AB De Villiers: ಭಾರತದ 4ನೇ ಕ್ರಮಾಂಕದ ಸಮಸ್ಯೆಗೆ ಸೂಕ್ತ ಪರಿಹಾರ ಕೊಟ್ಟ ಎಬಿಡಿ; ಇದಕ್ಕೆಲ್ಲಾ ಕೊಹ್ಲಿಯೇ ಸರಿ ಎಂದ ಗೆಳೆಯ
Aug 27, 2023 08:49 AM IST
ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ.
- AB De Villiers: ಆಗಸ್ಟ್ 30 ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಟೀಮ್ ಇಂಡಿಯಾ ಎದುರಿಸುತ್ತಿರುವ 4ನೇ ಕ್ರಮಾಂಕದ ಸಮಸ್ಯೆಗೆ ಸೌತ್ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಸೂಕ್ತ ಉತ್ತರ ಕೊಟ್ಟಿದ್ದಾರೆ.
ಏಷ್ಯಾಕಪ್ ಟೂರ್ನಿಗೂ (Asia Cup 2023) ಮುನ್ನ ಟೀಮ್ ಇಂಡಿಯಾ (Team India) ಎದುರಿಸುತ್ತಿರುವ 4ನೇ ಕ್ರಮಾಂಕದ ಸಮಸ್ಯೆಗೆ ಆರ್ಸಿಬಿ ತಂಡದ ಮಾಜಿ ಆಟಗಾರ ಸೌತ್ ಆಫ್ರಿಕಾದ ಮಾಜಿ ನಾಯಕನೂ ಆಗಿರುವ ಎಬಿ ಡಿವಿಲಿಯರ್ಸ್ (AB De Villiers), ಸೂಕ್ತ ಪರಿಹಾರ ನೀಡಿದ್ದಾರೆ. ನಾಲ್ಕನೇ ಕ್ರಮಾಂಕಕ್ಕೆ ಆಯ್ಕೆಯಾದ ಶ್ರೇಯಸ್ ಅಯ್ಯರ್ (Shreyas Iyer) ಫಿಟ್ನೆಸ್ ಬಗ್ಗೆ ಇನ್ನೂ ಅನುಮಾನಗಳಿವೆ. ಇದೇ ವೇಳೆ ಎಬಿಡಿ, ಈ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಯು ಆಗಸ್ಟ್ 30 ರಿಂದ ಸೆಪ್ಟೆಂಬರ್ 17ರವರೆಗೆ ತನಕ ನಡೆಯಲಿದ್ದು, ಪಾಕಿಸ್ತಾನ ಹಾಗೂ ಶ್ರೀಲಂಕಾ ಉಭಯ ದೇಶಗಳು ಜಂಟಿ ಆತಿಥ್ಯ ವಹಿಸಲಿವೆ. ಸೆಪ್ಟೆಂಬರ್ 2ರಂದು ಟೀಮ್ ಇಂಡಿಯಾ, ಬದ್ಧವೈರಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾದ ಕ್ಯಾಂಡಿಯಲ್ಲಿ ಕಾದಾಟ ನಡೆಸುವ ಮೂಲಕ ಭಾರತ ಟೂರ್ನಿಯಲ್ಲಿ ತನ್ನ ಅಭಿಯಾನ ಅರಂಭಿಸಲಿದೆ. ಇದರ ನಡುವೆ ದಕ್ಷಿಣಾ ಆಫ್ರಿಕಾದ ಮಾಜಿ ನಾಯಕ ಟೀಮ್ ಇಂಡಿಯಾದ ಸಮಸ್ಯೆಗೆ ಪರಿಹಾರ ನೀಡಿದ್ದಾರೆ.
‘ಕೊಹ್ಲಿ ಏನು ಬೇಕಾದರೂ ಮಾಡಲು ಸಿದ್ಧ’
ಟೀಮ್ ಇಂಡಿಯಾ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ವಿರಾಟ್ ಕೊಹ್ಲಿ ಸೂಕ್ತ ಆಟಗಾರ. ಆದರೆ ಅವರು ಆ ಕ್ರಮಾಂಕದಲ್ಲಿ ರನ್ ಗಳಿಸಲು ಗಮನ ಕೊಡಬೇಕು ಎಂದು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿದ ಎಬಿ ಡಿ ವಿಲಿಯರ್ಸ್ ಸಲಹೆ ನೀಡಿದ್ದಾರೆ. ಅವರು ಈ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ನನ್ನ ಸಂಪೂರ್ಣ ಬೆಂಬಲ ಇದೆ. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಮತ್ತು ಪಂದ್ಯದ ಬದಲಾಯಿಸಲು ಏನು ಬೇಕಾದರೂ ಮಾಡಲು ಸಿದ್ಧರು ಎಂದು ಗುಣಗಾನ ಮಾಡಿದ್ದಾರೆ.
‘ಆದರೆ ಆಡುವುದು ಅನುಮಾನ’
ವಿರಾಟ್ ನಾಲ್ಕನೇ ಕ್ರಮಾಂಕಕ್ಕೂ ಸೂಕ್ತ ಎಂದು ಹೇಳಿದ್ದೇನೆ. ಆದರೆ ಅವರು ಈ ಸ್ಲಾಟ್ನಲ್ಲಿ ಬ್ಯಾಟ್ ಬೀಸುತ್ತಾರೆ ಎಂಬುದು ಅನುಮಾನ. ಈ ಬಗ್ಗೆ ನನಗೆ ಯಾವುದೇ ಖಚಿತತೆ ಇಲ್ಲ. ಒಂದು ವೇಳೆ ಟೀಮ್ ಮ್ಯಾನೇಜ್ಮೆಂಟ್ ಇದೇ ಕ್ರಮಾಂಕದಲ್ಲಿ ಆಡಬೇಕು ಎಂದರೆ ಆಗವರು 4ನೇ ಸ್ಲಾಟ್ನಲ್ಲಿ ಕಣಕ್ಕಿಳಿಯುವ ಮೂಲಕ ತಂಡದ ಗೆಲುವಿಗೆ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ. ಇದರೊಂದಿಗೆ ಒಂದು ಅಯ್ಯರ್ ಫಿಟ್ ಆಗದೇ ಇದ್ದರೆ, ಈ ಕ್ರಮಾಂಕವನ್ನು ಫುಲ್ಫಿಲ್ ಮಾಡಲಿದ್ದಾರೆ ಎಂದು ಮ್ಯಾನೇಜ್ಮೆಂಟ್ಗೆ ಪರೋಕ್ಷವಾಗಿ ಸಲಹೆ ಕೊಟ್ಟಿದ್ದಾರೆ.
ಈ ತಂಡಗಳೇ ಫೈನಲ್ಗೆ ಪ್ರವೇಶ
ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಯಾವ ತಂಡಗಳು ಫೈನಲ್ಗೆ ಅರ್ಹತೆ ಪಡೆಯಲಿವೆ ಎಂಬುದಕ್ಕೆ ಎಬಿಡಿ ಉತ್ತರಿಸಿದ್ದಾರೆ. ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಈ ಬಾರಿ ಫೈನಲ್ ಪ್ರವೇಶಿಸುವ ನೆಚ್ಚಿನ ತಂಡಗಳು. ಹಾಗಂತ ಶ್ರೀಲಂಕಾ ತಂಡವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಹಾಲಿ ಚಾಂಪಿಯನ್ ತಂಡಕ್ಕೂ ಫೈನಲ್ಗೇರುವ ಸಾಮರ್ಥ್ಯ ಇದೆ ಎಂದು ಭವಿಷ್ಯ ನುಡಿದಿದ್ದಾರೆ.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.