ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕ; ಐಪಿಎಲ್ 2025 ಆರಂಭಕ್ಕೂ ಮುನ್ನ ಎಬಿ ಡಿವಿಲಿಯರ್ಸ್ ಸುಳಿವು
Nov 29, 2024 12:25 PM IST
ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕ; ಐಪಿಎಲ್ 2025 ಆರಂಭಕ್ಕೂ ಮುನ್ನ ಎಬಿ ಡಿವಿಲಿಯರ್ಸ್ ಸುಳಿವು
- Virat Kohli: ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಮರಳಬಹುದು ಎಂದು ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಸುಳಿವು ನೀಡಿದ್ದಾರೆ. ಇದು ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟಾಗಿಸಿದೆ.
ಐಪಿಎಲ್ 2025ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 22 ಸದಸ್ಯರ ತಂಡವನ್ನು ಅಂತಿಮಗೊಳಿಸಿದೆ. ಮುಂಬರುವ ಲೀಗ್‌ಗೆ ತಂಡದ ಆಡುವ ಬಳಗ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಇದೇ ವೇಳೆ ಆರ್‌ಸಿಬಿಗೆ ತಂಡವನ್ನು ಮುನ್ನಡೆಸುವ ಪ್ರಬಲ ನಾಯಕನೊಬ್ಬ ಹರಾಜಿನಲ್ಲಿ ಸಿಕ್ಕಿಲ್ಲ. ಹೀಗಾಗಿ ತಂಡದ ನಾಯಕನ ಸ್ಥಾನ ಯಾರಿಗೆ ಸಿಗಲಿದೆ ಎಂಬ ಸಸ್ಪೆನ್ಸ್ ಇನ್ನೂ ಉಳಿದಿದೆ. ಈ ಹಿಂದೆ, ಐಪಿಎಲ್‌ನ 2021ರ ಋತುವಿನ ನಂತರ ನಾಯಕನ ಜವಾಬ್ದಾರಿ ತನಗೆ ಬೇಡ ಎಂದು ವಿರಾಟ್ ಕೊಹ್ಲಿ ಕಾಪ್ಟನ್ಸಿಯಿಂದ ಕೆಳಗಿಳಿದರು. ಆ ನಂತರ ಫಾಫ್ ಡುಪ್ಲೆಸಿಸ್ ತಂಡದ ನಾಯಕನಾದರು. ಇದೀಗ ಫಾಫ್ ಅವರನ್ನು ತಂಡದಿಂದ ದೂರವಿಡಲಾಗಿದೆ. ಹೀಗಾಗಿ ಈ ಬಾರಿ ವಿರಾಟ್ ಕೊಹ್ಲಿ ಅವರನ್ನು ಮತ್ತೆ ನಾಯಕನಾಗಿ ನೇಮಕ ಮಾಡಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.
ಬೇರೆ ಸಮರ್ಥ ನಾಯಕ ತಂಡದಲ್ಲಿ ಇಲ್ಲದ ಕಾರಣದಿಂದ, ವಿರಾಟ್ ಅವರನ್ನೇ ಮತ್ತೆ ತಂಡದ ನಾಯಕನಾಗಿ ಮಾಡಲಾಗುತ್ತದೆ ಎಂದು ಆರ್‌ಬಿಯ ಮಾಜಿ ಬ್ಯಾಟರ್ ಹಾಗೂ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ಸುಳಿವು ನೀಡಿದ್ದಾರೆ. 2025ರ ಋತುವಿನಲ್ಲಿ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ತಂಡವು 2016ರ ಐಪಿಎಲ್ ಫೈನಲ್ ತಲುಪಿತ್ತು. ಆದರೆ, ಎಸ್‌ಆರ್‌ಎಚ್ ವಿರುದ್ಧ ಮುಗ್ಗರಿಸಿತ್ತು.
“ಇದು ಇನ್ನೂ ದೃಢಪಟ್ಟಿದೆ ಎಂದು ನಾನು ಭಾವಿಸುವುದಿಲ್ಲ. ಆದರೆ ತಂಡವನ್ನು ನೋಡಿದಾಗ ಅವರು ನಾಯಕರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ,” ಎಂದು ಡಿವಿಲಿಯರ್ಸ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ ನಾಯಕತ್ವದ ಅನುಭವ
ತಂಡದ ಹರಾಜಿನ ಆಯ್ಕೆಗಳನ್ನು ನೋಡುವುದಾದರೆ, ಈ ಹಿಂದೆ ಐಪಿಎಲ್‌ನಲ್ಲಿ ನಾಯಕತ್ವ ವಹಿಸಿರುವ ಅನುಭವ ಇರುವುದು ಮತ್ತೊಬ್ಬ ಹಿರಿಯ ಆಟಗಾರ ಭುವನೇಶ್ವರ್ ಕುಮಾರ್‌ಗೆ ಮಾತ್ರ. ಆದಾಗ್ಯೂ, ವೇಗಿಯು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ತಾತ್ಕಾಲಿಕ ನಾಯಕತ್ವ ಮಾತ್ರ ವಹಿಸಿಕೊಂಡಿದ್ದಾರೆ. ಇದೇ ವೇಳೆ ಕೃನಾಲ್ ಪಾಂಡ್ಯ ಕೂಡಾ ಕೆಲವು ಪಂದ್ಯಗಳಲ್ಲಿ ಮಾತ್ರ ತಂಡವನ್ನು ಮುನ್ನಡೆಸಿದ್ದಾರೆ.
ಆರ್‌ಸಿಬಿ ನೂತನ ತಂಡದ ಬಗ್ಗೆ ಎಬಿ ಡಿವಿಲಿಯರ್ಸ್ ಸಂತೋಷ ವ್ಯಕ್ತಪಡಿಸಿದ್ದಾರೆ. “ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್ ಖರೀದಿಯಿಂದ ಸಂತೋಷವಾಗಿದ್ದೇವೆ. ರಬಾಡ ಖರೀದಿ ಸಾಧ್ಯವಾಗಲಿಲ್ಲ. ಆದರೆ ಕನಿಷ್ಠ ನಮಗೆ ಲುಂಗಿ ಎನ್ಗಿಡಿ ಸಿಕ್ಕರು. ಅವರು ಫಾರ್ಮ್ ಮತ್ತು ಫಿಟ್ ಆಗಿದ್ದರೆ, ಆಯ್ಕೆಗೆ ಪರಿಗಣಿಸಬೇಕಾದ ಆಟಗಾರ ಒಟ್ಟಾರೆಯಾಗಿ ನಾನು ಸಾಕಷ್ಟು ಸಂತೋಷವಾಗಿದ್ದೇನೆ. ಇದು ಸಮತೋಲಿತ ತಂಡ” ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹೇಳಿದ್ದಾರೆ.
ಆರ್‌ಸಿಬಿ ನೂತನ ತಂಡ
ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್, ರಾಸಿಖ್ ದಾರ್, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಾಂಡಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಟಿ.