ಧಾರ್ಮಿಕ ಪ್ರಶ್ನೆ: ದೇವರ ದರ್ಶನ ಮಾಡುವ ಮೊದಲು ಧ್ವಜ ಸ್ತಂಭಕ್ಕೆ ನಮಸ್ಕಾರ ಮಾಡುವುದೇಕೆ, ಇಲ್ಲಿದೆ ಅಧ್ಯಾತ್ಮ ತಜ್ಞರ ಉತ್ತರ
Dec 22, 2023 06:11 PM IST
ದೇವರ ದರ್ಶನ ಮಾಡುವ ಮೊದಲು ಧ್ವಜ ಸ್ತಂಭಕ್ಕೆ ನಮಸ್ಕಾರ ಮಾಡುವುದೇಕೆ
- Significance of Dwajasthambam: ದೇವಾಲಯಕ್ಕೆ ಭೇಟಿ ನೀಡಿದಾಗ ದೇವರ ದರ್ಶನ ಮಾಡುವ ಮೊದಲು ದೇಗುಲದ ಮುಂದಿರುವ ಧ್ವಜಸ್ತಂಭಕ್ಕೆ ನಮಸ್ಕರಿಸಿ ಪ್ರದಕ್ಷಿಣೆ ಭೇಟಿ ನೀಡಬೇಕು ಎಂದು ಅಧ್ಯಾತ್ಮ ತಜ್ಞ, ಜ್ಯೋತಿಷಿ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ದೇಗುಲಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ದೇಗುಲದ ಮುಂದಿರುವ ಧ್ವಜಸ್ತಂಭಕ್ಕೆ ನಮಸ್ಕರಿಸಿ ಪ್ರದಕ್ಷಿಣೆ ಹಾಕಿದ ಬಳಿಕ ಗರ್ಭಗುಡಿಯತ್ತ ತೆರಳುವುದು ಅಗತ್ಯ ಎಂದು ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳಿದ್ದಾರೆ. ದೇಗುಲದ ಧ್ವಜಸ್ತಂಭಗಳ ಮಹತ್ವವನ್ನು ಮಹಾಭಾರತದಲ್ಲಿಯೂ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತಾಜಾ ಫೋಟೊಗಳು
ಮಹಾಭಾರತದ ಕಥೆ
ಮಹಾಭಾರತದ ಕಥೆಯ ಪ್ರಕಾರ ಮಣಿಪುರದ ದೊರೆ ಮಯೂರಧ್ವಜನು ಪಾಂಡವರ ಯಾಗಕ್ಕೆ ಅಡ್ಡಿ ಬಂದನು. ಅರ್ಜುನಾ, ಭೀಮ, ನಕುಲ ಸಹದೇವರು ಮಯೂರಧ್ವಜನೊಂದಿಗೆ ಯುದ್ಧ ಮಾಡಿ ಸೋತರು. ಹೀಗಾಗಿ, ಧರ್ಮರಾಜನು ಸ್ವತಃ ಮಣಿಪುರಕ್ಕೆ ತೆರಳಿದನು. ಇದನ್ನು ಅರಿತ ಶ್ರೀಕೃಷ್ಣ ಒಂದು ಉಪಾಯ ಹೇಳಿಕೊಡುತ್ತಾರೆ. ಶ್ರೀಕೃಷ್ಣ ಮತ್ತು ಧರ್ಮರಾಜರು ಹಳೆಯ ಬ್ರಾಹ್ಮಣರ ವೇಷದಲ್ಲಿ ಮಣಿಪುರವನ್ನು ತಲುಪುತ್ತಾರೆ. ಮಯೂರಧ್ವಜನು ಅವರಿಗೆ ದಾನ ಮಾಡಲು ಬಯಸುತ್ತಾನೆ. ಅವರಿಗೆ ಬೇಕಾದುದನ್ನು ನೀಡುವುದಾಗಿ ತಿಳಿಸುತ್ತಾನೆ.
ಆಗ ಬ್ರಾಹ್ಮಣ ವೇಷದಲ್ಲಿರುವ ಶ್ರೀಕೃಷ್ಣನು ಹೀಗೆ ಹೇಳುತ್ತಾನೆ. "ಅರಣ್ಯದಲ್ಲಿ ಮೃಗವೊಂದು ನನ್ನ ಸಹಚರನ ಮಗನ ಮೇಲೆ (ಧರ್ಮರಾಜನನ್ನು ತೋರಿಸಿ) ದಾಳಿ ಮಾಡಿದೆ. ಮಗುವನ್ನು ಬಿಡುವಂತೆ ಕೇಳಿದಾಗ ಬಾಲಕನನ್ನು ನೀಡಬೇಕಾದರೆ ರಾಜ ಮಯೂರಧ್ವಜನ ಅರ್ಧ ದೇಹ ನೀಡಬೇಕು ಎಂದು ಕೇಳಿತು. ನಿಮ್ಮ ದೇಹದ ಅರ್ಧಭಾಗವನ್ನು ದಾನ ಮಾಡಿದರೆ ಮಗು ಉಳಿಯುತ್ತದೆ" ಎಂದು ಕೇಳುತ್ತಾರೆ.
ಇದಕ್ಕೆ ಯಾವುದೇ ಹಿಂಜರಿಕೆಯಿಲ್ಲದೆ ಮಯೂರಧ್ವಜ ಒಪ್ಪುತ್ತಾನೆ. ರಾಜನ ಔದಾರ್ಯಕ್ಕೆ ಬೆರಗಾದ ಅವರು ತಮ್ಮ ನಿಜವಾದ ರೂಪವನ್ನು ತೋರಿಸುತ್ತಾನೆ. "ನಿನ್ನ ದಾನವನ್ನು ಮೆಚ್ಚಿದ್ದೇನೆ. ನಿನಗೆ ಯಾವ ವರ ಬೇಕು ಕೇಳು, ನೀಡುವೆ" ಎಂದು ಭಗವಂತ ಶ್ರೀ ಕೃಷ್ಣ ಕೇಳುತ್ತಾಣೆ. ಅದಕ್ಕೆ ಮಯೂರಧ್ವಜನು "ನನ್ನ ದೇಹ ನಾಶವಾದರೂ ನನ್ನ ಆತ್ಮವು ಇತರರಿಗೆ ಉಪಯುಕ್ತವಾಗಲಿ. ಅದು ಶಾಶ್ವತವಾಗಿ ಉಳಿಯಲಿ" ಎಂದು ವರವನ್ನು ಬೇಡುತ್ತಾನೆ.
ಇದಕ್ಕೆ ಶ್ರೀಕೃಷ್ಣ ದೇವರು ಸಮ್ಮತಿಸುತ್ತಾರೆ. "ಪ್ರತಿ ದೇವಾಲಯದ ಮುಂದೆ ನಿನ್ನ ಹೆಸರಿನ ಧ್ವಜಸ್ತಂಭಗಳನ್ನು ನಿಮ್ಮ ಸಂಕೇತವಾಗಿ ಸ್ಥಾಪಿಸಲಾಗುವುದು. ನಿನ್ನ ಆತ್ಮ ಸದಾ ದೇವರ ಸನ್ನಿಧಿಯಲ್ಲಿರಲಿ" ಎಂದು ವರವನ್ನು ನೀಡುತ್ತಾರೆ. "ಭಕ್ತರು ಧ್ವಜಸ್ತಂಭ ದರ್ಶನ ಮಾಡಿ ಪ್ರದಕ್ಷಿಣೆ ಮಾಡಿದ ಬಳಿಕ ತಮ್ಮ ಇಷ್ಟದೇವರ ದರ್ಶನ ಮಾಡುತ್ತಾರೆ. ಇದೇ ಕಾರಣಕ್ಕೆ ಭಕ್ತರು ಮೊದಲು ಧ್ವಜಸ್ತಂಭಕ್ಕೆ ನಮಸ್ಕರಿಸಿ ಬಳಿಕ ದೇಗುಲದ ದೇವರ ದರ್ಶನ ಮಾಡುತ್ತಾರೆ" ಎಂದು ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ವಿವರಿಸಿದ್ದಾರೆ.