logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Varalakshmi Vratam : ಸೂತ ಮಹರ್ಷಿ ಹೇಳಿದ ವರಮಹಾಲಕ್ಷ್ಮಿ ವ್ರತದ ಪೌರಾಣಿಕ ಕಥೆ

Varalakshmi Vratam : ಸೂತ ಮಹರ್ಷಿ ಹೇಳಿದ ವರಮಹಾಲಕ್ಷ್ಮಿ ವ್ರತದ ಪೌರಾಣಿಕ ಕಥೆ

HT Kannada Desk HT Kannada

Aug 17, 2023 10:07 PM IST

google News

ವರಮಹಾಲಕ್ಷ್ಮಿ ಹಬ್ಬ 2023 (ಸಾಂಕೇತಿಕ ಚಿತ್ರ)

  • Varalakshmi Story: ವರಮಹಾಲಕ್ಷ್ಮಿ ಹಬ್ಬ ಸಮೀಪದಲ್ಲೇ ಇದೆ. ತಯಾರಿ ಶುರುವಾಗಿದೆ.  ಹಬ್ಬಹರಿದಿನಕ್ಕೆ  ಪೌರಾಣಿಕ ಹಿನ್ನೆಲೆ, ಕಥೆ ಇದ್ದೇ ಇದೆ. ಹಾಗೆಯೇ ವರಮಹಾಲಕ್ಷ್ಮಿ ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ಕಥೆ ಒಂದು ಇದೆ. ಅದು ಪಾರ್ವತಿದೇವಿಗೆ ಪರಮೇಶ್ವರ ಹೇಳಿದ ಕಥೆ. ಅದನ್ನು ಸೂತಪುರಾಣಿಕರು ಮುನಿ ಸಮುದಾಯಕ್ಕೆ ವಿವರಿಸಿದ್ದಾರೆ ಎಂಬುದು ಜನಪದ ವಿವರಣೆ. 

ವರಮಹಾಲಕ್ಷ್ಮಿ ಹಬ್ಬ 2023 (ಸಾಂಕೇತಿಕ ಚಿತ್ರ)
ವರಮಹಾಲಕ್ಷ್ಮಿ ಹಬ್ಬ 2023 (ಸಾಂಕೇತಿಕ ಚಿತ್ರ) (Wikipedia)

ವರಮಹಾಲಕ್ಷ್ಮಿ ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ಕಥೆ ಶುರುವಾಗುವುದು ಸತ್ಯಲೋಕದ ಚಿತ್ರಣದೊಂದಿಗೆ. ಪೂರ್ವಕಾಲಘಟ್ಟದ ವಿದ್ಯಮಾನ. ಸತ್ಯಲೋಕದಲ್ಲಿ ಋಷಿ, ಮುನಿಶ್ರೇಷ್ಠರೆಲ್ಲರೂ ಸೇರಿದ್ದರು. ಕಾರಣ ಇಷ್ಟೆ – ಅಂದು ಪುರಾಣಿಕ ಶಿಖಾಮಣಿ ಸೂತಮಹರ್ಷಿಗಳ ಪ್ರವಚನ ಇತ್ತು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಆ ಪ್ರವಚನಕ್ಕೂ ಮೊದಲೆ ಅಲ್ಲಿ ನೆರೆದಿದ್ದ ಮುನಿ ಶ್ರೇಷ್ಠರ ಸಮುದಾಯ ಸೂತ ಮಹರ್ಷಿಗಳ ಪಾದಕ್ಕೆರಗಿ, ʻತಾವು ತ್ರಿಕಾಲ ಜ್ಞಾನಿಗಳು. ಪುರಾಣ ಪುರುಷೋತ್ತಮರಾದ ನೀವು ನಮಗೆ ಅನುಗ್ರಹಿಸುವುದೇ ಆದರೆ, ಈ ಲೋಕದಲ್ಲಿ ಸರ್ವ ಸೌಭಾಗ್ಯಗಳನ್ನೂ ಕೊಡುವ ಅತ್ಯುತ್ತಮ ವ್ರತಾಚರಣೆ ಯಾವುದು, ಅದರ ಆಚರಣೆ ಹೇಗೆ ಎಂಬುದನ್ನು ನಮಗೆ ಅರ್ಥಮಾಡಿಸಿಕೊಡಿʼ ಎಂದು ಬೇಡಿಕೊಂಡರು.

ಹಾಗೆ, ಋಷಿ ಮುನಿಗಳ ಬೇಡಿಕೆಗೆ ತಲೆದೂಗಿದ ಸೂತಮಹರ್ಷಿಗಳು, ಮುನಿಶ್ರೇಷ್ಠರೇ, ಭಕ್ತಿಯಿಂದ ಪೂಜಿಸುವವರಿಗೆ, ವ್ರತಾಚರಣೆ ಮಾಡುವವರಿಗೆ ಈ ಲೋಕದಲ್ಲಿ ಸಕಲ ಇಷ್ಟಾರ್ಥ ಈಡೇರುವಂತಹ ಒಂದು ಅತ್ಯುತ್ತಮ ವ್ರತಾಚರಣೆ ಇದೆ. ಅದರ ಹಿನ್ನೆಲೆಯನ್ನು ತಿಳಿಸಿಕೊಡುವೆ ಎಂದು ಹೇಳುತ್ತ, ಆ ದಿನದ ತಮ್ಮ ಪ್ರವಚನದಲ್ಲಿ ಕಥೆಯೊಂದನ್ನು ಹೇಳಲು ಸಿದ್ಧರಾದರು.

ವರಮಹಾಲಕ್ಷ್ಮಿ ವ್ರತಾಚರಣೆ – ಪಾರ್ವತಿ, ಪರಮೇಶ್ವರರ ಮಾತುಕತೆ

ಇದು ಪೌರಾಣಿಕ ಕಥೆ. ಪುರಾಣದ ಕಾಲಘಟ್ಟ. ಸ್ಥಳ ಕೈಲಾಸ ಪರ್ವತ. ಕೈಲಾಸ ಎಂಬುದು ಪಾರ್ವತಿ ಪರಮೇಶ್ವರರ ನಿತ್ಯಸಾನ್ನಿಧ್ಯ ಇರುವ ಪ್ರದೇಶ. ಅದು ದೇವನದಿಗಳು ಹರಿಯುವ ನಿತ್ಯ ಹರಿದ್ವರ್ಣದಿಂದ ಕೂಡಿದ ಪ್ರದೇಶ. ಕಾಮಧೇನು, ಕಲ್ಪವೃಕ್ಷ ಮುಂತಾದವು ಎಲ್ಲವೂ ಇರುವಂತಹ ಆವಾಸಸ್ಥಾನವದು. ಆದ್ದರಿಂದ ಯಕ್ಷ, ರಾಕ್ಷಸ, ಗರುಡ ಗಂಧರ್ವ ದೇವಮಾನುಷಾದಿಗಳು ತಮ್ಮ ಪೂರ್ವ ಪುಣ್ಯಾನುಸಾರ ಅಲ್ಲಿಗೆ ಹೋಗಿ ಸೇರುತ್ತಾರೆ. ಆ ಪ್ರದೇಶದ ಒಡೆಯನಾದ ಪಾರ್ವತೀಶ್ವರನಿಗೆ ಸೇವೆ ಸಲ್ಲಿಸುವ ಅವಕಾಶ ಪಡೆಯುತ್ತಾರೆ.

ಅಲ್ಲಿ ಹಿಂದೊಮ್ಮೆ, ಪರಮೇಶ್ವರನು ಪಾರ್ವತಿಯ ಜತೆಗೆ ಸಂತೋಷದಿಂದ ಕುಳಿತಿದ್ದ. ಆ ಸಂದರ್ಭದಲ್ಲಿ ಜಗನ್ಮಾತೆಯಾದ ಪಾರ್ವತಿ ದೇವಿಯು ತನ್ನ ಪತಿ ಪರಮೇಶ್ವರನನ್ನು ಉದ್ದೇಶಿಸಿ, ʻಮಹಾದೇವಾ, ಪ್ರಪಂಚದಲ್ಲಿ ಭಕ್ತರ ಕಷ್ಟವನ್ನು ಪರಿಹರಿಸಿ ಸಕಲ ಸುಖಗಳನ್ನು ಕೊಟ್ಟು ಸೌಭಾಗ್ಯ ಸಂತೋಷಗಳನ್ನು ಉಂಟುಮಾಡುವ ವ್ರತ ಯಾವುದಾದರೂ ಇದೆಯಾ? ಇದ್ದರೆ ಅದನ್ನು ನನಗೆ ಹೇಳುʼ ಎಂದು ಕೇಳಿಕೊಂಡಳು.

ಆಗ ಪರಮೇಶ್ವರನು ʻಸರ್ವ ಸಂಪದ್ಭರಿತವಾದ ಪುತ್ರಪೌತ್ರದಾಯಕವಾದ ಸನ್ಮಂಗಳ ಸಂತಾನಕರವಾದ ವರ ಮಹಾಲಕ್ಷ್ಮೀ ವ್ರತ ಎಂಬ ವ್ರತಾಚರಣೆ ಒಂದು ಇದೆ. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಸರು, ಗಂಡಸರು, ಮಕ್ಕಳು ಯಾರುಬೇಕಾದರೂ ಮಾಡಬಹುದು. ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಈ ವ್ರತಾಚರಣೆ ಮಾಡಬೇಕುʼ ಎಂದು ಪಾರ್ವತಿಗೆ ಹೇಳಿದನು.

ಪತಿ ಪರಮೇಶ್ವರನ ಉತ್ತರದಿಂದ ಸಂತುಷ್ಠಳಾದ ಪಾರ್ವತಿ ದೇವಿಯು, ʻಸ್ವಾಮಿ ವರಲಕ್ಷ್ಮೀ ವ್ರತದ ಆಚರಣೆಗೆ ನಿಯಮವೇನಾದರೂ ಇದೆಯಾ? ಅದನ್ನು ಹೇಗೆ ಆಚರಿಸಬೇಕು? ಆ ವ್ರತದ ಅಧಿದೇವತೆ ಯಾರುʼ ಎಂದು ಕೇಳಿದಳು.

ಅದಕ್ಕೆ ಉತ್ತರಿಸಿದ ಪರಮೇಶ್ವರನು, ʻಮಹಾಲಕ್ಷ್ಮಿಯೇ ಆ ವ್ರತಕ್ಕೆ ಅಧಿದೇವತೆ. ಇದನ್ನು ಶ್ರಾವಣ ಮಾಸದಲ್ಲಿ ಪೌರ್ಣಿಮೆಗೆ ಸಮೀಪಸ್ಥವಾದ ಭೃಗುವಾರ ಮಾಡಬೇಕು. ಆ ರೀತಿ ವ್ರತಾಚರಣೆ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡುತ್ತವೆ. ಅದೇ ರೀತಿ ಅವರ ಕಷ್ಟ ಕಾರ್ಪಣ್ಯಗಳು ನಾಶವಾಗುವುದು. ಇದರ ಮಹತ್ವವನ್ನು ಸಾರುವ ಕಥೆಯೊಂದು ಇದೆ. ಅದನ್ನು ಹೇಳುತ್ತೇನೆ ಕೇಳು ಎಂದು ಪಾರ್ವತಿ ದೇವಿಗೆ ಆ ಕಥೆಯನ್ನು ಹೇಳಿದ್ದು ಹೀಗೆ..

ಚಾರುಮತಿಗೆ ವರಮಹಾಲಕ್ಷ್ಮಿ ಒಲಿದ ಕಥೆ

ಆ ಕಾಲದಲ್ಲಿ ವಿದರ್ಭ ದೇಶಕ್ಕೆ ರಾಜಧಾನಿ ಕುಂಡಿನನಗರ. ಅಲ್ಲಿ ಚಾರುಮತಿ ಎಂಬ ಒಬ್ಬ ಮಹಿಳೆ ವಾಸವಿದ್ದಳು. ಆಕೆ ದರಿದ್ರಳಾದರೂ ಸದಾಚಾರ ಸಂಪನ್ನಳು. ಪತಿಯ ಶುಶ್ರೂಷೆಯೆ ಮುಖ್ಯ ಎಂದು ತಿಳಿದು ಸದಾ ಸಂತೋಷ ಚಿತ್ತಳಾಗಿ ಪತಿಯ ಮನಸ್ಸನ್ನು ನೋಯಿಸದೆ ಸದ್ವರ್ತನೆ ತೋರುತ್ತಿದ್ದವಳು.

ಇವಳ ಸದಾಚಾರ ಸಂಪನ್ನತೆಗೆ ಮೆಚ್ಚಿದ ಮಹಾಲಕ್ಷ್ಮಿಯು, ಒಂದು ದಿನ ಚಾರುಮತಿಯು ನಿದ್ರಿಸುತ್ತಿರುವಾಗ ಸ್ವಪ್ನದಲ್ಲಿ ಕಂಡು "ಪತಿವ್ರತೆಯಾದ ಚಾರುಮತಿ, ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವ ಪುಣ್ಯಾನುಸಾರವಾಗಿ ನಿನಗೆ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು. ಈಗ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ, ನಂತರ ಅದರಂತೆ ಆಚರಣೆ ಮಾಡಬೇಕು. ಆ ರೀತಿ ಮಾಡುವುದರಿಂದ ನೀನು ಈಗ ಅನುಭವಿಸುತ್ತಿರುವ ದಟ್ಟ ದಾರಿದ್ರ್ಯವು ನಾಶವಾಗಿ, ಅಷ್ಟೈಶ್ವರ್ಯವು ನಿನಗೆ ಪ್ರಾಪ್ತಿಯಾಗುತ್ತದೆ.

ಶ್ರಾವಣ ಮಾಸದ ಎರಡನೆಯ ಶುಕ್ರವಾರ ಪ್ರದೋಷದಲ್ಲಿ ವಿಧಿವತ್ತಾಗಿ ಯಾರು ನನ್ನನ್ನು ಪೂಜಿಸುವರೋ, ವ್ರತಾಚರಣೆ ಮಾಡುವರೋ ಅಂಥವರಿಗೆ ನಾನು ಸಕಲ ಭೋಗಭಾಗ್ಯಗಳನ್ನು ಒದಗಿಸುವೆನು. ಯಾರಿಗೆ ಪುಣ್ಯ ಸಂಪರ್ಕವಿರುವುದೊ, ಅಂಥವರಿಗೆ ಈ ವ್ರತಚಾರಣೆಯಲ್ಲಿ ಭಕ್ತಿ ಹುಟ್ಟುತ್ತದೆ.

ಭೂಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರೇ ಧನ್ಯರು! ಅವರೇ ಶೂರರು! ಅವರೇ ಪುಣ್ಯಶಾಲಿಗಳು, ಅವರೇ ಮಹಾತ್ಮರು, ಸಾಹಸಿಗಳು. ಅವರೇ ಪಂಡಿತರು, ಅಂಥವರೇ ಸ್ತುತ್ಯರ್ಹರು. ಹೆಚ್ಚು ಹೇಳುವುದೇನು ಬಂತು ಅವರೇ ಸರ್ವೋತ್ತಮರು. ಯಾರು ನನ್ನ ಕೃಪಾ ಕಟಾಕ್ಷಕ್ಕೆ ಬಾಹಿರರಾಗಿರುವರೊ! ಅವರ ಬಾಳು ಅಜಗಳಸ್ತನದಂತೆ ವ್ಯರ್ಥವೇ ಸರಿ. ಆದ ಕಾರಣ ನೀನು ಈ ವ್ರತಾಚರಣೆ ಮಾಡಿ ಧನ್ಯಳಾಗು" ಎಂದು ಉಪದೇಶಿಸಿ ಅಂತರ್ದಾನಳಾದಳು.

ನಿದ್ದೆಯಿಂದ ಎದ್ದ ಚಾರುಮತಿಯು, ಈ ಕನಸನ್ನು ತನ್ನವರ ಬಳಿ ಹೇಳಿಕೊಂಡಳು. ಶ್ರಾವಣ ಮಾಸ ಶುರುವಾಯಿತು. ಎರಡನೇ ಶುಕ್ರವಾರವೂ ಬಂತು. ಚಾರುಮತಿ ಕೂಡ ಮೊದಲೇ ಯೋಜಿಸಿದ ಪ್ರಕಾರ, ವರಮಹಾಲಕ್ಷ್ಮಿ ವ್ರತಾಚರಣೆ ಮಾಡಿದಳು. ಮಹಾಲಕ್ಷ್ಮಿಯನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸಿದಳು. ಹೀಗಾಗಿ ವರಲಕ್ಷ್ಮಿಯ ಕೃಪಾಕಟಾಕ್ಷದ ಕಾರಣ ಅಷ್ಟೈಶ್ವರ್ಯವನ್ನೂ ಪಡೆದು, ದಾರಿದ್ರ್ಯವನ್ನು ನೀಗಿಸಿಕೊಂಡಳು.

ಮುಂದುವರಿಯಿತು ಪಾರ್ವತಿ – ಪರಮೇಶ್ವರರ ಮಾತುಕತೆ

ನಂತರದ ಕಾಲಘಟ್ಟದಲ್ಲಿ ಬದುಕಿನಲ್ಲಿ ಸುಖವನ್ನು ಅನುಭವಿಸುತ್ತ ಬಡವರಿಗೆ ಅನ್ನದಾನ ಮಾಡಿ, ಬಂಧುವರ್ಗದವರನ್ನು ಪ್ರೀತಿಯಿಂದ ಕಾಪಾಡುತ್ತ ಭೂಲೋಕದಲ್ಲಿ ಅನಂತವಾದ ಅಪಾರಸೌಖ್ಯ ಅನುಭವಿಸಿ, ಪರಲೋಕದಲ್ಲಿ ಶ್ರೇಷ್ಠವೆನಿಸಿದ ಪತಿಸಾಯುಜ್ಯವನ್ನು ಪಡೆದಳು.

ಆದ ಕಾರಣ ಈ ಲೋಕದಲ್ಲಿ ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪ್ರಸಾದದಿಂದ ಭೋಗಭಾಗ್ಯಗಳನ್ನು ಅನುಭವಿಸುವರುʼ ಎನ್ನುತ್ತ ಪರಮೇಶ್ವರನು ಆ ಕಥೆಯನ್ನು ಮುಗಿಸಿದನು.

ಆಗ ಪಾರ್ವತಿ ದೇವಿಯಿ, "ಮಹಾದೇವ ನನ್ನಲ್ಲಿ ನಿನಗೆ ದಯೆಯುಂಟಾದರೆ ಈ ಪೂಜೆ, ವ್ರತಾಚರಣೆಯ ವಿಧಾನವನ್ನು ವಿವರವಾಗಿ ಹೇಳಬೇಕು" ಎಂದು ಕೇಳಿಕೊಂಡಳು.

ವರಮಹಾಲಕ್ಷ್ಮಿ ಪೂಜಾ ವಿಧಾನಗಳನ್ನು ಪರಮೇಶ್ವರ ವಿವರಿಸಿದ್ದು ಹೀಗೆ –

ಶ್ರಾವಣಮಾಸದ ಎರಡನೆಯ ಶುಕ್ರವಾರ ಭಕ್ತಿಯುಳ್ಳ ಸ್ತ್ರೀಯರಾಗಲಿ, ಪುರುಷರಾಗಲಿ, ಮಕ್ಕಳೇ ಆಗಲಿ ಅಭ್ಯಂಜನವನ್ನು ಮಾಡಿಕೊಂಡು ಅಂದರೆ ಮಂಗಳ ಸ್ನಾನವನ್ನು ಮಾಡಬೇಕು. ಅದಾದ ನಂತರ ಮಡಿ ವಸ್ತ್ರ ಅಥವಾ ಶುಭವಸ್ತ್ರಗಳನ್ನು ಧರಿಸಬೇಕು. ಮನೆಯ ಎದುರು ರಂಗೋಲಿ ಬಿಡಿಸಬೇಕು. ಅಲಂಕೃತವಾದ ಪರಿಶುದ್ಧ ಪೂಜಾ ಸ್ಥಳದಲ್ಲಿ ಮನೋಹರವಾದ ಮಂಟಪ ನಿರ್ಮಿಸಬೇಕು. ಅದರ ಮಧ್ಯದಲ್ಲಿ ಪಂಚವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಮಾವಿನ ಚಿಗುರುಗಳಿಂದ ಕೂಡಿದ ಕಲಶವನ್ನು ಇಟ್ಟು ಪ್ರಾಣಪ್ರತಿಷ್ಠಾಪನ ಮಾಡಬೇಕು. ಅದರಲ್ಲಿ ವರಮಹಾಲಕ್ಷ್ಮಿಯನ್ನು ಪೂಜಿಸಬೇಕು. ಷೋಡಶೋಪಚಾರ ಮಾಡಿ ದೇವಿಯನ್ನು ಸತ್ಕರಿಸಬೇಕು.

''ಪದ್ಮಾನನೇ ಪದ್ಮ ಪದ್ಮಾಕ್ಷ್ಮೀ ಪದ್ಮ ಸಂಭವೇ ತಮ್ನೇ ಭಜಸಿ ಪದ್ಮಾಕ್ಷಿ ಯೇನ ಸೌಖ್ಯಂ ಲಭಾಮ್ಯಹಂ''ಎಂಬ ಮಂತ್ರದೊಂದಿಗೆ ಶಾಸ್ತ್ರಬದ್ಧವಾಗಿ ಪೂಜೆ ಮಾಡಿ ದೇವಿಯನ್ನು ತೃಪ್ತಿಪಡಿಸಬೇಕು. ಆನಂತರ ಯೋಗ್ಯ ಬ್ರಾಹ್ಮಣನಿಗೆ ಉಪಾಯನ ದಾನವನ್ನು ಕೊಡಬೇಕು. ಸುವಾಸಿನಿಯರನ್ನು ಸಮಾರಾಧನೆ ಸುಗಂಧ ತಾಂಬೂಲಗಳಿಂದ ತೃಪ್ತಿಪಡಿಸಬೇಕು. ಅದೇ ರೀತಿ, ಭಕ್ತಿಯುಕ್ತರಾದ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ, ಭೂರಿದಕ್ಷಿಣೆಗಳನ್ನು ಕೊಟ್ಟು ಈ ಕಥೆಯನ್ನು ಕೇಳಬೇಕು" ಎಂದು ಪರಮೇಶ್ವರನು ವಿವರಿಸಿದನು.

***

ಸೂತಪುರಾಣಿಕರು ಈ ಕಥೆಯನ್ನು ಮುನಿವೃಂದಕ್ಕೆ ಹೇಳಿದರು. ಈ ಕಥೆಯನ್ನು ಕೇಳಿದ ಋಷಿಗಳು ಸಂತುಷ್ಟರಾದರು.

---------------------------------------

ಈ ವರಮಹಾಲಕ್ಷ್ಮೀ ವ್ರತವನ್ನು ಯಾರು ಮಾಡುವರೋ, ಅದೇ ರೀತಿ ಈ ಕಥೆಯನ್ನು ಯಾರು ಕೇಳುವರೋ ಅವರಿಗೆ ದಾರಿದ್ರ್ಯ ದುಃಖ ನಾಶವಾಗಿ ಸಂಪತಿನಿಂದ ಸಕಲ ಭಾಗ್ಯಗಳೂ ಕೂಡಿ ಬರುತ್ತವೆ ಎಂದು ಪುರಾಣ ಹೇಳುತ್ತದೆ. ಈ ಕುರಿತಾಗಿ ಹೆಚ್ಚಿನ ಮಾಹಿತಿಗೆ, ಸಂದೇಹ ನಿವಾರಣೆಗೆ ಧಾರ್ಮಿಕ ಆಚರಣೆಗಳ ಪರಿಣತರನ್ನು ಸಂಪರ್ಕಿಸುವುದು ಉತ್ತಮ.

------------------------------

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ