ತುಲಾ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಬುದ್ಧಿವಂತಿಕೆಯ ನಡೆಯಿಂದ ಯಶಸ್ಸು ಖಚಿತ, ಸಾಲದ ವ್ಯವಹಾರ ಸಲ್ಲ
Mar 29, 2024 09:14 PM IST
ತುಲಾ ರಾಶಿ ಯುಗಾದಿ ಭವಿಷ್ಯ
- ಯುಗಾದಿ ರಾಶಿ ಭವಿಷ್ಯ: ಸ್ನೇಹ ಸ್ವಭಾವದ ತುಲಾ ರಾಶಿಯವರು ಸದಾ ನ್ಯಾಯದ ಮಾರ್ಗದಲ್ಲೇ ನಡೆಯುತ್ತಾರೆ. ಕೆಟ್ಟದ್ದನ್ನು ಖಂಡಿಸುವ ಗುಣ ಇವರದ್ದು. ತುಲಾ ರಾಶಿಗೆ ಈ ವರ್ಷ ಯಾವುದರಲ್ಲಿ ಬೇವು, ಯಾವುದರಲ್ಲಿ ಬೆಲ್ಲ; ಜ್ಯೋತಿಷಿ ಎಚ್.ಸತೀಶ್ ಈ ಬರಹದಲ್ಲಿ ವಿವರ ನೀಡಿದ್ದಾರೆ.
ತುಲಾ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಚಿತ್ತ ನಕ್ಷತ್ರದ 3 ಮತ್ತು 4ನೇ ಪಾದಗಳು, ಸ್ವಾತಿ ನಕ್ಷತ್ರದ 1,2,3 ಮತ್ತು 4ನೇ ಪಾದಗಳು, ವಿಶಾಖ ನಕ್ಷದ 1,2 ಮತ್ತು 3ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ತುಲಾ ರಾಶಿಯಾಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ರ ಮತ್ತು ರಿ ಆದಲ್ಲಿ ಚಿತ್ತ ನಕ್ಷತ್ರ ರು,ರೆ,ರೊ ಮತ್ತು ತ ಆದಲ್ಲಿ ಸ್ವಾತಿ ನಕ್ಷತ್ರ ಹಾಗೂ ತಿ,ತು ಮತ್ತು ತೆ ಆದಲ್ಲಿ ವಿಶಾಖ ನಕ್ಷತ್ರ ಹಾಗು ತುಲಾ ರಾಶಿ ಆಗುತ್ತದೆ. ತುಲಾ ರಾಶಿಯು 12 ರಾಶಿಗಳ ರಾಶಿ ಚಕ್ರದಲ್ಲಿ 7ನೇ ರಾಶಿ. ಮಹತ್ವಾಕಾಂಕ್ಷೆ ಈ ರಾಶಿಗೆ ಸೇರಿದವರಿಗೆ ಇರುವ ಸಹಜ ಸ್ವಭಾವ. ಇವರು ಸ್ವತಂತ್ರವಾಗಿ ಬದುಕಲು ಇಷ್ಟಪಡುತ್ತಾರೆ. ಚಿತ್ತಚಾಂಚಲ್ಯ ಇವರ ವ್ಯಕ್ತಿತ್ವದಲ್ಲಿರುವ ಒಂದು ಸಣ್ಣ ಕಪ್ಪುಚುಕ್ಕೆ. ಮೇಲ್ನೋಟಕ್ಕೆ ನಿರ್ಲಿಪ್ತರಾಗಿರುವಂತೆ ಕಾಣಿಸಿದರೂ, ಒಳಮನಸ್ಸಿನಲ್ಲಿ ಆಲೋಚನೆಗಳು ಸದಾ ಭೋರ್ಗರೆಯುತ್ತಲೇ ಇರುತ್ತವೆ.
ತಾಜಾ ಫೋಟೊಗಳು
ತುಲಾ ರಾಶಿಯ ಗುಣಲಕ್ಷಣಗಳು (Libra characteristics in Kannada)
ಈ ರಾಶಿಯಲ್ಲಿ ಜನಿಸಿರುವ ಮಹಿಳೆಯರು ವಿಶೇಷವಾದ ಜನಾಕರ್ಷಣ ಶಕ್ತಿಯನ್ನು ಹೊಂದಿರುತ್ತಾರೆ. ಸಣ್ಣ ಪುಟ್ಟ ಕೆಲಸವಾದರೂ ಇವರ ಸಮರ್ಪಣಾ ಮನೋಭಾವ ವಿಶೇಷವಾಗಿರುತ್ತದೆ. ಯಾರೊಂದಿಗೂ ಸುಲಭವಾಗಿ ರಾಜಿ ಮಾಡಿಕೊಳ್ಳುವುದಿಲ್ಲ. ಸದ್ಭಾವನೆ ಇರುವ ಜನರೊಂದಿಗೆ ಸ್ನೇಹ ಬೆಳೆಸುತ್ತಾರೆ. ಮನಸ್ಸಿಗೆ ಸರಿ ಹೊಂದದವರನ್ನು ತಿರಸ್ಕರಿಸುತ್ತಾರೆ. ಸದಾಕಾಲ ವಿಶೇಷವಾದ ಪ್ರೀತಿಗಾಗಿ ಹಾತೊರೆಯುತ್ತಾರೆ. ಶಾಂತಿ, ಸಹನೆಯಿಂದ ಕೈ ಹಿಡಿದ ಕೆಲಸ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತಾರೆ. ಯಾರಿಗೂ ಮೋಸ ಮಾಡದ ವ್ಯಕ್ತಿತ್ವ ಇವರದ್ದು.
ಪುರುಷರು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕೇಂದ್ರ ಬಿಂದುವಾಗಿರುತ್ತಾರೆ. ಈ ರಾಶಿಯವರು ಬುದ್ಧಿವಂತರು. ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ದಯಾಳುಗಳು. ಆದರೆ ಅತಿಯಾದ ಆತುರದ ಸ್ವಭಾವವಿರುತ್ತದೆ. ಬೇರೆಯವರ ಅಭಿಪ್ರಾಯವನ್ನು ಕೇಳುತ್ತಾರೆ, ಆದರೆ ಪಾಲಿಸುವುದಿಲ್ಲ. ಐಷಾರಾಮಿ ಜೀವನಕ್ಕೆ ಮಾರುಹೋಗುತ್ತಾರೆ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಜ್ಞಾನ ಇರುತ್ತದೆ. ಪರಿಚಯ ಇರುವವರ ಜೊತೆ ವಿವಾಹವಾಗುತ್ತಾರೆ.
ಸಾಮಾನ್ಯವಾಗಿ ಈ ರಾಶಿಯವರು ನ್ಯಾಯ ನೀತಿಗೆ ಬೆಲೆಯನ್ನು ನೀಡುತ್ತಾರೆ. ಒಳ್ಳೆಯದನ್ನು ಮೆಚ್ಚಿಕೊಳ್ಳುವುದಲ್ಲದೇ ಕೆಟ್ಟದ್ದನ್ನು ಖಂಡಿಸುತ್ತಾರೆ. ಇವರಿಗೆ ಮಿತ್ರರಿಗಿಂತ ಶತ್ರುಗಳೇ ಹೆಚ್ಚು. ಸದಾ ನ್ಯಾಯದ ಮಾರ್ಗದಲ್ಲಿ ನಡೆಯಲು ಇಚ್ಚಿಸುತ್ತಾರೆ.
ತುಲಾ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ
ತುಲಾ ರಾಶಿಗೆ ಸೇರಿದವರಿಗೆ ಶುಭ ದಿನಾಂಕಗಳು: 1,2,4,7,10,28,22,17,26, ಶುಭ ದಿನಗಳು: ಭಾನುವಾರ, ಸೋಮವಾರ,ಮಂಗಳವಾರ,ಬುಧವಾರ ಮತ್ತು ಶನಿವಾರ, ಶುಭ ವರ್ಣ: ಕಿತ್ತಳೆ, ಬಿಳಿ ಮತ್ತು ಕೆಂಪು, ಅಶುಭ ವರ್ಣ: ನೀಲಿ, ಹಸಿರು ಮತ್ತು ಹಳದಿ, ಶುಭ ದಿಕ್ಕು: ದಕ್ಷಿಣ ಮತ್ತು ಪಶ್ಚಿಮ, ಶುಭ ತಿಂಗಳು: ಜೂನ್ 15ರಿಂದ ಜುಲೈ 14 ಮತ್ತು ಆಗಸ್ಟ್ 15ರಿಂದ ಸೆಪ್ಟಂಬರ್ 14, ಶುಭ ಹರಳು: ಹಸಿರುಪಚ್ಚೆ, ಝೆರ್ಕೋನ್ ಮತ್ತು ನೀಲಮಣಿ, ಶುಭ ರಾಶಿ: ಮಕರ, ಕುಂಭ ಮತ್ತು ಮಿಥುನ, ಅಶುಭ ರಾಶಿ: ವೃಷಭ, ಮೇಷ ಮತ್ತು ಸಿಂಹ
ಶ್ರೀ ಕ್ರೋಧಿನಾಮ ಸಂವತ್ಸರದ ತುಲಾ ರಾಶಿಯ ಗೋಚಾರ ಫಲ
ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ತುಲಾ ರಾಶಿಯವರು ಜೂನ್ ತಿಂಗಳವರೆಗೂ ಉತ್ತಮ ಫಲಗಳನ್ನು ಪಡೆಯುತ್ತಾರೆ. ಪ್ರತಿಯೊಂದು ಕೆಲಸ-ಕಾರ್ಯಗಳಲ್ಲಿಯೂ ಯಶಸ್ಸು ದೊರೆಯುತ್ತದೆ. ಜೂನ್ ತಿಂಗಳ ನಂತರ ಹೆಚ್ಚಿನ ಪ್ರಯತ್ನದಿಂದ ಮಾತ್ರ ಕೆಲಸ-ಕಾರ್ಯಗಳು ಸುಗಮವಾಗಿ ನಡೆಯಲಿವೆ. ಗುರುವು ಅಶುಭನಾದರೂ ಶನಿಗ್ರಹವು ಶುಭಸ್ಥಾನದಲ್ಲಿರುತ್ತದೆ. ಇದರಿಂದಾಗಿ ಕೆಲಸ ಕಾರ್ಯಗಳಲ್ಲಿ ನಿಧಾನಗತಿಯ ಪ್ರಗತಿ ಉಂಟಾಗುತ್ತದೆ. ರಾಹು ಆರನೇ ಮನೆಯಲ್ಲಿ ಇರುವ ಕಾರಣ ವಿದೇಶ ಪ್ರವಾಸ ಮಾಡಬಹುದು. ಒಟ್ಟಾರೆ ಎಚ್ಚರ ತಪ್ಪದೆ ಬುದ್ಧಿವಂತಿಕೆಯಿಂದ ನಡೆದುಕೊಂಡರೆ ಉತ್ತಮ ಫಲಗಳನ್ನು ಪಡೆಯಲು ಸಾಧ್ಯ.
ವರ್ಷ ಪೂರ್ತಿ ಪ್ರೀತಿ, ವಿಶ್ವಾಸದಿಂದ ಬಾಳಲಿದ್ದೀರಿ
ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಬಾಳುವಿರಿ. ಸುಲಭವಾಗಿ ನಿಮ್ಮ ಮಾತಿಗೆ ಎಲ್ಲರೂ ಮಾರು ಹೋಗುತ್ತಾರೆ. ನಿಜವಾದ ಪ್ರೀತಿಯನ್ನು ಅರ್ಥೈಸಿಕೊಳ್ಳುವ ಶಕ್ತಿ ನಿಮ್ಮಲ್ಲಿರುತ್ತದೆ. ಒಮ್ಮೆ ನಂಬಿದವರನ್ನು ಎಂದಿಗೂ ದೂರ ಮಾಡುವುದಿಲ್ಲ. ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ಒಂದೇ ರೀತಿಯ ಪ್ರೀತಿ, ವಿಶ್ವಾಸದಿಂದ ಕಾಣುವಿರಿ. ಸಂಗಾತಿಯ ಜೊತೆ ಉತ್ತಮ ಅನುಬಂಧ ಹೊಂದಿರುತ್ತೀರಿ. ಪ್ರತಿಯೊಬ್ಬರನ್ನು ಸ್ನೇಹದಿಂದ ನೋಡಲು ಪ್ರಯತ್ನಿಸುವಿರಿ. ಅನಾವಶ್ಯಕವಾಗಿ ಎದುರಾಗುವ ವಿವಾದಗಳು ತಾನಾಗಿಯೇ ದೂರವಾಗುತ್ತವೆ. ಬಹುದಿನಗಳಿಂದ ಇಷ್ಟಪಡುತ್ತಿದ್ದವರ ಜೊತೆಯಲ್ಲಿ ವಿವಾಹವಾಗುತ್ತದೆ.
ಉದ್ಯೋಗ; ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಜೊತೆ ಎಚ್ಚರ ಅವಶ್ಯ
ಈ ಸಂವತ್ಸರದಲ್ಲಿ ಉದ್ಯೋಗದ ವಿಚಾರದಲ್ಲಿ ನಿಮಗೆ ಉತ್ತಮ ಫಲಿತಾಂಶಗಳು ದೊರೆಯಲಿವೆ. ಶನಿಯು ಕುಂಭದಲ್ಲಿರುವ ಕಾರಣ ಅನಿರೀಕ್ಷಿತ ಪ್ರಗತಿಪರ ಬೆಳವಣಿಗೆಗಳು ಕಾಣುತ್ತವೆ. ಯಾವುದೇ ಅಡ್ಡಿ, ಆತಂಕಗಳು ಎದುರಾಗುವುದಿಲ್ಲ. ಕಷ್ಟದ ಕೆಲಸದಲ್ಲಿಯೂ ಆತ್ಮವಿಶ್ವಾಸದಿಂದ ಗೆಲುವು ಸಾಧಿಸುವಿರಿ. ಆದರೆ ಪ್ರತಿಯೊಂದು ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯುತ್ತವೆ. ಯಾವುದೇ ಕೆಲಸ ಸಿಕ್ಕರೂ ಅದರಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಹಿರಿಯ ಅಧಿಕಾರಿಗಳ ಕೃಪೆಯಿಂದ ಅತ್ಯುನ್ನತ ಸ್ಥಾನವನ್ನು ಪಡೆಯುತ್ತೀರಿ. ವಿದೇಶದಲ್ಲಿ ಉದ್ಯೋಗವನ್ನು ಹುಡುಕಲು ಕುಟುಂಬದಲ್ಲಿ ಒತ್ತಾಯ ಉಂಟಾಗಬಹುದು. ನಿಮ್ಮ ಸಹೋದ್ಯೋಗಿಗಳ ಬಗ್ಗೆ ಜಾಗರೂಕತೆ ಇರಲಿ. ಕೆಲವರು ನಿಮ್ಮ ವಿರುದ್ಧ ಹಲವಾರು ಯೋಜನೆಗಳನ್ನು ರೂಪಿಸಬಹುದು.
ವಿದ್ಯಾಭ್ಯಾಸ: ವಿದೇಶದಲ್ಲಿ ಅಧ್ಯಯನ ಮಾಡುವ ಕನಸು ನನಸಾಗಲಿದೆ
ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ವಿದ್ಯಾಭ್ಯಾಸದಲ್ಲಿ ಎದುರಾಗುವ ಸಮಸ್ಯೆಗಳಿಂದ ಪಾರಾಗುತ್ತಾರೆ. ವಿಜ್ಞಾನವನ್ನು ಅಭ್ಯಾಸ ಮಾಡುವ ಬಗ್ಗೆ ಹೆಚ್ಚಿನ ಒಲವಿರುತ್ತದೆ. ಉನ್ನತ ವಿದ್ಯಾಭ್ಯಾಸದ ಅವಕಾಶ ದೊರೆಯಲಿದೆ. ಹೆಚ್ಚಿನ ಪರಿಶ್ರಮದಿಂದ ಮಾತ್ರ ಅತ್ಯುತ್ತಮ ಫಲಗಳನ್ನು ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ ಯಶಸ್ವಿಯಾಗುತ್ತೀರಿ. ಉನ್ನತ ಶಿಕ್ಷಣದ ಅಧ್ಯಯನ ಮಾಡುತ್ತಿರುವವರಿಗೆ ಉತ್ತಮ ಫಲಿತಾಂಶಗಳು ದೊರೆಯಲಿವೆ. ಹೆಚ್ಚಿನ ಜ್ಞಾನ ಸಂಪಾದಿಸಲು ವಿದೇಶದಲ್ಲಿ ಅಧ್ಯಯನ ಮಾಡುವ ಬಯಕೆ ಈಗ ಸಾಕಾರಗೊಳ್ಳಲಿದೆ. ಉದ್ಯೋಗಸ್ಥರು ವಿದ್ಯಾಭ್ಯಾಸವನ್ನು ಮುಂದುವರಿಸುವ ಸಾಧ್ಯತೆಗಳು ಕಾಣುತ್ತಿವೆ.
ಹಣಕಾಸಿನ ಪರಿಸ್ಥಿತಿ: ಆಸ್ತಿ ಮಾರಾಟದಿಂದ ಸಾಕಷ್ಟು ಹಣ ದೊರೆಯಲಿದೆ
ಹಣದ ವಿಚಾರದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ಸಂಪಾದಿಸಿದ ಹಣದಲ್ಲಿ ಉಳಿತಾಯ ಮಾಡಲು ಪ್ರಯತ್ನಿಸಿ. ಉದ್ಯೋಗದಲ್ಲಿ ವೇತನವು ಹೆಚ್ಚುತ್ತದೆ. ಮಕ್ಕಳಿಂದ ಹಣದ ಸಹಾಯ ದೊರೆಯುತ್ತದೆ. ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಸ್ಥಿರತೆ ಕಂಡುಬರುತ್ತದೆ. ಬಹುದಿನದಿಂದ ಮನದಲ್ಲಿದ್ದ ಹಣಕಾಸಿನ ಯೋಜನೆಯಿಂದ ಉತ್ತಮ ಲಾಭ ದೊರೆಯುತ್ತದೆ. ಹಣದ ಕೊರತೆಯಿಂದ ಪಾರಾಗಲು ಸಣ್ಣ ಪ್ರಮಾಣದ ವ್ಯಾಪಾರವನ್ನು ಆರಂಭಿಸುವಿರಿ. ಹೆಚ್ಚಿನ ಆದಾಯ ದೊರೆಯುವ ಕಾರಣ ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ. ವಂಶಕ್ಕೆ ಸೇರಿದ ಆಸ್ತಿ ಮಾರಾಟದಿಂದ ಸಾಕಷ್ಟು ಹಣ ದೊರೆಯಲಿದೆ.
ಕುಟುಂಬದ ವಿಚಾರ: ಮನೆಯಲ್ಲಿ ಸಂತಸ ತುಂಬಿರುತ್ತದೆ
ಕುಟುಂಬದಲ್ಲಿ ಪರಸ್ಪರ ಉತ್ತಮವಾದ ಅನುಬಂಧ ಏರ್ಪಡಲಿದೆ. ಹಿರಿಯ ಸೋದರ ಅಥವಾ ಸೋದರಿಯ ಜೊತೆಯಿದ್ದ ವಾದ ವಿವಾದಗಳು ಮರೆಯಾಗಲಿವೆ. ಸುಖ ಮತ್ತು ಸಂತೃಪ್ತಿಯ ಜೀವನವನ್ನು ನಡೆಸುವಿರಿ. ತಾಯಿಯ ಆರೋಗ್ಯ ಸುಧಾರಿಸುತ್ತದೆ. ಅವರಿಂದ ಕುಟುಂಬ ನಿರ್ವಹಣೆಗೆ ಸಹಾಯ ದೊರೆಯುತ್ತದೆ. ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ಕುಟುಂಬದ ಹಿರಿಯರು ನಿರ್ವಹಿಸಲಿದ್ದಾರೆ. ಇವೆಲ್ಲದರ ಪರಿಮಾಣವಾಗಿ ಯಾವುದೇ ರೀತಿಯ ತೊಂದರೆ ಎದುರಾಗುವುದಿಲ್ಲ. ಹಿರಿಯರ ಮಾತಿನಂತೆ ಎಲ್ಲರೂ ನಡೆದುಕೊಳ್ಳುವ ಕಾರಣ ಕುಟುಂಬದಲ್ಲಿ ನಲಿವು ತುಂಬಿರುತ್ತದೆ.
ಮಕ್ಕಳ ವಿಚಾರ: ಮಕ್ಕಳು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ
ಸಂತಾನ ಲಾಭವಿದೆ. ಮಕ್ಕಳ ಬಗ್ಗೆ ಹೆಚ್ಚಿನ ಮಮತೆ ಇರುತ್ತದೆ. ಮಕ್ಕಳ ಬಗ್ಗೆ ತೋರುವ ಅಕ್ಕರೆ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುವುದಿಲ್ಲ. ಮಕ್ಕಳ ನಡವಳಿಕೆಯನ್ನು ಎಲ್ಲರೂ ಕೊಂಡಾಡುತ್ತಾರೆ. ಮಕ್ಕಳಿಗೆ ಎಲ್ಲಾ ರೀತಿಯ ಅನುಕೂಲವನ್ನು ಕಲ್ಪಿಸುವಿರಿ. ಮಕ್ಕಳೊಂದಿಗೆ ಆಟವಾಡುತ್ತಾ ಬಾಳುವಿರಿ. ಒಳ್ಳೆಯ ಮಾತುಕತೆಯಿಂದ ನಿಮ್ಮ ಅಂಕೆಯಲ್ಲಿ ಇಟ್ಟುಕೊಳ್ಳುವಿರಿ. ಅವರ ಉತ್ತಮ ವಿದ್ಯಾಭ್ಯಾಸಕ್ಕಾಗಿ ಹಣಗಳಿಸಲು ಉಪವೃತ್ತಿಯನ್ನು ಆರಂಭಿಸುವಿರಿ. ಮಕ್ಕಳು ಉತ್ತಮ ವಾತಾವರಣದಲ್ಲಿ ಬೆಳೆಯುವ ಕಾರಣ ತೊಂದರೆಗಳು ಕಡಿಮೆ. ಪರಿಕ್ಷೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವರು.
ವಿವಾಹ ಮತ್ತು ದಾಂಪತ್ಯ: ದಂಪತಿಗಳು ಯಾತ್ರಾಸ್ಥಳಕ್ಕೆ ತೆರಳುವ ಸಾಧ್ಯತೆ ಇದೆ
ದಂಪತಿಗಳ ನಡುವೆ ಉತ್ತಮ ಹೊಂದಾಣಿಕೆ ಇರುತ್ತದೆ. ಅವಿವಾಹಿತರಿಗೆ ಜುಲೈ ತಿಂಗಳ ಒಳಗೆ ವಿವಾಹ ನಿಶ್ಚಿಯವಾಗಲಿದೆ. ಕೌಟುಂಬಿಕ ಜೀವನದಲ್ಲಿ ಸಂಭ್ರಮದ ವಾತಾವರಣ ಇರಲಿದೆ. ನವದಂಪತಿಗಳು ಸಂತೋಷದಿಂದ ಬಾಳುತ್ತಾರೆ. ದಂಪತಿಗಳು ಪರಸ್ಪರ ಒಬ್ಬರನ್ನೊಬ್ಬರು ದೂಷಿಸುತ್ತಾರೆ. ಕ್ಷಮಾಗುಣ ಅತಿಮುಖ್ಯವಾಗಲಿದೆ. ಮನಸ್ಸಿನ ಬೇಸರವನ್ನು ದೂರಮಾಡಲು ಯಾತ್ರಾಸ್ಥಳಕ್ಕೆ ತೆರಳುವ ಸಾಧ್ಯತೆ ಇರುತ್ತದೆ.
ವ್ಯಾಪಾರ, ವ್ಯವಹಾರ: ಸಾಲದ ವ್ಯವಹಾರ ಒಳ್ಳೆಯದಲ್ಲ
ವ್ಯಾಪಾರದಲ್ಲಿ ಯಾರ ಮಾತನ್ನು ಸುಲಭವಾಗಿ ನಂಬುವುದಿಲ್ಲ. ಸಮಾಜದಲ್ಲಿನ ಪ್ರತಿಷ್ಠೆಗೋಸ್ಕರ ಕಷ್ಟವಾದರೂ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ಗಳಿಸುವಿರಿ. ಸ್ವಂತ ಉದ್ದಿಮೆ ಇದ್ದಲ್ಲಿ ಕೆಲಸ ಮಾಡಲು ಕಾರ್ಮಿಕರು ಸಮಯಕ್ಕೆ ತಕ್ಕಂತೆ ದೊರೆಯಲಾರರು. ಇದರಿಂದ ನಷ್ಟವಾಗದೆ ಹೋದರು ಹಣಕಾಸಿನ ಕೊರತೆ ಕಂಡುಬರುತ್ತದೆ. ಪಾಲುಗಾರಿಕೆ ವ್ಯಾಪಾರದಲ್ಲಿ ಹಿನ್ನೆಡೆ ಇರುತ್ತದೆ. ಒಂದೇ ರೀತಿಯ ಕೆಲಸ ಕಾರ್ಯಗಳನ್ನು ನೆಚ್ಚಿಕೊಳ್ಳದೆ ಕುಟುಂಬದವರ ಜೊತೆಗೂಡಿ ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಅದೃಷ್ಟದಿಂದ ಹಣವು ದ್ವಿಗುಣಗೊಳ್ಳಲಿದೆ. ಸಾಲದ ವ್ಯವಹಾರ ಒಳ್ಳೆಯದಲ್ಲ. ಸಾಲ ಮಾಡಿ ವ್ಯಾಪಾರ ಮಾಡಬೇಕಾಗುವ ಪ್ರಸಂಗ ಬರುವುದಿಲ್ಲ.
ವಾಹನ ವಿಚಾರ: ಡಿಸೆಂಬರ್ ನಂತರ ಹೊಸ ವಾಹನ ಕೊಳ್ಳುವ ಸಾಧ್ಯತೆ
ಹೊಸ ವಾಹನ ಕೊಳ್ಳುವ ವಿಚಾರ ಮರೆತು ಇರುವ ವಾಹನಕ್ಕೆ ಹೊಸ ರೂಪ ನೀಡುವಿರಿ. ಗುರುವು 8ನೇ ಮನೆಯಲ್ಲಿ ಸಂಚಾರ ಮಾಡುವ ಕಾರಣ ವಾಹನಾಪಘಾತ ಆಗಬಹುದು. ತುಲಾ ರಾಶಿಯವರು ವಾಹನವನ್ನು ವೇಗವಾಗಿ ಚಾಲನೆ ಮಾಡುತ್ತಾರೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು. ಬಳಸಿದ ವಾಹನವನ್ನು ಕೊಳ್ಳಲು ಇಚ್ಚಿಸುವುದಿಲ್ಲ. ಹಿರಿಯರೊಬ್ಬರು ವಾಹನದಿಂದ ತೊಂದರೆ ಅನುಭವಿಸಬೇಕಾಗಬಹುದು. ನೀಲಿ ಬಣ್ಣದ ವಾಹನಗಳು ನಿಮಗೆ ಹೊಂದುತ್ತವೆ. ಹೊಸ ವಾಹನ ಕೊಳ್ಳುವ ಸೂಚನೆ ಇದೆ. ಡಿಸೆಂಬರ್ ನಂತರ ಹೊಸ ವಾಹನ ಕೊಳ್ಳುವ ಸಾಧ್ಯತೆ ಇದೆ.
ಆರೋಗ್ಯದ ವಿಚಾರ; ಅತಿಯಾದ ಯೋಚನೆಯಿಂದ ತೊಂದರೆ
ಕೊಂಚವೂ ವಿಶ್ರಾಂತಿ ಇಲ್ಲದೆ ದುಡಿಯುವುದರಿಂದ ದೈಹಿಕ ಶಕ್ತಿಯು ಕಡಿಮೆಯಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ದ್ರವರೂಪದ ಆಹಾರ ಸೇವನೆ ಶ್ವಾಸಕೋಶದ ಸೋಂಕನ್ನು ಉಂಟುಮಾಡಬಲ್ಲದು. ಕುಂಭದಲ್ಲಿ ಶನಿ ಇರುವ ಕಾರಣ ಕೈ ಕಾಲುಗಳಲ್ಲಿ ಊತ ಕಂಡುಬರುತ್ತದೆ. ಸ್ತ್ರೀಯರು ಒಟ್ಟಾರೆ ಅತಿಯಾಗಿ ಯೋಚಿಸದೆ ಆರೋಗ್ಯದ ತೊಂದರೆ ಉಂಟಾದಾಗ ಸರಿಯಾದ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಒಳ್ಳೆಯದು. ದಿನನಿತ್ಯದ ಆಹಾರ ಕ್ರಮವನ್ನು ಬದಲಿಸಿಕೊಳ್ಳುವುದಲ್ಲದೆ ದೈಹಿಕ ವ್ಯಾಯಾಮದಿಂದ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು.
ಪರಿಹಾರಗಳು
1. ಪ್ರತಿದಿನ ಶ್ರೀ ವಿಷ್ಣು ಸಹಸ್ರನಾಮ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೈಹಿಡಿದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿದೆ.
2. ಕೆಂಪು ಬಟ್ಟೆ ಮತ್ತು ತೊಗರಿಬೇಳೆ ದಾನ ನೀಡುವುದರಿಂದ ವಿರೋಧಿಗಳು ಕಡಿಮೆ ಆಗಲಿದ್ದಾರೆ.
3. ಶ್ರೀ ಶನೇಶ್ವರನ ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ವಿದ್ಯಾಭ್ಯಾಸ ಮತ್ತು ಆರೋಗ್ಯದಲ್ಲಿ ಪ್ರಗತಿ ದೊರೆಯುತ್ತದೆ.
4. ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ಮಾಡುವುದರಿಂದ ಭೂವಿವಾದಗಳು ದೂರವಾಗಲಿದೆ.
5. ಹಸಿರು ಮತ್ತು ನೀಲಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
(ಬರಹ: ಎಚ್.ಸತೀಶ್, ಜ್ಯೋತಿಷಿ, ಹೊಸಕೆರೆಹಳ್ಳಿ, ಬೆಂಗಳೂರು)
ಈ ರಾಶಿಗಳ ಯುಗಾದಿ ಭವಿಷ್ಯವನ್ನೂ ಓದಿ
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು.
(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ಯುಗಾದಿ ಹಬ್ಬ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ಮಾಹಿತಿಗೆ kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ. To read more on Ugadi festival and culture related stories, please visit 'HT Kannada' website)