸುತ್ತಾರೆ. ಕಿಷ್ಕಿಂಧೆಯನ್ನು ಪ್ರವೇಶಿಸಿದ ಸುಗ್ರೀವನು ಒಮ್ಮೆ ಜೋರಾಗಿ ಘರ್ಜಿಸುತ್ತಾನೆ. ಆ ಶಬ್ದವು ಅರಮನೆಯಲ್ಲಿದ್ದ ವಾಲಿಗೆ ಕೇಳಿಸುತ್ತದೆ. ವಾಲಿ ಮತ್ತು ಸುಗ್ರೀವರು ದೊಡ್ಡ ಸಮರವನ್ನೇ ಆರಂಭಿಸುತ್ತಾರೆ. ಆದರೆ ಇವರಿಬ್ಬರೂ ನೋಡಲು ಒಂದೇ ರೀತಿ ಇರುವ ಕಾರಣ ವಾಲಿಯನ್ನು ಸಂಹರಿಸಲು ರಾಮನಿಗೆ ಸಾಧ್ಯವಾಗುವುದಿಲ್ಲ. ಆಗ ರಾಮನು ಒಂದು ಹಾರವನ್ನು ಕೊಟ್ಟು ಸುಗ್ರೀವನಿಗೆ ಧರಿಸಲು ತಿಳಿಸುತ್ತಾನೆ. ಸಮರ ಮತ್ತೊಮ್ಮೆ ಆರಂಭವಾದಾಗ ಮರದ ಮರೆಯಲ್ಲಿ ನಿಂತು ಶ್ರೀರಾಮನು ವಾಲಿಗೆ ಬಾಣವೊಂದನ್ನು ಬಿಡುತ್ತಾನೆ. ಆ ಬಾಣವು ವಾಲಿಗೆ ಎದೆಗೆ ನಾಟಿ ಪ್ರಾಣತ್ಯಾಗ ಮಾಡುತ್ತಾನೆ.
ನಂತರ ಶ್ರೀರಾಮನು ಸುಗ್ರೀವನಿಗೆ ಪಟ್ಟಾಭಿಷೇಕ ಮಾಡುತ್ತಾನೆ. ಸುಗ್ರೀವನ ಸೈನ್ಯವು ಸೀತಾಮಾತೆಯನ್ನು ಹುಡುಕುತ್ತದೆ. ಆದರೆ ವಿಫಲರಾಗಿ ಮರಳಿ ಕಿಷ್ಕಿಂಧೆಗೆ ಬರುತ್ತದೆ. ಆದರೆ ಈ ಸಮಯದಿಂದಲೇ ರಾಮನ ನಿಜವಾದ ಭಕ್ತ ಹನುಮಂತನ ರೀತಿ, ನೀತಿ ಮತ್ತು ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳಬೇಕೆಂಬ ತವಕ ಜಯದತ್ತ ಸಾಗುವಂತೆ ಮಾಡುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ, ಮೊಬೈಲ್: 8546865832