ಕೆನಡಾ ವಿರುದ್ಧ ದಾಖಲೆಯ ಚೇಸಿಂಗ್; ಟಿ20 ವಿಶ್ವಕಪ್ ಪದಾರ್ಪಣೆ ಪಂದ್ಯದಲ್ಲೇ ಗೆದ್ದು ಬೀಗಿದ ಯುಎಸ್‌ಎ
Jun 02, 2024 10:04 AM IST
ದಾಖಲೆಯ ಚೇಸಿಂಗ್ ನಡೆಸಿ ಟಿ20 ವಿಶ್ವಕಪ್ ಪದಾರ್ಪಣೆ ಪಂದ್ಯದಲ್ಲೇ ಗೆದ್ದು ಬೀಗಿದ ಯುಎಸ್‌ಎ
- ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲಿಯೇ ಯುಎಸ್‌ಎ ಭರ್ಜರಿ ಗೆಲುವು ಸಾಧಿಸಿದೆ. ಕೆನಡಾ ವಿರುದ್ಧ ಬ್ಯಾಟಿಂಗ್‌ನಲ್ಲಿ ಸಿಡಿಸಿದ ಆತಿಥೇಯರು ದಾಖಲೆಯ ಚೇಸಿಂಗ್ ನಡೆಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಐಸಿಸಿ ಟಿ20 ವಿಶ್ವಕಪ್ 2024ರ ಉದ್ಘಾಟನಾ ಪಂದ್ಯದಲ್ಲಿಯೇ ಆತಿಥೇಯ ಯುಎಸ್‌ಎ ಭರ್ಜರಿ ಜಯಭೇರಿ ಬಾರಿಸಿದೆ. ಕೆನಡಾ (United States vs Canada) ವಿರುದ್ಧದ ಪಂದ್ಯದಲ್ಲಿ ರೋಚಕ ಚೇಸಿಂಗ್ ನಡೆಸಿದ ತಂಡವು 7 ವಿಕೆಟ್‌ಗಳಿಂದ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರನ್ ಜೋನ್ಸ್ ಮತ್ತು ಆಂಡ್ರೀಸ್ ಗೌಸ್ ಸ್ಫೋಟಕ ಬ್ಯಾಟಿಂಗ್ ನೆರವಿಂದ ಅಮೆರಿಕಕ್ಕೆ ಗೆಲುವು ಒಲಿದಿದೆ. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಪದಾರ್ಪಣೆ ಪಂದ್ಯದಲ್ಲೇ ಗೆದ್ದ ಸಾಧನೆ ಮಾಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆನಡಾ, 5 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಯುಎಸ್‌ಎ, ಕೇವಲ 17.4 ಓವರ್‌ಗಳಲ್ಲಿ 3 ವಿಕೆಟ್ ಮಾತ್ರ ಕಳೆದುಕೊಂಡು 197 ರನ್ ಗಳಿಸಿತು. ಚುಟುಕು ಸ್ವರೂಪದ ಕ್ರಿಕೆಟ್‌ನಲ್ಲಿ ಯುಎಸ್‌ಯ ತಂಡದ ಅತ್ಯಧಿಕ ಮೊತ್ತದ ಯಶಸ್ವಿ ಚೇಸಿಂಗ್ ಇದಾಗಿದೆ.
ಕೆನಡಾ ನೀಡಿದ 195 ರನ್ ಚೇಸಿಂಗ್‌ಗಿಳಿದ ಯುಎಸ್, ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ತಂಡದ ಮೊತ್ತ 42 ಆದಾಗ ನಾಯಕ ಮೊನಾಂಕ್ ಪಟೇಲ್ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಈ ವೇಳೆ ಒಂದಾದ ಆರನ್ ಜೋನ್ಸ್ ಮತ್ತು ಆಂಡ್ರೀಸ್ ಗೌಸ್ ಸ್ಫೋಟಕ ಆಟವಾಡಿದರು.
10 ಸಿಕ್ಸರ್ ಸಹಿತ ಆರನ್ ಜೋನ್ಸ್ ಅಜೇಯ ಆಟ
8 ಓವರ್ ಅಂತ್ಯಕ್ಕೆ ತಂಡದ ಮೊತ್ತ ಕೇವಲ 48 ರನ್ ಆಗಿತ್ತು. ಆ ಬಳಿಕ ಸಿಡಿಲಬ್ಬರದ ಆಟ ಹೊರಬಂತು. ಪ್ರತಿ ಓವರ್‌ನಲ್ಲೂ 10ಕ್ಕಿಂತ ಹೆಚ್ಚು ರನ್‌ಗಳು ಹರಿದು ಬಂದವು. 14ನೇ ಓವರ್‌ನಲ್ಲಿ ಬರೋಬ್ಬರಿ 33 ರನ್‌ಗಳು ಯುಎಸ್ ಖಾತೆ ಸೇರಿತು. ಇದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಈ ನಡುವೆ 65 ರನ್ ಗಳಿಸಿದ್ದ ಗೌಸ್, ಕ್ಯಾಚ್ ನೀಡಿ ಔಟಾದರು. ಆದರೆ ಅಬ್ಬರ ಮುಂದುವರೆಸಿದ ಜೋನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೇವಲ 40 ಎದುರಿಸಿದ ಜೋನ್ಸ್ 4 ಬೌಂಡರಿ ಹಾಗೂ 10 ಮಾರಕ ಸಿಕ್ಸರ್ ಸಹಿತ 94 ರನ್ ಸಿಡಿಸಿ ಅಜೇಯರಾದರು. ತಂಡವನ್ನು ಗೆಲ್ಲಿಸಿದ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಕೆನಡಾ ಜವಾಬ್ದಾರಿಯುತ ಆಟ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆನಡಾ, ಉತ್ತಮ ರನ್ ಕಲೆ ಹಾಕಿತು. ಆರಂಭಿಕರಾದ ಜಾನ್ಸನ್ ಮತ್ತು ನವನೀತ್ ಉತ್ತಮ ಆರಂಭ ಕೊಟ್ಟರು. ಅಬ್ಬರಿಸಿದ ನವನೀತ್ 44 ಎಸೆತಗಳಲ್ಲಿ 61 ರನ್ ಸಿಡಿಸಿದರು. ಆ ಬಳಿಕ ನಿಕೋಲಸ್ ಕಿರ್ಟನ್ ಆಕರ್ಷಕ ಅರ್ಧಶತಕ ಸಿಡಿಸಿದರು. ಕೊನೆಯಲ್ಲಿ ಶ್ರೇಯಸ್ ಅಜೇಯ 32 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 200ರ ಸಮೀಪ ಕೊಂಡೊಯ್ದರು.
ಕೆನಡಾ ಪ್ಲೇಯಿಂಗ್ ಇಲೆವೆನ್
ಆರನ್ ಜಾನ್ಸನ್, ನವನೀತ್ ಧಲಿವಾಲ್, ಪರ್ಗತ್ ಸಿಂಗ್, ನಿಕೋಲಸ್ ಕಿರ್ಟನ್, ಶ್ರೇಯಸ್ ಮೊವ್ವಾ (ವಿಕೆಟ್ ಕೀಪರ್), ದಿಲ್‌ಪ್ರೀತ್ ಸಿಂಗ್, ಸಾದ್ ಬಿನ್ ಜಾಫರ್ (ನಾಯಕ), ನಿಖಿಲ್ ದತ್ತಾ, ದಿಲ್ಲನ್ ಹೇಲಿಗರ್, ಕಲೀಂ ಸನಾ, ಜೆರೆಮಿ ಗಾರ್ಡನ್.
ಯುನೈಟೆಡ್ ಸ್ಟೇಟ್ಸ್ ಪ್ಲೇಯಿಂಗ್ ಇಲೆವೆನ್
ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ ಮತ್ತು ವಿಕೆಟ್ ಕೀಪರ್), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಜಸ್ದೀಪ್ ಸಿಂಗ್, ಅಲಿ ಖಾನ್, ಸೌರಭ್ ನೇತ್ರವಲ್ಕರ್.
ಟಿ20 ವಿಶ್ವಕಪ್ 2024ರ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ನ್ಯೂಯಾರ್ಕ್ನಲ್ಲಿ ಭಾರತ vs ಬಾಂಗ್ಲಾದೇಶ ಅಭ್ಯಾಸ ಪಂದ್ಯಕ್ಕೆ ಕಿಕ್ಕಿರಿದು ಸೇರಿದ ಫ್ಯಾನ್ಸ್; ಮೈದಾನಕ್ಕೆ ನುಗ್ಗಿದ ಅಭಿಮಾನಿ