logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಫ್ಘಾನಿಸ್ತಾನ ದಾಳಿಗೆ ನುಚ್ಚಾದ ಬಲಿಷ್ಠ ಇಂಗ್ಲೆಂಡ್; ಹಾಲಿ ಚಾಂಪಿಯನ್ ಆಂಗ್ಲರಿಗೆ ಭಾರಿ ಮುಖಭಂಗ

ಅಫ್ಘಾನಿಸ್ತಾನ ದಾಳಿಗೆ ನುಚ್ಚಾದ ಬಲಿಷ್ಠ ಇಂಗ್ಲೆಂಡ್; ಹಾಲಿ ಚಾಂಪಿಯನ್ ಆಂಗ್ಲರಿಗೆ ಭಾರಿ ಮುಖಭಂಗ

Prasanna Kumar P N HT Kannada

Oct 15, 2023 10:04 PM IST

google News

ಇಂಗ್ಲೆಂಡ್​​ ವಿರುದ್ಧ ಗೆದ್ದ ಅಫ್ಘಾನಿಸ್ತಾನ.

    • England vs Afghanistan, ICC Cricket World Cup 2023: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 13ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಬಲಿಷ್ಢ ಇಂಗ್ಲೆಂಡ್ ಹೀನಾಯವಾಗಿ ಸೋಲು ಕಂಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಈ ಪಂದ್ಯ ನಡೆಯಿತು.
ಇಂಗ್ಲೆಂಡ್​​ ವಿರುದ್ಧ ಗೆದ್ದ ಅಫ್ಘಾನಿಸ್ತಾನ.
ಇಂಗ್ಲೆಂಡ್​​ ವಿರುದ್ಧ ಗೆದ್ದ ಅಫ್ಘಾನಿಸ್ತಾನ. (Afghanistan Cricket Twitter)

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ​ ಭಾರಿ ಮುಖಭಂಗವಾಗಿದೆ. ಕ್ರಿಕೆಟ್​​ನಲ್ಲಿ ಈಗಷ್ಟೇ ಚಿಗುರೊಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧ ಬಲಿಷ್ಠ ಇಂಗ್ಲೆಂಡ್ 69 ರನ್​ಗಳ ಹೀನಾಯ ಸೋಲನುಭವಿಸಿದೆ. ಶಿಸ್ತು ಬದ್ದ ದಾಳಿಯಿಂದ ಆಂಗ್ಲರನ್ನು ಮಕಾಡೆ ಮಲಗಿಸಿದ ಅಫ್ಘನ್, ವಿಶ್ವಕಪ್ ಇತಿಹಾಸದಲ್ಲಿ 2ನೇ ಗೆಲುವು ದಾಖಲಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಅಫ್ಘನ್ ಇತಿಹಾಸ ನಿರ್ಮಿಸಿದೆ.

ಏಕದಿನ ವಿಶ್ವಕಪ್​ನಲ್ಲಿ 2015ರಲ್ಲಿ ಸ್ಕಾಟ್ಲೆಂಟ್ ವಿರುದ್ಧ ಮಾತ್ರ ಜಯಿಸಿದ್ದ ಅಫ್ಘನ್, 2019ರ ವಿಶ್ವಕಪ್​​​ನಲ್ಲಿ ಎಲ್ಲಾ ಪಂದ್ಯಗಳನ್ನು ಕಳೆದುಕೊಂಡಿತ್ತು. ಇದೀಗ 2023ರ ವಿಶ್ವಕಪ್​ನಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದ ಅಫ್ಘನ್, ಗೆಲುವಿನ ಖಾತೆ ತೆರೆದಿದೆ. ಅತ್ತ ಇಂಗ್ಲೆಂಡ್​ ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ 2ನೇ ಸೋಲು ಕಂಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ಆಫ್ಘನಿಸ್ತಾನ, 49.5 ಓವರ್​​​ಗಳಲ್ಲಿ 284 ರನ್​ಗಳಿಗೆ ಆಲೌಟ್​ ಆಗಿತ್ತು. ರೆಹಮಾನುಲ್ಲಾ ಗುರ್ಬಾಜ್ 80 ರನ್, ಇಕ್ರಮ್ ಅಲಿಖಿಲ್ 58 ರನ್ ಸಿಡಿಸಿ ಮಿಂಚಿದ್ದರು. ಆದರೆ ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್​​ 40.3 ಓವರ್​​​ಗಳಲ್ಲಿ 215 ರನ್ ಗಳಿಗೆ ಆಲೌಟ್​ ಆಯಿತು. ಹ್ಯಾರಿ ಬ್ರೂಕ್​ 66 ರನ್ ಸಿಡಿಸಿದರು.

ಸ್ಪಿನ್ನರ್​ಗಳ ದಾಳಿಗೆ ನಡುಗಿದ ಇಂಗ್ಲೆಂಡ್

285 ರನ್​ಗಳ ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್​​​, ಉತ್ತಮ ಆರಂಭ ಪಡೆಯಲಿಲ್ಲ. ಇನ್ನಿಂಗ್ಸ್​​ 2ನೇ ಓವರ್​​ನ ಮೊದಲ ಎಸೆತದಲ್ಲೇ ಫಜಲಕ್ ಫಾರೂಕಿ ಬೌಲಿಂಗ್​ನಲ್ಲಿ ಜಾನಿ ಬೈರ್​ಸ್ಟೋ (1) ಎಲ್​ಬಿ ಬಲೆಗೆ ಬಿದ್ದು ಹೊರನಡೆದರು. ಬಳಿಕ ಮುಜೀಬ್​ ಉರ್ ರೆಹಮಾನ್ ಸ್ಪಿನ್​ ಮ್ಯಾಜಿಕ್​ಗೆ ಜೋ ರೂಟ್​ 11 ರನ್ ಗಳಿಸಿ ಜಾಗ ಖಾಲಿ ಮಾಡಿದರು.

ಆರಂಭಿಕ ಆಟಗಾರ ಡೇವಿಡ್ ಮಲಾನ್ ಕೆಲ ಹೊತ್ತು ಹೋರಾಟ ನಡೆಸಿದರು. ಆದರೆ 39 ಎಸೆತಗಳಲ್ಲಿ 32 ಕ್ರೀಸ್ ಕಚ್ಚಿ ನಿಂತಿದ್ದ ಮಲಾನ್, ಮೊಹಮ್ಮದ್ ನಬಿ ಬೌಲಿಂಗ್​ನಲ್ಲಿ ಸುಲಭ ಕ್ಯಾಚ್​ ನೀಡಿ ನಿರ್ಗಮಿಸಿದರು. ಮಲಾನ್ ಬೆನ್ನಲ್ಲೇ ನಾಯಕ ಜೋಸ್ ಬಟ್ಲರ್ (9)​, ನವೀನ್ ಉಲ್ ಹಕ್​ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್ ಆದರು.

ಬ್ರೂಕ್​ ಹೋರಾಟ ವ್ಯರ್ಥ, ರಶೀದ್-ಮುಜೀಬ್ ದಾಳಿ

91ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿದ್ದ ತಂಡಕ್ಕೆ ಆಸರೆಯಾಗಿದ್ದು ಹ್ಯಾರಿ ಬ್ರೂಕ್. ಸಂಘಟಿತ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಬ್ರೂಕ್, 45 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ 61 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​​ ಸಹಿತ 66 ರನ್ ಗಳಿಸಿ ಮುಜೀಬ್ ಬೌಲಿಂಗ್​ನಲ್ಲಿ ಕ್ಯಾಚ್​ ನೀಡಿ ನಿರ್ಗನಿಸಿದರು.

ಆದರೆ ಹ್ಯಾರಿ ಬ್ರೂಕ್​ ಔಟಾಗುವುದಕ್ಕೂ ಮುನ್ನ ಸ್ಫೋಟಕ ಆಟಗಾರ ಲಿಯಾಮ್ ಲಿವಿಂಗ್ ಸ್ಟೋಕ್ (10), ಸ್ಯಾಮ್ ಕರನ್ (10), ಕ್ರೀಸ್​ ವೋಕ್ಸ್​ಗೆ​ (9) ಕ್ರಮವಾಗಿ ರಶೀದ್, ನಬಿ ಮತ್ತು ಮುಜೀಜ್​ ಗೇಟ್​ ಪಾಸ್ ನೀಡಿದರು. ಇದರೊಂದಿಗೆ ಇಂಗ್ಲೆಂಡ್ ಸೋಲು ಖಚಿತವಾಗಿತ್ತು. ಕೊನೆಯಲ್ಲಿ ಆದಿಲ್ ರಶೀದ್ (20) ಮತ್ತು ಮಾರ್ಕ್​ವುಡ್​ (18)ರನ್ನು ರಶೀದ್ ಖಾನ್ ಔಟ್ ಮಾಡಿದರು. ಇದರೊಂದಿಗೆ ಇಂಗ್ಲೆಂಡ್ ಆಲೌಟ್ ಆಯಿತು.

ಅಫ್ಘಾನಿಸ್ತಾನ ಪರ ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ತಲಾ 3 ವಿಕೆಟ್, ಮೊಹಮ್ಮದ್ ನಬಿ 2 ವಿಕೆಟ್, ಫಜಲುಕ್ ಫಾರೂಕಿ, ನವೀನ್ ಉಲ್ ಹಕ್ ತಲಾ 1 ವಿಕೆಟ್ ಪಡೆದರು.

ಗುರ್ಬಾಜ್, ಅಲಿಖಿಲ್ ಅಬ್ಬರ

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಅಫ್ಘನ್, ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 114 ರನ್​ಗಳು ಹರಿದು ಬಂದವು. ರೆಹಮಾನುಲ್ಲಾ ಗುರ್ಬಾಜ್ ಕೇವಲ 57 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್​ ಸಹಿತ 80 ರನ್ ಚಚ್ಚಿದರು. ಆದರೆ, ಉಳಿದ ಆಟಗಾರರು ನಿರಾಸೆ ಮೂಡಿಸಿದರು.

ಇಬ್ರಾಹಿಂ ಜದ್ರಾನ್ (28), ರೆಹಮತ್ ಶಾ (3), ಹಶ್ಮತುಲ್ಲಾ ಶಾಹಿದಿ (14), ಅಜ್ಮತುಲ್ಲಾ ಓಮರ್ಜಾಯ್ (19), ಮೊಹಮ್ಮದ್ ನಬಿ (9) ರನ್ ಗಳಿಸದೆ ವೈಫಲ್ಯ ಅನುಭವಿಸಿದರು. ಆದರೆ, ಕೊನೆಯಲ್ಲಿ ವಿಕೆಟ್ ಕೀಪರ್​​ ಇಕ್ರಮ್ ಅಲಿಖಿಲ್ 56 ರನ್ ಸಿಡಿಸಿ ಮಿಂಚಿದರು. ರಶೀದ್ ಖಾನ್ 23, ಮುಜೀಬ್ ಉರ್ ರೆಹಮಾನ್ 28 ರನ್ ಗಳಿಸಿ ಸಾಥ್ ನೀಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ