ಗೆಲುವಿನ ಅಂಚಿನಲ್ಲಿ ಎಡವಿದ ಭಾರತ; ಆಸೀಸ್ ವನಿತೆಯರಿಗೆ 3 ರನ್ ರೋಚಕ ಜಯ; ಏಕದಿನ ಸರಣಿ ವಶ
Dec 30, 2023 10:08 PM IST
ಆಸ್ಟ್ರೇಲಿಯಾ ಆಟಗಾರ್ತಿಯರ ಸಂಭ್ರಮ
- India Women vs Australia Women: ಪಂದ್ಯದಲ್ಲಿ ದೀಪ್ತಿ ಶರ್ಮಾ ದಾಖಲೆಯ ಐದು ವಿಕೆಟ್ ಪಡೆದರು. ಆದರೆ, ಕಳಪೆ ಫೀಲ್ಡಿಂಗ್‌ನಿಂದಾಗಿ ತಂಡವು ಹಲವಾರು ರನ್‌ಗಳನ್ನು ಬಿಟ್ಟುಕೊಟ್ಟಿತು. ಪಂದ್ಯದುದ್ದಕ್ಕೂ ಏಳು ಕ್ಯಾಚ್‌ಗಳನ್ನು ಕೈಚೆಲ್ಲಿ ಪಂದ್ಯದಲ್ಲಿ ಹಿಡಿತ ಕಳೆದುಕೊಂಡಿತು.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ (India Women vs Australia Women, 2nd ODI) ಭಾರತ ವನಿತೆಯರ ತಂಡ ಗೆಲುವಿನ ದಡದತ್ತ ಬಂದು ಮುಗ್ಗರಿಸಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಲಿಸ್ಸಾ ಹೀಲಿ ನೇತೃತ್ವದ ಆಸೀಸ್ ತಂಡವು ಮೂರು ರನ್‌ಗಳಿಂದ ರೋಚಕ ಜಯ ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ಫೋಬೆ ಲಿಚ್‌ಫೀಲ್ಡ್ ಅವರ 63 ರನ್ ಮತ್ತು ಎಲ್ಲಿಸ್ ಪೆರ್ರಿ ಅವರ ಅರ್ಧಶತಕ ನೆರವಿನಿಂದ 8 ವಿಕೆಟ್ ಕಳೆದುಕೊಂಡು 258 ರನ್ ಕಲೆ ಹಾಕಿತು. ಭಾರತದ ಪರ ಆಲ್‌ರೌಂಡರ್ ದೀಪ್ತಿ ಶರ್ಮಾ ಐದು ವಿಕೆಟ್ ಕಬಳಿಸಿದರು. ಬೃಹತ್ ಗುರಿ ಬೆನ್ನಟ್ಟಿದ ಭಾರತವು, ಉತ್ತಮ ಆರಂಭ ಪಡೆಯಿತು. ಸ್ಫೋಟಕ ಆಟಗಾರ್ತಿ ರಿಚಾ ಘೋಷ್ 96 ರನ್ ಗಳಿಸಿದ ಹೊರತಾಗಿಯೂ, ಡೆತ್ ಓವರ್‌ಗಳಲ್ಲಿ ಕಾಂಗರೂಗಳೂ ಮುನ್ನಡೆ ಸಾಧಿಸಿದರು. ಹೀಗಾಗಿ ಭಾರತವು 8 ವಿಕೆಟ್ ಕಳೆದುಕೊಂಡು 255 ರನ್ ಗಳಿಸಲಷ್ಟೇ ಶಕ್ರವಾಯ್ತು.
ಇದನ್ನೂ ಓದಿ | ಬಲಿಷ್ಠ ಆಸೀಸ್ ವಿರುದ್ಧ ಸೋಲು; ಭಾರತದ ಕಳಪೆ ಫೀಲ್ಡಿಂಗ್ ಬಗ್ಗೆ ನಾಯಕಿ ಹರ್ಮನ್ಪ್ರೀತ್ ಕೌರ್ ವಿಷಾದ
ಉತ್ತಮ ಬೌಲಿಂಗ್ ಮಾಡಿದ ಅನ್ನಾಬೆಲ್ ಸದರ್ಲ್ಯಾಂಡ್ (3/47) ರಿಚಾ ಸೇರಿದಂತೆ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು.
ಐದು ವಿಕೆಟ್ ಪಡೆದ ದೀಪ್ತಿ
ಪಂದ್ಯದಲ್ಲಿ ದೀಪ್ತಿ ಶರ್ಮಾ ದಾಖಲೆಯ ಐದು ವಿಕೆಟ್ ಪಡೆದರು. 38 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದು ಮಿಂಚಿದರು. ಆದರೆ, ಕಳಪೆ ಫೀಲ್ಡಿಂಗ್‌ನಿಂದಾಗಿ ತಂಡವು ಹಲವಾರು ರನ್‌ಗಳನ್ನು ಬಿಟ್ಟುಕೊಟ್ಟಿತು. ಪಂದ್ಯದುದ್ದಕ್ಕೂ ಏಳು ಕ್ಯಾಚ್‌ಗಳನ್ನು ಕೈಚೆಲ್ಲಿ ಪಂದ್ಯದಲ್ಲಿ ಹಿಡಿತ ಕಳೆದುಕೊಂಡಿತು. ಭಾರತದ ಪರ ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್ ಮತ್ತು ಸ್ನೇಹ ರಾಣಾ ತಲಾ ಒಂದು ವಿಕೆಟ್ ಪಡೆದರು.
ಭಾರತವು ಚೇಸಿಂಗ್‌ನಲ್ಲಿ ಇತ್ತಮ ಲಯದಲ್ಲಿತ್ತು. ಯಾಸ್ತಿಕಾ ಭಾಟಿಯಾ 14 ರನ್ ಗಳಿಸಿದರೆ, ಸ್ಮೃತಿ ಮಂಧಾನ 34 ರನ್ ಗಳಿಸಿ ಔಟಾದರು. ಈ ವೇಳೆ ಒಂದಾದ ರಿಚಾ ಘೋಷ್ ಮತ್ತು ಜೆಮಿಮಾ ರೋಡ್ರಿಗಸ್ ಉತ್ತಮ ಜೊತೆಯಾಟವಾಡಿದರು. ಜೆಮಿಮಾ 44 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸ್ಫೋಟಕ ಆಟ ಮುಂದುವರೆಸಿದ ರಿಚಾ ಘೋಷ್ 96 ರನ್ ಗಳಿಸಿದ್ದಾಗ ಲಿಚ್‌ಫೀಲ್ಡ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಡೆತ್ ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಲು ದೀಪ್ತಿ ಶರ್ಮಾ ಪ್ರಯತ್ನಿಸಿದರು. ಕೊನೆಯ ಓವರ್‌ನಲ್ಲಿ 16 ರನ್ ಅಗತ್ಯವಿತ್ತು. ಆದರೆ 12 ರನ್ ಗಳಿಸುವಲ್ಲಿ ಭಾರತ ಸುಸ್ತು ಬಿತ್ತು. ಹೀಗಾಗಿ ಗೆಲುವಿನ ಸಮೀಪ ಬಂದು ಕೇವಲ 3 ರನ್‌ಗಳಿಂದ ಪಂದ್ಯ ಕೈಚೆಲ್ಲಿತು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ : 50 ಓವರ್‌ಗಳಲ್ಲಿ 258/8 (ಫೋಬೆ ಲಿಚ್‌ಫೀಲ್ಡ್ 63, ಎಲ್ಲಿಸ್ ಪೆರಿ 50; ದೀಪ್ತಿ ಶರ್ಮಾ 5/38). ಭಾರತ : 50 ಓವರ್‌ಗಳಲ್ಲಿ 8 ವಿಕೆಟ್‌ಗೆ 255. (ರಿಚಾ ಘೋಷ್ 96, ಜೆಮಿಮಾ ರೋಡ್ರಿಗಸ್ 44; ಅನ್ನಾಬೆಲ್ ಸದರ್ಲ್ಯಾಂಡ್ 3/47)