Shoaib Akhtar: ಸೋತಾಗಲೆಲ್ಲಾ ಫಿಕ್ಸಿಂಗ್ ಎನ್ನಬೇಡಿ; ತಮ್ಮ ದೇಶದ ಫ್ಯಾನ್ಸ್ಗೆ ಅಖ್ತರ್ ವಾರ್ನ್
Sep 14, 2023 08:19 PM IST
ಶೋಯೆಬ್ ಅಖ್ತರ್
- India vs Pakistan, Asia Cup 2023: ಶ್ರೀಲಂಕಾ-ಭಾರತ ನಡುವಿನ ಪಂದ್ಯವು ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಆರೋಪಿಸಿದ ಪಾಕ್ ಅಭಿಮಾನಿಗಳಿಗೆ ಮಾಜಿ ವೇಗಿ ಶೋಯೆಬ್ ಅಖ್ತರ್ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಏಷ್ಯಾಕಪ್ ಸೂಪರ್-4 ಹಂತದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ (India vs Pakistan) ಹೀನಾಯ ಸೋಲು ಅನುಭವಿಸಿತು. ಆದರೆ, ಭಾರತ ತಂಡವು ಶ್ರೀಲಂಕಾ ವಿರುದ್ಧ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಕ್ಕೆ ಪಾಕ್ ಫ್ಯಾನ್ಸ್ (Pakistan Fans) ಮ್ಯಾಚ್ ಫಿಕ್ಸಿಂಗ್ (Match Fixing) ಆಗಿದೆ ಎಂದು ಆರೋಪಿಸಿದ್ದರು. ಹೀಗೆ ಆರೋಪಿಸಿದ ಅಭಿಮಾನಿಗಳಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ (Shoaib Akhtar) ತರಾಟೆಗೆ ತೆಗೆದುಕೊಂಡಿದ್ದಾರೆ. ಪಂದ್ಯ ಸೋತಾಗಲೆಲ್ಲಾ ಫಿಕ್ಸಿಂಗ್ ಎಂದು ಹೇಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಸೆಪ್ಟೆಂಬರ್ 10ರಂದು ಭಾನುವಾರ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯಿತು. ಭಾರತದ ಅರ್ಧ ಇನ್ನಿಂಗ್ಸ್ ವೇಳೆ ಮಳೆ ಆರಂಭವಾಯಿತು. ಹಾಗಾಗಿ ಮೀಸಲು ದಿನದಂದು ಭಾರತ ಅದ್ಭುತ ಪ್ರದರ್ಶನ ನೀಡಿತು. ವಿರಾಟ್ ಕೊಹ್ಲಿ-ಕೆಎಲ್ ರಾಹುಲ್ (Virat Kohli and KL Rahul Century) ಶತಕ ಸಿಡಿಸಿ ಗಮನ ಸೆಳೆದರು. ಟೀಮ್ ಇಂಡಿಯಾ 50 ಓವರ್ಗಳಲ್ಲಿ 356 ರನ್ ಗಳಿಸಿದರೆ, ಪಾಕಿಸ್ತಾನ 128ಕ್ಕೆ ಸರ್ವಪತನ ಕಂಡಿತು. ಭಾರತ 228 ರನ್ಗಳ ಗೆಲುವು ದಾಖಲಿಸಿತು. ಈ ಪಂದ್ಯದ ಮರು ದಿನವೇ ಶ್ರೀಲಂಕಾ ವಿರುದ್ಧ ಭಾರತ ಪಂದ್ಯವನ್ನಾಡಿ 41 ರನ್ಗಳ ಗೆಲುವು ದಾಖಲಿಸಿತು.
ಫ್ಯಾನ್ಸ್ಗೆ ಜಾಡಿಸಿದ ಅಖ್ತರ್
ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ಪಾಕಿಸ್ತಾನ ತಂಡವನ್ನು ಫೈನಲ್ಗೆ ಬರದಂತೆ ಭಾರತ ತಂಡವು ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಪಾಕ್ ಕ್ರಿಕೆಟ್ ಫ್ಯಾನ್ಸ್ ಆರೋಪಿಸಿದ್ದರು. ಹೀಗೆ ಹೇಳಿದ ನೆಟ್ಟಿಗರಿಗೆ ಮಾಜಿ ವೇಗಿ ಶೋಯೆಬ್ ಅಖ್ತರ್, ಇಂತಹ ಅನಗತ್ಯ ಹೇಳಿಕೆಗಳನ್ನು ನೀಡಿದರೆ ಹುಷಾರ್ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ತನ್ನ ಯೂಟ್ಯೂಟ್ ಚಾನೆಲ್ನಲ್ಲಿ ಈ ರೀತಿಯ ಎಚ್ಚರಿಕೆ ನೀಡಿದ್ದಾರೆ ಅಖ್ತರ್.
ಅಭಿಮಾನಿಗಳು ಈ ರೀತಿಯ ಹುಚ್ಚುತನದ ವರ್ತನೆ ಯಾಕೆ ತೋರಿಸುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಭಾರತದ ಎದುರಿನ ಪಂದ್ಯವನ್ನು ಫಿಕ್ಸಿಂಗ್ ಮಾಡಿಕೊಳ್ಳಲಾಗಿದೆ ಎಂದು ಮೀಮ್ಸ್ ಮತ್ತು ಮೆಸೇಜ್ಗಳು ಬಂದವು. ಅಷ್ಟೇ ಅಲ್ಲದೆ, ಶ್ರೀಲಂಕಾದ ಎದುರಿನ ಪಂದ್ಯದಲ್ಲಿ ಪಾಕಿಸ್ತಾನ ಸೋಲಲು ಟೀಮ್ ಇಂಡಿಯಾ ಬಯಸುತ್ತಿದೆ ಎಂದು ಸಂದೇಶಗಳೂ ರವಾನೆಯಾಗಿವೆ ಎಂದು ಅಖ್ತರ್ ಹೇಳಿದ್ದಾರೆ.
ಅವರ್ಯಾಕೆ ಸೋಲಬೇಕು ಹೇಳಿ?
ಪಾಕ್ ಫೈನಲ್ ಪ್ರವೇಶಿಸಬಾರದು ಎಂಬ ಕಾರಣಕ್ಕೆ ಶ್ರೀಲಂಕಾ ವಿರುದ್ಧ ಭಾರತ ಸೋಲಲು (ಗಮನಕ್ಕೆ- ಭಾರತ ಗೆದ್ದಿದೆ) ಯತ್ನಿಸುತ್ತಿದೆ. ಈ ಕಾರಣದಿಂದಲೇ ಭಾರತದ ಆಟಗಾರರು ಸತತ ವಿಕೆಟ್ ಒಪ್ಪಿಸುತ್ತಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಇಷ್ಟಕ್ಕೂ ಭಾರತವೇಕೆ ಸೋಲಬೇಕು. ಗೆದ್ದರೆ ಅವರು ಫೈನಲ್ಗೆ ಹೋಗುತ್ತಾರೆ ತಾನೆ. ಹಾಗಿದ್ದ ಮೇಲೆ ಅವರೇಕೆ ಸೋಲಬೇಕು ಎಂದುಕೊಳ್ಳುತ್ತಾರೆ ಎಂದು ಫಿಕ್ಸಿಂಗ್ ಎಂದವರಿಗೆ ಶೋಯೆಬ್ ಅಖ್ತರ್ ಪ್ರಶ್ನಿಸಿದ್ದಾರೆ.
ನೀವು ಯೋಚಿಸಿ, ಒಂದು ವೇಳೆ ಭಾರತ ಸೋತರೆ ಫೈನಲ್ಗೆ ಹೋಗಲು ಅವರಿಗೆ ಕಷ್ಟವಾಗಲ್ಲವೇ? ಶ್ರೀಲಂಕಾ ಬೌಲಿಂಗ್ ಹೇಗಿತ್ತು ಎಂಬುದನ್ನು ನೀವು ಸರಿಯಾಗಿ ನೋಡಿದ್ದೀರಾ? ಯಾವ ಅರ್ಥದಲ್ಲಿ ಪ್ರಶ್ನೆ ಮಾಡುತ್ತಿದ್ದೀರಿ? ಹೀಗೆ ಪ್ರಶ್ನೆ ಮಾಡುವುದು ಸರಿಯೇ ಎಂದು ಜಾಡಿಸಿದ್ದಾರೆ. ಸೋತ ಪ್ರತಿ ಬಾರಿ ಫಿಕ್ಸಿಂಗ್ ಎಂದು ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಎಚ್ಚರಿಸಿದ್ದಾರೆ.
ವೆಲ್ಲಾಲಗೆ ಬೌಲಿಂಗ್ ಅದ್ಭುತವಾಗಿತ್ತು!
ದುನಿತ್ ವೆಲ್ಲಾಲಗೆ, ಚರಿತ್ ಅಸಲಂಕಾ ಬೌಲಿಂಗ್ ಕಂಡು ಆಶ್ಚರ್ಯ ಎನಿಸಿತು. 20 ವರ್ಷದ ಯುವಕ ಈ ರೀತಿಯ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಾರೆ ಎಂದು ನಾನು ಊಹಿಸಿರಲಿಲ್ಲ. ಪಾಕಿಸ್ತಾನದ ಜೊತೆಗೆ ಭಾರತದವರು ಸಹ ನನಗೆ ಕರೆ ಮಾಡಿ, ಟೀಮ್ ಇಂಡಿಯಾ ಉದ್ದೇಶಪೂರ್ವಕವಾಗಿ ಸೋಲು ಕಾಣುತ್ತಿದೆ ಎಂದು ಹೇಳಿದರು ಅಂತ ಅಖ್ತರ್ ಹೇಳಿದ್ದಾರೆ.
ಅಖ್ತರ್ ಮೆಚ್ಚುಗೆ
ಮನೆಯಲ್ಲಿ ಖಾಲಿ ಕೂತಿರುವವರೇ ಹೀಗೆ ಹೇಳುತ್ತಾರೆ. ಶ್ರೀಲಂಕಾ ವಿರುದ್ಧ ಭಾರತ ತಂಡವು ಅದ್ಭುತವಾಗಿ ಆಡಿದೆ. ಇಲ್ಲವಾದಲ್ಲಿ, ಸಣ್ಣ ಮೊತ್ತವನ್ನು ರಕ್ಷಿಸಿಕೊಳ್ಳುವುದು ಸುಲಭದ ಮಾತಲ್ಲ. ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅದ್ಭುತ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಭಾರತ ಹಳೆಯ ಖದರ್ ಮರಳಿದರೆ ಸಮತೋಲಿತ ಮತ್ತು ಬಲಿಷ್ಠಗೊಳ್ಳಲಿದೆ ಎನ್ನುವುದಕ್ಕೆ ಲಂಕಾ ವಿರುದ್ಧ ನೀಡಿದ ಪ್ರದರ್ಶನವೇ ಸಾಕ್ಷಿ ಎಂದು ಅಖ್ತರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.