ಔಟ್ ಅಥವಾ ನಾಟೌಟ್; ಭಾರತ-ಇಂಗ್ಲೆಂಡ್ ಟೆಸ್ಟ್ ನಂತರ, ಡಬ್ಲ್ಯುಪಿಎಲ್ಗೂ ತಟ್ಟಿದ ಡಿಆರ್ಎಸ್ ವಿವಾದ
Mar 05, 2024 02:29 PM IST
ಭಾರತ-ಇಂಗ್ಲೆಂಡ್ ಟೆಸ್ಟ್ ನಂತರ, ಡಬ್ಲ್ಯುಪಿಎಲ್ಗೂ ತಟ್ಟಿದ ಡಿಆರ್ಎಸ್ ವಿವಾದ
- DRS Controversy Hits WPL 2024 : ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಡಿಆರ್ಎಸ್ ವಿವಾದ ಸೃಷ್ಟಿಯಾಗಿದೆ. ಡಿಆರ್ಎಸ್ ತಂತ್ರಜ್ಞಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 3ನೇ ಅಂಪೈರ್ ನೀಡಿದ ಒಂದು ತೀರ್ಪು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಭಾರತ-ಇಂಗ್ಲೆಂಡ್ ಸರಣಿ ಬಳಿಕ ಡಬ್ಲ್ಯುಪಿಎಲ್ಗೂ ಡಿಆರ್ಎಸ್ ವಿವಾದ (DRS Controversy) ತಟ್ಟಿದೆ. ಅಂಪೈರ್ರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮತ್ತು ಯುಪಿ ವಾರಿಯರ್ಸ್ ಚಾಮರಿ ಅಥಾಪಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಸಿಬಿ ನೀಡಿದ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡದ ಚಾಮರಿ ಅಥಾಪಟ್ಟು 8 ರನ್ ಗಳಿಸಿದ್ದ ವೇಳೆ ಆಸೀಸ್ ಸ್ಪಿನ್ನರ್ ಜಾರ್ಜಿಯಾ ವೇರ್‌ಹ್ಯಾಮ್ ಎಸೆದ ಚೆಂಡು ಚಾಮರಿ ಕಾಲಿಗೆ ಬಡಿಯಿತು. ಇದೇ ವೇಳೆ ಆರ್ಸಿಬಿ ಆಟಗಾರ್ತಿಯರು ಔಟ್ಗಾಗಿ ಮನವಿ ಮಾಡಿದರು. ಆದರೆ ಸ್ಟ್ರೈಟ್ ಅಂಪೈರ್ ನಾಟೌಟ್ ಎಂದು ತೀರ್ಮಾನ ನೀಡಿದರು. ಕೂಡಲೇ ಬೆಂಗಳೂರು ನಾಯಕಿ ಸ್ಮೃತಿ ಮಂಧಾನ ಡಿಆರ್ಎಸ್ ಪಡೆದರು. 3ನೇ ಅಂಪೈರ್ ಪರಿಶೀಲನೆ ನಡೆಸಿದರು.
ಆಶ್ಚರ್ಯಕರವಾಗಿ ಬಾಲ್ ಟ್ರ್ಯಾಕಿಂಗ್ ವೇಳೆ ವೇರ್ಹ್ಯಾಮ್ ಎಸೆತ ನೇರವಾಗಿ ಸ್ಟಂಪ್‌ಗೆ ಹೊಡೆಯುತ್ತದೆ. ಚೆಂಡು ನೆಲಕ್ಕೆ ತಾಗಿ ಪ್ಯಾಡ್ ಬಡಿದ ವೇಳೆ ಟರ್ನ್ ಆದಂತೆ ಕಾಣುತ್ತದೆ. ಆದರೆ, ಬಾಲ್ ಟ್ರ್ಯಾಕಿಂಗ್ ವೇಳೆ ಚೆಂಡು ನೇರವಾಗಿ ಸ್ಟಂಪ್‌ಗೆ ಬೀಳುತ್ತದೆ. ನಾಟೌಟ್‌ನಿಂದ ಔಟಾಗುವ ನಿರ್ಧಾರವನ್ನು ನೋಡಿ, ಅಥಾಪತ್ತು ಮತ್ತು ಅವರ ನಾನ್-ಸ್ಟ್ರೈಕಿಂಗ್ ಜೊತೆಗಾರ್ತಿ ಅಲಿಸ್ಸಾ ಹೀಲಿ ಗೊಂದಲಕ್ಕೊಳಗಾದರು.
ಯುಪಿ ವಾರಿಯರ್ಸ್ ಕೋಚ್ ಪ್ರಶ್ನೆ
ಇದು ಯುಪಿ ವಾರಿಯರ್ಸ್ ಆಟಗಾರ್ತಿಯರ ಜೊತೆಗೆ ಎಲ್ಲರಿಗೂ ಗೊಂದಲ ಉಂಟು ಮಾಡುತ್ತದೆ. ವಿವಾದಾತ್ಮಕ ಔಟ್ ಬಗ್ಗೆ ಮಾತನಾಡಿದ ಯುಪಿ ವಾರಿಯರ್ಸ್ ಕೋಚ್ ತನ್ನ ಹತಾಶೆ ವ್ಯಕ್ತಪಡಿಸಿದ್ದಾರೆ. ಪ್ಯಾಡ್‌ಗೆ ತಲುಲಿದ ಚೆಂಡನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ, ಪಿಚ್ ಬಿದ್ದ ನಂತರ ಚೆಂಡು ಸಂಪೂರ್ಣ ತಿರುಗುತ್ತದೆ. ಲೆಗ್ ಸ್ಪಿನ್ನರ್ನಂತೆಯೇ ತಿರುಗುತ್ತಿದೆ. ಟರ್ನ್ ಆಗುವ ಚೆಂಡು ನೇರವಾಗಿ ಸ್ಟಂಪ್ಸ್ಗೆ ಹೇಗೆ ಹೊಡೆಯಲು ಸಾಧ್ಯ ಎಂದು ಜಾನ್ ಲೂಯಿಸ್ ಪ್ರಶ್ನಿಸಿದ್ದಾರೆ.
ತಂತ್ರಜ್ಞಾನದ ಒಳಸುಳಿಗಳು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ ಇದು ಖಂಡಿತವಾಗಿಯೂ ಆಟದ ಆಸಕ್ತಿದಾಯಕ ಮಾರ್ಗವಾಗಿದೆ. ನಾವು ಸಾಕಷ್ಟು ನಿರಾಶೆಗೊಂಡಿದ್ದೇವೆ ಎಂದು ಹೇಳಿದ್ದಾರೆ. ಮೂರನೇ ಅಂಪೈರ್ನಿಂದ ಔಟೆಂಟ್ ತೀರ್ಮಾನ ಬಂದ ನಂತರ ನಾಯಕಿ ಅಲಿಸ್ಸಾ ಹೀಲಿ ಅವರು ಮೈದಾನದ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಡ್ರೆಸ್ಸಿಂಗ್ ರೂಮ್ಗೆ ಮರಳಿದ ಬೆನ್ನಲ್ಲೇ ಚಾಮರಿ ಅಲ್ಲಿ ತನ್ನ ಕೋಚ್ ಜೊತೆ ಚರ್ಚೆ ನಡೆಸಿದರು. ಪಂದ್ಯ ಮುಗಿದರೂ ಚಾಮರಿ ಅವರು ಅಸಮಾಧಾನದಿಂದಲೇ ಇದ್ದರು. ಇದೀಗ ನೆಟ್ನಲ್ಲೂ ತಂತ್ರಜ್ಞಾನದ ಬಗ್ಗೆ ಹೆಚ್ಚು ಆಕ್ಷೇಪ ವ್ಯಕ್ತವಾಗುತ್ತಿದೆ.
ಜೋ ರೂಟ್ಗೂ ಇದೇ ರೀತಿ ಆಗಿತ್ತು
ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲೂ ಜೋ ರೂಟ್ ಕೂಡ ಇದೇ ರೀತಿಯ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಪಿಚ್ ಗೆರೆಯ ಮೇಲೆ ಬಿದ್ದ ಚೆಂಡು ಪ್ಯಾಡ್‌ಗೆ ತಗಲುವ ಮೊದಲು ಪುಟಿಯಿತು. ಆದಾಗ್ಯೂ, ಬಾಲ್-ಟ್ರ್ಯಾಕಿಂಗ್ ತಂತ್ರಜ್ಞಾನವು ಮಿಡಲ್ ಸ್ಟಂಪ್‌ಗೆ ಅಪ್ಪಳಿಸಲು ಬೇರೆ ದಾರಿಯಲ್ಲಿ ತಿರುಗುತ್ತಿದೆ ಎಂದು ತೋರಿಸಿತ್ತು. ಆಗ ಔಟೆಂದು ನೀಡಲಾಗಿತ್ತು. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಸಹ ತಂತ್ರಜ್ಞಾನಕ್ಕೆ ಬೇಸರ ವ್ಯಕ್ತಪಡಿಸಿದ್ದರು.
ಯುಪಿ ವಾರಿಯರ್ಸ್ ವಿರುದ್ಧ ಆರ್ಸಿಬಿಗೆ ಗೆಲುವು
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಲೀಗ್ನ 11ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ, ಸ್ಮೃತಿ ಮಂಧಾನ (80) ಮತ್ತು ಎಲ್ಲಿಸ್ ಪೆರ್ರಿ (58) ಅರ್ಧಶತಕಗಳ ನೆರವಿನಿಂದ 199 ರನ್ಗಳ ಬೃಹತ್ ಮೊತ್ತ ಪೇರಿತು. ಈ ಗುರಿ ಬೆನ್ನಟ್ಟಿದ ಯುಪಿ ಪರ ಅಲಿಸ್ಸಾ ಹೀಲಿ ಅರ್ಧಶತಕದ ಹೊರತಾಗಿ ಉಳಿದ ಬ್ಯಾಟರ್ಸ್ ನಿರಾಸೆ ಮೂಡಿಸಿದರು. ಅಂತಿಮವಾಗಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆ ಹಾಕಿತು. ಇದರೊಂದಿಗೆ 23 ರನ್ಗಳ ಅಂತರದಿಂದ ಸೋಲು ಕಂಡಿತು.