ಆರ್‌ಸಿಬಿ ಫ್ಯಾನ್ಸ್ ಹೊಗಳಿ ವಿರಾಟ್ ಕೊಹ್ಲಿ ಮತ್ತು ಮ್ಯಾನೇಜ್ಮೆಂಟ್ ವಿರುದ್ಧ ಅಂಬಾಟಿ ರಾಯುಡು ಮತ್ತೆ ವಾಗ್ದಾಳಿ
May 24, 2024 03:43 PM IST
ಆರ್‌ಸಿಬಿ ಫ್ಯಾನ್ಸ್ ಹೊಗಳಿ ವಿರಾಟ್ ಕೊಹ್ಲಿ ಮತ್ತು ಮ್ಯಾನೇಜ್ಮೆಂಟ್ ವಿರುದ್ಧ ಅಂಬಾಟಿ ರಾಯುಡು ವಾಗ್ದಾಳಿ
- Ambati Rayudu : ಸಿಎಸ್ಕೆ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಅವರು ಆರ್‌ಸಿಬಿ ಅಭಿಮಾನಿಗಳನ್ನು ಹೊಗಳಿ ಟೀಂ ಮ್ಯಾನೇಜ್ಮೆಂಟ್ ಮತ್ತು ಪರೋಕ್ಷವಾಗಿ ವಿರಾಟ್ ಕೊಹ್ಲಿ ವಿರುದ್ಧ ಹೊಸದಾಗಿ ವಾಗ್ದಾಳಿ ನಡೆಸಿದ್ದಾರೆ.
ಐಪಿಎಲ್ ಎಲಿಮಿನೇಟರ್ ಪಂದ್ಯ ಗೆಲ್ಲಲು ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವನ್ನು ಅಪಹಾಸ್ಯ ಮಾಡಿದ ಒಂದು ದಿನದ ನಂತರ ಸಿಎಸ್ಕೆ ಮಾಜಿ ಆಟಗಾರ ಅಂಬಾಟಿ ರಾಯುಡು (Ambati Rayudu) ಮತ್ತೊಮ್ಮೆ ಹೊಸದಾಗಿ ದಾಳಿ ನಡೆಸಿದ್ದಾರೆ. ಆರ್‌ಸಿಬಿ ಮ್ಯಾನೇಜ್ಮೆಂಟ್ ಮತ್ತು ವೈಯಕ್ತಿಕ ಮೈಲಿಗಲ್ಲುಗಳಿಗೆ ಆಡುತ್ತಾರೆ ಎಂದು ಪರೋಕ್ಷವಾಗಿ ಕೆಲ ಆಟಗಾರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಆರ್ಸಿಬಿಗೆ ಸಲಹೆಯೊಂದನ್ನು ಕೊಟ್ಟಿದ್ದಾರೆ.
ಮೇ 24ರ ಶುಕ್ರವಾರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಐಪಿಎಲ್ ಇತಿಹಾಸದಲ್ಲಿ ಜಂಟಿ ಅತಿಹೆಚ್ಚು ಪ್ರಶಸ್ತಿ ಗೆದ್ದಿರುವ ಆಟಗಾರ 38 ವರ್ಷದ ರಾಯುಡು, 17 ವರ್ಷಗಳಿಂದ ತಂಡವನ್ನು ಉತ್ಸಾಹದಿಂದ ಬೆಂಬಲಿಸಿದ ಆರ್‌ಸಿಬಿ ಅಭಿಮಾನಿಗಳಿಗೆ ಹೃದಯ ಮಿಡಿಯುತ್ತದೆ ಎಂದು ಹೇಳಿದ್ದಾರೆ. ಆದರೆ, ಕಳಪೆ ಹರಾಜು ತಂತ್ರಕ್ಕಾಗಿ ತಂಡದ ಮ್ಯಾನೇಜ್ಮೆಂಟ್ ಗುರಿಯಾಗಿಸಿಕೊಂಡು ಟೀಕಿಸಿದ್ದಾರೆ. ಆದರೆ ಅಭಿಮಾನಿಗಳ ಮನವೊಲಿಕೆಗೆ ಯತ್ನಿಸಿದ್ದಾರೆ.
ತಂಡದ ನಿರ್ವಹಣೆಯು ಅನೇಕ ಉತ್ತಮ ಆಟಗಾರರನ್ನು ಕೈಬಿಟ್ಟಿದ್ದಕ್ಕೆ ಬೇಸರ ಹೊರಹಾಕಿರುವ ಮಾಜಿ ಕ್ರಿಕೆಟಿಗ, ಐಪಿಎಲ್ 2025ರ ಆರಂಭದ ಮೊದಲು ನಡೆಯುವ ಮೆಗಾ ಹರಾಜಿನಿಂದ ಬೆಂಗಳೂರು ಮೂಲದ ಫ್ರಾಂಚೈಸಿ ಹೊಸ ಅಧ್ಯಾಯವನ್ನು ಪ್ರಾರಂಭಿಸಬಹುದು ಎಂದು ಆಶಿಸಿದ್ದಾರೆ. ವೈಯಕ್ತಿಕ ದಾಖಲೆಗಳಿಗೆ ಆಡುವ ಆಟಗಾರರನ್ನು ಕೈಬಿಡಬೇಕು ಎಂದು ಪರೋಕ್ಷವಾಗಿ ಕೊಹ್ಲಿ ವಿರುದ್ಧ ಗುಡುಗಿದ್ದಾರೆ. ರಾಯುಡು ಹೇಳಿರುವುದೇನು?
ಅಂಬಾಟಿ ರಾಯುಡು ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ ನೋಡಿ
17 ವರ್ಷಗಳ ಕಾಲದಿಂದ ತಂಡವನ್ನು ಉತ್ಸಾಹದಿಂದ ಬೆಂಬಲಿಸುತ್ತಿರುವ ಎಲ್ಲಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ನನ್ನ ಹೃದಯ ನಿಜವಾಗಿಯೂ ಮಿಡಿಯುತ್ತದೆ. ಮ್ಯಾನೇಜ್ಮೆಂಟ್ ಮತ್ತು ಕೆಲ ಆಟಗಾರರು ತಮ್ಮ ವೈಯಕ್ತಿಕ ಮೈಲಿಗಲ್ಲುಗಳಿಗೆ ಹೆಚ್ಚು ಆಸಕ್ತಿ ವಹಿಸುವ ಬದಲಿಗೆ ತಂಡದ ಹಿತಾಸಕ್ತಿಗೆ ಗಮನ ವಹಿಸಿದರೆ ಆರ್‌ಸಿಬಿ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.
ಒಮ್ಮೆ ನೆನಪಿಸಿಕೊಳ್ಳಿ, ಈ ಹಿಂದೆ ಎಷ್ಟು ಅದ್ಭುತ ಆಟಗಾರರನ್ನು ಕೈ ಬಿಟ್ಟಿದ್ದೇವೆ ಎಂದು. ತಂಡದ ಹಿತಾಸಕ್ತಿಗೆ ಆದ್ಯತೆ ನೀಡುವ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲು ಟೀಮ್ ಮ್ಯಾನೇಜ್ಮೆಂಟ್ಗೆ ಮಾಲೀಕರು ಒತ್ತಾಯಿಸಬೇಕು. ನನಗನಿಸಿದ ಪ್ರಕಾರ 2025ರ ಐಪಿಎಲ್ಗೂ ಮುನ್ನ ನಡೆಯುವ ಮೆಗಾ ಹರಾಜಿನ ಬಳಿಕ ಆರ್‌ಸಿಬಿ ಹೊಸ ಅಧ್ಯಾಯ ಪ್ರಾರಂಭವಾಗಬಹುದು ಎಂದು ತನ್ನ ಎಕ್ಸ್ ಖಾತೆಯಲ್ಲಿ ರಾಯುಡು ಹೇಳಿದ್ದಾರೆ.
ಐಪಿಎಲ್‌ನ ಎಲ್ಲಾ 17 ಆವೃತ್ತಿಗಳಲ್ಲಿ ಆಡಿರುವ ಹಲವು ತಂಡಗಳಲ್ಲಿ ಆರ್‌ಸಿಬಿ ಒಂದಾಗಿದೆ. ಆದರೆ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ಕೊನೆಯ ಬಾರಿಗೆ ಐಪಿಎಲ್ ಫೈನಲ್‌ಗೆ ಅರ್ಹತೆ ಗಳಿಸಿದ್ದು 2016 ರಲ್ಲಿ. ನಡೆಯುತ್ತಿರುವ ಐಪಿಎಲ್ 2024ರಲ್ಲಿ, ಆರ್‌ಸಿಬಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಗಳಿಸಿತ್ತು. ಆದರೆ ಬುಧವಾರ (ಮೇ 22) ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳಿಂದ ಸೋತು ಹೊರಬಿತ್ತು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)