ಡಾನ್ ಬ್ರಾಡ್ಮನ್ಗಿಂತಲೂ ಯಶಸ್ವಿ ಜೈಸ್ವಾಲ್ ಶ್ರೇಷ್ಠ; ಭಾರತದ ಮಾಜಿ ಕ್ರಿಕೆಟಿಗನಿಂದ ದೊಡ್ಡ ಪ್ರಶಂಸೆ
Feb 04, 2024 08:00 AM IST
ಬ್ರಾಡ್ಮನ್ಗಿಂತಲೂ ಯಶಸ್ವಿ ಜೈಸ್ವಾಲ್ ಶ್ರೇಷ್ಠ; ಭಾರತದ ಮಾಜಿ ಕ್ರಿಕೆಟಿಗನಿಂದ ದೊಡ್ಡ ಪ್ರಶಂಸೆ
- Aakash Chopra on Yashavi Jaiswal : ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅರ್ಧಶತಕವನ್ನು ಶತಕಕ್ಕೆ ಪರಿವರ್ತಿಸಿದ ರೇಷಿಯೋ ವಿಷಯದಲ್ಲಿ ಯಶಸ್ವಿ ಜೈಸ್ವಾಲ್ ಅವರು ದಂತಕಥೆ ಸರ್ ಡಾನ್ ಬ್ರಾಡ್ಮನ್ ಅವರಿಗಿಂತಲೂ ಶ್ರೇಷ್ಠ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನ (India vs England 2nd Test) ಮೊದಲ ಇನ್ನಿಂಗ್ಸ್ನಲ್ಲಿ ವೀರಾವೇಶದ ಇನ್ನಿಂಗ್ಸ್ ಕಟ್ಟಿದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ಗೆ ಎಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಏಕಾಂಗಿ ಹೋರಾಟ ನಡೆಸಿ ದ್ವಿಶತಕ ಸಿಡಿಸಿದ 22 ವರ್ಷದ ಕ್ರಿಕೆಟಿಗನನ್ನು ಮಾಜಿ, ಹಾಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡುತ್ತಿದ್ದಾರೆ. ಇದೀಗ ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಅವರು (Aakash Chopra on Yashavi Jaiswal) ಒಂದು ಹೆಜ್ಜೆ ಮುಂದೆ ಹೋಗಿ, ಡಾನ್ ಬ್ರಾಡ್ಮನ್ ಅವರಿಗಿಂತಲೂ (Don Bradman) ಮೇಲಿದ್ದಾರೆ ಎಂದು ಜೈಸ್ವಾಲ್ ಅವರನ್ನು ಬಣ್ಣಿಸಿದ್ದಾರೆ.
2ನೇ ಟೆಸ್ಟ್ ಮೊದಲ ದಿನದಾಟದಲ್ಲಿ ಗಳಿಸಿದ್ದ 179 ರನ್ಗಳೊಂದಿಗೆ ಎರಡನೇ ದಿನ ಆರಂಭಿಸಿದ ಜೈಸ್ವಾಲ್, ತಮ್ಮ ಚೊಚ್ಚಲ ದ್ವಿಶತಕ ಪೂರೈಸಿದರು. ಇದರೊಂದಿಗೆ ಹಲವು ದಾಖಲೆಯನ್ನೂ ಬರೆದರು. ತನ್ನ ಅದ್ಭುತ ಇನ್ನಿಂಗ್ಸ್ನಲ್ಲಿ 290 ಎಸೆತಗಳನ್ನು ಎದುರಿಸಿದ ಯಶಸ್ವಿ 19 ಬೌಂಡರಿ, 7 ಸಿಕ್ಸರ್ ಸಹಿತ 209 ರನ್ ಚಚ್ಚಿದರು. ಪರಿಣಾಮ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 396 ರನ್ ಕಲೆ ಹಾಕಲು ಸಹಾಯ ಮಾಡಿದರು. ಇದೀಗ ಎರಡನೇ ಇನ್ನಿಂಗ್ಸ್ನಲ್ಲೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ ಯುವ ಆಟಗಾರ.
ಯಶಸ್ವಿ ಬ್ಯಾಟಿಂಗ್ ವೈಖರಿಯನ್ನು ಕೊಂಡಾಡಿದ ಚೋಪ್ರಾ
ತನ್ನ ಯೂಟ್ಯೂಟ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಗುಣಗಾನ ಮಾಡಿರುವ ಆಕಾಶ್ ಚೋಪ್ರಾ, ಸ್ಪಿನ್ ಮತ್ತು ವೇಗದ ಬೌಲಿಂಗ್‌ಗೆ ಹೇಗೆ ಬ್ಯಾಟಿಂಗ್ ನಡೆಸಿದರು ಎಂಬುದನ್ನು ವಿವರಿಸಿದರು. ಜೇಮ್ಸ್ ಆಂಡರ್ಸನ್ ಅವರ ಎಸೆತಗಳನ್ನು ಹೇಗೆ ಎದುರಿಸಿದರು? ಸ್ಪಿನ್ ಬೌಲಿಂಗ್ನಲ್ಲಿ ಗೇರ್ ಬದಲಾಯಿಸಿದ್ದೇಗೆಂದು ಹೇಳಿದ್ದಾರೆ. ಅಲ್ಲದೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅರ್ಧಶತಕವನ್ನು ಶತಕಕ್ಕೆ ಪರಿವರ್ತಿಸಿದ ರೇಷಿಯೋ ವಿಷಯದಲ್ಲಿ ಜೈಸ್ವಾಲ್ ಅವರು ದಂತಕಥೆ ಸರ್ ಡಾನ್ ಬ್ರಾಡ್ಮನ್ಗಿಂತಲೂ ಶ್ರೇಷ್ಠ ಎಂದು ಚೋಪ್ರಾ ಮೆಚ್ಚಿದ್ದಾರೆ.
ಆಂಡರ್ಸನ್ಗೆ ಚಾಣಾಕ್ಷ ನಡೆ ಅನುಸರಿಸಿದರು!
ಯಶಸ್ವಿ ಜೈಸ್ವಾಲ್ ಅವರ ಬ್ಯಾಟ್‌ನಿಂದ ಅತ್ಯಂತ ಅದ್ಭುತ ಪ್ರದರ್ಶನ ಬಂದಿತು. ಯುವ ಆಟಗಾರ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಜೇಮ್ಸ್ ಆಂಡರ್ಸನ್ ಒಬ್ಬರೇ ವೇಗಿ. ಅವರು ಸ್ವಿಂಗ್, ಬೌನ್ಸ್, ಲೈನ್ ಅಂಡ್ ಲೆಂಗ್ತ್ನಲ್ಲಿ ಹಾಕುತ್ತಿದ್ದ ಮಾರಕ ಎಸೆತಗಳನ್ನು ಮುಟ್ಟದೆ ಹಾಗೆಯೇ ಬಿಟ್ಟುಬಿಡುತ್ತಿದ್ದರು. ಅತ್ಯಂತ ಚಾಣಾಕ್ಷ ನಡೆ ಅನುಕರಿಸಿದರು. ಅಲ್ಲದೆ, ಹಿರಿಯ ವೇಗಿ ಆಂಡರ್ಸನ್ ಅವರ ಬೌಲಿಂಗ್‌ಗೆ ಹೆಚ್ಚಿನ ಗೌರವ ನೀಡುವ ಮೂಲಕ ಗಮನವೂ ಸೆಳೆದರು ಎಂದು ಚೋಪ್ರಾ ಹೇಳಿದರು.
ಸ್ಪಿನ್ ಬೌಲಿಂಗ್ನಲ್ಲಿ ಅಬ್ಬರಿಸಿದರು ಎಂದ ಆಕಾಶ್
ವೇಗದ ಬೌಲಿಂಗ್ನಲ್ಲಿ ಅತ್ಯಂತ ಸೂಕ್ಷ್ಮವಾಗಿ ಬ್ಯಾಟಿಂಗ್ ನಡೆಸಿದ ಯಶಸ್ವಿ, ಸ್ಪಿನ್ ಬೌಲಿಂಗ್ನಲ್ಲಿ ರೌದ್ರಾವತಾರ ತಾಳಿದರು. ಅಗತ್ಯ ಇದ್ದಾಗಲೆಲ್ಲಾ ಸಿಂಗಲ್ಸ್, ಡಬಲ್ಸ್ ರೊಟೇಟ್ ಮಾಡುತ್ತಿದ್ದರು. ಅಲ್ಲದೆ, ಬೌಂಡರಿಗಳನ್ನೂ ಚಚ್ಚುತ್ತಿದ್ದರು. ಉಳಿದ ಬ್ಯಾಟರ್ಗಳು ಸ್ಪಿನ್ನರ್ಗಳ ವಿರುದ್ಧ ಪರದಾಡಿದರೆ, ಜೈಸ್ವಾಲ್ ಮಾತ್ರ ಅಚ್ಚುಕಟ್ಟಾಗಿ ಬ್ಯಾಟಿಂಗ್ ನಡೆಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10 ಅಥವಾ ಅದಕ್ಕಿಂತ ಹೆಚ್ಚಿನ ಶತಕಗಳನ್ನು ಸಿಡಿಸಿರುವ ಆಟಗಾರ ತಮ್ಮ ಅರ್ಧಶತಕಗಳನ್ನು ನೂರಕ್ಕೆ ಪರಿವರ್ತಿಸಿದ ರೇಷಿಯೋ ಸರ್ ಡಾನ್ ಬ್ರಾಡ್ಮನ್ ಹೆಚ್ಚಿದೆ ಎಂಬುದು ವಿಶೇಷ ಎಂದು ತಿಳಿಸಿದ್ದಾರೆ.
ಯುವ ಆರಂಭಿಕ ಬ್ಯಾಟರ್ ಹೊರತುಪಡಿಸಿ, ಯಾವುದೇ ಭಾರತೀಯ ಬ್ಯಾಟರ್ ಅರ್ಧಶತಕ ಗಳಿಸಲು ಸಹ ಸಾಧ್ಯವಾಗಲಿಲ್ಲ. ಜೈಸ್ವಾಲ್ ನಂತರದ ಶುಭ್ಮನ್ ಗಿಲ್ 34, ರಜತ್ ಪಾಟೀದಾರ್ 32 ರನ್ ಗಳಿಸಿದರು. ರೋಹಿತ್ ಶರ್ಮಾ 14, ಶ್ರೇಯಸ್ ಅಯ್ಯರ್ 27, ಕೆಎಸ್ ಭರತ್ 17, ಅಶ್ವಿನ್ 20 ರನ್ ಗಳಿಸಿ ನಿರಾಸೆ ಮೂಡಿಸಿದರು. ಕುಲ್ದೀಪ್ ಯಾದವ್ ಅಜೇಯ 8 ರನ್ ಕಲೆ ಹಾಕಿದರು. ಅನುಭವಿ ಆಟಗಾರರೇ ವೈಫಲ್ಯ ಅನುಭವಿಸಿದ್ದು ಬೇಸರದ ಸಂಗತಿ.