ಶ್ರೀ ಕ್ರೋಧಿನಾಮ ಸಂವತ್ಸರ ಪಂಚಾಂಗ ಫಲ: ಭಾರತದ ಪ್ರಗತಿ ನಿಧಾನಗತಿ, ಉಗ್ರರ ಉಪಟಳದ ಆತಂಕ, ಜನರಲ್ಲಿ ಹೆಚ್ಚಾಗಲಿದೆ ದೇಶಭಕ್ತಿ
Mar 30, 2024 04:09 PM IST
ಯುಗಾದಿ ಫಲ (ಶ್ರೀ ಕ್ರೋಧಿನಾಮ ಸಂವತ್ಸರ)
- ಯುಗಾದಿ ಪಂಚಾಂಗ ಶ್ರವಣ: ಯುಗಾದಿ ಹಬ್ಬವನ್ನು ಕರ್ನಾಟಕದಲ್ಲಿ ಏಪ್ರಿಲ್ 9, 2024 ರ ಮಂಗಳವಾರ ಆಚರಿಸಲಾಗುತ್ತದೆ. ಯುಗಾದಿಯಿಂದ ಶ್ರೀಕ್ರೋಧಿನಾಮ ಸಂವತ್ಸರವೂ ಆರಂಭವಾಗಲಿದೆ. ಪ್ರತಿ ವರ್ಷ ಯುಗಾದಿಯಂದು ಪಂಚಾಂಗ ಶ್ರವಣದ ಮೂಲಕ ಒಂದಿಡೀ ವರ್ಷದ ಆಗುಹೋಗುಗಳ ಕುರಿತು ತಿಳಿಯಲು ಜನರು ಮುಂದಾಗುತ್ತಾರೆ. (ಬರಹ: ಎಚ್.ಸತೀಶ್, ಜ್ಯೋತಿಷಿ)
ಶ್ರೀ ಕ್ರೋಧಿನಾಮ ಸಂವತ್ಸರ ಫಲ: ಕ್ರೋಧಿನಾಮಕ್ಕೆ ಸಂಬಂಧಿಸಿದ ಫಲಶ್ಲೋಕವು "ಕ್ರೋಧಿನಿ ಸತತಂ ಭೂಮೌ" ಎಂದು ಆರಂಭವಾಗುತ್ತದೆ. ಪೂರ್ತಿ ಶ್ಲೋಕದ ಭಾವಾನುವಾದವನ್ನು ಹೀಗೆ ಮಾಡಬಹುದು. 'ಕ್ರೋಧಿ ಸಂವತ್ಸರದಲ್ಲಿ ರಾಜರುಗಳ ಸಂಘರ್ಷದಿಂದ ಜನರು ಬಡವರಾಗುತ್ತಾರೆ. ಮತ್ತು ಬರಗಾಲದಿಂದಾಗಿ ಆಹಾರಕ್ಕೂ ಕಷ್ಟವಾಗುತ್ತದೆ. ಫಲಮೂಲಗಳನ್ನು ತಿಂದು ಜೀವಿಸುತ್ತಾರೆ' ಎನ್ನುವ ಅರ್ಥ ಬರುತ್ತದೆ. ಸಂಪೂರ್ಣ ಮೂಲ ಶ್ಲೋಕವು ಹೀಗಿದೆ; "ಕ್ರೋಧಿನಿ ಸತತಂ ಭೂಮೌ | ಕ್ಷಿತಿಪತಿಕಲಹೈರ್ವಿಹೀನಧನಾಃ || ಫಲಮೂಲಾಶನವಶಗಾ | ಸ್ತಥಾ ಲೋಕಾಶ್ಚವರ್ಧಂತೇ ||"
ತಾಜಾ ಫೋಟೊಗಳು
ಈ ಶ್ಲೋಕ ಮತ್ತು ಅದರ ಅರ್ಥದ ಜೊತೆಗೆ ಯುಗಾದಿಯಂದು ಓದುವ ಸಂವತ್ಸರ ಫಲದಲ್ಲಿ ನವನಾಯಕ ಫಲ ಸೇರಿದಂತೆ ಹಲವು ಜ್ಯೋತಿಷ್ಯ ವಿಚಾರಗಳನ್ನು ಪರಿಶೀಲಿಸಬೇಕಾಗುತ್ತದೆ. ಈ ಲೆಕ್ಕಾಚಾರದಂತೆ ಶ್ರೀಕ್ರೋಧಿನಾಮ ಸಂವತ್ಸರದ ಫಲವು ಹೀಗೆ ಇರುತ್ತದೆ.
ಭಾರತಕ್ಕೆ ಅನುಕೂಲಕರ ಸಂವತ್ಸರ
ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಭಾರತಕ್ಕೆ ಅನುಕೂಲಕರ ಸಂಗತಿಗಳು ನಡೆಯಲಿವೆ. ಸರ್ಕಾರದಿಂದ ರೂಪಿಸಲ್ಪಟ್ಟ ಕಾನೂನುಗಳನ್ನು ಸಾಮಾನ್ಯ ಜನರು ಗೌರವದಿಂದ ಕಾಣುತ್ತಾರೆ. ಆದರೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಸದಾ ವಾದ-ವಿವಾದಗಳು ಇರುತ್ತವೆ. ಕೆಲವು ರಾಜಕೀಯ ಪಕ್ಷಗಳು ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಲು ವಿಫಲವಾಗುತ್ತದೆ. ದೇಶದ ಪ್ರಮುಖ ಪಕ್ಷವೊಂದು ಶಕ್ತಿ ಕಳೆದುಕೊಳ್ಳುತ್ತದೆ. ಆ ಪಕ್ಷದಲ್ಲಿರುವವರೇ ನಾಯಕತ್ವದ ಬಗ್ಗೆ ಭಿನ್ನಮತದ ಮಾತುಗಳನ್ನು ಆಡುತ್ತಾರೆ. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ರಾಜಕೀಯ ಪಕ್ಷವೊಂದು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಇದರಿಂದ ದೇಶದಲ್ಲಿ ಆಶಾದಾಯಕ ಬದಲಾವಣೆ ಆಗುತ್ತದೆ.
ಹತ್ತು ಹಲವು ಕಾರಣಗಳಿಂದಾಗಿ ದೇಶಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳ ವೇಗ ಕಡಿಮೆಯಾಗುತ್ತದೆ. ವಿದೇಶಕ್ಕೆ ತೆರಳಿ ಉದ್ಯೋಗ, ವ್ಯಾಪಾರಗಳಲ್ಲಿ ತೊಡಗಿದ್ದವರು ಈ ವರ್ಷ ಮರಳಿ ಭಾರತಕ್ಕೆ ಬಂದು ತಮ್ಮ ಸಾಧನೆ ಮುಂದುವರಿಸುವ ಸಾಧ್ಯತೆಯಿದೆ. ಆಧುನಿಕ ತಂತ್ರಜ್ಞಾನದಲ್ಲಿ ನಮ್ಮ ದೇಶವು ಮುಂದುವರಿದ ದೇಶಗಳಿಗೆ ಸರಿಸಮನಾಗಿ ನಿಲ್ಲುತ್ತದೆ. ದೇಶದ ರಕ್ಷಣೆಗೆಂದು ಅಧಿಕಾರಸ್ಥರು ತೆಗೆದುಕೊಳ್ಳುವ ತೀರ್ಮಾನಗಳಿಗೆ ಜನರ ಸ್ಪಂದನೆ ಇರುತ್ತದೆ. ಗಡಿ ಪ್ರದೇಶಗಳ ಭದ್ರತೆಗೆ, ಸಶಸ್ತ್ರಪಡೆಗಳ ಸದೃಢತೆಗಾಗಿ ಸರ್ಕಾರ ಮಾಡುವ ಕೆಲಸಗಳು ಕೆಲ ದೇಶಗಳ ಕೆಂಗಣ್ಣಿಗೂ ಗುರಿಯಾಗುತ್ತವೆ. ಭಾರತದ ಚಿಕ್ಕ ವಯಸ್ಸಿನ ವ್ಯಕ್ತಿಯೊಬ್ಬರು ವಿಶ್ವದ ಗಮನ ಸೆಳೆಯಲಿದ್ದಾರೆ. ಭಾರತದ ಒಟ್ಟಾರೆ ಆದಾಯ ಸುಧಾರಿಸಿದರೂ, ಬಳಕೆಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ.
ಒಗ್ಗಟ್ಟಿನ ಮನೋಭಾವ ಭಾರತಕ್ಕೆ ಆಧಾರ
ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಜನರು ಜಾತಿ ಮತ್ತು ಧರ್ಮಗಳ ಭೇದ ಮರೆತು ತಾವು ಭಾರತೀಯರು ಎನ್ನುವ ಭಾವನೆಯಿಂದ ಒಗ್ಗೂಡಿ ಬಾಳಲು ಮನಸ್ಸು ಮಾಡುತ್ತಾರೆ. ಆದರೆ ಧಾರ್ಮಿಕ ಉಗ್ರಗಾಮಿಗಳ ಹಾವಳಿ ಮುಂದುವರಿಯಲಿದೆ. ದೇಶದ ಹಿತದ ವಿಚಾರ ಬಂದಾಗ ಸಾಮಾನ್ಯ ಜನರೂ ತಾವೂ ಸಹ ಸೈನಿಕರು ಎನ್ನುವ ಭಾವನೆ ತಾಳುತ್ತಾರೆ. ಅದರಂತೆಯೇ ವರ್ತಿಸುತ್ತಾರೆ. ದೇಶದಲ್ಲಿ ಅಬಾಲವೃದ್ಧರಾದಿಯಾಗಿ, ಅಂದರೆ ಕಿರಿಯರಿಂದ ಹಿರಿಯರವರೆಗೆ ಎಲ್ಲರಲ್ಲಿಯೂ ದೇಶಾಭಿಮಾನ ಮೂಡಿಸುವ ಬೃಹತ್ ಕಾರ್ಯಕ್ರಮವೊಂದು ನಡೆಯಲಿದೆ.
ಭಾರತದ ಗಡಿಪ್ರದೇಶದಲ್ಲಿ ಬಿಗುವಿನ ವಾತಾವರಣ ಮುಂದುವರೆಯುತ್ತದೆ. ಆದರೆ ಗಡಿ ಭಾಗದಲ್ಲಿರುವ, ಭಾರತವನ್ನು ಎಲ್ಲದಕ್ಕೂ ಹೊಣೆಯಾಗಿಸಿ ವಿರೋಧಿಸುವ ದೇಶವೊಂದರ ಬಡತನವು ಇನ್ನಷ್ಟು ಹೆಚ್ಚುತ್ತದೆ. ತನ್ನ ದೇಶವನ್ನು ಕಾಪಾಡಿಕೊಳ್ಳಲು ಪರಿಸ್ಥಿತಿ ಅವರಿಗೆ ಎದುರಾಗಲಿದೆ. ಅಲ್ಲಿ ಆಂತರಿಕ ಗಲಭೆಗಳು ರಾಜಕಾರಣದಲ್ಲಿ ದೊಡ್ಡ ಕಂದಕವನ್ನು ಸೃಷ್ಟಿ ಮಾಡುತ್ತದೆ. ಇದು ಒಂದು ದೇಶದ ವಿಚಾರವಾದರೆ ಗಡಿಭಾಗದ ಇನ್ನೊಂದು ದೇಶವು ಪ್ರಪಂಚದ ಶಕ್ತಿಶಾಲಿ ದೇಶಗಳ ವಿರೋಧವನ್ನು ಎದುರಿಸಬೇಕಾಗುತ್ತದೆ. ಭಾರತಕ್ಕೆ ವಿರೋಧಿ ಪಾಳಯದಲ್ಲಿರುವ ಎರಡು ದೇಶಗಳು ತಮ್ಮದೇ ಆದ ಆಂತರಿಕ ಸಮಸ್ಯೆಗಳಲ್ಲಿ ತೊಡಗಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದ್ದರಿಂಧ ಭಾರತಕ್ಕೆ ವಿದೇಶಗಳಿಂದ ಯಾವುದೇ ತೊಂದರೆ ಇರುವುದಿಲ್ಲ. ವಿದೇಶಾಂಗ ವ್ಯವಹಾರಗಳಲ್ಲಿ ಸ್ವತಂತ್ರವಾಗಿ ಕಾಯನಿರ್ವಹಿಸುವ ಸಾಮರ್ಥ್ಯ ಭಾರತ ಗಳಿಸುತ್ತದೆ. ಸಣ್ಣಪುಟ್ಟ ವಿಚಾರವನ್ನೂ ಕಡೆಗಣಿಸದೆ ಮುಂದುವರೆದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ದೇಶದ ಹೊರಗಿನ ಬೆದರಿಕೆಗಳಿಗಿಂತಲೂ ಆಂತರಿಕ ಸಮಸ್ಯೆಗಳನ್ನು ನಿರ್ವಹಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗುತ್ತದೆ.
ಸಾಮಾನ್ಯ ಜನರಿಗೆ ಹಣದುಬ್ಬರದ ಬರೆ
ಒಂದು ದೇಶವಾಗಿ ಭಾರತದ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಆದರೆ ಅತಿಯಾದ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ದಿನನಿತ್ಯದ ಬಾಳ್ವೆ ಸಮಸ್ಯೆಯಾಗುತ್ತದೆ. ದಿನಸಿ ಸೇರಿದಂತೆ ನಿತ್ಯ ಬಳಕೆಯ ಪದಾರ್ಥಗಳ ಬೆಲೆ ಹೆಚ್ಚಾಗುವುದರಿಂದ ಮಧ್ಯಮವರ್ಗ ಕಷ್ಟಕ್ಕೆ ಸಿಲುಕುತ್ತದೆ. ವ್ಯಾಪಾರದ ವಿಷಯದಲ್ಲಿ ದೊಡ್ಡದೊಡ್ಡ ಹೈಟೆಕ್ ಮಾರುಕಟ್ಟೆಗಳು ಭಾರತದ ಬೆನ್ನೆಲುಬಾಗಲಿದೆ. ಸಣ್ಣಪುಟ್ಟ ಉದ್ದಿಮೆಗಳು ಸೋಲನ್ನು ಅನುಭವಿಸಿ ಕಷ್ಟಕ್ಕೆ ಸಿಲುಕುತ್ತವೆ. ವಯೋವೃದ್ಧರ ರಕ್ಷಣೆಗೆ ವಿಶೇಷ ಕಾನೂನು ಜಾರಿಗೆ ಬರುವ ಸೂಚನೆಗಳಿವೆ. ವಯಸ್ಸಾದ ನಂತರವೂ ಜನರು ಸುಖವಾಗಿ ಬದುಕುವ ಕಾಲ ಬರಲಿದೆ. ವಾಹನಗಳಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ಹೆಣ್ಣುಮಕ್ಕಳ ಜನನ ಪ್ರಮಾಣವು ಈ ವರ್ಷ ಏರುವ ಸಾಧ್ಯತೆ ಇದೆ.
ಈ ಹಿಂದೆ ಕಂಡರಿಯದ ರೋಗಗಳು ಈ ಸಂವತ್ಸರದಲ್ಲಿಯೂ ಭಾರತವನ್ನು ಕಾಡಲಿದೆ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ನೂತನ ಆವಿಷ್ಕಾರಗಳು ನಡೆಯಲಿದ್ದು, ಜನರ ಜೀವ ಕಾಪಾಡಲಿವೆ. ಪ್ರವಾಸೋದ್ಯಮವು ಆಮೆವೇಗದಲ್ಲಿ ಬೆಳೆಯಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಸಣ್ಣಪುಟ್ಟ ಹಣಕಾಸು ಸಂಸ್ಥೆಗಳು ನಷ್ಟವನ್ನು ಅನುಭವಿಸುತ್ತವೆ. ಆಧುನಿಕ ತಂತ್ರಜ್ಞಾನ ಬಳಸಿ ಜನರಿಗೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ.
ಮಳೆ, ಬೆಳೆ, ವ್ಯಾಪಾರ, ಆರೋಗ್ಯ
ಕ್ರೋಧಿನಾಮ ಸಂವತ್ಸರದಲ್ಲಿಯೂ ಸರಿಯಾದ ಪ್ರಮಾಣದಲ್ಲಿ ಬೆಳೆಗಳು ಫಸಲು ಕೊಡುವುದಿಲ್ಲ. ವಿದ್ಯಾವಂತ ಕೃಷಿಕರು ಬೇಸಾಯದಿಂದ ವಿಮುಖರಾಗಿ ಬದಲಿ ಉದ್ಯೋಗವನ್ನು ಅವಲಂಬಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿಯೂ ಕಳ್ಳರ ಹಾವಳಿ ಹೆಚ್ಚಾಗುತ್ತದೆ. ವೇಳೆಗೆ ಸರಿಯಾಗಿ ಮಳೆ ಬರುವುದಿಲ್ಲ. ದ್ವಿದಳ ಧಾನ್ಯಗಳ (ಬೇಳೆಕಾಳು) ಕೊರತೆ ಕಂಡುಬರುತ್ತದೆ. ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಪ್ರಾಣಾಯಾಮದಂಥ ಸಾಂಪ್ರದಾಯಿಕ ಪದ್ಧತಿಯ ಕಡೆಗೆ ಹೆಚ್ಚು ಒಲವು ತೋರುತ್ತಾರೆ.
ಹಣ್ಣುಗಳ ಬೆಳೆಯು ಅಧಿಕ ಮಟ್ಟದಲ್ಲಿ ಇರುತ್ತದೆ. ಹೈನುಗಾರಿಕೆಗೆ ಯಾವುದೇ ತೊಂದರೆ ಕಂಡುಬರುವುದಿಲ್ಲ. ಸೌಂದರ್ಯ ಸಾಧನಗಳ ಬೆಲೆಯೂ ಹೆಚ್ಚಲಿದೆ. ತರಕಾರಿಗಳ ಬೆಲೆಯೂ ಮುಗಿಲು ಮುಟ್ಟಲಿವೆ. ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಲ್ಲಿ ನಾನಾ ರೀತಿಯ ತೊಂದರೆಗಳು ಉಂಟಾಗಲಿವೆ. ಕರ್ನಾಟಕಕ್ಕೆ ವಲಸೆ ಬರುವ ಜನರ ಸಂಖ್ಯೆ ಹೆಚ್ಚಲಿದೆ. ಹಿರಿಯರು ಹಗರಣಗಳಲ್ಲಿ ಸಿಲುಕುವ ಸಾಧ್ಯತೆ ಇದೆ. ಜನನಕ್ಕಿಂತ ಮರಣದ ಪ್ರಮಾಣ ಭಾರತದಲ್ಲಿ ಹೆಚ್ಚಲಿದೆ. ರಾಜ್ಯಗಳಲ್ಲಿ ಭೂಕಂಪ, ಅಧಿಕ ಮಳೆಯ ಮುಂತಾದವು ದೊಡ್ಡಮಟ್ಟದ ತೊಂದರೆಗಳನ್ನು ಸೃಷ್ಟಿಸುತ್ತದೆ. ಷೇರು ಮಾರುಕಟ್ಟೆಯು ಉನ್ನತ ಮಟ್ಟವನ್ನು ತಲುಪಲಿದೆ.
ಭಾರತವನ್ನು ಪ್ರಭಾವಿಸುವ ವಿದೇಶ ವಿದ್ಯಮಾನಗಳು
ಅಮೆರಿಕದಲ್ಲಿ ಅಪರಾಧದ ಸಂಖ್ಯೆಯು ಹೆಚ್ಚುತ್ತದೆ. ಕೆಲವೊಮ್ಮೆ ಭಾರತದ ಜೊತೆಗೆ ವಾದದಲ್ಲಿ ತೊಡಗಿದರೂ ಎರಡೂ ದೇಶಗಳ ನಡುವಣ ಸ್ನೇಹ ಸಂಬಂಧಕ್ಕೆ ತೊಂದರೆಯಾಗದು. ಚೀನಾ ದೇಶವು ಈ ವರ್ಷ ತನ್ನ ಭದ್ರತೆಗೆ ಹೆಚ್ಚು ಹಣ ತೊಡಗಿಸುತ್ತದೆ. ಚೀನಾ ತನ್ನ ವ್ಯಾಪಾರದ ಹಿತಾಸಕ್ತಿ ಕಾಪಾಡಿಕೊಳ್ಳಲು ಈ ವರ್ಷ ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತದೆ. ಆದರೆ ವಿಶ್ವಾಸದ ಕೊರತೆಯಿಂದಾಗಿ ಏಕಾಂಗಿಯಾಗಿ ಮುಂದುವರೆಯಬೇಕಾಗುತ್ತದೆ. ಪ್ರಪಂಚದ ಯಾವುದೇ ಪ್ರಬಲ ದೇಶಗಳು ಚೀನಾದ ಸಹಯೋಗಕ್ಕೆ ನಿಲ್ಲುವುದಿಲ್ಲ.
ಕರ್ನಾಟಕ ರಾಜಕಾರಣದಲ್ಲಿ ಆಕಸ್ಮಿಕ ಬದಲಾವಣೆ
ಕರ್ನಾಟಕಕ್ಕೆ ಕ್ರೋಧಿನಾಮ ಸಂವತ್ಸರದಲ್ಲಿ ಯಾವುದೇ ತೊಂದರೆ ಇರುವಂತೆ ಕಾಣುವುದಿಲ್ಲ. ಆದರೆ ರಾಜ್ಯ ರಾಜಕಾರಣದಲ್ಲಿ ಹಲವು ಆಕಸ್ಮಿಕ, ಹಠಾತ್ ಬೆಳವಣಿಗೆಗಳು ಕಾಣಿಸುತ್ತವೆ. ಅಧಿಕಾರದಲ್ಲಿ ಇರುವವರು ಜನಸಾಮಾನ್ಯರ ಜೊತೆ ಪ್ರೀತಿ ವಿಶ್ವಾಸದಿಂದ ವರ್ತಿಸಲೇಬೇಕಾದ ಪ್ರಮೇಯ ಉಂಟಾಗುತ್ತದೆ. ಅಪರಾಧ ನಿಯಂತ್ರಣಕ್ಕೆ ಸರ್ಕಾರ ಹೆಚ್ಚು ಗಮನ ಕೊಡಲೇಬೇಕು. ರಕ್ಷಣಾ ವ್ಯವಸ್ಥೆಯನ್ನು ಸರಿಪಡಿಸುವ ಕುರಿತು ಸರ್ಕಾರ ಆಲೋಚನೆ ಮಾಡಿದರೂ, ಅಂಥ ಕ್ರಮಗಳು ನಿರೀಕ್ಷಿತ ವೇಗದಲ್ಲಿ, ಸರಿಯಾದ ದಿಕ್ಕಿನಲ್ಲಿ ಸಾಗಲಾರದು.
ಕರ್ನಾಟಕದಲ್ಲಿ ಈ ಸಂವತ್ಸರದಲ್ಲಿ ನಿರುದ್ಯೋಗ ಸಮಸ್ಯೆಯು ಹೆಚ್ಚುತ್ತದೆ. ಸಣ್ಣಮಟ್ಟದ ಉದ್ದಿಮೆಗಳಿಗೆ ಸರಕಾರದಿಂದ ವಿಶೇಷ ಸವಲತ್ತುಗಳು ದೊರೆತರೂ ಜಾಗತಿಕ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಕೆಲವು ವಿಚಾರಗಳಲ್ಲಿ ನೆರೆಯ ರಾಜ್ಯಗಳ ಮೇಲೆ ಸಂಪೂರ್ಣವಾಗಿ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ರಾಜ್ಯದ ಅಧಿಕಾರ ಸ್ಥಾನದಲ್ಲಿರುವವರು ಮೇಲ್ನೋಟಕ್ಕೆ ಸ್ನೇಹಿತರಂತಿದ್ದರೂ ಕ್ರಮೇಣ ಅವರಲ್ಲಿ ಭಿನ್ನಮತ ಹೆಚ್ಚಾಗಬಹುದು. ರಾಜಕೀಯದಲ್ಲಿ ಎಲ್ಲರ ನಿರೀಕ್ಷಣೆಗೆ ಮೀರಿದ ಫಲಿತಾಂಶಗಳನ್ನು ಜನರು ನೋಡುತ್ತಾರೆ.
ಏನೆಲ್ಲಾ ಸಂದಿಗ್ಧಗಳು, ಸಮಸ್ಯೆಗಳಿದ್ದರೂ ಒಟ್ಟಾರೆಯಾಗಿ ಯುಗಾದಿ ಸಂವತ್ಸರ ಫಲವನ್ನು ಲೆಕ್ಕ ಹಾಕಿದರೆ ಜನಸಾಮಾನ್ಯರಿಗೆ ಹೆಚ್ಚು ಬಾಧೆ ಕಾಣಿಸುವುದಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಸರ್ಕಾರ ತಕ್ಕಮಟ್ಟಿಗೆ ಸ್ಥಿರವಾಗಿಯೇ ಇರುತ್ತದೆ. ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತವೆ. ಹಲವು ಸಮಸ್ಯೆಗಳಿಗೆ ಹೊಸದಾಗಿ ಕಾಣಿಸಿಕೊಂಡು ಮುಂದಿನ ಸಂವತ್ಸರಕ್ಕೆ ಮುಂದುವರಿದರೂ ಜನರ ತಕ್ಷಣದ ಬದುಕು ಅಪಾಯಕ್ಕೀಡಾಗುವುದಿಲ್ಲ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಕೊಂಚ ಶಾಂತಿ, ನೆಮ್ಮದಿ ನೆಲೆಸುತ್ತದೆ.
ಬರಹ: ಎಚ್.ಸತೀಶ್, ಜ್ಯೋತಿಷಿ, ಬೆಂಗಳೂರು.ಇಮೇಲ್: sathishaapr23@gmail.com
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು.
(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ಯುಗಾದಿ ಹಬ್ಬ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ಮಾಹಿತಿಗೆ kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)