ಪುರಾಣ ಕಾಲದಲ್ಲೂ ಆಮಿಷಕ್ಕೆ ಬೀಳ್ತಿದ್ದ ಜನ; ಮಹಾಭಾರತವನ್ನು ಉಲ್ಲೇಖಿಸಿದ ಲೇಖಕ ಗೋಪಾಲಕೃಷ್ಣ ಕುಂಟಿನಿ
Jan 27, 2024 04:48 PM IST
ಹಿರಿಯ ಪತ್ರಕರ್ತ, ಲೇಖಕ ಗೋಪಾಲಕೃಷ್ಣ ಕುಂಟಿನಿ, ಮಹಾಭಾರತದ ಸಾಂಕೇತಿಕ ಚಿತ್ರ
ಉಚಿತವಾಗಿ ಸಿಗುವಂಥದ್ದೇನೇ ಇದ್ದರೂ ಜನ ಮುಗಿಬೀಳುತ್ತಾರೆ ಎಂಬುದು ಇತ್ತೀಚಿನ ವಿದ್ಯಮಾನವಲ್ಲ. ಪುರಾಣ ಕಾಲದಲ್ಲೂ ಇಂತಹ ಆಮಿಷಗಳನ್ನು ಒಡ್ಡುವ ಕೆಲಸಗಳಾಗುತ್ತಿದ್ದವು ಎಂಬುದಕ್ಕೆ ನಿದರ್ಶನಗಳಿವೆ ಎಂದು ಮಹಾಭಾರತದ ಅಂಶವನ್ನು ಹಿರಿಯ ಪತ್ರಕರ್ತ, ಲೇಖಕ ಗೋಪಾಲಕೃಷ್ಣ ಕುಂಟಿನಿ ಹಂಚಿಕೊಂಡಿದ್ದಾರೆ.
ಆಮಿಷಗಳನ್ನು ಒಡ್ಡಿ ಜನರನ್ನು ಸೆಳೆಯುವ ಕೆಲಸ ಇಂದು ನಿನ್ನೆಯ ವಿಚಾರವಲ್ಲ. ಪುರಾಣ ಕಾಲದಿಂದಲೂ ಈ ಪ್ರಯತ್ನ ಚಾಲ್ತಿಯಲ್ಲಿದೆ ಎಂಬುದಕ್ಕೆ ಪುರಾಣ ಗ್ರಂಥಗಳಲ್ಲೂ ನಿದರ್ಶನವಿದೆ. ಈ ವಿಚಾರದ ಕಡೆಗೆ ಹಿರಿಯ ಪತ್ರಕರ್ತ, ಲೇಖಕ ಗೋಪಾಲಕೃಷ್ಣ ಕುಂಟಿನಿ ಅವರು ಓದುಗರ ಗಮನಸೆಳೆದಿದ್ದಾರೆ.
ತಾಜಾ ಫೋಟೊಗಳು
ಸದ್ಯ ವ್ಯಾಸ ವಿರಚಿತ ಮಹಾಭಾರತ ಓದುತ್ತಿರುವ ಗೋಪಾಲಕೃಷ್ಣ ಕುಂಟಿನಿ ಅವರಿಗೆ, ಆಮಿಷಗಳಿಗೆ ಜನರು ಬಿದ್ದೇ ಬೀಳುತ್ತಾರೆ ಎಂಬುದು ಇತ್ತೀಚಿನ ವಿಷಯವಲ್ಲ ಎಂಬ ಅಂಶ ಗಮನಸೆಳೆಯಿತು. ಪುರಾಣ ಕಾಲದಲ್ಲೂ ಇತ್ತೆಂಬುದನ್ನು ನಿರೂಪಿಸುವಂತ ಅಂಶ ಮಹಾಭಾರತದಲ್ಲಿ ಕಂಡ ಕಾರಣ ಅದರ ಟಿಪ್ಪಣಿಯನ್ನು ಅವರು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಆಮಿಷಕ್ಕೆ ಜನರು ಬಿದ್ದೇ ಬೀಳುತ್ತಾರೆ..
ಆಮಿಷಕ್ಕೆ ಜನರು ಬಿದ್ದೇ ಬೀಳುತ್ತಾರೆ ಎಂಬುದಕ್ಕೆ ಸಾವಿರಾರು ವರ್ಷಗಳ ಹಿಂದೆ ವ್ಯಾಸರು ಬರೆದ ಮಹಾಭಾರತದಲ್ಲೇ ನಿದರ್ಶನವಿದೆ. ಓದಿ.
ಹಸ್ತಿನಾವತಿಗೆ ಬಂದ ಪಾಂಡವರನ್ನು ಹಸ್ತಿನಾವತಿಯ ಜನರು ಸ್ವಾಗತಿಸಿದರು. ಅವರನ್ನು ಹಾಡಿ ಹೊಗಳತೊಡಗಿದರು. ನಗರದ ಚೌಕಗಳಲ್ಲಿ ಸೇರಿದಾಗಲೆಲ್ಲಾ ಪಾಂಡವರ ಗುಣಗಾನ ನಡೆಯುತ್ತಿತ್ತು.
ಧೃತರಾಷ್ಟ್ರ ಹುಟ್ಟಾ ಕುರುಡ. ಕುರುಡನಾಗಿದ್ದಾನೆಂದು ಅವನಿಗೆ ಪಟ್ಟ ಕಟ್ಟಲಿಲ್ಲ. ಪಾಂಡುವಿಗೆ ಕಟ್ಟಿದರು. ಪಾಂಡು ಕಾಡಿಗೆ ಹೋದ. ಆಗ ಬೇರೆ ದಾರಿಯಿಲ್ಲದೇ ಧೃತರಾಷ್ಟ್ರನಿಗೆ ಪಟ್ಟ ಕಟ್ಟಿದರು.
ಈಗ ಪಾಂಡುವಿನ ಮಕ್ಕಳು ಬಂದಿದ್ದಾರೆ. ಆದರೂ ಈಗಲೂ ಆ ಕುರುಡನೇ ರಾಜನಾಗಿ ಮುಂದುವರಿಯುತ್ತಿದ್ದಾನೆ. ಅದು ಹೇಗೆ ಸಾಧ್ಯ? ಅವನು ಪ್ರಜ್ಞಾಚಕ್ಷುವೇ ಆಗಿರಬಹುದು. ಈಗ ಪಾಂಡವರು ಬಂದ ಮೇಲೆ ಅವರಿಗೇ ರಾಜ್ಯದ ಅಧಿಕಾರ ದೊರಕಬೇಕು. ಯುಧಿಷ್ಠಿರನೇ ಅಧಿಕಾರಕ್ಕೆ ಬರಬೇಕು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.
ತೇ ವಯಂ ಪಾಂಡವಂ ಜ್ಯೇಷ್ಠಂ ತರುಣಂ ವೃದ್ಧಶೀಲಿನಂ.. ಅಭಿಷಿಂಚಾಮ ಸಾಧ್ವದ್ಯ ಸತ್ಯಂ ಕರುಣವೇದಿನಂ..
ಆದ್ದರಿಂದ ಈಗ ನಾವು ತರುಣ, ಶೀಲವಂತ, ಸತ್ಯನೂ ಕರುಣವೇದಿಯೂ ಆದ ಜ್ಯೇಷ್ಠ ಪಾಂಡವನನ್ನು ಅಭಿಷೇಕಿಸಬೇಕು ಎಂದು ಯಾವಾಗ ಜನಾಭಿಪ್ರಾಯ ರೂಪುಗೊಳ್ಳಲು ಶುರುವಾಯಿತೋ, ಆಗ, ಜನರ ಈ ಮಾತುಗಳಿಂದ ತತ್ತರಿಸಿದ ದುರ್ಯೋಧನ ಧೃತರಾಷ್ಟ್ರನ ಬಳಿ ಬಂದು ಅಲವತ್ತುಕೊಂಡ.
'ನೋಡಪ್ಪಾ, ಜನ ತೊದಲುತ್ತಿದ್ದಾರೆ. ಅಶುಭದ ಮಾತುಗಳನ್ನಾಡುತ್ತಿದ್ದಾರೆ. ಪಾಂಡವರಿಗೆ ರಾಜ್ಯ ಸಲ್ಲಬೇಕು ಎನ್ನುತ್ತಿದ್ದಾರೆ. ಭೀಷ್ಮನಿಗೋ ರಾಜ್ಯವಂತೂ ಬೇಡ. ಹಾಗಂತ ಅಸ್ಮಾಕಂ ತು ಪರಾಂ ಪೀಡಾಂ ಚಿಕೀರ್ಷಂತಿ ಪುರೇ ಜನಾಃ..ಜನರು ನಮ್ಮ ಮೇಲೆ ಅತಿ ದೊಡ್ಡ ಪೀಡೆಯನ್ನು ತರಲು ಬಯಸುತ್ತಿದ್ದಾರೆ. ಹಿಂದೆ ನಿನ್ನ ಕಾರಣದಿಂದ ನಿನಗೆ ರಾಜ್ಯ ಸಿಗಲಿಲ್ಲ. ಅದು ನಿನ್ನ ತಮ್ಮನಿಗೆ ಹೋಯಿತು. ಈಗ ಮತ್ತೆ ಪಾಂಡುವಿನ ಮಗನಿಗೆ ಹೋದರೆ, ಅದು ಮುಂದೆ ಅವನ ಮಗನಿಗೆ, ಮತ್ತೆ ಅವನ ಮಗನಿಗೆ ಹೋಗುತ್ತಾ ಇರುತ್ತದೆ. ಇದು ಸ್ಪಷ್ಟ. ಹೀಗಾದರೆ ನಮ್ಮ ಪಾಡೇನು? ನಮ್ಮ ಮಕ್ಕಳೊಂದಿಗೆ ರಾಜವಂಶವನ್ನು ಕಳೆದುಕೊಂಡು ಲೋಕದಲ್ಲಿ ಯಾರಿಗೂ ತಿಳಿಯದವರಂತೆ ಆಗಿಬಿಡುತ್ತೇವೆ. ಹಾಗಾಗಿ ಏನಾದರೂ ಮಾಡು.'
ಆದರೆ ಧೃತರಾಷ್ಟ್ರ ತೀರಾ ಕಠಿಣ ಕ್ರಮಕ್ಕೆ ಮುಂದಾಗುವುದಿಲ್ಲ.
'ಅಲ್ಲಯ್ಯಾ ಈ ಯುಧಿಷ್ಠಿರನೂ ತನ್ನ ತಂದೆಯಂತೆ ತೀರಾ ಸಾಧು ಕಣಯ್ಯಾ, ಬಲವಂತವಾಗಿ ಇವರನ್ನು ಹೇಗಯ್ಯಾ ರಾಜ್ಯದಿಂದ ಹೊರಗಟ್ಟಲು ಸಾಧ್ಯ?
ಹಾಗೇನಾದರೂ ಮಾಡಿದರೆ ಜನ ದಂಗೆ ಎದ್ದು ನಮ್ಮನ್ನು ಕೊಲ್ಲುತ್ತಾರೆ ಕಣಯ್ಯಾ’ ಎಂದ.
ದುರ್ಯೋಧನ ಹಠತೊಟ್ಟ.
'ದೃಷ್ಟ್ವಾ ಪ್ರಕೃತಯಃ ಸರ್ವಾ ಅರ್ಥಮಾನೇನ ಯೋಜಿತಾಃ..' ಎಂದ.
'ಅಪ್ಪಾ, ಇದೆಲ್ಲಾ ನನಗೆ ಗೊತ್ತೇ ಇರಲಿಲ್ಲ ಎಂದುಕೊಳ್ಳಬೇಡ. ಹಣ ಮತ್ತು ಅನುಕೂಲಗಳನ್ನು ಕೊಟ್ಟರೆ ಜನರು ತಮ್ಮ ನಿಷ್ಠೆಯನ್ನು ನಿಶ್ಚಯವಾಗಿಯೂ ನಮ್ಮ ಮೇಲೆ ಬದಲಾಯಿಸುತ್ತಾರೆ.
ಧ್ರುವಮಸ್ಮತ್ಸಹಾಯಾಸ್ತೇ ಭವಿಷ್ಯಂತಿ ಪ್ರಧಾನತಃ.. ಎಲ್ಲಾ ದುಡ್ಡಿನಲ್ಲೇ ಇರೋದು. ನನಗೆ ಗೊತ್ತಿದೆ..'
ಅವನು ಅಪ್ಪನಿಗೆ ಹೇಳಿದ, 'ನೀನೀಗ ಪಾಂಡವರನ್ನು ವಾರಣಾವತ ನಗರಕ್ಕೆ ಹೋಗುವ ಹಾಗೇ ಮಾಡು ಸಾಕು. ಉಳಿದದ್ದು ನಾನು ಮಾಡುತ್ತೇನೆ.'
'ಈ ಯೋಚನೆ ನನಗೂ ಬಂದಿತ್ತು ಮಗನೇ, ಆದರೆ ಹಾಗೆಲ್ಲಾ ಮಾಡೋದು ತಪ್ಪಲ್ಲವೇ?
ಅಲ್ಲದೇ ಭೀಷ್ಮ, ದ್ರೋಣ,ಕ್ಷತ್ತ, ಅಶ್ವತ್ಥಾಮರು ಯಾರೂ ಪಾಂಡವರನ್ನು ಹೊರಗಟ್ಟುವುದನ್ನು ಸಮ್ಮತಿಸಲಾರರು. ಅವರಿಗೆ ನಾವೂ ಮತ್ತು ಅವರೂ ಒಂದೇ' ಎಂದು ಧೃತರಾಷ್ಟ್ರ ಹೇಳಿದ.
ವಾರಣಾವತಕ್ಕೆ ಕಳುಹಿಸಿ, ಅಲ್ಲಿ ಪಾಂಡವರನ್ನು ಕೊಲ್ಲಬೇಕು ಎಂದು ಕರ್ಣ ಮತ್ತು ಶಕುನಿ ಸಂಚು ರೂಪಿಸಿದ್ದರು.
ಇದು ಪಾಂಡವರಿಗೂ ಗೊತ್ತಿತ್ತು.
ವಿದುರನ ಸಲಹೆಯಂತೆ ಅವರು ಸುಮ್ಮನಿದ್ದರು.
ಧೃತರಾಷ್ಟ್ರನಿಗೂ ಪಾಂಡವರನ್ನು ಕೊಲ್ಲಲು ಸಂಚು ಹೂಡಲಾಗುತ್ತಿರುವುದು ಗೊತ್ತಾಗಿತ್ತು. ಅದಕ್ಕೇ ಅವನು ಮತ್ತೆ ಮಗನಿಗೆ ಕೇಳಿದ, 'ಅವರನ್ನು ಕೊಂದು ನಾವು ಈ ಜಗತ್ತಿನಲ್ಲಿ ಹೇಗೆ ತಾನೇ ಇರಲು ಸಾಧ್ಯ?'
ದುರ್ಯೋಧನ ಮಾತ್ರಾ, 'ಭೀಷ್ಮ, ದ್ರೋಣ,ಕ್ಷತ್ತ, ಅಶ್ವತ್ಥಾಮರು ಹೇಗೂ ನಮ್ಮ ಜೊತೆಗೆ ಇರಲೇಬೇಕಾದ ಸ್ಥಿತಿಯಲ್ಲಿದ್ದಾರೆ, ಅವರ ಬಗ್ಗೆ ಯೋಚನೆ ಬಿಡು, ನೀನೀಗ ಪಾಂಡವರನು ವಾರಣಾವತ ನಗರಕ್ಕೆ ಸಾಗಹಾಕು' ಎಂದು ಒತ್ತಡ ಹಾಕಿದ.
ಧೃತರಾಷ್ಟ್ರ ಸಮ್ಮತಿಸಿದ.
ಅರಮನೆಯಲ್ಲಿ ಒಪ್ಪಿಗೆ ಸಿಕ್ಕಿತೇನೋ ನಿಜ. ಆದರೆ ಪ್ರಜೆಗಳು?
ಅವರನ್ನು ಏನು ಮಾಡುವುದು? ವಾರಣಾವತಕ್ಕೆ ಪಾಂಡವರನ್ನು ಕಳುಹಿಸಲು ಪ್ರಜೆಗಳು ಒಪ್ಪದೇ ಹೋದರೆ? ಅರಮನೆಯಿಂದ ಆಜ್ಞೆ ಹೊರಡಿಸಿ ಕಳುಹಿಸಿದಾಗ ಅವರೇನಾದರೂ ದಂಗೆ ಎದ್ದರೆ?
ಅಥವಾ ಪ್ರಜೆಗಳ ಮಾತಿಗೆ ಕಟ್ಟುಬಿದ್ದು ಪಾಂಡವರೇ ಹೋಗಲು ಒಪ್ಪದೇ ಇದ್ದರೆ?
ಅದಕ್ಕಾಗಿ ಪ್ರಜೆಗಳಲ್ಲೇ ಪಾಂಡವರ ಕುರಿತು ಅಭಿಪ್ರಾಯ ಬದಲಿಸಬೇಕು. ಅದನ್ನು ಮಾಡಲು ಒಂದೇ ದಾರಿ.
ಅದು ಆಮಿಷ.
ದುರ್ಯೋಧನ ಅದನ್ನು ಮಾಡಿಯೇ ಮಾಡಿದ.
ನಿಧಾನವಾಗಿ ತನ್ನ ತಮ್ಮಂದಿರೊಡಗೂಡಿ ಪ್ರಜೆಗಳಿಗೆ ಹಣ ಮತ್ತು ಗೌರವಗಳನ್ನು ನೀಡುತ್ತಾ ಕ್ರಮೇಣವಾಗಿ ಎಲ್ಲ ಪ್ರಜೆಗಳನ್ನೂ ಗೆಲ್ಲತೊಡಗಿದ.
'..ಅರ್ಥಮಾನಪ್ರದಾನಾಭ್ಯಾಂ ಸಂಜಹಾರ ಸಹಾನುಜಃ..ಅಂತ ಬರೆಯುತ್ತಾರೆ ವ್ಯಾಸರು.
'ಆಮಿಷಕ್ಕೆ ಜನ ಬೀಳುತ್ತಾರೆ'...!
ಯಾವಾಗ ಹಣ ಕೈಗೆ ಬರತೊಡಗಿತೋ, ಜನ ತಿರುಗಿಬಿದ್ದರು. ಪಾಂಡವರಿಗೇ ರಾಜ್ಯ ಸಿಗಬೇಕು, ಅವರು ಧರ್ಮಕೋವಿದರು ಎನ್ನುತ್ತಿದ್ದ ಜನರು ವರಾತ ಬದಲಿಸಿದರು. ಧೃತರಾಷ್ಟ್ರನ ಮಂತ್ರಿಗಳು ವಾರಣಾವತ ನಗರವನ್ನು ಹಾಡಿ ಹೊಗಳಲು ಶುರುಮಾಡಿದ ಪ್ರಚಾರಾಂದೋಲನ ಫಲ ಕೊಟ್ಟಿತು.
ಜನರೆಲ್ಲಾ ವಾರಣಾವತ ನಗರವನ್ನು ಕೊಂಡಾಡುತ್ತಿರುವ ರೀತಿಗೆ ಪಾಂಡವರೂ ತಲೆದೂಗಿದರು.
ಅವರಿಗೆ ಅಲ್ಲಿಗೆ ಹೋಗುವ ಮನಸ್ಸು ಉಂಟಾಯಿತು.
ಪಾಂಡವರಿಗೆ ವಾರಣಾವತಕ್ಕೆ ಹೋಗುವ ಮನಸ್ಸಾಗಿದೆ ಎಂದು ಗೊತ್ತಾಗಿದ್ದೇ ತಡ, ಧೃತರಾಷ್ಟ್ರ ಅವರನ್ನು ಕರೆಯಿಸಿದ.
'ವಾರಣಾವತಕ್ಕೆ ಹೋಗಿ ಮಕ್ಕಳೇ' ಎಂದ.
'ಅಲ್ಲಿ ವಿಹರಿಸಿ, ಸುಖಸಂಪನ್ನತೆ ಪಡೆದು ಬಳಿಕ ಹಸ್ತಿನಾವತಿಗೆ ವಾಪಾಸ್ಸಾಗಿ' ಎಂದ.
ಪಾಂಡವರು ವಾರಣಾವತಕ್ಕೆ ಹೊರಟೇಬಿಟ್ಟರು.
ಮುಂದಿನದ್ದು ಪುರೋಚನನಿಗೆ ದುರ್ಯೋಧನ ಮಂತ್ರಿ ಪದವಿ ಕೊಡುವ ಆಸೆ ಹುಟ್ಟಿಸಿದ್ದು, ವಾರಣಾವತದಲ್ಲಿ ಅರಗಿನ ಅರಮನೆ ನಿರ್ಮಿಸಲು ಹೇಳಿದ್ದು, ವಿದುರನು ವಾರಣಾವತಕ್ಕೆ ಹೊರಟ ಪಾಂಡವರಿಗೆ ವಿಷ ಮತ್ತು ಬೆಂಕಿಯ ವಿಷಯದಲ್ಲಿ ಜಾಗರೂಕರಾಗಿ ಎಂದು ಒಗಟಿನ ಭಾಷೆಯಲ್ಲಿ ಸೂಚ್ಯವಾಗಿ ಎಚ್ಚರಿಸಿದ್ದು, ಪಾಂಡವರು ಅರಗಿನ ಅರಮನೆ ನೋಡಿ ಸಂಶಯಪಟ್ಟದ್ದು, ವಿದುರನ ಸ್ನೇಹಿತ ಖನಕನು ಬಂದು ಸುರಂಗವನ್ನು ತೋಡಿದ್ದು, ಒಂದು ವರ್ಷ ಕಾಲ ವಾರಣಾವತದಲ್ಲಿ ವಿಹರಿಸುತ್ತಾ, ಪಾಂಡವರು ಅರಗಿನ ಮನೆಯಲ್ಲಿ ವಾಸಿಸಿದ್ದು, ಅದೊಂದು ದಿನ ಕುಂತಿಯು ಭೋಜನ ಕೂಟ ಏರ್ಪಡಿಸಿದ್ದು, ಊಟಕ್ಕೆ ಬಂದ ನಿಷಾದಳು ಮತ್ತು ಅವಳ ಐವರು ಮಕ್ಕಳು ಕುಡಿದು ಕುಡಿದು ಸತ್ತವರಂತೆ ಬಿದ್ದು ಮಲಗಿದ್ದು, ಈ ಹೊತ್ತಿನಲ್ಲಿ ಭೀಮನು ಬೆಂಕಿ ಹಚ್ಚಿದ್ದು, ಅವರೆಲ್ಲರೂ ಸುರಂಗಮಾರ್ಗದಲ್ಲಿ ಪಲಾಯನ ಮಾಡಿದ್ದು.....
- ಗೋಪಾಲಕೃಷ್ಣ ಕುಂಟಿನಿ