ವಾಸ್ತು ಪ್ರಕಾರ ಮನೆ ಕಟ್ಟಲು ಇಲ್ಲಿದೆ ಸಲಹೆ; ಇದರ ಪ್ರಕಾರ ಮನೆ ಕಟ್ಟಿ ನೋಡಿ, ಯಾವುದೇ ದೋಷ ಉಂಟಾಗದು
Jul 23, 2024 12:03 PM IST
ವಾಸ್ತು ಪ್ರಕಾರ ಮನೆ ಕಟ್ಟಲು ಇಲ್ಲಿದೆ ಸಲಹೆ; ಇದರ ಪ್ರಕಾರ ಮನೆ ಕಟ್ಟಿ ನೋಡಿ, ಯಾವುದೇ ದೋಷ ಉಂಟಾಗದು.
- ಮನೆ ಕಟ್ಟುವಾಗ ಹಲವು ಗೊಂದಲಗಳಿರುತ್ತವೆ. ವಾಸ್ತು ಪ್ರಕಾರ ಮನೆ ಬಾಗಿಲು, ಪೂಜಾ ಗೃಹ, ಅಡುಗೆ ಮನೆ ಎಲ್ಲವೂ ಸರಿಯಾದ ದಿಕ್ಕಿನಲ್ಲಿರಿಸುವುದು ಹೇಗೆ ಎಂಬ ಯೋಚನೆ ಪ್ರಾರಂಭವಾಗುತ್ತದೆ. ಮನೆ ಕಟ್ಟುವಾಗ ಉಂಟಾಗುವ ವಾಸ್ತು ಗೊಂದಲಗಳಿಗೆ ಇಲ್ಲಿದೆ ಉತ್ತರ. ಈ ಸಲಹೆಗಳನ್ನು ಪಾಲಿಸಿ ಮನೆ ಕಟ್ಟಿ. (ಬರಹ: ಎಚ್. ಸತೀಶ್)
ವಾಸ್ತು ಶಾಸ್ತ್ರವು ನಮ್ಮ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಆದರೆ ಪ್ರತಿಯೊಬ್ಬರಿಗೂ ಮನೆ ಬಾಗಿಲು ಇಡುವ ಬಗ್ಗೆ, ಪೂಜಾ ಗೃಹದ ಬಗ್ಗೆ, ಅಡಿಗೆ ಮನೆಯ ಬಗ್ಗೆ ಹೆಚ್ಚಿನ ಯೋಚನೆ ಇರುತ್ತದೆ. ಇದರ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಹ ವಿಫಲರಾಗುತ್ತಾರೆ. ಲೋಕೋಭಿನ್ನ ರುಚಿಃ ಎಂಬಂತೆ ಸುತ್ತಮುತ್ತಲಿನ ಎಲ್ಲರೂ ತನ್ನದೆ ಆದ ಸಲಹೆ ನೀಡಲು ಆರಂಭಿಸುತ್ತಾರೆ. ಆದರೆ ಬಹು ಮುಖ್ಯವಾದ ವಿಚಾರವೆಂದರೆ ಆ ಜಮೀನಿನ ಸುತ್ತಳತೆ ಅಥವಾ ಒಂದು ಜಮೀನಿನ ವಿಸ್ತೀರ್ಣ ಮನೆ ಕಟ್ಟಿಸುವ ಮುನ್ನ ಬುದ್ದಿವಂತಿಕೆಯ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಅದೆಂದರೆ ಆಯಗಳು. ಮನೆ ಕಟ್ಟುವ ಜಮೀನು ಆಯತಾಕಾರದಲ್ಲಿ ಇರುವುದು ಒಳ್ಳೆಯದು. ಮನೆ ಕಟ್ಟುವ ಜಮೀನನ್ನು ದ್ವಜಾಯಕ್ಕೆ ಪರಿವರ್ತಿಸಿಕೊಂಡಲ್ಲಿ ಯಾವುದೇ ದಿಕ್ಕಿನಲ್ಲಿ ಬಾಗಿಲನ್ನು ಇಡಬಹುದು. ಮನೆಯ ಬಾಗಿಲನ್ನು ವಾಸ್ತು ಪುರುಷನ ಸ್ಥಿತಿಯಿಂದ, ಜನ್ಮಕುಂಡಲಿಯಲ್ಲಿ ರವಿ ಇರುವ ರಾಶಿಯಿಂದ, ಜನ್ಮ ಕುಂಡಲಿಯಲ್ಲಿ ಚಂದ್ರನಿರುವ ರಾಶಿಯಿಂದ ಮತ್ತು ಆಯವನ್ನು ಅನುಸರಿಸಿ ಬಾಗಿಲುಗಳನ್ನು ಇಡಬಹುದು. ಇದರೊಂದಿಗೆ ಕೆಲವೊಂದು ಬದಲಾವಣೆಗಳು ಅತಿ ಮುಖ್ಯವಾಗುತ್ತವೆ.
ತಾಜಾ ಫೋಟೊಗಳು
ಇದನ್ನೂ ಓದಿ: ಮನೆ ಹೆಸರು ಹಾಕುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ: ನೇಮ್ ಪ್ಲೇಟ್ ವಿಚಾರದಲ್ಲಿ ಈ ವಾಸ್ತು ಅನುಸರಿಸಿ
ಉತ್ತರ ಮತ್ತುಪೂರ್ವ ದಿಕ್ಕಿನ ನಡುವೆ ಇರುವ ಮೂಲೆಯನ್ನು ಈಶಾನ್ಯ ಎಂದು ಕರೆಯುತ್ತೇವೆ. ಈಶಾನ್ಯ ದಿಕ್ಕಿಗೆ ದೈವ ಮೂಲೆ ಎಂಬ ಮತ್ತೊಂದು ಹೆಸರಿದೆ. ಈ ಮೂಲೆಯಲ್ಲಿ ತೂಕದ ವಸ್ತುಗಳನ್ನು ಇಡಬಾರದು. ಕಾರಣ ಈ ಭಾಗದಲ್ಲಿ ಕುಲದೇವರು ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ಭಾಗದಲ್ಲಿ ದೇವರ ಮನೆ ನಿರ್ಮಿಸಲು ಅಥವಾ ದೇವರನ್ನು ಇಟ್ಟು ಪೂಜಿಸಲು ಬಲು ಯೋಗ್ಯ.
ಪೂರ್ವದಿಕ್ಕಿನಲ್ಲಿ ಗುರುವಿನ ನೆಲೆ ಇರುತ್ತದೆ ಗುರುವಿನ ಮುಖ್ಯವಾದ ಕೆಲಸವೆಂದರೆ ದೇಹ ಮತ್ತು ಮನಸ್ಸನ್ನು ಶುಚಿಗೊಳಿಸುವುದು. ಆದ್ದರಿಂದ ಈ ದಿಕ್ಕಿನಲ್ಲಿ ಸ್ನಾನದ ಮನೆಯನ್ನು ಕಟ್ಟಬಹುದು ಮನಸ್ಸಿನ ಶುದ್ದಿಗಾಗಿ ಪೂರ್ವದ ಕಡೆ ಮುಖವನ್ನು ಮಾಡಿ ದೇವರ ಧ್ಯಾನವನ್ನು ಮಾಡಬಹುದು.
ದಕ್ಷಿಣ ಮತ್ತು ಪೂರ್ವ ದಿಕ್ಕಿನ ನಡುವೆ ಇರುವ ಭಾಗವನ್ನು ಅಗ್ನಿ ಮೂಲೆ ಎಂದು ಕರೆಯುತ್ತಾರೆ. ಇಲ್ಲಿ ಅಗ್ನಿಯು ನೆಲೆಸಿರುತ್ತಾನೆ. ಈ ಕಾರಣದಿಂದಾಗಿ ಈ ಭಾಗದಲ್ಲಿ ದೇವರ ಮನೆಯನ್ನು ನಿರ್ಮಿಸಬಹುದು. ಅಡುಗೆಯನ್ನು ಮಾಡಲು ಈ ಭಾಗವು ಯೋಗ್ಯವಾದ ಸ್ಥಳವಾಗಿದೆ. ಈ ಭಾಗದಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುವುದು ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆಸುವುದು ಮಾಡಬಾರದು ಇದರಿಂದ ಹಾನಿ ಉಂಟಾಗಬಹುದು.
ದಕ್ಷಿಣ ದಿಕ್ಕಿನಲ್ಲಿ ಶನಿ ಗ್ರಹ ಇರುತ್ತದೆ. ಕೆಲವರ ವಾದನಂತೆ ಈ ಜಾಗದಲ್ಲಿ ಯಮನಿರುತ್ತಾನೆ. ಶನಿಯು ನಿದ್ದೆಗೆ ಕಾರಣವಾಗಿರುತ್ತಾನೆ. ಆದ್ದರಿಂದ ಈ ಭಾಗದಲ್ಲಿ ಮಲಗುವ ಮನೆಯನ್ನು ನಿರ್ಮಿಸಬಹುದು. ಆದರೆ ಮಲಗಿದಾಗ ತಲೆಯೂ ಪೂರ್ವ ದಿಕ್ಕಿನಲ್ಲಿ ಇರಬೇಕು.
ದಕ್ಷಿಣ ಮತ್ತು ಪಶ್ಚಿಮ ಭಾಗವನ್ನು ನೈರುತ್ಯ ಎಂದು ಕರೆಯುತ್ತೇವೆ. ಈ ಭಾಗದಲ್ಲಿ ನಿರುತಿ ಎಂಬ ರಾಕ್ಷಸನಿರುತ್ತಾನೆ. ಆದಕಾರಣ ಈ ಭಾಗದಲ್ಲಿ ಹಣವನ್ನು ಶೇಖರಿಸಿ ಇಡಬಹುದು. ಪುಸ್ತಕ ಭಂಡಾರ ಮತ್ತು ಓದುವ ಕೊಠಡಿಯನ್ನು ಇಲ್ಲಿ ನಿರ್ಮಿಸಬಹುದು.
ಪಶ್ಚಿಮ ದಿಕ್ಕಿನಲ್ಲಿ ಶನಿಯ ವಾಸವಿರುತ್ತದೆ. ಆದ್ದರಿಂದ ಇಲ್ಲಿ ತೂಕವಿರುವ ಪದಾರ್ಥಗಳನ್ನು ಶೇಖರಣೆ ಮಾಡಬಹುದು. ಈ ದಿಕ್ಕಿನಲ್ಲಿ ಕುಳಿತು ಯಾವುದೇ ಶುಭ ಕೆಲಸಗಳನ್ನು ಮಾಡಬಾರದು. ಆಹಾರವನ್ನು ಸೇವಿಸಲು ಇದು ಪರಿಪಕ್ವ ಸ್ಥಳವಾಗಿದೆ ಆದ್ದರಿಂದ ಭೋಜನಾಗೃಹವನ್ನು ನಿರ್ಮಿಸಬಹುದು.
ಉತ್ತರ ಮತ್ತು ಪಶ್ಚಿಮ ದಿಕ್ಕುಗಳ ನಡುವೆ ಇರುವ ಭಾಗವನ್ನು ವಾಯುವ್ಯ ಎಂದು ಕರೆಯುತ್ತೇವೆ. ಇಲ್ಲಿ ಶೌಚಾಲಯವನ್ನು ನಿರ್ಮಿಸಬಹುದು. ಈ ದಿಕ್ಕಿನಲ್ಲಿ ಹಣವನ್ನು ಶೇಖರಿಸಿ ಇಟ್ಟರೆ ಇರುವ ಹಣವೆಲ್ಲ ಖರ್ಚಾಗಿ ಕೈ ಬರಿದಾಗುತ್ತದೆ. ಮನೆಯಲ್ಲಿನ ಪಾತ್ರೆ ಮತ್ತು ಇನ್ನಿತರ ಸರಂಜಾಮುಗಳನ್ನುಶೇಖರಿಸಿ ಇಡಬಹುದು.
ಉತ್ತರ ದಿಕ್ಕನ್ನು ಕುಬೇರ ಸ್ಥಾನ ಎಂದು ಕರೆಯುತ್ತೇವೆ. ಇಲ್ಲಿ ಹಣವನ್ನು ಶೇಖರಿಸಬಹುದು. ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಶುಭ ಕಾರ್ಯಗಳನ್ನು ಮಾಡಬಹುದು.
ಬರಹ: ಎಚ್. ಸತೀಶ್, ಜ್ಯೋತಿಷಿ
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)