Weekly Horoscope: ಅತಿಯಾದ ಕೋಪ, ಆರೋಗ್ಯದಲ್ಲಿ ಏರುಪೇರು, ವಿವಾಹಯೋಗ; ಹೊಸ ವರ್ಷದ ಮೊದಲ ವಾರದ ಭವಿಷ್ಯ
Dec 31, 2023 06:00 AM IST
ಡಿಸೆಂಬರ್ 31 ರಿಂದ ಡಿಸೆಂಬರ್ ಜನವರಿ 6ರವರೆಗಿನ ವಾರಭವಿಷ್ಯ
- ಡಿಸೆಂಬರ್ 31 ರಿಂದ ಜನವರಿ 6 ರವರೆಗಿನ ವಾರ ಭವಿಷ್ಯ: ಪ್ರತಿರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. ವಾರದ ಭವಿಷ್ಯ ಇಲ್ಲಿದೆ. (31st Dec 2023 to Jan 6th Weekly Horoscope)
ಡಿಸೆಂಬರ್ 31 ರಿಂದ ಜನವರಿ 6 ರವರೆಗಿನ ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (31st December 2023 to Jan 6th Weekly Horoscope)
ತಾಜಾ ಫೋಟೊಗಳು
ಮೇಷ
ಆತ್ಮವಿಶ್ವಾಸದಿಂದ ದೈನಂದಿನ ಕೆಲಸ ಕಾರ್ಯಗಳಲ್ಲಿ ಮುಂದುವರೆಯುವಿರಿ. ಅದೃಷ್ಟವಶಾತ್ ಕೆಲಸ ಕಾರ್ಯಗಳು ಆತ್ಮೀಯರ ಸಹಕಾರದಿಂದ ನೆರವೇರುತ್ತವೆ. ಮಕ್ಕಳ ಜೀವನದಲ್ಲಿ ಅನುಕೂಲಕರ ಪರಿಸ್ಥಿತಿ ಉಂಟಾಗುತ್ತದೆ. ಮಾತುಕತೆಗಳಿಂದ ಬೇಸರದ ಸನ್ನಿವೇಶಗಳು ಎದುರಾಗಲಿದೆ. ಆತುರದಿಂದ ತೆಗೆದುಕೊಳ್ಳುವ ತೀರ್ಮಾನಗಳು ಕೈಗೂಡಲಾರದೆ ಹೋಗುತ್ತದೆ. ಕುಟುಂಬದ ಎಲ್ಲರೊಂದಿಗೆ ಸಂತೋಷದಿಂದ ಬಾಳುವಿರಿ. ಅನಾವಶ್ಯಕವಾದ ಕೆಲಸ ಕಾರ್ಯಗಳಿಂದ ದೂರವಿದ್ದು ಕುಟುಂಬ ಸದಸ್ಯರ ಜೊತೆಯಲ್ಲಿ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ಬೇರೆಯವರ ಸಲುವಾಗಿ ಹೆಚ್ಚು ಹಣ ಖರ್ಚಾಗಬಹುದು. ಕೋಪ ತಾಪಗಳಿಂದ ಏನನ್ನೂ ಸಾಧಿಸಲಾಗದು ಎಂಬ ನಿಜ ನೆನಪಿರಲಿ.
ವೃಷಭ
ಜನ್ಮಸ್ಥಳದಿಂದ ದೂರದ ಪ್ರದೇಶದಲ್ಲಿ ಆಶಾದಾಯಕ ಫಲಿತಾಂಶಗಳು ದೊರೆಯುತ್ತವೆ. ತಾಯಿಯವರ ಹೆಸರಿನಲ್ಲಿ ಇರುವ ಭೂಮಿಯು ವಿವಾದಕ್ಕೆ ಒಳಗಾಗಬಹುದು. ಯಾವುದೇ ಕಷ್ಟ ನಷ್ಟವಿಲ್ಲದೆ ಸುಖಜೀವನ ನಡೆಸುವಿರಿ. ಕುಟುಂಬದಲ್ಲಿ ಪ್ರತಿಯೊಬ್ಬರು ತಾವೇ ಸರಿ ಎಂಬ ಭಾವನೆಯಿಂದ ವರ್ತಿಸುತ್ತಾರೆ. ಇದರಿಂದಾಗಿ ಶಾಂತಿ ನೆಮ್ಮದಿ ಮರೆಯಾಗುತ್ತದೆ. ಪರಸ್ಪರ ಗೌರವ ನೆಮ್ಮದಿಯಿಂದ ಬಾಳುವುದು ಮುಖ್ಯವಾಗುತ್ತದೆ. ಉತ್ತಮ ಆದಾಯ ಇರುವ ಕಾರಣ ನೆಮ್ಮದಿ ನೆಲೆಸುತ್ತದೆ. ಜೀವನಕ್ಕೆ ಹೊಸ ರೂಪ ನೀಡಲು ಪ್ರಯತ್ನಿಸುವಿರಿ. ಆರೋಗ್ಯದಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇದೆ.
ಮಿಥುನ
ಧೈರ್ಯ ಸಾಹಸದ ಗುಣ ಸೋಲನ್ನು ಮರೆ ಮಾಡುತ್ತಿರುತ್ತದೆ. ಪ್ರಯತ್ನಪಡದೆ ಯಾವುದೇ ವಿಚಾರದಲ್ಲಿಯೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಅಸಾಧ್ಯವಾದ ಗುಣವಿದ್ದರೂ ದೃಢವಾದ ತೀರ್ಮಾನವನ್ನು ಕೈಗೊಳ್ಳುವುದಿಲ್ಲ. ಆದರೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಅನಿರೀಕ್ಷಿತ ಸಹಾಯ ದೊರೆಯುತ್ತದೆ. ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ಉದ್ಯೋಗ ಬದಲಿಸುವ ಆಶಯ ಇರುತ್ತದೆ. ಸ್ವಂತ ಭೂಮಿ ಅಥವಾ ಮನೆ ಕೊಳ್ಳುವಿರಿ. ದಿನ ಕಳೆದಂತೆ ಸುಖಜೀವನ ನಡೆಸುವಿರಿ. ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನದ ಅವಕಾಶ ದೊರೆಯುತ್ತದೆ. ಬೇರೆಯವರ ಕೆಲಸ ಕಾರ್ಯದಲ್ಲಿ ಅತಿಯಾದ ಮಾನಸಿಕ ಒತ್ತಡ ಇರುತ್ತದೆ.
ಕಟಕ
ಮನದಲ್ಲಿ ಅಳುಕಿನ ಭಾವನೆ ಇರುತ್ತದೆ. ಸದಾ ಆತುರದ ಗುಣವಿರುತ್ತದೆ. ಕಷ್ಟವಾದರೂ ಅಪೂರ್ಣವಾದ ಕೆಲಸ ಕಾರ್ಯಗಳನ್ನು ಪೂರೈಸುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಉದ್ಯೋಗದಲ್ಲಿನ ತೊಂದರೆ ದೂರವಾಗುವುದು. ಬುದ್ಧಿವಂತಿಕೆಯ ಮಾತಿನಿಂದ ಭೂವಿವಾದವೊಂದು ಪರಿಹಾರಗೊಳ್ಳಲಿದೆ. ಖ್ಯಾತ ಹಣಕಾಸಿನ ಸಂಸ್ಥೆಯಲ್ಲಿ ಅಧಿಕಾರಿಯ ಸ್ಥಾನ ದೊರೆಯುತ್ತದೆ. ವಿದ್ಯಾರ್ಥಿಗಳು ಉನ್ನತ ಸ್ಥಾನ ಗಳಿಸುತ್ತಾರೆ. ಕುಟುಂಬದ ಹೆಚ್ಚಿನ ಜವಾಬ್ದಾರಿ ನಿಮ್ಮದಾಗಲಿದೆ. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವ ಯೋಜನೆ ಸಿದ್ದಪಡಿಸುವಿರಿ. ಧಾರ್ಮಿಕ ಕೆಲಸ ಕಾರ್ಯಗಳಿಗೆ ಹೆಚ್ಚಿನ ಹಣ ಬೇಕಾಗುತ್ತದೆ.
ಸಿಂಹ
ಅನಿವಾರ್ಯವಾಗಿ ಉದ್ಯೋಗವನ್ನು ಬದಲಾಯಿಸುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ. ಬಹುದಿನಗಳಿಂದ ಉಳಿದ ಕೆಲಸಗಳು ಸುಲಭವಾಗಿ ಕೈಗೊಳ್ಳಲಿವೆ. ಉನ್ನತ ಅಧಿಕಾರ ಹೊಂದಿರುವವರು ಆತಂಕದ ಕ್ಷಣಗಳನ್ನು ಎದುರಿಸಲಿದ್ದಾರೆ. ಭೂವ್ಯವಹಾರದ ಮುನ್ನ ಎಚ್ಚರಿಕೆ ಇರಲಿ. ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಜನಸಾಮಾನ್ಯರ ವಾದವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸುವಿರಿ. ರಾಜಕೀಯದಲ್ಲಿ ಉನ್ನತ ಮಟ್ಟದ ಯಶಸ್ಸು ದೊರೆಯಲಿದೆ. ವಿದ್ಯಾರ್ಥಿಗಳಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಕುಟುಂಬದ ಒಟ್ಟಾರೆ ಖರ್ಚು ವೆಚ್ಚಗಳು ಹೆಚ್ಚಲಿವೆ.
ಕನ್ಯಾ
ಉಡುಗೊರೆಯಾಗಿ ವಂಶದ ಆಸ್ತಿಯಲ್ಲಿ ಪಾಲು ದೊರೆಯುತ್ತದೆ. ಆರಂಭಿಸುವ ಕೆಲಸ ಕಾರ್ಯಗಳು ಪೂರ್ಣವಾಗುವವರೆಗೂ ಮನಸ್ಸು ಬದಲಿಸುವುದಿಲ್ಲ. ಅದೃಷ್ಟದ ಕಾರಣ ಕೆಲಸ ಕಾರ್ಯಗಳು ಪೂರ್ಣಗೊಳ್ಳುವುದು. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಹಣದ ಗಳಿಕೆಯಲ್ಲಿ ಸ್ಥಿರತೆ ಕಂಡು ಬರುವುದಿಲ್ಲ. ಸಹನೆಯಿಂದ ನಡೆದುಕೊಂಡಲ್ಲಿ ಕಳೆದುಕೊಂಡ ಉದ್ಯೋಗವನ್ನು ಪುನ: ಗಳಿಸಬಹುದು. ದುಡುಕಿ ಮಾಡುವ ತಪ್ಪಿಗೆ ಬೇರೆಯವರನ್ನು ದೂಷಿಸುವಿರಿ. ಆದಾಯ ಹೆಚ್ಚಿಸಿಕೊಳ್ಳಲು ಸ್ವಂತ ವ್ಯಾಪಾರವೊಂದನ್ನು ಆರಂಭಿಸುವಿರಿ. ಕುಟುಂಬದ ಒಳಗೂ ಸಮಾಜದಲ್ಲಿಯೂ ಉನ್ನತ ಗೌರವ ಸ್ಥಾನಮಾನ ಲಭಿಸುತ್ತದೆ.
ತುಲಾ
ಕ್ರಿಯಾಶೀಲ ವ್ಯಕ್ತಿತ್ವದಿಂದ ಯಾವುದಾದರೊಂದು ಕೆಲಸ ಕಾರ್ಯಗಳಲ್ಲಿ ನಿರತರಾಗಿರುವಿರಿ. ನೇರ ನಿಷ್ಠುರದ ಮಾತಿನಿಂದ ವಿವಾದಕ್ಕೆ ಒಳಗಾಗುವಿರಿ. ಅಂಜಿಕೆ ಇಲ್ಲದೆ ಮಾಡಿದ ತಪ್ಪನ್ನು ಒಪ್ಪಿ ಸರಿಪಡಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ದೊರೆಯುತ್ತದೆ. ಕಷ್ಟ ನಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವಿರಿ. ಅವಿವಾಹಿತರಿಗೆ ವಿವಾಹಯೋಗವಿದೆ. ಕುಟುಂಬದವರ ಜೊತೆಯಲ್ಲಿ ಹಣಕಾಸಿನ ಸಂಸ್ಥೆಯನ್ನು ಆರಂಭಿಸುವ ಸೂಚನೆಯಿದೆ. ಕೈಕಾಲುಗಳಲ್ಲಿ ನಿತ್ರಾಣ ಉಂಟಾಗಬಹುದು. ಮದುವೆ ವಿಚಾರದಲ್ಲಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳದಿರಿ. ವಾರಾಂತ್ಯಕ್ಕೆ ದೂರದ ಸ್ಥಳಕ್ಕೆ ತೆರಳುವ ಸಂಭವವಿದೆ. ಸಾಲದ ವ್ಯವಹಾರ ಮಾಡದಿರಿ.
ವೃಶ್ಚಿಕ
ಹಠ ಮತ್ತು ಕೋಪದಿಂದ ದೊರೆವ ಅವಕಾಶವನ್ನು ಕಳೆದುಕೊಳ್ಳುವಿರಿ. ಮಾಡಿದ ತಪ್ಪನ್ನು ಒಪ್ಪುವುದಿಲ್ಲ. ಸಹನೆಯಿಂದ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಯಶಸ್ಸು ದೊರೆಯುತ್ತದೆ. ಬೇರೆಯವರ ತಪ್ಪನ್ನು ಕ್ಷಮಿಸುವ ಗುಣ ರೂಢಿಸಿಕೊಳ್ಳಿರಿ. ಕುಟುಂಬದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಸೋದರರ ಜೊತೆಯಲ್ಲಿ ಪಾಲುಗಾರಿಕೆ ವ್ಯಾಪಾರವನ್ನು ಆರಂಭಿಸುವಿರಿ. ಕೌಟುಂಬಿಕ ಕಲಹ ದೂರವಾಗಿ ತಂದೆ ತಾಯಿಯ ಪ್ರೀತಿ ದೊರೆಯುತ್ತದೆ. ಯಾರಿಗೂ ಮೋಸ ಮಾಡದೆ ಜೀವನದಲ್ಲಿ ಮುಂದುವರೆಯುವಿರಿ. ಬೇರೊಬ್ಬರ ಅಧೀನದಲ್ಲಿ ಕೆಲಸ ಮಾಡಲು ಇಚ್ಚಿಸುವುದಿಲ್ಲ.
ಧನಸ್ಸು
ತಂದೆಯ ಅನಾರೋಗ್ಯ ಸುಧಾರಿಸಲು ಹೆಚ್ಚಿನ ಹಣಕಾಸಿನ ಅವಶ್ಯಕತೆ ಇರುತ್ತದೆ. ಸ್ಥಿರವಾದ ಮನಸ್ಸಿರುವುದಿಲ್ಲ. ಒಳ್ಳೆಯ ಮನಸ್ಕರು. ಅವಮಾನವನ್ನು ಸಹಿಸದೆ ಸೇಡಿನ ಪ್ರವೃತ್ತಿಯನ್ನು ತೋರುವಿರಿ. ಕುಟುಂಬದ ಎಲ್ಲರಿಗೂ ಅನುಕೂಲವಾಗುವ ಕೆಲಸವನ್ನು ಮಾತ್ರ ಮಾಡುವಿರಿ. ವಿರೋಧಿಗಳಿಗೂ ಶುಭವನ್ನೇ ಕೋರುವಿರಿ. ಪರೋಪಕಾರದ ಗುಣದಿಂದ ಎಲ್ಲರ ಮನ ಗೆಲ್ಲುವಿರಿ. ಕೋಪ ಬಂದರೂ ಶಾಂತಿ ಸಹನೆಯಿಂದ ವರ್ತಿಸುವಿರಿ. ಬಂಧು ಬಾಂಧವರ ಜೊತೆಯಲ್ಲಿ ಆತ್ಮೀಯತೆ ನೆಲೆಸಲು ಕಾರಣವಾಗುವಿರಿ. ಕಷ್ಟಪಟ್ಟು ದುಡಿವ ಕಾರಣ ಸೋಲೆಂಬ ಮಾತಿಲ್ಲ. ಹಣಕಾಸಿನ ತೊಂದರೆಬಾರದು. ಉದ್ಯೋಗದಲ್ಲಿ ಅಧಿಕಾರಿಯ ಪಟ್ಟ ಲಭಿಸುತ್ತದೆ.
ಮಕರ
ಮಾತುಕತೆಗೆ ಕೊನೆಯಿಲ್ಲ. ಯೋಚಿಸದೆ ಸುಲಭವಾಗಿ ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವುದಿಲ್ಲ. ಕ್ರಮೇಣ ಹಣಕಾಸಿನ ಕೊರತೆ ಕಡಿಮೆಯಾಗುತ್ತದೆ. ತಡವಾದ ನಿರ್ಧಾರದಿಂದಾಗಿ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತದೆ. ಹೊಸ ಮನೆಕೊಳ್ಳುವ ಇಂಗಿತದಿಂದ ಕೂಡಿಟ್ಟ ಹಣ ಖರ್ಚು ಮಾಡುವಿರಿ. ಎಲ್ಲರ ಪ್ರೀತಿ ವಿಶ್ವಾಸದಿಂದ ಸಮಾಜದ ನಾಯಕ ಸ್ಥಾನ ಅಲಂಕರಿಸುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ಕೀರ್ತಿ ದೊರೆಯುತ್ತದೆ. ಮನಸ್ಸು ಒಳ್ಳೆಯದಾದರೂ ದುಡುಕಿನ ಮಾತಿನಿಂದ ಕೆಟ್ಟ ಹೆಸರು ಗಳಿಸುವಿರಿ. ವಿವಾಹಯೋಗವಿದೆ. ಯಾರನ್ನೂ ಕಡೆಗಣ್ಣಿನಿಂದ ನೋಡದಿರಿ. ಹಣದ ತೊಂದರೆ ಬಾರದು.
ಕುಂಭ
ಧೈರ್ಯದ ಗುಣದಿಂದ ಯಾವುದೇ ಕೆಲಸ ಸಾಧಿಸಬಲ್ಲಿರಿ. ಸಾಹಸಕಲಾವಿದರಿಗೆ ವಿಶೇಷವಾದ ಅವಕಾಶ ದೊರೆಯಲಿದೆ. ಕ್ರೀಡಾಪಟುಗಳಿಗೆ ಉನ್ನತ ಗೌರವ ದೊರೆಯಲಿದೆ. ಮನಬಿಚ್ಚಿ ಮಾತನಾಡಿದಲ್ಲಿ ಜೀವನದಲ್ಲಿನ ಸಮಸ್ಯೆಗಳು ನಿವಾರಣೆ ಆಗುತ್ತವೆ. ಉದ್ಯೋಗದಲ್ಲಿ ತೊಂದರೆ ಇರದು, ಆದರೆ ಯಾವುದೇ ಬದಲಾವಣೆ ಕಾಣದು. ಭೂವಿವಾದವೊಂದು ನೆಮ್ಮದಿ ಕೆಡಿಸುತ್ತದೆ. ಪಾಲುಗಾರಿಕೆ ವ್ಯಾಪಾರದಲ್ಲಿ ಲಾಭವಿದೆ. ವಿದ್ಯಾರ್ಥಿಗಳು ಮನಬಿಚ್ಚಿ ಮಾತನಾಡಿದರೆ ತೊಂದರೆಯೊಂದು ದೂರವಾಗುತ್ತದೆ. ಸ್ತ್ರೀಯರು ಅಂತರ್ಮುಖಿಯಾಗಿ ವರ್ತಿಸುತ್ತಾರೆ. ಹಣಕಾಸಿನ ತೊಂದರೆ ಇರದು. ಮನೆಯ ನವೀಕರಣಕ್ಕಾಗಿ ಹಣವನ್ನು ಎರವಲು ಪಡೆಯುವಿರಿ. ಅತಿಯಾದ ಯೋಚನೆ ಒಳ್ಳೆಯದಲ್ಲ.
ಮೀನ
ತೆಗೆದುಕೊಳ್ಳುವ ತೀರ್ಮಾನಗಳನ್ನು ಅನೇಕ ಬಾರಿ ಬದಲಿಸುವಿರಿ. ಆತ್ಮವಿಶ್ವಾಸದಿಂದ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವಿರಿ. ದುಡಿಯುವ ಜನರಿಗೆ ಸಹಾಯ ಮಾಡುವಿರಿ. ಹಣದ ತೊಂದರೆ ಬಾರದು. ಕಷ್ಟ ಎನಿಸಿದ ವಿಚಾರದಲ್ಲಿಯೂ ಗೆಲ್ಲುವವರೆಗೂ ವಿರಮಿಸುವುದಿಲ್ಲ. ಅನಿರೀಕ್ಷಿತ ಆದಾಯ ಮತ್ತು ವ್ಯಯ ಕಂಡುಬರುತ್ತದೆ. ಯೋಗ, ಭರತನಾಟ್ಯದಂತಹ ಸಾಂಪ್ರದಾಯಿಕ ಕಲೆ ಬಲ್ಲವರಿಗೆ ಉತ್ತಮ ಅವಕಾಶ ದೊರೆಯಲಿದೆ. ಉದ್ಯೋಗದಲ್ಲಿ ಕ್ಷಿಪ್ರ ಬದಲಾವಣೆಗಳು ಇರುತ್ತವೆ. ತಂದೆಯವರ ಕೆಲಸವೊಂದು ಕಾರ್ಯಗತವಾಗಲು ಪರೋಕ್ಷವಾಗಿ ಕಾರಣರಾಗುವಿರಿ. ಸಮಯಕ್ಕೆ ತಕ್ಕಂತೆ ತೀರ್ಮಾನವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).