ಗಾಯಗೊಂಡು ಎನ್‌ಸಿಎ ತಲುಪಿದ ರವೀಂದ್ರ ಜಡೇಜಾ; ಇಂಗ್ಲೆಂಡ್ ಸರಣಿಯ ಉಳಿದ ಪಂದ್ಯಗಳಿಗೆ ಮರಳೋದು ಡೌಟ್
Jan 30, 2024 06:24 PM IST
ಗಾಯಗೊಂಡು ಬೆಂಗಳೂರಿನ ಎನ್‌ಸಿಎ ತಲುಪಿದ ರವೀಂದ್ರ ಜಡೇಜಾ
- Ravindra Jadeja Injury: ಗಾಯದಿಂದಾಗಿ ರವೀಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಸದ್ಯ ಅವರು ಬೆಂಗಳೂರಿನ ಎನ್‌ಸಿಎ ತಲುಪಿದ್ದಾರೆ.
ಇಂಗ್ಲೆಂಡ್ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ (India vs England) ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja), ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದಾರೆ. ಗಾಯದಿಂದಾಗಿ ಫೆಬ್ರವರಿ 2ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರು ಆಡುತ್ತಿಲ್ಲ. ಹೀಗಾಗಿ ಜನವರಿ 30ರ ಮಂಗಳವಾರ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA)ಗೆ ಬಂದಿದ್ದಾರೆ.
ಎನ್‌ಸಿಎಗೆ ಬಂದ ಜಡೇಜಾ, ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. “ಮುಂದಿನ ಕೆಲವು ದಿನಗಳವರೆಗೆ ಇದುವೇ ಮನೆ” ಎಂಬುದಾಗಿ ಶೀರ್ಷಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ | ವಾಷಿಂಗ್ಟನ್ ಸುಂದರ್ ಇನ್, ರಜತ್ ಪಾಟೀದಾರ್ ಪದಾರ್ಪಣೆ; ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ
ಗಾಯದ ಸಮಸ್ಯೆಯಿಂದಾಗಿ ಜಡೇಜಾ ಹೊರಗುಳಿದ ಕಾರಣದಿಂದಾಗಿ, ಭಾರತ ತಂಡವು ಮುಂದಿನ ಪಂದ್ಯದಲ್ಲಿ ದುರ್ಬಲ ಬ್ಯಾಟಿಂಗ್ ಲೈನ್ಅಪ್ ಅನ್ನು ಕಣಕ್ಕಿಳಿಸುವ ಸಂಭಾವ್ಯತೆ ಹೆಚ್ಚಿದೆ. ಅನುಭವಿ ಆಟಗಾರ ವಿರಾಟ್ ಕೊಹ್ಲಿ ಈಗಾಗಲೇ ವೈಯಕ್ತಿಕ ಕಾರಣಗಳಿಂದಾಗಿ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ. ಅತ್ತ ಕನ್ನಡಿಗ ಕೆಎಲ್ ರಾಹುಲ್ ಕೂಡಾ ತಂಡ ತೊರೆದಿದ್ದಾರೆ. ಇದರಿಂದಾಗಿ ಎರಡನೇ ಟೆಸ್ಟ್‌ನಲ್ಲಿ ಬಹುತೇಕ ಹೊಸ ತಂಡವನ್ನು ಭಾರತ ಕಣಕ್ಕಿಳಿಸಬೇಕಿದೆ.
ಹೊಸಬರಿಗೆ ಮಣೆ
ಬಿಸಿಸಿಐ ಆಯ್ಕೆ ಸಮಿತಿಯು ಜಡೇಜಾ ಮತ್ತು ರಾಹುಲ್ ಬದಲಿಗೆ ಈಗಾಗಲೇ ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಎರಡನೇ ಟೆಸ್ಟ್‌ಗೆ ಭಾರತ ತಂಡಕ್ಕೆ ಸೇರಿಸಿದೆ. ಇವರಲ್ಲಿ ಕನಿಷ್ಠ ಇಬ್ಬರು ಆಡುವ ಬಳಗಕ್ಕೆ ಎಂಟ್ರಿ ಕೊಡುವುದು ಬಹುತೇಕ ಖಚಿತ.
ಸರಣಿಗೆ ತಿರುವು ಕೊಟ್ಟ ರನೌಟ್
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್, ಜಡೇಜಾ ಅವರನ್ನು ರನೌಟ್ ಮಾಡುವ ವೇಳೆ ಅವರಿಗೆ ಗಾಯವಾಗಿತ್ತು. ಆ ರನೌಟ್ ಹೈದರಾಬಾದ್ ಪಂದ್ಯಕ್ಕೆ ಮಹತ್ವದ ತಿರುವು ಕೊಟ್ಟಿದ್ದು ಮಾತ್ರವಲ್ಲದೆ, ಸಂಪೂರ್ಣ ಸರಣಿಗೂ ಪೆಟ್ಟು ಕೊಟ್ಟಿದೆ. ಸದ್ಯ ಜಡೇಜಾ ಎರಡನೇ ಟೆಸ್ಟ್‌ನಿಂದ ಮಾತ್ರ ಹೊರಗುಳಿದಿದ್ದಾರೆ. ಆದರೆ ಗಾಯದ ಪ್ರಮಾಣದ ಬಗ್ಗೆ ಬಿಸಿಸಿಐ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ಆಲ್‌ರೌಂಡರ್ ಇಂಗ್ಲೆಂಡ್ ವಿರುದ್ಧ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಗುಳಿಯಬಹುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಬಹಿರಂಗಪಡಿಸಿದೆ.
ಇದನ್ನೂ ಓದಿ | IND vs ENG: ಭಾರತ ತಂಡಕ್ಕೆ ಗಾಯದ ಮೇಲೆ ಬರೆ; 2ನೇ ಟೆಸ್ಟ್‌ನಿಂದ ಜಡೇಜಾ ಜೊತೆ ರಾಹುಲ್ ಕೂಡಾ ಹೊರಕ್ಕೆ; ತಂಡ ಸೇರಿಕೊಂಡ ಮೂವರು
“ರಾಹುಲ್ ಅವರು ಬಹುಶಃ ಈ ಸರಣಿಗೆ ತಡವಾಗಿ ಮರಳಬಹುದು. ಆದರೆ ಜಡೇಜಾ ಅವರ ಗಾಯವು ಹೆಚ್ಚು ಗಂಭೀರವಾಗಿರಬಹುದು. ಎನ್‌ಸಿಎ ವೈದ್ಯಕೀಯ ತಂಡ ಏನು ಹೇಳುತ್ತದೆ ಎಂದು ನೋಡೋಣ,” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಪಿಎಸ್‌ಎಲ್ ಒಂದು ದೊಡ್ಡ ಬ್ರಾಂಡ್, ಐಪಿಎಲ್ ಆಡದಿದ್ದರೆ ನಮಗೇನು ನಷ್ಟ ಇಲ್ಲ; ಪಾಕ್ ಮಾಜಿ ಕ್ರಿಕೆಟಿಗ
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಆವೇಶ್ ಖಾನ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್.
(This copy first appeared in Hindustan Times Kannada website. To read more like this please logon to kannada.hindustantime.com)